ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಸುಬ್ರಾಯ ನಾಗಪ್ಪ ಗೌಡ
ಜಗತ್ತಿನ ಮಿಲಿಯ ಮಿಲಿಯ ಜನರಲ್ಲಿ ನಾವು ನಮ್ಮ ಬದುಕಿನ ಅವಧಿಯಲ್ಲಿ 98% ಜನರನ್ನು ನೋಡಿಯೇ ಇರುವುದಿಲ್ಲ. ನೋಡಿದ 2% ಜನರಲ್ಲಿ ಅದೆಷ್ಟೋ ಜನರ ಹೆಸರಾಗಲೀ ವಿವರವಾಗಲೀ ಗೊತ್ತಿರುವುದೇ ಇಲ್ಲ. ಉಳಿದ 1% ಜನ ಸಂಪರ್ಕಕ್ಕೆ ಬರುತ್ತಾರಾದರೂ ಅವರಲ್ಲಿ 0.7% ಜನ ನಮಗೆ ಒಗ್ಗದವರು. ಇನ್ನುಳಿದ 0.3% ಜನರು ನಮ್ಮ ಹತ್ತಿರದ ಸ್ನೇಹ ಸಂಬಂಧಿಗಳು. ಅವರಲ್ಲಿ 0.2% ಮುಂದೆ ಚೆನ್ನಾಗಿ ಮಾತಾಡಿ ನಗೆಯಾಡಿ ಹಿಂದಿನಿಂದ ಆಡಿಕೊಳ್ಳುವವರು. 0.1% ಜನ ಮಾತ್ರ ನಾಳೆ ನಾವು ಇಲ್ಲದಾಗಲೂ ಹೃದಯದಿಂದ ಸ್ಮರಿಸುವವರು. ಇಷ್ಟು ಲೆಕ್ಕಾಚಾರ ಮಾಡುವುದರಲ್ಲೇ 35 ವರ್ಷ ಕಳೆದುಹೋಯಿತು. ಆ 0.1% ಜನರಲ್ಲಿ ಒಬ್ಬರನ್ನು ನಾನಿಂದು ನಿಮ್ಮೆದುರು ತಂದಿದ್ದೇನೆ. ಅಂಕಣ 93 ಆಗಿರಬಹುದು.ಆದರೆ ನಮ್ಮ ಬದುಕಿನ ಬಣ್ಣ ಮಾತ್ರ ಮಾಸಲಾರದ್ದು. ಯಾಕೆಂದರೆ ಅದಕ್ಕೆ ಬಣ್ಣ ಬಳಿದವರು ಸುಬ್ರಾಯ ಗೌಡರಂಥ ಹಿರಿಯರು.
ನಮ್ಮೂರಿನಲ್ಲಿ ರೈತಣ್ಣ ಎಂದೇ ಖ್ಯಾತ ನಾಮನಾದ ಸುಬ್ರಾಯ ನಾಗಪ್ಪ ಗೌಡ ಅವರು ನಮ್ಮೂರಿನ ಹಾಲಕ್ಕಿ ಗೌಡ ಮನೆತನದಲ್ಲಿ ಹೆಚ್ಚಿನ ಗೌರವ ಸಂಪಾದಿಸಿದವರಲ್ಲಿ ಒಬ್ಬರು. ಊರಿನ ಬಹುತೇಕರ ಮನೆಯ ಅಡಿಕೆ ಕೊನೆಯನ್ನು ಆಕಾಶದಿಂದ ಭೂಮಿಗೆ ಇಳಿಸುವವರು ಇವರೇ. ನಿಷ್ಠೆ ಪ್ರಾಮಾಣಿಕತೆಯಿಂದ ಬದುಕು ಕಟ್ಟಿಕೊಂಡು ಮಕ್ಕಳನ್ನೂ ಓದಿಸಿ ಅವರನ್ನೆಲ್ಲಾ ವ್ಯವಸ್ಥಿತವಾಗಿಟ್ಟು ಹಾಲಕ್ಕಿ ಸಮಾಜದಲ್ಲಿ ಹೊಸ ಬೆಳಕು ಕಂಡುಕೊಂಡ ಹಿರಿ ತಲೆಗಳಲ್ಲಿ ರೈತಣ್ಣನೂ ಒಬ್ಬ. ನಾನು ಹುಟ್ಟಿದಾಗಿನಿಂದ ನನಗೆ ವರ್ಷವಾದದ್ದು ಮಾತ್ರ ಗೊತ್ತಾಗುತ್ತಿದೆ….ಆದರೆ ನಮ್ಮ ರೈತಣ್ಣ ಈಗಲೂ ಕಟ್ಟುಮಸ್ತಾದ ಆಳು. ನಮ್ಮಪ್ಪನ ಸಮೀಪ ವಯಸ್ಸಾದರೂ ಅವನ 10% ಕೆಲಸವನ್ನೂ ನಮ್ಮಿಂದ ಮಾಡಲಿಕ್ಕಾಗುವುದಿಲ್ಲ. ಅಂಥ ಶ್ರಮ ಜೀವಿ ಸುಬ್ರಾಯನ ಬಗ್ಗೆ ಬರೆಯುವುದೇ ಹೆಮ್ಮೆಯ ವಿಷಯ.
White collar job ಮಾಡುವವರ, ಬಯಸುವವರ ಸಂಖ್ಯೆಯೇ ಹೆಚ್ಚಾದ ಕಾಲಕ್ಕೆ ಶ್ರಮಿಕ ವರ್ಗದ ಒಂದು ದೊಡ್ಡ generation ಕೊನೆಗೊಳ್ಳುತ್ತಿದೆ ಎಂಬುದು ಅರಗಿಸಿಕೊಳ್ಳಲಾರದ ಸತ್ಯ. ಭೂಮಿಯನ್ನು ಉಳುಮೆ ಮಾಡುವವರ, ಅಡಿಕೆ ಕೊನೆಗಳನ್ನು ಕೊಯ್ಯುವವರ, ತೆಂಗಿನ ಮರ ಏರಿ ಎಳೆನೀರು ಇಳಿಸುವವರ ಸಂಖ್ಯೆ ತೀರಾ ಅಂದರೆ ತೀರಾ ಇಳಿಮುಖವಾಗಿದೆ. ಕಷ್ಟ ಹೆಚ್ಚು…… ಅಪಾಯ ಹೆಚ್ಚು…. ಹೀಗಾಗಿ ಜನ ಈ ಥರದ ಪ್ರಯತ್ನಗಳನ್ನೇ ಕೈಬಿಟ್ಟಂತೆ ತೋರುತ್ತದೆ. ಚಟಗಳಿಗೆ ಮಾರುಹೋಗದೇ ದೈಹಿಕ ಶ್ರಮವನ್ನೇ ಉಸಿರಾಗಿಸಿಕೊಂಡಿದ್ದ ಹಾಲಕ್ಕಿಗರು ನಮಗೆ ಇದ್ದರೂ ಬೇಕು. ಸತ್ತರೂ ಬೇಕು. ಅವರ ಮುಗ್ಧ ಸ್ವಭಾವ, ಪ್ರಾಮಾಣಿಕತೆ, ಕಷ್ಟ ಸಹಿಷ್ಣುತೆ ಮೆಚ್ಚಲೇ ಬೇಕಾದ್ದು. ನಮ್ಮೂರಿನ ಹಾಲಕ್ಕಿಗರು ಜಾನಪದ, ಕೃಷಿ, ಎರಡನ್ನೂ ಮೇಳೈಸಿಕೊಂಡು ಶಿಕ್ಷಣವಂತರಾಗಿಯೂ ಇಂದು ಬೇರೆ ಬೇರೆ ಕಡೆ ನೆಲೆ ಕಂಡುಕೊಂಡಿದ್ದಾರೆ. ಅವಕ್ಕೆಲ್ಲ ಪ್ರೇರಣೆ ಸುಬ್ರಾಯನಂತಹ ಹಿರಿಯರು.
ಸುಬ್ರಾಯ ನಮ್ಮ ಮನೆಯ ಕೃಷಿ ಚಟುವಟಿಕೆಗಳ ಮುಂದಾಳು. ಹಬ್ಬ ಹರಿದಿನಗಳ ತೋರಣ, ಸಿಂಗಾರ, ಇತ್ಯಾದಿಗಳ ಜವಾಬ್ದಾರಿ ಅವರ ಕುಟುಂಬದ್ದು. ಬೂದೆಗೌಡ, ರಾಮ ಗೌಡ, ಸುಬ್ರಾಯ ಗೌಡ, ಕೃಷ್ಣ ಗೌಡ, ಹೀಗೆ ನಾಲ್ವರೂ ಸಹೋದರರಿಗೂ ನಮ್ಮ ಮನೆಯೆಂದರೆ ಬಲುವೇ ಪ್ರೀತಿ. ಗೌಡರ ಕೇರಿಯಲ್ಲಿ ಅವರದ್ದು ದೊಡ್ಡ ಕುಟುಂಬ. ಮಕ್ಕಳು ಮೊಮ್ಮಕ್ಕಳನ್ನು ಕಂಡು ತುಂಬು ಸಂಸಾರ ನಡೆಸುವ ಕಾಲಕ್ಕೂ ಅವರು ಚಾಚೂ ತಪ್ಪದೇ ನಮ್ಮ ಸ್ನೇಹ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದಾರೆ. ಕಷ್ಟ ಬಂದ ಕಾಲಕ್ಕೆ ಹತ್ತು ಜನ ಸೇರಿ ಬರುತ್ತಾರೆ. ನಮ್ಮಿಂದಾಗದ ಕೆಲಸ ಒಂದು ನಿಮ್ಮಿಂದಾಗಬೇಕಿದೆ ಎಂದರೆ ಸಾಕು ಆ ಕೆಲಸ ಅವರಿಂದ ಸಾಧ್ಯವಾದಂತೆಯೇ. ಹೀಗಾಗಿ ನಮ್ಮ ಕುಟುಂಬದ ಒಂದು ಭಾಗವಾಗಿಯೇ ಅವರು ನಮಗೆ ಚಿರಪರಿಚಿತರು.
ಸುಬ್ರಾಯ ಕೃಷಿ ಮಾಡಿಕೊಂಡೇ ಜೀವನ ಸಾಗಿಸಿದವನು. ದೂರದ ಯಾಣದಲ್ಲಿ ಕೃಷಿ ಭೂಮಿ ಮಾಡಿ ಮಕ್ಕಳಿಗೆ ಬದುಕು ನೀಡಿದವನು. ಆಕಾಶದ ಎತ್ತರದಲ್ಲಿರುವ ಮರವನ್ನೂ ಸರಸರನೆ ಏರಿ ಕೊಳೆಮದ್ದು ಹೊಡೆಯುವ, ಕೊನೆಕೊಯ್ಯುವ ಅವನ ಸಾಹಸ ಮೆಚ್ಚಲೇ ಬೇಕಾದದ್ದು. ಅಪಾಯಕರ ಸನ್ನಿವೇಶವನ್ನೂ ಚಾಣಾಕ್ಷತೆಯಿಂದ ನಿರ್ವಹಿಸುವ ರೈತಣ್ಣ ತನ್ನ ಗರಡಿಯಲ್ಲಿ ನಾಲ್ಕಾರು ಜನರನ್ನು ತಯಾರು ಮಾಡಬೇಕೆಂಬ ಉತ್ಸಾಹ ಉಳ್ಳವ. ಕಿರಿಯರಿಗೆ ನೈತಿಕ ಪಾಠ ಹೇಳಿಕೊಡುತ್ತಾ ಸಮುದಾಯದ ಜಗಳ ಜಾಪತ್ತುಗಳನ್ನು ಶೀಘ್ರ ಪರಿಹರಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವವ. ರೈತಣ್ಣನ ಪರಿಚಯವಿಲ್ಲದವರೇ ಇಲ್ಲ ನಮ್ಮೂರಲ್ಲಿ. ಅಬಾಲವೃದ್ಧರವರೆಗೂ ರೈತಣ್ಣ ಗೊತ್ತು. ಅದೇ ಅವನ ಗತ್ತು.
ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಆತ ಹಿಂಜರಿಯಲಿಲ್ಲ. ಮಕ್ಕಳಾದ ಲಕ್ಷ್ಮೀಶ, ನಾಗೇಶ, ಮಗಳು ಎಲ್ಲರೂ ಸಭ್ಯ ಸಂಸ್ಕಾರದ ಜನ. ತಾವಾಯ್ತು ತಮ್ಮ ಕೆಲಸವಾಯ್ತು. ಬೇರೆಯವರ ಉಸಾಬರಿ ಅವರಿಗೆ ಸಲ್ಲದ್ದು. ಹೀಗಾಗಿ ಊರಿನಲ್ಲಿ ಒಳ್ಳೆಯ ಹೆಸರಿಟ್ಟುಕೊಂಡವರು ಅವರು. ಸುಬ್ರಾಯ ಬಹಳ ಹಾಸ್ಯ ಪ್ರವೃತ್ತಿಯ ಮನುಷ್ಯ. ತಮಾಷೆ ಮಾಡುತ್ತಲೇ ಅವನ ಕೆಲಸ ಸಾಗಿರುತ್ತದೆ. ಅವನು ಏನೇ ಹೇಳಿದರೂ ಮಕ್ಕಳಾದ ನಾವು ಅದನ್ನು ತುಂಬಾ ಗಂಭೀರವಾಗಿ ಭಾವಿಸುವುದಿಲ್ಲ…ಯಾಕೆಂದರೆ ಅವನಿಗೆ ನಮ್ಮ ಬಗೆಗಿರುವ ಕಾಳಜಿಯೇ ಹೆಚ್ಚು ಮಿಗಿಲಾಗಿರುತ್ತದೆ. ರೈತಣ್ಣ ವ್ಯವಹಾರದಲ್ಲೂ ನಿಪುಣ. ಊರಿನಲ್ಲೂ ಕೇರಿಯಲ್ಲೂ ಸ್ವತಂತ್ರ ಬದುಕನ್ನು ನಡೆಸಿ ಹೆಸರು ಮಾಡಬೇಕೆಂಬ ನಿಷ್ಠೆ ಇದ್ದ ಸಾಧಕ.
ದೊಡ್ಡ ಹೆಸರು ಮಾಡಿದವರು, ದೊಡ್ಡ ದೊಡ್ಡ ಮನೆ ಕಟ್ಟಿದವರು, ದೊಡ್ಡದಾಗಿ ಮದುವೆ ಮಾಡಿದವರು, ದೊಡ್ಡ ದೊಡ್ಡ ಬಿಸಿನೆಸ್ ಮಾಡಿದವರು ಮಾತ್ರ ದೊಡ್ಡ ಮನುಷ್ಯರಲ್ಲ. ನಮ್ಮಂತಹ ಭಾವನಾತ್ಮಕ ಜೀವಿಗಳಿಗೆ ಇಂಥವರೇ ದೊಡ್ಡ ಮನುಷ್ಯರು. ಕೇಡು ಬಯಸದ, ಬೇರೆ ಎಣಿಸದ ರೈತಣ್ಣ ನಮ್ಮೂರಿನ ಹೆಮ್ಮೆ. ರೈತಣ್ಣ ಎಂಬುದು ಅವನಿಗೆ ಊರೇ ಕೊಟ್ಟ ಅಘೋಷಿತ ಬಿರುದು. ಬೆವರಿನ ಹನಿಹನಿಯಲ್ಲೂ ಆತನ ಬದುಕಿನ ಕಥೆಯಿದೆ. ಇಂಥವರನ್ನು ಭೂಮಿತಾಯಿ ಎಂದಿಗೂ ಮರೆಯಲಾರದು. ನನ್ನ 98 ವರ್ಷದ ಅಜ್ಜಿ ತೀರಿ ಹೋದಾಗ ರಾತ್ರಿ 11 ಕ್ಕೆ ಹೋಗಿ ರೈತಣ್ಣನನ್ನು ಎಬ್ಬಿಸಿದೆ. ಲೈಟ್ ಆಫ್ ಮಾಡಿ ಮಲಗುವ ತಯಾರಿಯಲ್ಲಿದ್ದರು ಅವರು. ಆ ರಾತ್ರಿಯಲ್ಲಿ ಕೂಡ ಧಡಕ್ಕನೇ ಎದ್ದು ಕುಳಿತವನೇ ಬೆಳಗಾದರೆ ಹತ್ತಾರು ಜನ ಬರುತ್ತೇವೆ. ನೀವು ಹೋಗಿ ಕಾರ್ಯ ಮುಂದುವರೆಸಿ ಎಂದ. ವಿಶ್ವಾಸ ನಂಬಿಕೆಗೆ ಸ್ನೇಹಕ್ಕೆ ಪದಗಳಲ್ಲಿ ವರ್ಣಿಸುವದಕ್ಕೆ ಆಗುವುದಿಲ್ಲ. ರೈತಣ್ಣನಂತಹ ಶ್ರಮಿಕ ವರ್ಗಕ್ಕೆ ವಯಸ್ಸಾಗುತ್ತಾ ಬಂತು…..ಮುಂದಿನ ತಲೆಮಾರು ನಡೆಯುತ್ತಿರುವ ಹಾದಿಯೇ ಬೇರೆ. ಬೇಕು ರೈತಣ್ಣನ ಮಾರ್ಗದರ್ಶನ ನಮ್ಮೂರಿನ ಮುಂದಿನ ಪೀಳಿಗೆಗೂ ಬೇಕು. ಹೀಗಾಗಿಯೇ ದೇವರು ದೀರ್ಘಾಯುಷ್ಯ ಕೊಟ್ಟು ಅಂಥವರನ್ನು ಕಾಪಾಡಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಸುಬ್ರಾಯ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ರೈತಣ್ಣನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
??????⚫⚪???????⚫⚪?????