ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಸಂತೋಷ ಹೆಬ್ಬಾರ

ಬೇರೆಯವರಿಗೆ ತೊಂದರೆ ಕೊಡುವುದನ್ನೇ ಉದ್ಯೋಗವಾಗಿಸಿಕೊಂಡವರು ಅವರೇ ಬಹುಬೇಗ ಅವನತಿ ಹೊಂದುತ್ತಾರೆ. ಹಾಲು ಕುಡಿದವರೇ ಬದುಕುವುದಿಲ್ಲ…ಹಾಲಾಹಾಲ ಕುಡಿದವರು ಬದುಕುತ್ತಾರಾ ಎಂಬ ಗಾದೆ ಮಾತು ಪ್ರಚಲಿತದಲ್ಲಿತ್ತಲ್ಲವೇ?! ಯಾರು ತಾವೂ ಹೃದಯದಿಂದ ಚೊಕ್ಕವಾಗಿದ್ದು ಇನ್ನೊಬ್ಬರಿಗೂ ಒಳ್ಳೆಯದನ್ನೇ ಬಯಸುತ್ತಾರೋ ಅವರು ಹೆಚ್ಚು ಅಭ್ಯುದಯಕ್ಕೆ ಬರುತ್ತಾರೆ. ಕೆಲವೊಮ್ಮೆ ನಂದುವ ದೀಪವೂ ಜೋರಾಗಿ ಉರಿದು ನಂದುತ್ತದೆ ಬಿಡಿ. ಆದರೂ ನಂದಾದೀಪ ಸಣ್ಣಗೆ ಬೆಳಗುತ್ತಿದ್ದರೂ ದೇವರಿಗೆ ಪ್ರೀತಿಯಾಗುತ್ತದೆ. ಬಹಳ ಕಾಲ ಬಾಳುತ್ತದೆ. ನನ್ನ ಪ್ರೀತಿಯ ಸ್ನೇಹಿತರೋರ್ವರನ್ನು ನಿಮ್ಮ ಮುಂದೆ ಬಹಳ ಒತ್ತಾಯದಿಂದ ಎಳೆದು ತಂದು ನಿಲ್ಲಿಸಬೇಕಾಯಿತು ಇಂದು. ಯಾಕೆಂದರೆ ನನ್ನ ಬರಹಕ್ಕೆ ತಾನು ಅಲ್ಲವೆಂಬ ಮುಜುಗರ ತೋರಿದರೂ ನನ್ನ ಪ್ರೀತಿಗೆ ಒಪ್ಪಿದ ಸಂತೋಷ ಹೆಬ್ಬಾರರನ್ನು ಅತ್ಯಂತ ಪ್ರೀತ್ಯಾದರಗಳಿಂದಲೇ ಪರಿಚಯಿಸುತ್ತಿದ್ದೇನೆ.
ಸಂತೋಷ ಹೆಬ್ಬಾರರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಸಮೀಪದವರು. ಉತ್ಸಾಹಿ ಶಿಕ್ಷಕರಾಗಿ ಕಡಿಕೆನಾಡಾ ಎನ್ನುವಲ್ಲಿ ಕಾರ್ಯ ನಿರ್ವಹಿಸುವ ಸಂತೋಷರು ಸಹೃದಯದ ಸಂಪನ್ಮೂಲ ವ್ಯಕ್ತಿ.
ಅಂದೊಮ್ಮೆ ಬೆಂಗಳೂರಿನ ಬಸವೇಶ್ವರ ನಗರಕ್ಕೆ ತರಬೇತಿಯ ಕೈಪಿಡಿ ರಚನಾ ಕಾರ್ಯಾಗಾರಕ್ಕೆ ಹೋಗಿದ್ದೆ. ತರಬೇತಿಗೆ ನಾಡಿನ ವಿವಿಧ ಜಿಲ್ಲೆಗಳಿಂದ ತರಬೇತುದಾರರು ಆಗಮಿಸಿದ್ದರು. ಮೊದಲನೆಯ ದಿನ ಮುಖ ನೋಡಿದ್ದಷ್ಟೇ ಬಂತು. ಯಾರ್ಯಾರೋ ಏನೇನೋ ಹೇಳಿದ್ದು ಕೇಳಿದ್ದು. ಎರಡನೆಯ ದಿನ ಅನೇಕ ಜನ ಹತ್ತಿರವಾದೆವು. ಹೇಳಿದ್ದನ್ನೆಲ್ಲಾ ತಲೆ ತೂಗಿಸಿ ಎಲ್ಲವನ್ನೂ ಒಪ್ಪಿಕೊಂಡು ಬರುವ ಜಾಯಮಾನವಿಲ್ಲದ ನನಗೆ ಹೀಗೊಂದೆರಡು ಪ್ರಶ್ನೆ ಕೇಳಿ ನೋಡೋಣ ಎಂದೆನಿಸಿದ್ದು. ನನ್ನ ಪ್ರಶ್ನೆಗಳಿಗೆ ಎದುರಿನವರೂ ಸಮರ್ಪಕ ಸಮರ್ಥನೆ ನೀಡಿದಾಗ ತರಬೇತಿ ರಂಗೇರುತ್ತದೆ. ಹೀಗೆ ಅನ್ನಿಸುವ ನನಗೆ ಥಟ್ಟನೆ ಹತ್ತಾರು ಜನ ಜೊತೆಯಾದರು. ಜೊತೆಯಾದವರು ತರಬೇತಿ ಮುಗಿದ ಮೇಲೆ ಹತ್ತಾರು ಕಡೆ ಹೋದವರು ಮರೆತು ಹೋದರು. ಆದರೆ ಹತ್ತಾರು ತಿಂಗಳುಗಳು ಕಳೆದರೂ ಅದೇ ಪ್ರೀತಿ ವಿಶ್ವಾಸ ಉಳಿಸಿಕೊಂಡು ಬಂದವರು ಸಂತೋಷ ಹೆಬ್ಬಾರರು.
‌‌ ಭೇಟಿಯಾಗುವುದಕ್ಕೆ ನೆಪ ಸಾಕಾಗುತ್ತದೆ. ಭಗವಂತ ತರಬೇತಿಯ ನೆಪದಲ್ಲಿ ಸಂತೋಷ ನೀಡಿದ. ಸಂತೋಷ ಹೆಬ್ಬಾರರು ನನ್ನದೇ ಆಸಕ್ತಿಯ ಕ್ಷೇತ್ರದವರು. ಯಕ್ಷಗಾನದ ಅಭಿಮಾನ ನಮ್ಮನ್ನು ಮತ್ತಷ್ಟು ಹತ್ತಿರವಾಗಿಸಿದ್ದು. ಮನೆಗೆ ಮರಳಿದರೂ ಮನಸ್ಸು ದೂರಾಗಲಿಲ್ಲ. ಆಗಾಗ ಫೋನಾಯಿಸಿ ಕುಶಲೋಪರಿ ವಿಚಾರಿಸಿ ನೋವು ನಲಿವುಗಳನ್ನು ಹಂಚಿಕೊಂಡೆವು. ಸಂತೋಷ ಹೆಬ್ಬಾರರು ನನ್ನನ್ನು ತಮ್ಮ ಊರಿಗೂ ಕರೆಸಿಕೊಂಡರು.
ಹೀಗೊಂದು ಕಾರ್ಯಕ್ರಮಕ್ಕೆ ಎರಡು ತಿಂಗಳ ಮುಂಚಿತವೇ ಫೋನಾಯಿಸಿ ಉಪನ್ಯಾಸಕ್ಕೆ ಕರೆಸಿಕೊಂಡ ಸಂತೋಷ ಹೆಬ್ಬಾರರು ಅತ್ಯಂತ ಅಭಿಮಾನದಿಂದ ನಮ್ಮ ದಂಪತಿಗಳೀರ್ವರನ್ನೂ ಸನ್ಮಾನಿಸಿ ಆದರಾತಿಥ್ಯ ಮಾಡಿ ಕಳುಹಿಸಿ ಕೊಟ್ಟರು. ಅವರೂ ಭಾಷೆಯ ಮೇಲೆ ಹಿಡಿತವುಳ್ಳ ಒಳ್ಳೆಯ ನಿರೂಪಕರು. ಸಂಘಟಕರು. ಗುಣಗ್ರಾಹಿಯಾಗಿ ಸ್ನೇಹಿತರನೇಕರನ್ನು ಗಳಿಸಿ ಉಳಿಸಿಕೊಂಡವರು.
ಸಂತೋಷ ಹೆಬ್ಬಾರರಿಗೆ ಒಂದು ಕೈ ಸ್ವಲ್ಪ ತೊಂದರೆಯಿದೆ….ಆದರೂ ಅವರು ಅದನ್ನು ತೋರ್ಪಡಿಸದೇ ಎರಡೂ ಕೈಗಳಿದ್ದವರಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಕ್ರಿಯಾಶೀಲತೆ ತೋರುತ್ತಾರೆ. ನಾನು ಅವರಿಂದ ಅವರ ಕೆಲಸಗಳಿಂದ ಸ್ಫೂರ್ತಿಗೊಳ್ಳುತ್ತೇನೆ. ಸಾಮಾನ್ಯವಾಗಿ ಹೋದರಾಯಿತು ಬಂದರಾಯಿತು ಎನ್ನುವವರಲ್ಲದೇ ತಾನೂ ತನ್ನವರಿಗಾಗಿ ಏನಾದರೂ ಮಾಡಬೇಕೆಂಬ ಮನಸ್ಸು ಉಳ್ಳವರು.
‌ ಮಡದಿ ಕೂಡ ಪ್ರತಿಭಾವಂತ ಶಿಕ್ಷಕಿ. ಮುದ್ದಾದ ಮಗಳು. ತುಂಬು ಕುಟುಂಬ. ಸಾಗರ ತಡಿಯ ಅವರ ಮನೆ ಮನ ಎರಡೂ ತಂಪು. ಅವರ ಹೆಂಚಿನ ಮನೆ ಸಮುದ್ರದ ತಟದಲ್ಲಿದ್ದರೂ ಬೇಸಿಗೆಯಲ್ಲೂ ಅಷ್ಟು ತಂಪಾಗಿದ್ದು ನೋಡಿ ನನಗನಿಸಿದ್ದು ಇದು ಅವರ ತಂಪಾದ ಗುಣದಿಂದಲೇ ಅಂತ.
ಸಿಕ್ಕವರೆಲ್ಲಾ ಸೊಕ್ಕಿದವರೂ ಇರುತ್ತಾರೆ. ಸಿಕ್ಕಾಗ ಮುಕ್ಕುವವರೂ ಇರುತ್ತಾರೆ. ಆದರೆ ಬಿಕ್ಕುವವರು ದೊರಕಿದರೆ ಅದು ನಮ್ಮ ಪೂರ್ವ ಜನ್ಮದ ಪುಣ್ಯವೆಂದೇ ನಾನು ಭಾವಿಸುತ್ತೇನೆ. ನಗು ನಗುತ್ತಾ ಎದುರಿನವರನ್ನೂ ನಗಿಸುತ್ತಾ ಬಾಳುವ ಸಂತೋಷರು ನನ್ನನ್ನೂ ನನ್ನ ಮಾತುಗಳನ್ನೂ ಅತ್ಯಂತ ಅಭಿಮಾನದಿಂದ ನೋಡುವ ಮನುಷ್ಯ. ತಾನು ತಿಳಿದೂ ಇನ್ನೊಬ್ಬರನ್ನು ಗೌರವಿಸುವ ಅವರ ದೊಡ್ಡಗುಣ ಬಹಳ ಅಪರೂಪವಾದದ್ದು.
ಒಬ್ಬ ಶಿಕ್ಷಕನಾಗಿ ತಾನು ಕಲಿಸುವ ನಾಲ್ಕು ಗೋಡೆಗಳಿಗಷ್ಟೇ ಸೀಮಿತವಾಗಬಾರದು. ಚಿಕ್ಕ ಮಕ್ಕಳಿಗೆ ಕಲಿಸುತ್ತಾ ಕಲಿಸುತ್ತಾ ಪ್ರೌಢರಾಗಿಯೂ ಪ್ರೌಢರ ಜೊತೆಗೂ ಚಿಕ್ಕ ಮಕ್ಕಳಿನಂತೆ ವ್ಯವಹರಿಸಬಾರದು. ಯಾರ್ಯಾರ ಜೊತೆ ಯಾವ ಯಾವ ಸಮಯದಲ್ಲಿ ಹೇಗೆ ವ್ಯವಹರಿಸಬೇಕು ಎಂದು ಗೊತ್ತಿರುವವರು ನನಗೆ ಬಹಳ ಹತ್ತಿರವಾಗುತ್ತಾರೆ. ಸಂಸ್ಕಾರ ಒಬ್ಬ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆಯೇ ಹೊರತು ಪದವಿ ಪ್ರಮಾಣ ಪತ್ರಗಳಲ್ಲ. ಸಂತೋಷರು ಒಬ್ಬ ಶಿಕ್ಷಕರಾಗಷ್ಟೇ ನನಗೆ ಇಷ್ಟವಾಗಲಿಲ್ಲ. ಮಾನವೀಯ ಅಂತಃಕರಣದ ಒಬ್ಬ ವ್ಯಕ್ತಿಯಾಗಿ ನನಗಿಂತ ಉತ್ತಮರೆಂದು ಕಂಡರು.
ಸದ್ಗುರು ಶ್ರೀಧರರ ಆಶೀರ್ವಾದ ಸಂತೋಷ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಚರ್ಮದಂಗಡಿ (ಕವನ)

ಸಂತೋಷ ಹೆಬ್ಬಾರರಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94820 46393

??????⚫⚪???????⚫⚪?????

RELATED ARTICLES  " ಶ್ರೀರಾಮನಿಂದ ನಾಸ್ತಿಕವಾದದ ಖಂಡನೆ"(‘ಶ್ರೀಧರಾಮೃತ ವಚನಮಾಲೆ’).