ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಚಿ|| ಎಂ ಎಸ್ ಶೋಭಿತ್ – ಮೂಡ್ಕಣಿ
ಪಡೆದು ಬಂದವರು, ನಡೆದು ಬಂದವರು, ನುಡಿದು ಬಂದವರು, ತಡೆದು ಬಂದವರು, ಕುಡಿದು ಬಂದವರು, ಸಿಡಿದು ಬಂದವರು, ಮುಡಿದು ಬಂದವರು, ಒಡೆದು ಬಂದವರು, ಅಡೆ ತಡೆಗಳನ್ನೆದುರಿಸಿಯೂ ಮುಂದೆ ಬಂದವರು, ಹೀಗೆ ಬಂದವರ ಲಕ್ಷಣಗಳು ಬೇರೆ ಬೇರೆಯೇ ಇರುತ್ತವೆ. ಬಂದವರು ಯಾರು ಎನ್ನುವದಕ್ಕಿಂತ ಬಂದವರು ಎಂಥವರು ಎನ್ನುವುದೇ ಮುಖ್ಯವಾಗುತ್ತದೆ. ಭೂಮಿಗೆ ಬಂದ ಹಲವರ ಹೆಸರು ಹೆಸರಾಗುವುದೇ ಇಲ್ಲ. ಕೆಲವರಿಗೆ ಈ ಹೆಸರೂ ಬೇಕಾಗುವುದಿಲ್ಲ. ಹೆಸರು ಮಾಡುವುದಕ್ಕೆಂದೇ ಹೊರಟವನಿಗೆ ಹೆಸರು ಕೊನೆಗೆ ಹೆಸರೆನಿಸುವುದೇ ಇಲ್ಲ. ಹೆಸರು ಬರುತ್ತದೋ ಬಿಡುತ್ತದೋ ತಂದೆಯವರು ಇಟ್ಟ ಹೆಸರನ್ನಾದರೂ ಸಾರ್ಥಕ ಪಡಿಸಬೇಕಲ್ಲ. ಇತ್ತೀಚೆಗೆ ಒಂದು ಹೆಸರು ಮಾತ್ರ ಪದೇ ಪದೇ ದಿನ ಪತ್ರಿಕೆಗಳಲ್ಲಿ ನನ್ನ ಕಣ್ಣಿಗೆ ಎಸೆಯುತ್ತಿರುತ್ತದೆ. ಕರೆವ ಹೆಸರು ಎಲ್ಲರಿಗಿದೆ ಮಿತ್ರ ನೆನೆವ ಹೆಸರು ಕೆಲವರಿಗೆ ಮಾತ್ರ ಎಂಬ ದಿನಕರ ದೇಸಾಯಿಯವರ ಸಾಲು ನೆನಪಾಗುತ್ತಿದ್ದಂತೆ ನೆನಪಾದವರು ಕುಮಾರ ಎಂ ಎಸ್ ಶೋಭಿತ್. ಮೂಡ್ಕಣಿಯ ಪ್ರತಿಭಾವಂತ ಹುಡುಗ ಇಂದಿನ ನನ್ನ ಅಕ್ಷರ ಅತಿಥಿ.
ವಯಸ್ಸಿನ್ನೂ ಇಪ್ಪತ್ತು ದಾಟಿಲ್ಲ. ಕೆಲವರಿಗೆ ಎಪ್ಪತ್ತರಲ್ಲೂ ಸಾಧಿಸಲಾಗದ ಸಾಧನೆ. ಬಾಲ್ಯದಲ್ಲೇ ಜ್ಞಾನೋದಯ ಕಂಡ ಶೋಭಿತ್ ಇಂದು ನಾಡು ಗುರುತಿಸಬಹುದಾದ ಬಾಲ ಗಂಧರ್ವ. ಈಗಾಗಲೇ ಅನೇಕ ಅಂಕಣಗಳನ್ನು ಬರೆದು ಮನೆ ಮನೆ ಮಾತಾದ ಶೋಭಿತ್ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಗಟ್ಟಿ ಹೆಜ್ಜೆ ಗುರುತನ್ನು ಮೂಡಿಸುವತ್ತ ದಾಪುಗಾಲಿಟ್ಟಿದ್ದಾನೆ.
ಎಂ ಎಸ್ ಶೋಭಿತ್ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮೂಡ್ಕಣಿಯವನು. ಶ್ರೀ ಸತೀಶ ಹೆಗಡೆ ಮತ್ತು ಸುನೀತಾ ಹೆಗಡೆ ಪುತ್ರನಾದ ಶೋಭಿತ್ ಸುಸಂಸ್ಕೃತ ಸಜ್ಜನ ಮನೆತನದ ಹುಡುಗ. ವಿದ್ಯಾಭ್ಯಾಸದ ಜೊತೆ ಜೊತೆಗೆ ಬರವಣಿಗೆಯ ತನ್ನ ಪ್ರವೃತ್ತಿಯನ್ನು ಬೆಳೆಸಿಕೊಂಡ ಶೋಭಿತ್ ಅನಿರೀಕ್ಷಿತ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ. ಇನ್ನೂ ಬಹಳ ಸಾಧನೆ ಅವನಿಂದ ಸಫಲವಾಗಲಿಕ್ಕಿದೆ ಮತ್ತು ಆ ಛಲವೂ ಅವನ ಬಳಿ ಇದೆ.
ಎಂ ಎಸ್ ಶೋಭಿತ್ ಹೈಸ್ಕೂಲ್ ನಲ್ಲಿ ಇರುವಾಗಿನಿಂದಲೂ ನನಗೆ ಆಗಾಗ ಫೋನಾಯಿಸಿ ಸರ್ ನಿಮ್ಮ ಪುಸ್ತಕಗಳನ್ನು ಓದಿದೆ ನನಗೆ ಬಹಳ ಖುಷಿಯಾಯಿತು….ಎನ್ನುತ್ತಿದ್ದ. ತನ್ನ ಬರವಣಿಗೆಯ ತುಣುಕುಗಳನ್ನು ನನಗೆ ಆಗಾಗ ಕಳುಹಿಸಿ ಹೇಗಾಗಿದೆಯೆಂದು ಅಭಿಪ್ರಾಯ ಕೇಳುತ್ತಿದ್ದ. ನನಗೆ ಆಗ ಅನಿಸುವುದು ಶೋಭಿತ್ ಹೈಸ್ಕೂಲ್ ನಲ್ಲಿಯೇ ಹೀಗೆ ಬರವಣಿಗೆಯ ದಾಹಕ್ಕೆ ಬಲಿಯಾಗಿ ಬಿಡುವನೋ ಎಂದು. ಯಾಕೆಂದರೆ ಸಾಹಿತ್ಯ ಕ್ಷೇತ್ರ ಹಲವರಿಗೆ ಹೆಸರು ತಂದು ಕೊಟ್ಟಿದೆ. ಹಣವನ್ನೂ ಅದೃಷ್ಟವಂತರು ಪಡೆದಿದ್ದಾರೆ. ಆದರೆ ಬರೀ ಸಾಹಿತ್ಯವನ್ನೇ ನಂಬಿಕೊಂಡಿದ್ದವನಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಹೀಗಾಗಿ ನಾನವನಿಗೆ ನೀನು ಮೊದಲು ಪರೀಕ್ಷೆ, ಹಾಗೂ ಉದ್ಯೋಗದ ಕುರಿತಾಗಿಯೇ ಹೆಚ್ಚು ಗಮನವಹಿಸಬೇಕೆಂದೂ ನಂತರ ಬರವಣಿಗೆಯ ಸಾಹಸಕ್ಕೆ ಕೈ ಹಾಕಬೇಕೆಂದೂ ಮಾರ್ಗದರ್ಶನ ಮಾಡಿದ್ದುಂಟು. ಆದರೆ ಶೋಭಿತ್ ತನ್ನ ಕಲಿಕೆಯನ್ನೂ ಉತ್ತಮಗೊಳಿಸುತ್ತಾ ಪ್ರವೃತ್ತಿಯನ್ನು ಕೂಡ ಬೆಳೆಸಿಕೊಂಡು ಈ ವಯಸ್ಸಿಗೇ ಸಾವಿರಾರು ಜನರ ಪ್ರೀತಿ ಗಳಿಸಿದ್ದಾನೆ.
ಪತ್ರಿಕಾ ಬರಹಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇಂತಿಷ್ಟೇ ಪದಗಳಲ್ಲಿ ಹೇಳಬೇಕಾದ ಎಲ್ಲವನ್ನೂ ಹೇಳಿ ಒಂದು ಫ್ರೇಮಿನಲ್ಲಿ ಇಡುವ ಕೆಲಸ ಎಲ್ಲರಿಂದಾಗುವಂತಹುದಲ್ಲ. ಅದನ್ನು ಶೋಭಿತ್ ತನ್ನ ಚಿಕ್ಕ ವಯಸ್ಸಿನಲ್ಲೇ ಮಾಡಿ ತೋರಿಸಿದ. ನಾಡಿನ ಬಹುತೇಕ ಖ್ಯಾತ ದಿನಪತ್ರಿಕೆಗಳಲ್ಲಿ ಶೋಭಿತನ ಅಂಕಣಗಳು ಪ್ರಕಟವಾಗಿವೆ. ಈಗಾಗಲೇ ನೂರಾರು ಸುದ್ದಿ ಪ್ರಕಟಿಸಿದ ಶೋಭಿತ್ ಸುದ್ದಿಯ ಜೊತೆ ಜೊತೆಗೆ ತಾನೂ ಸುದ್ದಿಯಾಗುತ್ತಾ ಸಾಗಿದ್ದಾನೆ. ನನ್ನ ಹಲವಾರು ಕಾರ್ಯಕ್ರಮ ವರದಿಗಳನ್ನು ಶೋಭಿತ್ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾನೆ. ಮಾಡುತ್ತಲೇ ಇದ್ದಾನೆ. ನಿಷ್ಪಕ್ಷಪಾತ ಸ್ಪಷ್ಟ ನಿರ್ದಿಷ್ಟ ವರದಿಗಳು ಸಮಯೋಚಿತವಾಗಿ ಅವನ ಲೇಖನಿಯಿಂದ ಮೂಡಿ ಬರುತ್ತವೆ. ಅದನ್ನು ಅವನು ಈಗಾಗಲೇ ಸಿದ್ಧಿಸಿಕೊಂಡಿದ್ದಾನೆ.
ಸಹೋದರ ಶೋಭಿತನಿಗೆ ಈಗಾಗಲೇ ಪ್ರತಿಷ್ಠಿತ ಸಂಸ್ಥೆಯೊಂದು ಶ್ರೇಷ್ಠ ಉದಯೋನ್ಮುಖ ಯುವ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಿದೆ. ನಾಡಿನ ಖ್ಯಾತ ಸಾಹಿತಿ ಪತ್ರಕರ್ತರ ಒಡನಾಟ ಶೋಭಿತನಿಗೆ ಪ್ರಾಪ್ತವಾಗಿದೆ. ಹೀಗಿದ್ದೂ ಆರಕ್ಕೇರದ ಮೂರಕ್ಕಿಳಿಯದ ಶೋಭಿತ್ ಸಮದರ್ಶಿತ್ವದ ಸಮಾಧಾನಿ ವ್ಯಕ್ತಿಯಾಗಿ ರೂಪುಗೊಳ್ಳುತ್ತಿರುವದು ಅವರ ತಂದೆ ತಾಯಿಗಳು ನೀಡಿದ ಸಂಸ್ಕಾರ ಮತ್ತು ಅವನಿಗೆ ಕಲಿಸಿದ ಗುರು ಪರಂಪರೆಯ ಪ್ರಭಾವವನ್ನು ಸೂಚಿಸುತ್ತದೆ. ಶೋಭಿತ್ ಒಬ್ಬ ಆದರ್ಶ ವಿದ್ಯಾರ್ಥಿ.
ಅಡಿಕೆ ಗಿಡವೊಂದು ಇನ್ನುಳಿದ ಮರಗಳ ನಡುವೆಯೇ ತಲೆಯೆತ್ತಿ ಹೇಗೆ ಆಕಾಶಕ್ಕೆ ನೆಗೆದು ನಿಲ್ಲುತ್ತದೋ ಹಾಗೆ ಶೋಭಿತನ ಬೆಳವಣಿಗೆ ಸಾಗಿದೆ. ನಡೆ ನುಡಿಗಳನ್ನು ತಪ್ಪದೇ ಸಮಾಜಮುಖಿಯಾಗಿ ಸಾಗಿಸುವ ಅವನಿಗೆ ಇದು ಭಗವಂತನೇ ನೀಡಿದ ವರ ಎಂದು ನಾನಾದರೂ ಭಾವಿಸುತ್ತೇನೆ. ಅದರಲ್ಲಿ ಅವನ ಶೃದ್ಧೆ ಪ್ರಯತ್ನಗಳೂ ಇಲ್ಲದಿಲ್ಲ.
ಸುದ್ದಿಮಿತ್ರ ಅಂತರ್ಜಾಲ ಸುದ್ದಿ ವಾಹಿನಿಯಲ್ಲೂ ಕಾರ್ಯನಿರ್ವಹಿಸಿದ ಶೋಭಿತ್ ಇನ್ನಷ್ಟು ಮತ್ತಷ್ಟು ಬೆಳೆಯಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಚಿಕ್ಕ ವಯಸ್ಸಿನಲ್ಲೇ ಸಂಪಾದಿಸಿದ ದೊಡ್ಡ ಹೆಸರನ್ನು ಅಳಿಸದೇ ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಕೂಡ ಆತನದ್ದು. ಸಮಾಜದ ಅಭಿವೃದ್ಧಿಯ ಚಿಂತನೆಗೆ ಆತನ ಅಕ್ಷರಗಳು ಬೆಳಕು ತೋರಲಿ.ಆತನಿಗೆ ಶುಭವಾಗಲಿ. ಶುಭವಾಗುತ್ತಲೇ ಇರಲಿ.
ಸದ್ಗುರು ಶ್ರೀಧರರ ಆಶೀರ್ವಾದ ಶೋಭಿತ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಶೋಭಿತನಿಗೆ ನನ್ನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 91135 60718
??????⚫⚪???????⚫⚪?????