ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಮತಿ ಲಕ್ಷ್ಮಿ ಹೆಗಡೆ – ಬಗ್ಗೋಣ

ಹಾಗೆ ನೋಡಿದರೆ ಪ್ರತಿಯೊಬ್ಬನಿಗೂ ಅಳುವುದಕ್ಕೆ ದಿನಾಲೂ ನೂರಾರು ವಿಷಯಗಳಿವೆ. ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ವೃದ್ಧರಿದ್ದಾರೆ. ಕಾಯಿಲೆ ಪೀಡಿತರಿದ್ದಾರೆ. ನಮಗೆ ಅತಿ ಆತ್ಮೀಯರನ್ನು ನಾವು ಬದುಕಿನಲ್ಲಿ ಕಳೆದುಕೊಂಡಿದ್ದೇವೆ. ಎಷ್ಟು ದುಡಿದರೂ ಬದುಕಿಗೆ ಸಾಲುತ್ತಿಲ್ಲ. ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ. ಜೀವನವಿಡೀ ಕಷ್ಟದಲ್ಲೇ ಕಳೆದುಹೋಯಿತು. ನಾನು ಹಾಗೆ ಮಾಡಬಾರದಿತ್ತು. ಹೀಗೆ ಮಾಡಬಾರದಿತ್ತು. ನನಗೆ ಜೀವನದಲ್ಲಿ ಪ್ರೋತ್ಸಾಹ ನೀಡಿದವರಿಗಿಂತ ಕಾಲೆಳೆದವರೇ ಜಾಸ್ತಿ. ಹೀಗೆ ಪ್ರತಿಯೊಂದು ನಕಾರಾತ್ಮಕತೆಯನ್ನೇ ಚಿಂತಿಸುತ್ತಾ ಕುಳಿತುಕೊಂಡು ಬಿಟ್ಟರೆ ನಾವು ಏನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಹಂಗಿಸುವವರಿದ್ದಾರೆ, ಕಾಲೆಳೆವವರಿದ್ದಾರೆ, ಸಮಯ ಬಂದಾಗ ನಮ್ಮನ್ನು ಹೊಸಕಿಯೇ ಹಾಕಲೂ ಹೊಂಚು ಹಾಕುವವರಿದ್ದಾರೆ, ಅಸೂಯೆ ಪಡುವವರಿದ್ದಾರೆ ಇದೆಲ್ಲದರ ಮಧ್ಯೆಯೂ ತಲೆಯೆತ್ತಿ ನಿಲ್ಲಬೇಕಾದುದು ವ್ಯಕ್ತಿಗೆ ಅನಿವಾರ್ಯ. ಅದಕ್ಕೆ ಭಗವಂತನ ಧ್ಯಾನ, ಅವನ ಕರುಣ ಅಗತ್ಯವಾದದ್ದು. ಭಗವಂತನ ಮುಂದೆ ದೀಪವೊಂದನ್ನು ಹಚ್ಚಿ ಭಜನೆಯೊಂದನ್ನು ಹಾಡಿದರೂ ನಮ್ಮಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ಇದನ್ನೇ positive energy ಎಂದು ತಿಳಿದವರು ಹೇಳುತ್ತಾರೆ. ಸಾಧನೆಯನ್ನೇ ಉಸಿರಾಗಿಸಿಕೊಂಡ ಸಾಧನಾ ಸಂಗೀತ ವಿದ್ಯಾಲಯದ ಗುರುಮಾತೆ ಶ್ರೀಮತಿ ಲಕ್ಷ್ಮಿ ಹೆಗಡೆ ಇಂದಿನ ನನ್ನ ಅಕ್ಷರ ಅತಿಥಿ.
ಸಹೋದರಿ ಲಕ್ಷ್ಮಿ ಹೆಗಡೆ ನಮ್ಮೂರಿನವರೇ. ಬೊಮ್ಮನಹೊಂಡ ಲಕ್ಷ್ಮಿ ಹೆಗಡೆಯವರ ತವರುಮನೆ. ಒಂದು ಲೆಕ್ಕಕ್ಕೆ ಇದು ಆಳವಾದ ಹೊಂಡವೇ. ಯಾರು ಬದುಕಿನಲ್ಲೂ ಆಳವಾದ ಹೊಂಡದಿಂದ ಎದ್ದು ಮೇಲೆ ಬಂದಿರುತ್ತಾರೋ ಅವರು ಎಷ್ಟೇ ಎತ್ತರವನ್ನೇರಿದರೂ ಅಹಂಕಾರ ಪಡುವುದಿಲ್ಲ. ಅಕಸ್ಮಾತ್ ಹೊಂಡಕ್ಕೇ ಬಿದ್ದರೂ ಅದು ಅವರ ತವರುಮನೆಯಾಗಿರುತ್ತದೆ. ? ಆದರೆ ಎತ್ತರದಲ್ಲೇ ಇದ್ದವರು ಜೀವನದಲ್ಲಿ ಅಕಸ್ಮಾತ್ ಹೊಂಡಕ್ಕೆ ಬಿದ್ದು ಬಿಟ್ಟರೆ ಮತ್ತೆ ಮೇಲೇಳದಂತೆ ಕುಸಿದು ಹೋಗುತ್ತಾರೆ. ನಮ್ಮ ಲಕ್ಷ್ಮಕ್ಕ ಕೂಡ ಬಡತನದಿಂದ ಮೇಲೆದ್ದು ಬಂದ ಸುಸಂಸ್ಕೃತೆ. ಲಕ್ಷ್ಮಿ ಸರಸ್ವತಿ ಒಟ್ಟಿಗೆ ಇರುವುದಿಲ್ಲ ಎಂಬ ಆಪಾದನೆಯಿದೆ. ಆದರೆ ಲಕ್ಷ್ಮಿಗೇ ಸಂಗೀತ ಸರಸ್ವತಿ ಒಲಿದಿದ್ದು ವಿಶೇಷ.
ಪಂಡಿತ ಜಿ.ಆರ್.ಭಟ್ಟರು ನಮ್ಮ ಜಿಲ್ಲೆ ಕಂಡ ಅತ್ಯಂತ ಶ್ರೇಷ್ಠ ಸಂಗೀತಗಾರರು. ಅವರ ಗರಡಿಯಲ್ಲಿ ತಯಾರಾದ ಅದ್ಭುತ ಕಲಾ ಕುಸುಮಗಳಲ್ಲಿ ಲಕ್ಷ್ಮಕ್ಕ ಕೂಡಾ ಒಬ್ಬಳು. ಶೃದ್ಧೆಯೇ ಉಸಿರಾಗಿ ಪಟ್ಟು ಬಿಡದೇ ಗುರುಗಳ ಮನೆಯನ್ನರಸಿಕೊಂಡು ಹೋಗಿ ಸಂಗೀತ ಶಾರದೆಯನ್ನು ಒಲಿಸಿಕೊಂಡ ಲಕ್ಷ್ಮಿ ಹೆಗಡೆಯವರು ಇಂದು ಉತ್ತಮ ಸಂಗೀತಗಾರ್ತಿಯಾಗಿ ಜಿಲ್ಲೆಗೇ ಪರಿಚಿತರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುವುದರ ಜೊತೆಗೆ ಸದ್ಗೃಹಿಣಿಯಾಗಿಯೂ ಮನೆಯನ್ನು ತೂಗಿಸಿಕೊಂಡು ಹೋಗುವ ಲಕ್ಷ್ಮಕ್ಕ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾದಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಜೊತೆ ಜೊತೆಗೆ ಸಾಧನಾ ಸಂಗೀತ ವಿದ್ಯಾಲಯ ಎಂಬ ಸ್ವಂತ ಸಂಗೀತ ಶಾಲೆ ಪ್ರಾರಂಭಿಸಿ ನೂರಾರು ವಿದ್ಯಾರ್ಥಿಗಳ ಪಾಲಿಗೆ ಸ್ವತಃ ಸಂಗೀತ ಶಾರದೆಯೇ ಆಗಿದ್ದಾಳೆ. ಕಲಿತವರಿಗೆಲ್ಲ ಕಲಿಸುವ ಕಲೆ ಗೊತ್ತಿರುತ್ತದೆ ಎಂದು ಹೇಳಲಾಗದು. ಆದರೆ ಲಕ್ಷ್ಮಕ್ಕನ ಶಿಷ್ಯ ವೃಂದವನ್ನು ನೋಡಿದಾಗ ಅವಳಿಗೆ ಅದು ಸಹಜವಾಗಿಯೇ ಸಿದ್ಧಿಸಿದೆ ಎಂದೆನಿಸುತ್ತದೆ.
ಪಂಡಿತ ಜಿ.ಆರ್.ಭಟ್ಟರು ನನ್ನ ದಾಯವಾದಿಗಳು. ಆದರೆ ನಾನು ಅವರ ಹತ್ತಿರ ಯಾವ ದಾಯಕ್ಕಾಗಿಯೂ ( ಪಾಲಿಗಾಗಿಯೂ ) ವಾದ ಮಾಡಲಿಲ್ಲ. ? ಅವರ ಪಾಲನ್ನು ಅವರ ಶಿಷ್ಯರನೇಕರು ಹೊಂದಿ ಇಂದು ನಾಡಿನಾದ್ಯಂತ ಅನೇಕರಿಗೆ ಹಂಚುತ್ತಿರುವುದೇ ಹೆಮ್ಮೆಯ ವಿಷಯ. ಅದರಲ್ಲಿ ತುಸು ಹೆಚ್ಚಿನ ಪಾಲನ್ನು ತನ್ನ ಶ್ರಮದಿಂದ ದಕ್ಕಿಸಿಕೊಂಡಿದ್ದು ನಮ್ಮ ಲಕ್ಷ್ಮಕ್ಕ.
ಲಕ್ಷ್ಮಿ ಹೆಗಡೆಯವರ ಮನೆಯವರಾದ ಬಾಲಚಂದ್ರ ಹೆಗಡೆಯವರೂ ಅವರಿಗೆ ಬೆಂಬಲ ನೀಡಿ ಅವರನ್ನು ಪ್ರೋತ್ಸಾಹಿಸುವುದರಿಂದ ಲಕ್ಷ್ಮಕ್ಕನ ಸಂಗೀತ ಸಾಧನೆ ಎಡೆಬಿಡದೇ ಮುಂದೆ ಸಾಗಿದೆ. ಬೆಳೆದ ಮಗಳಿದ್ದರೂ ಬೆಳವಣಿಗೆಯಿಲ್ಲ. ಚಿಕ್ಕ ಮಗುವಿನಂತಿರುವ ಮಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಅತ್ತೆ ಲಕ್ಷ್ಮಕ್ಕನ ನಿಜವಾದ ಬೆಂಬಲ. ನೋವಿನ ದನಿಯಲ್ಲೂ ನಲಿವಿನ ರಾಗ ಹೊಮ್ಮಿಸುವ ಲಕ್ಷ್ಮಕ್ಕ ಸಹನಾಮಯಿ. ಎಂತಹ ಬೇಸರದ ಮುಖಗಳಲ್ಲೂ ಉತ್ಸಾಹದ ಚಿಲುಮೆ ಚಿಮ್ಮಿಸಬಲ್ಲ ಲಕ್ಷ್ಮಿ ಹೆಗಡೆಯವರ ಹಾಡುಗಳು ನನ್ನ ಬದುಕಿನ ಬಿಡುವಿನ ವೇಳೆಯ ರಸಗವಳವಿದ್ದಂತೆ.
ಸಂಗೀತ ವಿದ್ಯೆಯೇ ಹಾಗೆ ಅದು ಯಾರ ಶಿಫಾರಸ್ಸಿನ ಮೇಲೆ ಬರುವುದಲ್ಲ. ಅದು ದೇವರ ಆಶೀರ್ವಾದ. ನಮ್ಮ ತಂದೆಯವರಾಗಲೀ ನಾನಾಗಲೀ ಸಂಗೀತದ ಶ್ರೋತೃಗಳಾಗಿ ಕಲಾವಿದರನ್ನು ಅತ್ಯಂತ ಗೌರವಾದರಗಳಿಂದ ಕಾಣಬೇಕೆನ್ನುವವರಾದ್ದರಿಂದ ನನಗೆ ಇಂತಹ ಕಲಾವಿದರನ್ನು ಕಂಡಾಗ ಕೈಜೋಡಿಸಿ ನಮಸ್ಕರಿಸುವ ಎಂದೆನಿಸಿಬಿಡುತ್ತದೆ. ಯಾಕೆಂದರೆ ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಒಬ್ಬ ಸಂಗೀತಗಾರ ತನ್ನ ಜೀವನದಲ್ಲಿ ಹಗಲು ರಾತ್ರಿ ಶ್ರಮವಹಿಸಿ ಮುಂದೆ ಬಂದಿರುತ್ತಾನೆ. ಇದು ಅದೃಷ್ಟದಿಂದಲೋ ಅಥವಾ ಅಧಿಕಾರದಿಂದಲೋ ಒಲಿಯುವುದಾಗಿದ್ದರೆ ಲಕ್ಷ್ಮಕ್ಕನಂತಹ ಸಾಧುವನ್ನು ಅನೇಕ ಜನ ದೂಡಿ ಸರತಿಯಲ್ಲಿ ತುತ್ತತುದಿಗೆ ನಿಲ್ಲಿಸಿಬಿಡುತ್ತಿದ್ದರು. ಯಾರು ಏನೇ ಮಾಡಿದರೂ ಕಳ್ಳರು ವಿದ್ಯೆಯನ್ನು ಅಪಹರಿಸಲಿಕ್ಕಾಗುವುದಿಲ್ಲ. ಪ್ರತಿಭೆಯನ್ನು ಹತ್ತಿಕ್ಕಲಿಕ್ಕಾಗುವುದಿಲ್ಲ.
ಶ್ರೀಮತಿ ಲಕ್ಷ್ಮಿ ಹೆಗಡೆಯವರ ವಿದ್ಯಾರ್ಥಿಗಳು ಇಂದು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಂದ ಹಿಡಿದು ಗೃಹಸ್ಥರವರೆಗೂ ಸಾಧನಾ ಸಂಗೀತ ವಿದ್ಯಾಲಯವನ್ನು ಅರಸಿಕೊಂಡು ಬಂದು ಸಂಗೀತ ಕಲಿಯುವ ಉತ್ಸಾಹ ತೋರುತ್ತಾರೆ. ಹೆಸರಷ್ಟೇ ಲಕ್ಷ್ಮಿ ನಮ್ಮ ಸಹೋದರಿಯದ್ದು. ಆದರೆ ಅವಳು ಅದರ ಹಿಂದೇ ಬಿದ್ದವಳಲ್ಲ. ತಾನು ಕಲಿತ ವಿದ್ಯೆಯನ್ನು ತನ್ನ ಗುರುಗಳಿಗೆ ಪ್ರೀತಿಯಾಗುವಂತೆ ನಾಲ್ಕಾರು ಜನರಿಗೆ ಹಂಚುವ ಮೃದು ಸ್ವಭಾವದ ವ್ಯಕ್ತಿ. ಸಹ ಕಲಾವಿದರನ್ನು ಗೌರವಿಸುವ ಲಕ್ಷ್ಮಕ್ಕ ಯಾರೊಬ್ಬರ ಬಗ್ಗೂ ಎರಡೆಣಿಸುವವಳಲ್ಲ….ಮತ್ತು ಮತ್ಸರದ ಮಾತಾಡುವವಳಲ್ಲ. ತಾನಾಯ್ತು. ತನ್ನ ಕೆಲಸವಾಯ್ತು. ಸಂಗೀತವೇ ತಪಸ್ಸು ಅವಳಿಗೆ.
ಮುದ್ದಾದ ಮಗ ಪ್ರತಿಭಾ ಸಂಪನ್ನ. ಅವನೂ ಸಂಗೀತ ವಿದ್ಯಾರ್ಥಿ. ಲಕ್ಷ್ಮಕ್ಕನ ಭಜನೆಗಳು, ಭಾವಗೀತೆಗಳು ಹಲವಾರು ಧ್ವನಿಮುದ್ರಿಕೆಗಳಾಗಿವೆ. ಪ್ರತಿವರ್ಷ ಸಾಧನಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ನಡೆಸುವುದರ ಮುಖಾಂತರ ಅನೇಕ ಕಲಾವಿದರುಗಳಿಗೆ ಮತ್ತು ತನ್ನ ಸಂಗೀತ ಶಾಲೆಯ ಮಕ್ಕಳಿಗೆ ಅವಳು ವೇದಿಕೆ ನಿರ್ಮಿಸಿ ಕೊಡುತ್ತಾಳೆ. ಭಗವಂತ ಪಕ್ಕಾ ಒಳ್ಳೆಯವರ list ಮಾಡಿದರೆ ಲಕ್ಷ್ಮಕ್ಕ 10 rank ನ ಒಳಗಿರುತ್ತಾಳೆ.
ಸಹೋದರಿ ಲಕ್ಷ್ಮಿ ಹೆಗಡೆಯವರಿಗೆ ಇನ್ನೂ ಹೆಚ್ಚಿನ ಗೌರವ ಸನ್ಮಾನಗಳು ಸಿಗಬೇಕು. ಅವರ ಪ್ರತಿಭೆಗೆ ಮತ್ತಷ್ಟು ವೇದಿಕೆಗಳು ಸಿಗುವಂತಾಗಬೇಕು. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತನ್ನು ನಾವು ಹಿತ್ತಲ ಗಿಡವೂ ಮದ್ದು ಎಂಬಂತೆ ಮಾಡಬೇಕಿದೆ. ಲಕ್ಷಾಂತರ ರೂಪಾಯಿಗಳನ್ನು ಸುರಿದು ಎಲ್ಲೆಂಲ್ಲಿಂದಲೋ ಜನರನ್ನು ಕರೆಸಿ ಮಬ್ಬುಗತ್ತಲಲ್ಲಿ ಮದ್ಯದಮಲಿನಲ್ಲಿ ತೇಲಿ ಕುಣಿದಾಡುವ, ಗಂಟಲು ಹರಿದು ಹೋಗುವಂತೆ ಕೂಗುವ ಕಿರುಚಾಡುವ ಪಾಶ್ಚಾತ್ಯ ಸಂಸ್ಕೃತಿಯ ಮಧ್ಯೆ ನಮ್ಮ ಹಿಂದೂಸ್ತಾನಿ ಸಂಗೀತ ಕಳೆದು ಹೋಗದಂತೆ ರಕ್ಷಿಸುವ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ. ಭಾರತೀಯತೆಯ ನೆಲದ ಸೊಗಡನ್ನು ಮರೆಯುವಂತಾದರೆ ಅದು ನಾವು ನಮ್ಮ ತಾಯಿಗೇ ಮಾಡುವ ದ್ರೋಹ ಎಂದು ನಾನಾದರೂ ಭಾವಿಸುತ್ತೇನೆ. ಕಲೆ, ಕಲಾವಿದರನ್ನು ಗೌರವಿಸೋಣ. ಸಂಗೀತದ ಮೂಲಕ ಮನರಂಜನೆಯ ಜೊತೆಗೆ ಸಂಸ್ಕೃತಿಯ ಬೆಳಕಿನ ಬೀಜ ಬಿತ್ತುವ ಲಕ್ಷ್ಮಕ್ಕನಂಥವರಿಗೆ ನಿತ್ಯ ಗೆಲುವಾಗಬೇಕು. ಸಹೋದರಿಯ ಗೆಲುವನ್ನು ನಾನು ಆನಂದಿಸಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಲಕ್ಷ್ಮಿ ಹೆಗಡೆಯವರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಲಕ್ಷ್ಮಕ್ಕನಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು

???⚪⚫???????⚪⚫???????⚪

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

???⚪⚫???????⚪⚫???????⚪

✍ಸಂದೀಪ ಎಸ್ ಭಟ್ಟ

❤️????????❤️????????❤️???