ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಶಿವನಪ್ಪಾ ಹೊಸುಪ್ಪಾರ – ಮೂಡಲಗಿ
ಯಾರ್ಯಾರಿಗೆ ಯಾರ್ಯಾರು ಸಿಗುತ್ತಾರೋ ಆ ದೇವರಿಗೇ ಗೊತ್ತು. ಋಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯ ಎಂದು ಕೇಳಿದ್ದೆ. ಮಿತ್ರರೂ ಅದಕ್ಕೆ ಹೊರತಾಗಿಲ್ಲ. ಯಾರದೋ ಮನೆಯ ಹುಡುಗಿ ಈಗ ನಮ್ಮ ಮನೆಯ ಸೊಸೆ. ನಾವೇ ಮುದ್ದಾಗಿ ಸಾಕಿದ ಮಗಳು ಮುಂದೊಂದು ದಿನ ಮತ್ಯಾರದ್ದೋ ಮನೆಯ ಸೊಸೆಯಾಗಬಹುದು. ಅವ ಕೇರಳದಲ್ಲಿದ್ದಾನಂತೆ, ಇವನು ಪಂಜಾಬಿನಲ್ಲಿರುವನಂತೆ, ಅವಳು ಅಮೇರಿಕಾ ಸೇರಿದ್ದಾಳೆ, ಇವಳು ಆಸ್ಟ್ರೇಲಿಯಾ ವಾಸಿ. ಹೀಗೆ ಹೇಳುವಾಗೆಲ್ಲ ನನಗೆ ಅನಿಸುವುದು…ನಮ್ಮೂರಿನ ಬಸಪ್ಪರೂ ಇದ್ದಲ್ಲೇ ಅಷ್ಟೇ ಸುಖದಿಂದ ಇದ್ದಾರೆ ಎಂದು. ನೆಲದ ಋಣ, ಅನ್ನದ ಋಣ ಅವರನ್ನು ಅಲ್ಲಿಗೆ ಎಳೆದಿರಬಹುದು. ಕೆಲವರ ನೆಲ ಕೆಲವರನ್ನು ಹಿಡಿದು ಗಟ್ಟಿಯಾಗಿ ಇಲ್ಲೇ ಹಿಡಿದಿಟ್ಟಿರಬಹುದು. ಅವನೊಬ್ಬ ಬೆವರು ಸುರಿಸಿ ನಾಲ್ಕಾರು ವರ್ಷ ಶ್ರಮ ಪಟ್ಟು ಹೊಸಮನೆ ಕಟ್ಟಿಸಿದ್ದಾನೆ….ಆದರೆ ಇದೀಗ ಯಾರೋ ಅದರಲ್ಲಿ ಬಾಡಿಗೆ ಉಳಿದಿದ್ದಾರೆ. ಹಠ ಹಿಡಿದು ಮಾಡಿಸಿದ ಅಡಿಗೆ ಕಟ್ಟೆಯಲ್ಲಿ ಗೃಹಿಣಿ ಒಂದು ದಿನವೂ ಅಡುಗೆ ಮಾಡಿಲ್ಲ. ಮತ್ಯಾರೋ ದಂಪತಿ ಅಲ್ಲಿ ತಿಂದುಂಡು ಹಾಯಾಗಿದ್ದಾರೆ. ಈ ಎಲ್ಲಾ ವಿಚಿತ್ರ ಸಂಗತಿಗಳನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಹೀಗೂ ಉಂಟೇ?! ? ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ?! ಬೆಟ್ಟದ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ?! ಎಂಬ ವಚನದಂತೆ ದೂರದ ಗೋಕಾಕಿನ ನನ್ನ ಮಿತ್ರ ಶಿವನಪ್ಪಾ ಹೊಸುಪ್ಪಾರರನ್ನು ಇಂದಿನ ನನ್ನ ಅಕ್ಷರ ಅತಿಥಿಯಾಗಿಸಿದ್ದೇನೆ.
ಅವತ್ತೊಂದಿನ ನಿಮ್ಮ ಪುಸ್ತಕ ಓದಿದೆ ಸರ್…..ಅದೆಷ್ಟು ಚಂದ ಬರೆದಿದ್ದೀರಿ ಎಂದು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಿಂದ ಶಿವನಪ್ಪ ಅವರು ಫೋನ್ ಮಾಡಿದ್ದರು. ಸರಿಯಾದ net work ಕೂಡ ಸಿಗದಿದ್ದುದರಿಂದ ಮತ್ತು ನಾವು ಒಂದು ಶಬ್ದ ನುಡಿಯುವುದರೊಳಗೆ ಬಯಲುಸೀಮೆಯ ಜನ ಹತ್ತು ಶಬ್ದ ನುಡಿಯುವುದರಿಂದ ? ಮೊದಲ ಬಾರಿಗೆ ಅವರ ದೂರವಾಣಿ ಸಂದೇಶಕ್ಕೆ ಸ್ಪಂದಿಸುವುದು ತುಸು ಕಷ್ಟವೇ ಆದದ್ದು ನನಗೆ. ಶಿವನಪ್ಪ ತಾನೂ ಗೋಕಾಕಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವುದಾಗಿ ತನ್ನನ್ನು ಪರಿಚಯಿಸಿಕೊಂಡರು. ಬರೆದ ಅಕ್ಷರಗಳಿಗೂ ಎಂತಹ ತಾಕತ್ತಿರುತ್ತದೆ ನೋಡಿ. ಹೊಸ ಮಿತ್ರರೊಬ್ಬರು ಬದುಕಿನ ಸಾಥಿಯಾದರು. ಸಾಥಿಯಾದದ್ದಷ್ಟೇ ಅಲ್ಲ ಒಂದು ದಿನ ನಮ್ಮ ಮನೆಯ ಕಾರ್ಯಕ್ರಮಕ್ಕಾಗಿ ನಮ್ಮ ಮನೆಯನ್ನು ಹುಡುಕಿಕೊಂಡು ಬಂದೇ ಬಿಟ್ಟರು.
ಶಿವನಪ್ಪ ಹೊಸುಪ್ಪಾರ ಇನ್ನೂ ಎಳೆಯ ವಯಸ್ಸಿನ ಮದುವೆಯಾಗದ ನವತರುಣ. ಕರಾವಳಿಯ ಬೆವರಿಗೆ ಕಂಗಾಲಾಗಿ ಬಂದು ಕುಳಿತ ಶಿವನಪ್ಪರನ್ನು ಸ್ವಾಗತಿಸಿ ಅವರನ್ನು ಉಪಚರಿಸಿದೆವು. ಆದರೆ ಅವರು ನನ್ನ ಜೊತೆ ಸೇರಿ ಕಾರ್ಯಕ್ರಮಕ್ಕಾಗಿ ವೇದಿಕೆ ಸಜ್ಜುಗೊಳಿಸುವ ಕಾರ್ಯಕ್ಕೆ ತಕ್ಷಣವೇ ತೊಡಗಿಕೊಂಡು ಬಿಟ್ಟರು. ಅತಿಥಿಯಾಗಿ ದೂರದಿಂದ ಆಗಮಿಸಿದ ಅವರ ಹತ್ತಿರ ಕೆಲಸ ಮಾಡಿಸಿಕೊಳ್ಳಬಾರದೆಂಬ ದೃಷ್ಟಿಯಿಂದ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರೂ ಅವರು ನಾವು ಮಲಗುವ ತನಕವೂ ಮಲಗದೇ ನನ್ನ ಪೂರ್ವ ಜನ್ಮದ ಸಹೋದರನಂತೆ ಹೆಗಲಿಗೆ ಹೆಗಲಾದರು. ನನ್ನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟು ತನ್ನ ಜಿಲ್ಲೆಯಲ್ಲಿ ನನ್ನ ಅಭಿಮಾನಿ ಓದುಗರನ್ನು ಸೃಷ್ಟಿಸಿದರು.
ಶಿವನಪ್ಪಾ ಸರ್ ಈವರೆಗೂ ನನ್ನಿಂದ ನೂರಾರು ಪುಸ್ತಕಗಳನ್ನು ತರಿಸಿಕೊಂಡು ಓದುಗರ ಕೈಲಿರಿಸಿದ್ದಾರೆ. ನಾನು ಇಲ್ಲಿ ರಾತ್ರಿ ಬಸ್ಸಿಗೆ ಹಾಕಿದರೆ ಅವರು ಮುಂಜಾವಿನ 4.00 ಗಂಟೆಯ ಹೊತ್ತಿಗೆ ಮೂಡಲಗಿ ಬಸ್ ನಿಲ್ದಾಣಕ್ಕೆ ಹೋಗಿ ಅದನ್ನು ಸ್ವೀಕರಿಸುತ್ತಿದ್ದರು. ಯಾರು ಯಾರಿಗಾಗಿ ಇಂಥ ಕೆಲಸ ಮಾಡುತ್ತಾರೆ ಹೇಳಿ……ಅತಿ ಹತ್ತಿರದ ನೆಂಟರೇ ಬೆಳಿಗ್ಗೆ ಬೇಗ ಬಂದರೆ ಹೇಳಲಾಗದ ಸಂಕಟವಾಗುತ್ತದೆ…? ನಿದ್ದೆಗೆಟ್ಟು ನಿದ್ದೆಬಿಟ್ಟು ಪರೋಪಕಾರ ಮಾಡುವ ಜನ ಇನ್ನೂ ಇದ್ದಾರೆಂದರೆ ನನಗೆ ನಿಜವಾಗಿಯೂ ನಂಬಲಾಗಲಿಲ್ಲ. ಶಿವನಪ್ಪಾ ಸರ್ ಅಷ್ಟು ಸರಳ ವ್ಯಕ್ತಿ.
ಹೀಗೆ ಮುಂದುವರೆದ ನಮ್ಮ ಸ್ನೇಹಕ್ಕೆ ಎಂದಿಗೂ ಧಕ್ಕೆ ಬರಲೇ ಇಲ್ಲ. ಒಮ್ಮೆ ನಾನು ಕೆಲಸ ಮಾಡಿದ ಕಂಕಣವಾಡಿಗೆ ಹೋದಾಗ ಶಿವನಪ್ಪ ಸರ್ ಅಲ್ಲಿಗೂ ಬಂದು ತಮ್ಮ ಮನೆಗೆ ಬರಲೇ ಬೇಕೆಂದು ಒತ್ತಾಯಿಸಿದರು. ನಾವು ಐದಾರು ಜನ ಇಡೀ ಕುಟುಂಬ ಇರುವುದರಿಂದ ಮತ್ತೊಮ್ಮೆಬರುತ್ತೇವೆಂದರೂ ಕೇಳದೇ ನಮ್ಮನ್ನು ತಾವೇ ಬಂದು ಕರೆದುಕೊಂಡು ಹೋದರು. ಮೂಡಲಗಿಯ ಅವರ ಮನೆಗೆ ಹೋದಾಗ ನನಗೆ ಊಹಿಸಲಾಗದ ಅನುಭವ ಆಗಿದ್ದು.
ಶಿವನಪ್ಪ ಸರ್ ತಮ್ಮ ಗೆಳೆಯನೊಂದಿಗೆ ನಾವು ಬಂದೇವೆಂದು ಹೊಸ 2 ಲೀಟರ್ bislery water bottle ಖರೀದಿಸಿ ಮೊದಲಾಗಿ ಸ್ವಾಗತಿಸಲು ಸಿದ್ಧರಾಗಿದ್ದರು. ಅದು ಮೂಡಲಗಿಯ ಒಂದು ಓಣಿ. ನಾವು ಹೀಗೆ ಹೋಗಲಾಗಿ ಅಲ್ಲಿ ಗೋಡೆಗಳೇ ಇಲ್ಲದ metal sheet ನಿಂದಲೇ ಸಂಪೂರ್ಣ ನಿರ್ಮಾಣಗೊಂಡ ಪುಟ್ಟ ಗುಡಿಸಲು. ನನಗೆ ನಿಜವಾಗಿಯೂ ದಿಗಿಲಾದದ್ದು. ಆದರೆ ಶಿವನಪ್ಪಾ ಸರ್ ಅವರ ಅವ್ವ, ತಂಗಿ, ಸ್ನೇಹಿತರು ತೋರಿದ ಗೌರವಾತಿಥ್ಯ ಶಬ್ದಗಳಿಗೆ ನಿಲುಕದ್ದು. ಯಾವ ಶ್ರೀಮಂತಿಕೆಗೂ ಅದು ಕಡಿಮೆಯಿರಲಿಲ್ಲ. ನಾವು ಬಹಳ ಸಂತೋಷದಿಂದ ಅವರ ಮನೆಯಲ್ಲಿ ಕುಳಿತು ಅವರ ಆತಿಥ್ಯ ಸ್ವೀಕರಿಸಿ ಊರಿಗೆ ಮರಳಿದೆವು. ಆದರೆ ಹೊರಡುವ ಕ್ಷಣವೇ ನಾನು ಶಿವನಪ್ಪರಿಗೆ ಈ ಮನೆ ನಾನು ಮುಂದಿನ ಸಲ ಬರುವಾಗ ಹೊಸಮನೆಯಾಗಲಿ ಎಂದು ಹೃದಯತುಂಬಿ ಹರಸಿ ಬಂದೆ. ಆ ಕನಸು ಸದ್ಯ ನನಸಾಗುವ ಕಾಲ ಬಂದಿದೆ.
ಶಿವನಪ್ಪಾ ಹೊಸುಪ್ಪಾರ ಅತ್ಯಂತ ಹಿಂದುಳಿದ ಜನಾಂಗದಿಂದ ಬಂದು ಊರಿಗೇ ಹೆಮ್ಮೆ ತರುವಂತಾದ ಯುವಕ. ಅವರ ಊರಿನಲ್ಲಿ ವಿದ್ಯಾವಂತರೇ ಅತಿ ಕಡಿಮೆ. ಬಡತನವೇ ಬದುಕಾದ ಆ ವ್ಯವಸ್ಥೆಯಲ್ಲೂ ಹೊಲದ ಕೆಲಸ ಮಾಡುತ್ತಾ ಜಾನುವಾರು ಮೇಯಿಸುತ್ತಾ ಶಿಕ್ಷಕನಾದ ಶಿವನಪ್ಪರ ಸಾಹಸ ಎವರೆಸ್ಟ ಏರಿದ ತೇನಸಿಂಗರ ಸಾಹಸಕ್ಕೆ ಕಡಿಮೆಯಲ್ಲ ಎಂಬುದೇ ನನ್ನ ಭಾವನೆ. ಛಲ, ಬತ್ತದ ಉತ್ಸಾಹ, ಅವರನ್ನು ಈ ಹಾದಿಗೆ ತಂದು ನಿಲ್ಲಿಸಿದೆ. ಪ್ರತಿಭಾಶಾಲಿ ಸರ್ವಗುಣ ಸಂಪನ್ನ ಶಿವನಪ್ಪಾ ಅವರು ನನ್ನ ಕನಸಿನ ಶಾಲೆಯ ಸಂಪನ್ಮೂಲ ಶಿಕ್ಷಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಾರೆ. ಅವರು ತೋರುವ ಪ್ರೀತ್ಯಾದರಗಳಿಗೆ ನನ್ನಲ್ಲಿ ಮಾತೇ ಇಲ್ಲ. ಅವರ ಅವ್ವ, ಅಪ್ಪ, ತಂಗಿ, ಇವರೆಲ್ಲರ ಗೌರವಾದರಗಳಿಗೆ ನಾನು ಋಣಿ.
ತಾನು ತನ್ನ ವಿದ್ಯಾರ್ಥಿಗಳಿಗೆ, ಶಾಲೆಗೆ, ಊರಿಗೆ ಏನಾದರೂ ಮಾಡಬೇಕೆಂಬ ಉತ್ಸಾಹ ತೋರುವ ಶಿವನಪ್ಪ ಸರ್ ಸ್ನೇಹಿತರೊಂದಿಗೆ ಸಂಘಟನೆ ಕಟ್ಟಿಕೊಂಡು ಹಲವಾರು ಕಾರ್ಯಕ್ರಮ ಏರ್ಪಡಿಸುತ್ತಾರೆ. ಬಡ ಮಕ್ಕಳಿಗೆ ನೆರವಾಗುತ್ತಾರೆ. ಸೋಮಾರಿತನ ತೋರದ ಕ್ರಿಯಾಶೀಲ ಶಿಕ್ಷಕ ಶಿವನಪ್ಪರು ಇನ್ನಷ್ಟು ಬೆಳೆಯಬೇಕು ಮತ್ತಷ್ಟು ಬೆಳೆಯಬೇಕು.
ನಾನು ಏನಾದರೂ ಮಾಡಬೇಕು ಎನ್ನುವ ಮನಸ್ಸಿದ್ದವನಿಗೆ ನೆರವಾಗುವುದಕ್ಕಾಗಿ ಭಗವಂತ ಮತ್ಯಾರನ್ನೋ ಸೃಷ್ಟಿಸಿ ಕಳುಹಿಸಿರುತ್ತಾನೆ. ಉದ್ದೇಶ ಒಳ್ಳೆಯದಿರಬೇಕಷ್ಟೇ..ಒಳ್ಳೆಯ ಮನಸ್ಸಿನಿಂದ ಹರಸುವವರು ಇರುವಾಗ ಯಾವ ಕೆಲಸವೂ ಕಠಿಣವೆನಿಸುವುದಿಲ್ಲ. ಅದಕ್ಕೆ ಕಿರಿಯರ ಪ್ರೀತಿಯನ್ನೂ ಹಿರಿಯರ ಹಾರೈಕೆಯನ್ನೂ ಸಂಪಾದಿಸಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಶಿವನಪ್ಪ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಶಿವನಪ್ಪ ಅವರಿಗೆ ನನ್ನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 97428 11936
??????⚫⚪???????⚫⚪?????