ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ದಿ|| ಗಣಪತಿ ಭಟ್ಟ ಕಣ್ಣಿ
24 ಗಂಟೆಯಲ್ಲಿ ಏನೇನು ಮಾಡಬಹುದು?! ಏನನ್ನೂ ಮಾಡಬಹುದು. ಈ ಗಂಟೆಗಳು ಭಗವಂತ ಜಾತಿ, ಮತ, ಧರ್ಮ, ಅಧಿಕಾರ, ಅಂತಸ್ತುಗಳ ಭೇದವಿಲ್ಲದೇ ನಮಗೆಲ್ಲರಿಗೂ ಸಮನಾಗಿ ನೀಡಿದ ಅದ್ಭುತ ಕೊಡುಗೆ. ಈ ಸಮಯದಲ್ಲಿ ನಾವು ಯಾರಿಗೂ ಬೇಡದವರಾಗಿಯೂ ಬದುಕಬಹುದು. ಕೆಲವರಿಗೇ ಬೇಕಾಗಿ ಸಾಕಷ್ಟು ಎಂದು ಸಂತೃಪ್ತಿ ಹೊಂದಬಹುದು. ತನ್ನ ಬದುಕನ್ನೇ ಒಂದು ಇತಿಹಾಸವಾಗಿಯೂ ಸೃಷ್ಟಿಸಬಹುದು. ಜನ ಕೇವಲ bank balance ನಿಂದಲೇ ಗೌರವ ಕೊಡುತ್ತಾರೆನ್ನುವುದು ಸುಳ್ಳು. ಲಂಗೋಟಿಯ ಮೇಲೆ ತಿರುಗಿದ ಗಾಂಧೀಜಿಯವರ ಹಿಂದೆ ಕೋಟ್ಯಂತರ ಅನುಯಾಯಿಗಳು ಸಾಗುತ್ತಿದ್ದುದನ್ನು ನಾವು ಓದಿದ್ದೇವೆ. ಡಾ|| ರಾಜಕುಮಾರರಂಥವರು ಸಾಮಾನ್ಯರಾಗಿಯೇ ಬದುಕಿದ್ದು ಅಸಾಮಾನ್ಯರಾಗಿ ಹೋದರು. ಭಗವಾನ್ ಬುದ್ಧ ಜಪಾನಿಗೆ ಕಾಲಿಡದೇ ಹೋದರೂ ಇಂದಿಗೂ ಬೌದ್ಧ ಧರ್ಮ ಜಪಾನಿನ ಅತಿದೊಡ್ಡ ಧರ್ಮ. ಇವೆಲ್ಲವುಗಳನ್ನೂ ಗಮನಿಸಿದಾಗ ವ್ಯಕ್ತಿಯೊಬ್ಬನ ಸತ್ಕಾರ್ಯ, ಕ್ರಿಯಾಶೀಲ ಚಿಂತನೆ, ಬದ್ಧತೆ, ಕಷ್ಟ ಸಹಿಷ್ಣುತೆ ಇವೆಲ್ಲವೂ ಅವರನ್ನು ಸತ್ತರೂ ಬದುಕಿಸುತ್ತದೆ. ಜನ ಅಂಥವರನ್ನು ಮರೆಯುವುದೇ ಇಲ್ಲ. ಎಷ್ಟು ಕಾಲ ಬದುಕಿರುತ್ತೀರಿ?! ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿರುತ್ತೀರಿ?! ಎನ್ನುವುದು ಮುಖ್ಯ. ಎಂಬ ವಾಕ್ಯ ಭಾಷಣ ಮಾಡುವಾಗ ಹೇಳಿ ಹೇಳಿ ಕಂಠಸ್ಥವಾಗಿ ಬಿಟ್ಟಿದೆ ಈಗ. ನನ್ನ ಹೃದಯ ಮಂದಿರದಲ್ಲಿ ನಿತ್ಯ ನೆಲೆಸಿರುವ ಬಣ್ಣದ ಲೋಕಕ್ಕೇ ಕಣ್ಣಾಗಿ, ಯಕ್ಷರಂಗದಲ್ಲಿ ಕಣ್ಣಿಯಾಗಿ ದಶಕ ದಶಕಗಳ ಕಾಲ ವಿಜೃಂಭಿಸಿ ಕಣ್ಮರೆಯಾದರೂ ಅಭಿಮಾನಿಗಳ ಕಣ್ಣಿನಲ್ಲಿ ಇಂದಿಗೂ ಮರೆಯಾಗದ, ಮರೆಯಲಾಗದ ಕಣ್ಣಿಯಾಗಿ ಉಳಿದುಕೊಂಡಿರುವ ಕಲಾ ಸಾಮ್ರಾಟ ದಿ| ಗಣಪತಿ ಭಟ್ಟ ಕಣ್ಣಿಮನೆಯವರು ಇಂದಿನ ನನ್ನ ಅಕ್ಷರ ಅತಿಥಿ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮುಗ್ವಾ ಗ್ರಾಮದ ಕಣ್ಣಿಮನೆಯಲ್ಲಿ ಹುಟ್ಟಿ ಬೆಳೆದು ನಾಡಿನ ಶ್ರೇಷ್ಠ ಯಕ್ಷಗಾನ ಕಲಾವಿದರಾಗಿ ದೇಶ, ವಿದೇಶಗಳಲ್ಲಿ ಮಿಂಚಿದ ಗಣಪತಿ ಭಟ್ಟರು ಸರಳತೆ, ಕಲಾ ಪ್ರೌಢಿಮೆ, ಸ್ವಂತಿಕೆ, ಸಮಯೋಚಿತ ವಾಕ್ಪಟುತ್ವಗಳಿಂದ ಇಂದಿಗೂ ಜನಮಾನಸದಲ್ಲಿ ನಿತ್ಯನೂತನವಾಗಿದ್ದಾರೆ.
ನನ್ನ ಅಜ್ಜನ ಮನೆಯ ಊರು ಕಣ್ಣಿಮನೆ. ನಮ್ಮ ಅಜ್ಜನ ಮನೆಗೂ, ಗಣಪತಿ ಭಟ್ಟರ ಮನೆಗೂ ನಡುವೆ ನಾಲ್ಕೈದು ಮನೆಗಳ ಅಂತರವಷ್ಟೇ. ಗುಂಡು ಭಟ್ಟರ ಮನೆ ಎಂದೇ ಕರೆಯಲ್ಪಡುವ ಅವರ ಮನೆಯವರು ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರು. ನಾನು ಚಿಕ್ಕವನಿರುವಾಗೆಲ್ಲಾ ನಮ್ಮ ಅಮ್ಮನ ಸಂಗಡ ಅಜ್ಜನ ಮನೆಯಲ್ಲಿ ಬಹಳಷ್ಟು ದಿನ ಕಳೆದಿದ್ದೆ. ಹೀಗಾಗಿ ಹೊಳೆ ಬದಿಯ ಮೇಲಿನ ಜನ ಜೀವನದ ಒಂದಂಶವೂ ನನ್ನ ಸ್ಮೃತಿಪಟಲದಿಂದ ಮರೆಯಾಗಿಲ್ಲ. ಪ್ರತಿ ದಿನವೂ ಅಲ್ಲಿಗೆ ಒಬ್ಬರು ಪೋಸ್ಟ ಮ್ಯಾನ್ ಪತ್ರ ಹಂಚಲು ಬರುತ್ತಿದ್ದರು. ಬೆಳಗಾದರೆ ಪತ್ರ ಹಂಚುವ post man ರಾತ್ರಿ ನಮ್ಮೂರಿನ ತಾಳಮದ್ದಳೆಗಳಲ್ಲಿ ವಿರಾಜಮಾನರಾಗಿರುತ್ತಿದ್ದರು. ಹೀಗಾಗಿ ನನಗೆ ಇವರ ಬಗೆಗೆ ವಿಶೇಷ ಕುತೂಹಲ ಮೂಡಿದ್ದು. ನಮ್ಮ ಮನೆಯಲ್ಲೂ ಯಕ್ಷಗಾನದ ಹಿನ್ನೆಲೆ ಇರುವುದರಿಂದ ಮತ್ತು ನನಗೂ ಸಹಜವಾಗಿಯೇ ಅದರಲ್ಲಿ ವಿಶೇಷ ಆಸಕ್ತಿ ಇರುವುದರಿಂದ ಅವರು ನನಗೆ ಹತ್ತಿರವಾದರು. ಏನೋ ಮುಕಾಂಬಕ್ಕನ ಮಾಣಿ…ಎಂದು ತಲೆ ನೇವರಿಸಿ ಹೋಗುವ ಗಣಪತಿ ಭಟ್ಟರೂ ಇಂದಿಲ್ಲ. ನನ್ನ ಅಜ್ಜನ ಮನೆಯೂ ಇಲ್ಲ.?
ಯಕ್ಷಗಾನ ರಂಗಸ್ಥಳದಲ್ಲಿ ಭೂಮಂಡಲಕ್ಕೇ ರಾಜರಾಗಿ ಮೆರೆಯುವ ಜನ ಬೆಳಗಾದರೆ ಮನೆ ಸೇರುವುದಕ್ಕೆ ಬಸ್ಸೋ ಲಾರಿಯನ್ನೋ ಹುಡುಕ ಬೇಕಾದ ಕಾಲ ಅದು. ಹರಿದು ಬೀಳುವುದಕ್ಕಾದ ಮನೆ, ಕ್ಯಾನ್ಸರ್ ಪೀಡಿತರಾದ ಅಪ್ಪ, ಮದುವೆಯಾಗದ ನಾಲ್ಕೈದು ಸಹೋದರಿಯರು, ಮನೆಯ ಅಂಗಳಕ್ಕಿಂತ ತುಸು ದೊಡ್ಡದಾಗಿರುವ ಅಡಿಕೆ ತೋಟ, ಸಂಸಾರದ ಜವಾಬ್ದಾರಿ, ಇವೆಲ್ಲದರ ನಡುವೆ ಒಬ್ಬ ವ್ಯಕ್ತಿಯಾಗಿ ದಿ|| ಗಣಪತಿ ಭಟ್ ಮಾಡಿದ ಸಾಧನೆ ಅಪಾರ, ಅಮೋಘ. ಯಕ್ಷಗಾನದ ಹಿನ್ನೆಲೆಯೇ ಇಲ್ಲದ ಕುಟುಂಬ ಅದು. ಮುಂದೂಡಿ ತಂದು ನಿಲ್ಲಿಸುವ God father ಕೂಡ ಇಲ್ಲ. ಹೀಗಿದ್ದೂ ಕಣ್ಣಿ ಯಕ್ಷ ಕಣ್ಮಣಿಯಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು ಅಸಾಮಾನ್ಯ ಪರಾಕ್ರಮ. ಸ್ವ ಸತ್ವಾತಿಶಯದಿಂದ ಯಕ್ಷರಾತ್ರಿಗೆ ಸೂರ್ಯನ ಉದಯವೇ ಆದದ್ದು.
ಬಡಗು ತಿಟ್ಟಿನಲ್ಲಿ ಚಿಟ್ಟಾಣಿಯವರು, ಕೆರೆಮನೆ ಕುಟುಂಬದವರು, ಕರ್ಕಿ ಹಾಸ್ಯಗಾರರ ಕುಟುಂಬ ತಮ್ಮದೇ ಆದ ವಿಭಿನ್ನ ಶೈಲಿ ಹಾಗೂ ಪರಂಪರೆಯಿಂದ ಹೆಸರು ಮಾಡಿದ್ದ ಕಾಲಕ್ಕೆ ಕಣ್ಣಿ ಹೊಸದಾದ ತಮ್ಮದೇ ಆದ ಶೈಲಿ, ಅಭಿನಯಗಳಿಂದ ಜನಪ್ರಿಯತೆ ಗಳಿಸಲಾರಂಭಿಸಿದರು. ಸರ್ವಾಂಗ ಸುಂದರವಾದ ನೋಟ, ಯಕ್ಷಗಾನಕ್ಕೆಂದೇ ರೂಪುಗೊಂಡಂತಿರುವ ಮೈಮಾಟ, ಸ್ಪಷ್ಟ ಸುಂದರ ಭಾಷೆಯಿಂದೊಪ್ಪುವ ವಾಗ್ದೂಟ ಕಣ್ಣಿಯವರನ್ನು ಬಹುಬೇಗ ಜನ ಒಪ್ಪುವಂತೆಯೂ ಅಪ್ಪುವಂತೆಯೂ ಮಾಡಿಬಿಟ್ಟವು. ಯಾರ ಶಿಫಾರಸ್ಸಿನ ಸಹಾಯವೂ ಇಲ್ಲದೇ ದಿನ ದಿನವೂ ಕಣ್ಣಿ ಗಣಪತಿ ಭಟ್ಟರ ಹೆಸರು ಪ್ರಾಜ್ವಲ್ಯಮಾನಕ್ಕೆ ಬರುವಂತಾಯ್ತು.
ತೆರೆಮರೆಯಲ್ಲಿ ಕಣ್ಣಿಯ ಕಣ್ಣು ಕಂಡರೆ ಸಾಕು ಸಿಳ್ಳೆಗಳ ಸುರಿಮಳೆಯೋ ಸುರಿಮಳೆ. ರಂಗಕ್ಕೆ ಮಿಂಚಿನ ಪ್ರವೇಶ. ತಾಳಕ್ಕೆ ತಕ್ಕ ಹೆಜ್ಜೆಯ ಗತಿ, ಭಾಗವತಿಕೆಗೆ ಅರ್ಥ ತಪ್ಪದ ಹಾವ ಭಾವ, ಕುಣಿತ, ಮಣಿತಗಳಿಂದ ಕಣ್ಣಿ ಬಾಕ್ಸ ಆಫೀಸ್ ಕೊಳ್ಳೆ ಹೊಡೆದರು. ಅಭಿಮನ್ಯುವಾಗಿ, ಸುಧನ್ವನಾಗಿ, ಕೃಷ್ಣನಾಗಿ, ಕಾರ್ತಿವೀರ್ಯನಾಗಿ, ಸಾಲ್ವನಾಗಿ, ಬಬ್ರುವಾಹನನಾಗಿ, ಕುಶನಾಗಿ, ರುದ್ರಕೋಪನಾಗಿ ಪಾತ್ರಕ್ಕೊಂದು ನವಚೈತನ್ಯವನ್ನೇ ತುಂಬಿ ಬಿಟ್ಟರು. ಕಣ್ಣಿಯ ಕುಣಿತಕ್ಕೆ ಪ್ರೇಕ್ಷಕರು ಮಾರುಹೋದರು. ಅರ್ಥಗಾರಿಕೆ ಅನುಭವಿಸಿದ ಎದುರಿನವರಿಗೆ ಇವರು ಕೇವಲ ಎಸ್ ಎಸ್ ಎಲ್ ಸಿ ಪಾಸಾದ ವ್ಯಕ್ತಿ ಎನಿಸಲೇ ಇಲ್ಲ. ಯಾವ ಡಾಕ್ಟರೇಟ್ ಗೂ ಅವರು ಕಡಿಮೆಯೆನಿಸಲಿಲ್ಲ. ಯಕ್ಷಾಂಗಣದಲ್ಲಿ ಕಣ್ಣಿಮನೆ ಹಲವರಿಗೆ ಮಾದರಿಯಾಗಿ ಹೋದರು. ಕಣ್ಣಿಯವರು ಕುಣಿಯುತ್ತಿದ್ದರೆ ಅವರ ಸಹಕಲಾವಿದರು ಚೌಕಿಮನೆಯ ಆಚೀಚೆ ಬಂದು ನಿಂತು ಇಂದೇನು ಹೊಸ ಅಭಿನಯ ಸಿಗುತ್ತದೆ?! ಹೊಸ ಹೆಜ್ಜೆ ಕಲಿಯುವುದಕ್ಕೆ ಆದೀತು?! ಎಂದು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಎಷ್ಟು ಸಂಭಾವನೆ ಪಡೆದರೋ?! ಗೊತ್ತಿಲ್ಲ. ಆದರೆ ರಂಗದಲ್ಲಿ ಒಮ್ಮೆಗೂ ಕಣ್ಣಿ ಕಣ್ತಪ್ಪಿಸಿಕೊಂಡು ಹೋಗುವ ಕೆಲಸ ಮಾಡಲಿಲ್ಲ. ಗಣಪತಿ ಭಟ್ಟ ಕಣ್ಣಿಮನೆ ಅಭಿಮಾನಿಗಳ ಪಾಲಿಗೆ ದೇವರೇ ಆಗಿಬಿಟ್ಟರು.
ರಂಗಸ್ಥಳದಲ್ಲಿ ಕುಣಿದು ಕುಪ್ಪಳಿಸುವ ಕಣ್ಣಿ ಬೆಳಗಾದರೆ ಮತ್ತೆ ಚೀಲ ಹಿಡಿದು ಪತ್ರ ಹಂಚುತ್ತಿದ್ದರು. ಅಭಿಮನ್ಯುವಿನ ಪಾತ್ರ ಮಾಡುತ್ತಾ ಮಾಡುತ್ತಾ ಅಭಿಮನ್ಯುವಿನಂತೆ ಅಸುನೀಗುತ್ತಾರೆ ಎಂಬುದು ಮಾತ್ರ ನನ್ನಂಥವನ ಪಾಲಿಗೆ ತಿಳಿಯಲೇ ಇಲ್ಲ. ಸಮಸ್ಯೆಗಳನ್ನು ಸವಾಲುಗಳನ್ನು ದಿಟ್ಟವಾಗೆದುರಿಸುವ ಜಾಣ್ಮೆ ಉಳ್ಳ ಮನುಷ್ಯ ತನ್ನದೇ ರೂಪಿನ ಮಗ ಕಾರ್ತಿಕನನ್ನೂ, ಪ್ರತಿಭಾ ಸಂಪನ್ನೆ ಮಗಳನ್ನೂ, ಸಹಧರ್ಮಿಣಿಯನ್ನೂ, ತನ್ನ ವೃದ್ಧೆ ತಾಯಿಯನ್ನೂ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಕಾಣದ ಲೋಕಕ್ಕೆ ತೆರಳಿಯೇ ಬಿಟ್ಟರು.
ಅದೆಷ್ಟೋ ಆಟಗಳನ್ನು ಟೆಂಟಿನಲ್ಲಿ ಕುಳಿತು ಬೆಳ್ಳಾನು ಬೆಳಗಿನವರೆಗೆ ಎವೆಮುಚ್ಚದೇ ನೋಡುವ ನನ್ನಂಥವನ ಪಾಲಿಗೆ ಕಣ್ಣಿಮನೆಯವರ ಸ್ಥಾನವನ್ನು ಇನ್ಯಾರೂ ತುಂಬುವುದಕ್ಕೆ ಸಾಧ್ಯವೇ ಇಲ್ಲ. ಚಿತ್ತಭಿತ್ತಿಯಲ್ಲಿ ಇನ್ನೂ ವಿರಾಜಮಾನರಾಗಿರುವ ಅವರ ಎಷ್ಟೋ ಯಕ್ಷಗಾನದ ವಿಡಿಯೋಗಳನ್ನು ವೀಕ್ಷಿಸುವಾಗ ಇವತ್ತಿಗೂ ರೋಮಾಂಚನವಾಗುತ್ತದೆ. ಹೇಳಿಕೊಳ್ಳುವಂತಹ ಯಾವ ಉನ್ನತ ಪ್ರಶಸ್ತಿಗಳೂ ಅವರಿಗೆ ಬರಲಿಲ್ಲ. ಆದರೆ ಕಣ್ಣಿಯವರ ಅಭಿಮಾನಿಗಳು ಮಾತ್ರ ಅವರನ್ನು ಈ ಕ್ಷಣಕ್ಕೂ ಮರೆತಿಲ್ಲ. ಇದೇ ಅವರಿಗೆ ಬದುಕಿನ ಅತ್ಯುನ್ನತ ಪ್ರಶಸ್ತಿ ಎಂದು ನಾನಾದರೂ ಭಾವಿಸುತ್ತೇನೆ.
ವಾಜಗದ್ದೆಯ ಕುಟುಂಬದವರು ಕಣ್ಣಿಯವರ ಅಪ್ಪಟ ಅಭಿಮಾನಿಯಾಗಿ ಅವರನ್ನು ದೇವರಂತೆ ಕಂಡಿದ್ದನ್ನು ನಾವು ಮರೆಯುವಂತಿಲ್ಲ. ಪ್ರತಿ ವರ್ಷ ನಡೆಯುವ ವಾಜಗದ್ದೆಯ ಆಟಕ್ಕೆ ಕಣ್ಣಿಯವರೇ ಪ್ರಮುಖ ಪಾತ್ರಧಾರಿ ಮತ್ತು ಅವರ ಪಾತ್ರ ನೋಡುವುದಕ್ಕೆಂದು ಪ್ರೇಕ್ಷಕರು ನಾಡಿನ ಅನೇಕ ಕಡೆಗಳಿಂದ ವಾಜಗದ್ದೆಗೆ ಧಾವಿಸುತ್ತಿದ್ದರು. ಕಣ್ಣಿಯವರು ಅಕಾಲಿಕವಾಗಿ ತೀರಿಕೊಂಡ ಕಾಲಕ್ಕೂ ಅವರ ಸಹಕಲಾವಿದರು, ಅಭಿಮಾನಿಗಳು ಸೇರಿ ಲಕ್ಷಾಂತರ ರೂಪಾಯಿಗಳನ್ನು ಸೇರಿಸಿ ಕಣ್ಣಿ ಕುಟುಂಬಕ್ಕೆ ನೆರವಾದರು. ಮಗ ಕಾರ್ತಿಕನೂ ಯಕ್ಷರಂಗದಲ್ಲಿ ಈಗ ಪಕ್ಕಾ ಕಣ್ಣಿ ಗಣಪತಿ ಭಟ್ಟರನ್ನೇ ಹೋಲುತ್ತಾನೆ. ಅವನೂ ಮೆರೆಯಬೇಕು. ಮರೆಯದ ತಂದೆಯ ನೆನಪನ್ನು ಅವನು ಹೆಜ್ಜೆಗಳ ಮೂಲಕ ನಮ್ಮಂಥ ಕಲಾರಸಿಕರ ಪಾಲಿಗೆ ಕಟ್ಟಿ ಕೊಡಬೇಕು.
ಕಣ್ಣಿ ಗಣಪತಿ ಭಟ್ಟರನ್ನು ವರ್ಣಿಸುವದಕ್ಕೆ ನನ್ನ ಶಬ್ದಗಳು ಸೋಲುತ್ತವೆ. ಹೀಗಿದ್ದೂ ಅವರಿಗೊಂದು ಯಕ್ಷನಮನ ಸಲ್ಲಿಸಬೇಕೆಂಬುದು ನನ್ನ ಬಹುದಿನಗಳ ಆಕಾಂಕ್ಷೆಯಾಗಿತ್ತು. ಗಣಪತಿ ಭಟ್ ಇಷ್ಟು ಬೇಗ ಇತಿಹಾಸದ ಪುಟ ಸೇರಬಾರದಿತ್ತು ಎಂಬ ಕೊರಗು ನನಗೀಗಲೂ ಇದೆ. ಕಣ್ಣಿಯಿರದ ಕಣ್ಣಿಮನೆಯಲ್ಲೀಗ ನನ್ನ ಅಜ್ಜನ ಮನೆಯೂ ಇಲ್ಲ. ಹೀಗಾಗಿ ವರ್ಷಕ್ಕೊಮ್ಮೆ ಪೂಜೆ ಕೊಡುವುದಕ್ಕಷ್ಟೇ ನಾನಲ್ಲಿ ಹೋಗುತ್ತೇನೆ. ಕಣ್ಣಿಯವರಂತೆ ಕೆಲಸ ಮಾಡಿದರೆ ಯಾವುದೇ ರಂಗವಾದರೂ ಗೌರವ ಕೊಡುತ್ತದೆ ಮತ್ತು ಅವರನ್ನು ಯಾವ ಕಾಲಕ್ಕೂ ಮರೆಯುವುದಿಲ್ಲ ಇದು ನಾನು ಕಂಡು ಕೊಂಡ ಬದುಕಿನ ಸತ್ಯ. ಕಣ್ಣಿಮನೆಯವರ ನೃತ್ಯದ ನೆನಪುಗಳನ್ನು ತಮ್ಮ ಹೆಜ್ಜೆಗಳಲ್ಲಿ ಮೂಡಿಸುತ್ತಿರುವ ಯಕ್ಷರಂಗದ ಯುವ ಕಲಾವಿದರುಗಳಿಗೆ ನನ್ನ ನಮನಗಳು. ಕಾಲವನ್ನೂ ಮೆಟ್ಟಿ ನಿಲ್ಲುವ ತಾಕತ್ತಿದ್ದರೆ ಅದು ಕಲಾವಿದರಿಗೆ ಮಾತ್ರ. ಕಣ್ಣಿಯವರ ಬಗೆಗೆ ನಾಲ್ಕಕ್ಷರ ಬರೆದು ಬದುಕು ಧನ್ಯವಾಯಿತು. ಕಣ್ಣು ತೇವವಾಯಿತು.
ಸದ್ಗುರು ಶ್ರೀಧರರ ಆಶೀರ್ವಾದ ಕಣ್ಣಿ ಗಣಪತಿ ಭಟ್ಟರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ದಿ|| ಗಣಪತಿ ಭಟ್ಟ ಕಣ್ಣಿಯವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???