ಆತ್ಮೀಯರೇ,

ಶತಕ ಸಂಭ್ರಮದ ಸನಿಹ ಬಂದು ನಿಂತಿದ್ದೇನೆ. ನನ್ನೊಳಗಿನ ಅದೆಷ್ಟೋ ಆಲೋಚನೆಗಳಿಗೆ ಬಣ್ಣ ತುಂಬುತ್ತಾ ಅಕ್ಷರಗಳ ಮೂಲಕ ಭಟ್ಟಿ ಇಳಿಸಿ ಇಷ್ಟು ಬೇಗ ನೂರು ಹೆಜ್ಜೆ ಇಡುತ್ತೇನೆಂದು ಅಂದುಕೊಂಡೇ ಇರಲಿಲ್ಲ…. ನಾನು. ಕಲಿಸಿದವರು, ಕಲಾವಿದರು, ಸಹಪಾಠಿಗಳು, ಸ್ನೇಹಿತರು, ವಿದ್ಯಾರ್ಥಿಗಳು, ಇವರ ಕುರಿತಾಗಿ ಹೀಗೊಂದು ಅಂಕಣ ಮಾಡಬೇಕೆಂಬ ಆಲೋಚನೆ ಬಂದಿದ್ದೇ ನಾನು ಮಾರ್ಚ ತಿಂಗಳಲ್ಲಿ ಪ್ರಾರಂಭಿಸಿಯೇ ಬಿಟ್ಟೆ. ವಾರಕ್ಕೊಮ್ಮೆ ಬರೆದರಾಯಿತು ಎನ್ನುವ ಆಲೋಚನೆ ನನ್ನದಾಗಿತ್ತು. ಇಂದು ರಾಜ್ಯಪ್ರಶಸ್ತಿ ಸ್ವೀಕರಿಸಿದ ಡಾ|| ರವೀಂದ್ರ ಭಟ್ಟ ಸೂರಿಯವರ ಮೊದಲ ಸಂಚಿಕೆಯೊಂದಿಗೆ ನನ್ನ ಬದುಕಿಗೆ ಬಣ್ಣ ತುಂಬಿದವರು ಅಂಕಣ ಪ್ರಾರಂಭವಾಯ್ತು. ಮೊದಲ ಅಂಕಣಕ್ಕೇ ಭಾರೀ ಪ್ರಶಂಸೆ ಮತ್ತು ಸದಭಿಪ್ರಾಯಗಳು ವ್ಯಕ್ತವಾದಾಗ ನಾನಿಟ್ಟ ಹೆಜ್ಜೆಯ ಬಗೆಗೆ ನನಗೆ ವಿಶ್ವಾಸ ಮೂಡಿತು. ಆ ಸಮಯಕ್ಕೇ ಆಕಸ್ಮಿಕವಾಗಿ ಕೊರೋನಾ ಲಾಕ್ ಡೌನ್ ಪ್ರಾರಂಭವಾಗಿ ಬಿಟ್ಟಿತು. ಹೀಗಾಗಿ ಶಿಕ್ಷಕನಾದ ನನಗೆ ಸಾಹಿತ್ಯಿಕವಾಗಿ ತೊಡಗಿಸಿಕೊಳ್ಳಲು ಮತ್ತಷ್ಟು ಅವಕಾಶವಾಯಿತು.
ಪ್ರತಿದಿನವೂ ಒಂದೊಂದು ಸಂಚಿಕೆ ಬರೆಯ ತೊಡಗಿದೆ. ಈಗಾಗಲೇ ಗುರುತಿಸಿಕೊಂಡ, ಇದುವರೆಗೂ ಯಾರೂ ಗುರುತಿಸದ, ಅನೇಕ ವ್ಯಕ್ತಿಗಳು ನನ್ನ ಅಕ್ಷರ ಅತಿಥಿಗಳಾಗಿ ಬಂದು ಪ್ರತಿದಿನವನ್ನು ಹಬ್ಬವಾಗಿಸಿದರು. ವ್ಯಕ್ತಿಯೊಬ್ಬರ ಬಗೆಗೆ ಬರೆದಾಗ ಅವರೂ ಅವರ ಕುಟುಂಬದವರೂ ಅವರ ಸ್ನೇಹಿತರೂ ಬಂಧುಗಳೂ ಹಿತೈಷಿಗಳೂ ಸಂತೋಷದಿಂದ ಸಂಭ್ರಮಿಸುವುದನ್ನು ಕಂಡು ನನ್ನ ಜೀವನದ ಪರಮಶ್ರೇಷ್ಠ ಗಳಿಗೆಗಳನ್ನೇ ನಾನು ಅನುಭವಿಸುತ್ತಿದ್ದೇನೆ ಎಂದು ಅನಿಸಿಬಿಟ್ಟಿತು.
ಮುಂಚಿನ ದಿನವೇ ಅಂಕಣ ಬರೆದಿಟ್ಟು, ಅದರ ಧ್ವನಿಮುದ್ರಿಕೆ ಮಾಡಿ ಅದನ್ನು ನಿತ್ಯ ಮುಂಜಾನೆ 5.00 ಕ್ಕೆ ನನ್ನ Wats app ಸಂದೀಪ ಬಳಗಕ್ಕೂ, Facebook ಗೂ upload ಮಾಡುತ್ತಿದ್ದೆ. ಪ್ರತಿದಿನವೂ ಅತ್ಯಂತ ಕುತೂಹಲದಿಂದ ಇಂದು ಯಾರ ಬಗ್ಗೆ ಬರೆದಿರಬಹುದೆಂದು ನನ್ನ ಓದುಗರು ಕಾಯುತ್ತಿದ್ದರು. ಸ್ವತಃ ನಾನು ಬರೆದಿರುವ ಅಕ್ಷರ ಅತಿಥಿಗಳಿಗೂ ಇದು surprise ಆಗಿರುತ್ತಿತ್ತು. ಹೀಗಾಗಿ ಬರವಣಿಗೆಯ ನನ್ನ ಬದ್ಧತೆ ಮತ್ತು ಓದುಗರು ನೀಡಿದ ಅಭೂತಪೂರ್ವ ಪ್ರೋತ್ಸಾಹ ನನ್ನನ್ನು 100 ರ ಸಂಭ್ರಮಕ್ಕೆ ತಂದು ನಿಲ್ಲಿಸಿತು.
Work from home ನಲ್ಲೇ ಬಹಳಷ್ಟು ಜನ ತೊಡಗಿಸಿಕೊಂಡಿದ್ದರಿಂದ ಈ ಸಂಚಿಕೆ ಹಲವರ ಪಾಲಿಗೆ ದಿನಪತ್ರಿಕೆ ಇದ್ದಂತೆ ಆಗಿ ಹೋಯಿತು. ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಮುಂಬೈ, ಬೆಂಗಳೂರು ಹೀಗೆ ದೇಶ ವಿದೇಶಗಳಿಂದ ಅನಿರೀಕ್ಷಿತ ಕರೆಗಳೂ, ಮೆಸೇಜ್ ಗಳೂ ಬಂದು ನನ್ನ ಈ ಕಾರ್ಯವನ್ನು ಮತ್ತಷ್ಟು ಉತ್ತೇಜನಗೊಳಿಸಿದವು.

RELATED ARTICLES  ದೇಶದಲ್ಲೇ ಅತಿ ಎತ್ತರದ ದೈತ್ಯ ಅವಳಿ ಕಟ್ಟಡ ಕೊನೆಗೂ ನೆಲಸಮ

‌ ‌ ಸ್ವಾರ್ಥವೇ ತುಂಬಿ ಹೋದ ಕಾಲಕ್ಕೆ ನಿಸ್ವಾರ್ಥವಾಗಿ ಕೃತಜ್ಞತೆಯ ಅರ್ಪಣೆ ಮಾಡಬೇಕೆಂಬ ಕಾರ್ಯಕ್ಕೆ ಭಗವಂತನ ಪ್ರೇರಣೆ ಹಾಗೂ ಆಶೀರ್ವಾದ ಎರಡೂ ಇತ್ತು ಎಂದು ನಾನಾದರೂ ಭಾವಿಸುತ್ತೇನೆ. ಯಾಕೆಂದರೆ ಪ್ರತಿದಿನವೂ ಇಷ್ಟು ದೊಡ್ಡ ದೊಡ್ಡ ಲೇಖನವನ್ನು ಮೊಬೈಲ್ನಲ್ಲೇ ಟೈಪ್ ಮಾಡಿ ನನ್ನ ಬಡವನ ಆಕಾಶವಾಣಿಯಲ್ಲಿ recording ಮಾಡಿ ಕಳುಹಿಸುವಾಗ ಒಮ್ಮೊಮ್ಮೆ ಅತಿಯಾದ ಒತ್ತಡದ ಅನುಭವ ಆಗುತ್ತಿತ್ತು. ಆದರೂ ಮಾರನೆಯ ದಿನ ಅಕ್ಷರ ಅತಿಥಿಗಳ ಫೋನ್ ಬಂದ ತಕ್ಷಣ ನನ್ನ ಆಯಾಸವೆಲ್ಲವೂ ಕರಗಿಹೋಗಿ ಮತ್ತೆ ಮತ್ತೊಂದು ‌ಸಂಚಿಕೆ ಸಿದ್ಧಗೊಳ್ಳುತ್ತಿತ್ತು.
ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕೆನ್ನುವ ನನ್ನ ಮನಸ್ಸಿಗೆ ಇದು ಮರೆಯಲಾಗದ ಅನುಭವ. ಈ ಸಂಚಿಕೆಗಳನ್ನು ಆದಷ್ಟು ಬೇಗ ಪುಸ್ತಕವಾಗಿ ಹೊರತರಬೇಕೆನ್ನುವ ಆಲೋಚನೆ ನನ್ನದು. ಈಗಾಗಲೇ ಸಿದ್ಧಗೊಂಡ ಬದುಕಿಗೆ ಬಣ್ಣ ತುಂಬಿದವರು ಭಾಗ 1 ಮತ್ತು ಭಾಗ 2 ಪುಸ್ತಕಗಳು ಮುದ್ರಣದ ಮನೆಯ ಬಾಗಿಲಿಗೆ ಕಾದು ನಿಂತಿವೆ. ಪುಸ್ತಕಗಳ ಓದುಗರೇ ಕಡಿಮೆಯಾದ ಕಾಲಕ್ಕೆ, ಕೊರೋನಾದ ಸಂಕಷ್ಟವೂ ಇದ್ದ ಕಾಲಕ್ಕೆ ನಾನೇ ಅವುಗಳನ್ನು ತಡೆದು ನಿಲ್ಲಿಸಿದ್ದೇನೆ.
‌‌‌‌‌‌ ಪ್ರತಿಯೊಬ್ಬರ ಬಗೆಗೂ ಬರೆಯುವಾಗ ಆತ್ಮಾನಂದ, ಒಮ್ಮೊಮ್ಮೆ ಕಣ್ಣಲ್ಲಿ ನೀರು, ಗಂಟಲು ಗದ್ಗದಿತವಾಗುವ ಅನುಭವ ಆಗುತ್ತಿತ್ತು. ಯಾಕೆಂದರೆ ಯಾರನ್ನೂ ನಾನು ಅನ್ಯ ಆಲೋಚನೆಯಿಂದ ಎಳೆದು ತಂದಿರಲಿಲ್ಲ. ನನ್ನ ಭಾವಗಳಲ್ಲಿ ಬೆರೆತು ಹೋದ ಅವರ ಬಗೆಗೆ ಬರೆದ ಅಕ್ಷರಕ್ಷರಗಳನ್ನೂ ನಾನು ಅನುಭವಿಸಿ ಬರೆಯುತ್ತಿದ್ದೆ. ಹೀಗೊಂದು ಬರೆದು ಓಗೆದರಾಯಿತು ಎಂಬ ಯಾಂತ್ರಿಕತೆ, ವ್ಯವಹಾರಿಕತೆ ನನ್ನ ಬಳಿಗೂ ಸುಳಿಯಲಿಲ್ಲ.
ಸ್ನೇಹಿತ ಗಣೇಶ ಜೋಷಿ ನನ್ನ ಪ್ರತಿ ಸಂಚಿಕೆಗಳನ್ನೂ online news ಮಾಡಿದರು. ಸತ್ವಾಧಾರ ನ್ಯೂಸ್ ಚಾನಲ್ ನಲ್ಲಿ ಈ ಎಲ್ಲಾ ಸಂಚಿಕೆಗಳೂ ಪ್ರಕಟಗೊಂಡವು. ಸಹೋದರ ಗಣೇಶನ ಪ್ರೀತ್ಯಾದರಕ್ಕೆ ನಾನು ಋಣಿ.
ಇದೇನು ಊರು, ಕೇರಿಯ ಜನರ ಬಗೆಗೆ ಬರೆಯುತ್ತಿದ್ದೀರಿ?! ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರ ಬಗೆಗೆ ಬರೆಯಿರಿ…. ಎಂಬ ಅಭಿಪ್ರಾಯವೂ ಕೇಳಿ ಬಂತು. ಆದರೆ ನಮ್ಮ ಜನ ನನ್ನ ಹೆಮ್ಮೆ ಹೀಗಾಗಿ ನಾನು ಇದರಿಂದ ವಿಮುಖವಾಗಲಿಲ್ಲ. ಧರ್ಮ, ಜಾತಿ, ಭಾಷೆ, ಪ್ರಾಂತ್ಯಗಳ ಸಂಕುಚಿತತೆಯ ಮನೋಭಾವವನ್ನು ನನ್ನ ತಂದೆ ತಾಯಿಗಳು ನನಗೆ ಕಲಿಸಿದ್ದಿಲ್ಲ. ಹೀಗಾಗಿ ಹೆಚ್ಚು ಕಡಿಮೆ ಎಂಬ ಅಂತಸ್ತಿನ ಭಾವ ನನ್ನೊಳಗೆ ಇಣುಕಿಯೂ ನೋಡಲಿಲ್ಲ.
ಸಂಚಿಕೆಗಳನ್ನು ಬರೆಯುವಾಗ preference ಗೆ ನಾನು ಮಹತ್ವ ನೀಡಲಿಲ್ಲ. ನನ್ನದೇ ಆದ ಆಲೋಚನೆಯ ಕ್ರಮ ಹಾಗೂ ಓದುಗರ ಕುತೂಹಲವನ್ನು ಕಾಯ್ದುಕೊಳ್ಳುವ ನನ್ನ ಅಭಿಲಾಷೆ ಮುಖ್ಯವಾಗಿದ್ದವು. ಹೀಗಾಗಿ ಅವರ ಬಗ್ಗೆ ಬರೆದರು ಇವರ ಬಗ್ಗೆ ಇನ್ನೂ ಬರೆಯಲಿಲ್ಲ ಎಂಬ ಮಾತುಗಳು ನನ್ನ ಕಿವಿಗೆ ಬೀಳಲಿಲ್ಲ. ಒತ್ತಾಯಪೂರ್ವಕವಾಗಿ ನನ್ನ ಬಗೆಗೂ ಒಂದು ಬರೆಯಿರಿ ಎಂದು ಯಾರೂ ಒತ್ತಡ ತರಲಿಲ್ಲ.? ಇವೆಲ್ಲಾ ನಾನು ಈ ಹಂತಕ್ಕೆ ಬಂದು ನಿಲ್ಲಲು ಅನುಕೂಲವಾಯಿತು.
‌ನಮ್ಮ ತಂದೆ, ತಾಯಿ, ಮಡದಿ, ಮಗಳು, ಅಕ್ಕ, ಬಾವ, ಮಾವ, ಅತ್ತೆ, ಸಹೋದರರು, ಸಂಬಂಧಿಗಳು, ನೆಂಟರು, ಇಷ್ಟರು, ಸ್ನೇಹಿತರು…..ಎಲ್ಲಕ್ಕಿಂತ ಹೆಚ್ಚಾಗಿ ಕಲಿಸಿದ ಗುರುಗಳಿಂದ ಇವಿಷ್ಟೂ ಸಾಧ್ಯವಾಯ್ತು. ಅವರೇ ನನ್ನ ಬದುಕು. ಬರವಣಿಗೆಯಿಲ್ಲದ ಪ್ರತಿದಿನವೂ ನನಗೆ ಬಿರು ಬಿಸಿಲಿನಲ್ಲಿ ಮರುಭೂಮಿಯಲ್ಲಿ ನಡೆದ ಅನುಭವವಿದ್ದಂತೆ. ಹೀಗಾಗಿ ನೀವು ಓದುವವರೆಗೂ ನನ್ನ ಬರವಣಿಗೆ ಮುಂದುವರಿಯುತ್ತದೆ. ಪ್ರಶಸ್ತಿ, ಪ್ರತಿಷ್ಠೆ, ಇವುಗಳ ಹಪಹಪಿಕೆಯ ಮನುಷ್ಯ ನಾನಲ್ಲ.‌ ಜೀವನದಲ್ಲಿ ನಾಲ್ಕಾರು ಸಜ್ಜನರ ಸ್ನೇಹ ಸಂಪಾದಿಸಿದೆ ಎನ್ನುವ ಹೆಮ್ಮೆಯಿದ್ದರೆ ಸಾಕು ಕೊನೆಯಲ್ಲಿ ಕಣ್ಮುಚ್ಚುವಾಗ.
ನಿಮ್ಮೆಲ್ಲರ ಪ್ರೀತಿಯ ಪ್ರತಿಕ್ರಿಯೆ ನನ್ನನ್ನು ಪ್ರೇರೇಪಿಸುತ್ತದೆ. ಜೊತೆಗೆ ಜೊತೆಯಾಗಿ ನಿಂತವರು ನೀವು…..ನಿಮ್ಮನ್ನು ಹೇಗೆ ಮರೆಯಲಿ ನಾನು…… ?!

RELATED ARTICLES  ಉತ್ತರಿಸುವಳೇ ತಾಯಿ ಸಂಸ್ಕಾರ ಎಂದರೆನೆಂದು...

✍️ಸಂದೀಪ ಎಸ್ ಭಟ್ಟ

???⚪⚫???????⚪⚫???????⚪