ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ವಿನಾಯಕ ಭಟ್ಟ – ಹರವಳ್ಳಿ
ಚಕ್ರವ್ಯೂಹ ಅಭಿಮನ್ಯುವಿಗಷ್ಟೇ ರಚಿಸಲ್ಪಟ್ಟಿದ್ದಲ್ಲ. ಬೆಳೆಯುವ ಮನಸ್ಸಿರುವ ಪ್ರತಿಯೊಬ್ಬನಿಗೂ ಇಂತಹ ಚಕ್ರವ್ಯೂಹಗಳು ರಚಿಸಲ್ಪಡುತ್ತವೆ. ಜೀವನದಲ್ಲಿ ತಂದೆಯ ವಯಸ್ಸಿನವರೊಡನೆಯೂ ಕಾದಬೇಕಾದ ಪ್ರಸಂಗ ಬರಬಹುದು. ನಮ್ಮದೇ ಅಜ್ಜನ ವಯಸ್ಸಿನವನ ಕೆಂಗಣ್ಣಿಗೆ ನಾವು ಗುರಿಯಾಗಬಹುದು. ಚಕ್ರವ್ಯೂಹದೊಳಗೆ ಒಳನುಗ್ಗುವುದು ನಮ್ಮ ಸಾಮರ್ಥ್ಯ. ಹೊರಬರುವುದು ನಮ್ಮ ಅದೃಷ್ಟ. ಜೀವನ ಕಲಿಸುವ ಪಾಠ ಇದೇ. ಎಲ್ಲಾ ದಿನವೂ ನಮಗೆ ಗೆಲುವಾಗುವುದಿಲ್ಲ. ಸೋಲಿನ ಕಹಿಯನ್ನುಂಡು ಉಂಡು ಪಾಂಡವರು ಮಹಾಭಾರತವನ್ನು ಜಯಿಸಿದ್ದಲ್ಲವೇ?! ಅಳು ಬಂದರೂ ಬಿಕ್ಕುವಂತಿಲ್ಲ ಬದುಕಿನಲ್ಲಿ. ಯಾಕೆಂದರೆ ಆ ಅಳುವೇ ನಿಮ್ಮ ಸೋಲೆಂದೂ ಲೇವಡಿ ಮಾಡಬಹುದು ಜನ. ಹಾಗಂತ ಗೆಲುವಾದಾಗಲೂ ಊರು ತುಂಬ ಹಿಗ್ಗಬಾರದು. ಸಮಚಿತ್ತದ ಜೀವನವೇ ಅತಿದೊಡ್ಡ ತಪಸ್ಸು. ಇಂದು ನನ್ನ ಬದುಕಿಗೆ ಬಣ್ಣ ತುಂಬಿದವರು ಮಾಲಿಕೆಯ ಮೂರನೇ ವಿನಾಯಕರ ದರ್ಶನ ಮಾಡಿಸಬೇಕು. ಶ್ರೀ ವಿನಾಯಕ ಭಟ್ಟ ಹರವಳ್ಳಿ ಇಂದಿನ ನನ್ನ ಅಕ್ಷರ ಅತಿಥಿ.
ನನ್ನ ಪ್ರಪ್ರಥಮ ವೃತ್ತಿ ಜೀವನ ಪ್ರಾರಂಭಿಸಿದ ಊರು ಅದು. ನನಗೆ ವೃತ್ತಿಯ ಮೊದಲ order ಕೊಟ್ಟವರು ಶ್ರೀಯುತ ಈಶ್ವರ ನಾಯ್ಕರು ಪ್ರಸ್ತುತ ಡಯಟ್ ಕುಮಟಾದ ಪ್ರಾಂಶುಪಾಲರು. ನನಗೆ order ಕೊಟ್ಟಾಗ ಅದರ ಮೇಲೆ ಗರಡಿಬೈಲ ಎಂದು ಬರೆದಿತ್ತು. ತಕ್ಷಣಕ್ಕೆ ಇದು ಕರಡಿ ಇರುವ ಜಾಗವಿರಬಹುದೇ?! ಎಂದೆನಿಸದ್ದು ನನಗೆ ಹುಟ್ಟಿದಂದಿನಿಂದ ಈ ಊರಿನ ಹೆಸರನ್ನೇ ಕೇಳಿರದಾದಾಗ ದಿಗಿಲಾಗಿ ನಾನು ಈಶ್ವರ ನಾಯ್ಕರನ್ನು ” ಸರ್ ನನ್ನನ್ನು ತೀರಾ interior ಗೊಂದು ಹಾಕಬೇಡಿ” ಎಂದು ಕೈಮುಗಿದೆ. ಆಗ ತುಂಬ ಹಾಸ್ಯ ಪ್ರವೃತ್ತಿಯವರಾದ ಅವರು ನೀವು ಹಳ್ಳಿ ಪೇಟೆ ಮಾಡುವ ಸಾಮರ್ಥ್ಯ ಇದ್ದವರು….ನಿಂದು ಸಂತೇಗುಳಿ ಮನೆಯಂತಲ ಸಂತೇಗುಳಿನೇ ಕೊಟ್ಟಿದೆ ನೋಡು ಎಂದರು. ಅವರು ಹೇಳಿದ್ದು ಸತ್ಯವಾಗಿತ್ತು. ಆದರೆ ನನ್ನ ಮನೆಯಿದ್ದದ್ದು ಹೊನ್ನಾವರ ಸಂತೇಗುಳಿ ನನಗೆ ಈಗ ಹೋಗಬೇಕಾದ್ದು ಕುಮಟಾ ತಾಲೂಕಿನ ಬಡಾಳ ಸಂತೇಗುಳಿ ಎನ್ನುವುದು ಪಕ್ಕಾ ಆಯಿತು. ??. ಈಶ್ವರರಿಗೊಂದು ಕೈಮುಗಿದು ಹೊರಟ ಮೇಲೆ ನನಗೆ ಸಿಕ್ಕವರೇ ಈ ವಿನಾಯಕರು.
ನಾನು ಗರಡಿಬೈಲ ಶಾಲೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ವಿನಾಯಕ ಭಟ್ಟರು ಸಂತೇಗುಳಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು. ಪದವೀಧರರಾದ ವಿನಾಯಕ ಭಟ್ಟರು ಗರಡಿಬೈಲ ಶಾಲೆಯ ಬಗ್ಗೆ ಊರಿನ ಬಗ್ಗೆ ತೋರುವ ಅಭಿಮಾನ ಅಸದಳವಾದದ್ದು. ಗರಡಿಬೈಲ ಶಾಲೆ ನಾನು ಕೆಲಸ ಮಾಡಿದ ಶಾಲೆ ಎಂಬ ಅಂಧ ಅಭಿಮಾನದಿಂದ ಹೇಳುವ ಮಾತಲ್ಲ…..ಪ್ರಕೃತಿಯ ಮಡಿಲಲ್ಲಿ ಮುಗ್ಧ ಮಕ್ಕಳ ಜೊತೆ ಬೆರೆಯಲು ಭಗವಂತನೇ ನನಗಿತ್ತ ಮೊದಲ ಅವಕಾಶವಾಗಿತ್ತು ಅದು. ದೂರದಿಂದ ಕಾಣುವ ಮಳೆಗಾಲದ ಅಣುಕುಜೋಗ ಸಹ್ಯಾದ್ರಿಯ ಬೆಟ್ಟಗಳ ಸಾಲು. ಮೇದಿನಿ ಅರಸರ ಮೂಲಸ್ಥಳ, ಉಳ್ಳೂರಿನ ಮಠ, ಸುತ್ತ ಹಸಿರು ಭತ್ತದ ಗದ್ದೆಗಳು, ಸರ್ವಧರ್ಮ ಸಮನ್ವಯತೆಯ ಊರು, ಗುರುಭಕ್ತಿ ತೋರುವ ಮಕ್ಕಳು, ನೀವು ಬೇಕಾದದ್ದು ಮಾಡಿ ನಾನು ನಿಮ್ಮ ಜೊತೆಗೆ ಇದ್ದೇನೆ ಹೇಳುವ ವಿನಾಯಕ ಭಟ್ಟರು. ಸ್ವಂತ ಸಹೋದರನಂತೆ ಕಂಡ ಸಹೋದ್ಯೋಗಿ ಬಳಗ, ನನ್ನ T.V.S.Victor ಬೈಕು ಮತ್ತು ನಾನು…..?? ಬದುಕಿನ ಹೊಸ ಅಧ್ಯಾಯ ಪ್ರಾರಂಭವಾದ ಜಾಗ ಅದು.
ವಿನಾಯಕ ಭಟ್ಟರು ಆ ಪ್ರದೇಶದಲ್ಲಿ ಜನನಾಯಕರಾಗಿ ಗುರುತಿಸಿಕೊಂಡವರು. ಸಮಾಜದಲ್ಲಿ ಹೆಸರು ಗಳಿಸಿದವರು.ಯುವಜನ ಮೇಳ, ಸಾರ್ವಜನಿಕ ಗಣೇಶೋತ್ಸವ, ಮುಂತಾದ ಯಶಸ್ವಿ ಸಂಘಟನೆ ಮಾಡುತ್ತಾ ಶಾಸಕರನ್ನೂ ಮಂತ್ರಿ ಮಹೋದಯರನ್ನೂ ಜನನಾಯಕರುಗಳನ್ನೂ ತಮ್ಮ ನೆಲಕ್ಕೆ ಗೌರವಪೂರ್ವಕವಾಗಿ ಕರೆಸಿಕೊಂಡು ಅಭಿವೃದ್ಧಿ ಬಯಸುವವರು. ಗರಡಿಬೈಲ ಶಾಲೆಯ ಇಂದಿನ ಭೌತಿಕ ಅಭಿವೃದ್ಧಿಯಲ್ಲಿ ಅಲ್ಲಿಯ ಎಸ್.ಡಿ.ಎಂ.ಸಿಯವರ ಜೊತೆಗೆ ತಾನೂ ಒಬ್ಬನಾಗಿ ಸಾಥ್ ಕೊಡುವ ವಿನಾಯಕ ಭಟ್ಟರು ನನಗೆ ಅನೇಕ ಕಾರ್ಯಕ್ರಮಗಳ ನಿರೂಪಣೆ ಕೊಟ್ಟು ಮೊದಲು ಮಾತನಾಡುವ ವೇದಿಕೆ ಕಲ್ಪಿಸಿಕೊಟ್ಟವರು. ಹೀಗಾಗಿ ಇಂದು ಅನೇಕ ಪ್ರತಿಷ್ಠಿತ ವೇದಿಕೆಗಳನ್ನೇರಿ ಮಾತನಾಡುವ ಕಾಲದಲ್ಲೂ ನಾನು ಮಾಡುವ ವಿನಾಯಕನಿಗೊಂದು ನಮಸ್ಕಾರದಲ್ಲಿ ಈ ವಿನಾಯಕರಿಗೂ ಪಾಲಿರುತ್ತದೆ. ಅವತ್ತಿನ ಸಮಯಕ್ಕೆ ನನಗೊಂದು ನಿರೂಪಣೆ ಸಿಕ್ಕರೆ ಸಾಕು ರಾಷ್ಟ್ರ ಪ್ರಶಸ್ತಿಯೇ ಸಿಕ್ಕಷ್ಟು ಸಂತೋಷ ಸಹಜವಾಗಿಯೇ ಆಗುತ್ತಿತ್ತು. ನಿರೂಪಣೆಗಾಗಿ ನಾ ಮುಂದು ತಾ ಮುಂದು ಎಂದು ಕ್ಯೂ ನಿಲ್ಲಬೇಕಾದ ಕಾಲದಲ್ಲಿ ಸಣ್ಣ ವಯಸ್ಸಿನ ನನಗೂ ಒಂದೆರಡು ಬಾರಿ ಮೈಕ್ ಹಿಡಿಯುವ ಸೌಭಾಗ್ಯ ಒದಗಿ ಬಂತು. ಕೊನೆಗೆ ಹಿಡಿದ ಮೈಕನ್ನು ಬಿಡಲೇ ಇಲ್ಲ ನಾನು.?? ವಸ್ತುಶಃ ಬಹು ಸೋಮಾರಿಯಾಗಿದ್ದ ನನಗೆ ಈ ನಿರೂಪಣೆಯ ತಯಾರಿ, ಹೆಸರು ಏನೂ ಬೇಡವಾಗಿತ್ತು. ಆದರೆ ಆ ಮೈಕಾಸುರ ನನ್ನನ್ನು ಮತ್ತೆ ಮತ್ತೆ ಕರೆಸಿಕೊಂಡು ಸೋಮಾರಿತನ ಓಡಿಸಿದ. ವಿನಾಯಕ ಭಟ್ಟರು ನನ್ನ ಮೇಲೆ ಇಟ್ಟ ಕಾಳಜಿ ಮತ್ತು ಕೊಟ್ಟ ಅವಕಾಶ ನನ್ನ ಮಾರ್ಗ ಬದಲಿಸಿದ್ದು ಸುಳ್ಳಲ್ಲ.
ವಿನಾಯಕ ಭಟ್ಟರು ಊರಿನಲ್ಲಿ ಸಮಾಧಾನದಿಂದ ಬದುಕಬೇಕು ಎನ್ನುವ ಮನಸ್ಸುಳ್ಳ ಜನ. ತಾವೂ ಬದುಕಿ ಇನ್ನೊಬ್ಬರಿಗೂ ಬದುಕಾಗುವ ಅವರಲ್ಲಿ ನಾಯಕತ್ವ ಗುಣ ಸಹಜವಾಗಿಯೇ ಬೆಳೆದು ಬಂದು ಬಿಟ್ಟಿದೆ. ನಾನು ಗರಡಿಬೈಲ ಬಿಟ್ಟು ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಅದೇ ಅಭಿಮಾನ ಪ್ರೀತಿ.
ಆವತ್ತೊಂದಿನ ಬಹಳ ವರ್ಷಗಳ ಮೇಲೆ ಗರಡಿಬೈಲ ಶಾಲೆಯನ್ನು ನೋಡಿಬರುವ ಮನಸ್ಸಾಯಿತು. ನನ್ನ ಆತ್ಮೀಯ ಗೆಳೆಯ ಸುಬ್ರಹ್ಮಣ್ಯನ ಜೊತೆಗೆ ಹೊರಟೇ ಬಿಟ್ಟೆ. ಪ್ರತಿಭಾ ಕಾರಂಜಿ ನಡೆಯುವದರಿಂದ ಊರಿನ ಜನರೆಲ್ಲಾ ಸೇರುತ್ತಾರೆ ಎಂದು ತಿಳಿಯಿತು. ಎಲ್ಲರನ್ನೂ ಒಮ್ಮೆಗೆ ಕಾಣುವ ಸೌಭಾಗ್ಯ ಸಿಗುತ್ತದೆ ಎಂಬ ಕಾರಣಕ್ಕಾಗಿ ನಾನಲ್ಲಿ ತೆರಳಿದ್ದೆ. ಹೋದವನೇ ಯಾರಿಗೂ ಕಾಣದಂತೆ ಸಭಾ ಕಾರ್ಯಕ್ರಮ ಮುಗಿಯಲಿ ಆಮೇಲೆ ಕಾಣಿಸಿಕೊಳ್ಳುವ ಎಂದು ಅಂಗನವಾಡಿಗೆ ತೆರಳಿ ನನ್ನ ಸಹೋದರಿಯರಂತಿದ್ದ ದಾಕ್ಷಾಯಿಣಕ್ಕ, ಉಷಕ್ಕರನ್ನು ಮಾತಾಡಿಸಬೇಕೆನ್ನುವಷ್ಟರಲ್ಲಿ ಎಲ್ಲಿಯೋ ಸುದ್ದಿ ತಿಳಿದ ವಿನಾಯಕ ಭಟ್ಟರು ನನಗಾಗಿ ಹೇಳಿ ಕಳುಹಿಸಿ ವೇದಿಕೆ ಹತ್ತಿಸಿ ಗೌರವದಿಂದ ಸನ್ಮಾನಿಸಿದರು. ಅನಿರೀಕ್ಷಿತವಾಗಿ ಭೇಟಿ ನೀಡಿದರೂ ಹತ್ತೇ ಹತ್ತು ನಿಮಿಷದಲ್ಲಿ ಕೊರಳಿಗೊಂದು ಹಾರ, ಹೆಗಲಿಗೊಂದು ಶಾಲು, ಹೃದಯ ತುಂಬುವ ಅಭಿನಂದನೆಯ ಮಾತುಗಳು, ಗರಡಿಬೈಲ ನೆಲಕ್ಕೆ ನಾನು ಕೊಟ್ಟಿದ್ದಕ್ಕಿಂತ ನಾನು ಪಡೆದದ್ದೇ ಹೆಚ್ಚು ಅನಿಸಿಬಿಟ್ಟಿತು. ಸಮಾಜ ನನಗೊಂದು ಅವಕಾಶವನ್ನೇ ಕೊಡದಿದ್ದರೆ ನಾನು ಹೇಗಾದರೂ ಬರೆಯುತ್ತಿದ್ದೆ?!ಹೇಗಾದರೂ ಬೆಳೆಯುತ್ತಿದ್ದೆ?!
ಅವನಿಗ್ಯಾಕೆ ಕೊಡಬೇಕು? ಅವನು ನಮ್ಮವನಲ್ಲ. ಅವನನ್ನು ಬೆಳೆಯುವುದಕ್ಕೇ ಬಿಡಬಾರದು. ಚಿಗುರನ್ನು ಚಿವುಟಿ ಬಿಡಬೇಕು. ಅವನಿದ್ದರೆ ನಮಗೆ ಉಳಿಗಾಲವಿಲ್ಲ, ಅವನಿಂದ ನಮಗೇನಾಗಲಿಕ್ಕಿದೆ?! ಈ ಥರದ ಯೋಚನೆ ತೋರಿದವರು ತೋರುವವರು ಯಾವತ್ತೂ ಬದುಕಿನಲ್ಲಿ ಹಬ್ಬವಾಗುವುದಿಲ್ಲ. ನಾವು ತೋರಿದ ಕುಹಕತೆ boomerang ನ ಹಾಗೆ ನಮಗೇ ಮರಳುತ್ತದೆ. ಜಾತಿ, ಮತ, ಧರ್ಮ ಪ್ರಾಂತ್ಯಗಳ ಭೇದವಿಲ್ಲದೇ ಪ್ರತಿಯೊಬ್ಬರ ಪ್ರತಿಭೆಗೂ ಅವಕಾಶವಿತ್ತಾಗ ಮುಂದೊಂದು ದಿನ ಆ ಕಲಾವಿದ, ಪ್ರತಿಭಾಶಾಲಿ, ಸಾಧಕ, ನಮ್ಮನ್ನು ಮರೆಯುವುದಕ್ಕೇ ಸಾಧ್ಯವಿಲ್ಲ ಮತ್ತು ನಾವು ಅವರ ಕಣ್ಣೊಳಗೆ ಪೂಜ್ಯ ಸ್ಥಾನ ಪಡೆಯುತ್ತೇವೆ. ವಿನಾಯಕ ಭಟ್ಟರು ತಾನೊಬ್ಬನೇ ಎಲ್ಲವನ್ನೂ ಮಾಡಬೇಕೆಂಬ ಹಪಹಪಿಕೆಯ ಮನುಷ್ಯರಲ್ಲ. ತನ್ನ ಸಂಪರ್ಕಕ್ಕೆ ಬರುವ, ಹಾಗೂ ತನ್ನೂರಿನ ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕೆಂಬ ಕನಸು ಹೊತ್ತವರು.
ನನ್ನ ವರ್ಗ ಕೋಣೆಗೆ ಬಂದು ಏನು ಕಲಿಸಿದರಿ?! ಹೇಗೆ ಕಲಿಸಿದರಿ?! ಎಂದು ಯಾವತ್ತೂ ಅವರು ಕೇಳಿದ್ದಿಲ್ಲ. ನಾನು ಶಾಲೆಯಲ್ಲಿ ಇದ್ದಾಗ ಪಾಠ ಮಾಡುತ್ತಿದ್ದರೆ ಅವರು ನನ್ನ ಅವಧಿ ಮುಗಿಯುವವರೆಗೂ headmaster ರೂಮಿನಲ್ಲಿ wait ಮಾಡುತ್ತಿದ್ದರು. ಅಂತಹ ಸೌಜನ್ಯ ಅವರದ್ದು. ಕಷ್ಟ ಬಂದಾಗ ಹೇಳಿಕೊಂಡರೆ ಅವರು ವಿಘ್ನನಾಶಕ ವಿನಾಯಕರೇ ಆಗಿರುವವರು. ನಮ್ಮ ತಂದೆಯವರಿಗೂ ವಿನಾಯಕ ಭಟ್ಟರೆಂದರೆ ಬಲುವೇ ಪ್ರೀತಿ. ಮಡದಿ, ಪ್ರತಿಭಾ ಸಂಪನ್ನ ಮಕ್ಕಳು, ಸಹೋದರ, ತುಂಬು ಕುಟುಂಬದಲ್ಲಿ ಬಾಳ್ವೆ ಮಾಡುವ ಯುವೋತ್ಸಾಹಿ ವಿನಾಯಕ ಭಟ್ಟರಿಗೆ ಒಳ್ಳೆಯದಾಗಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.
ಸದ್ಗುರು ಶ್ರೀಧರರ ಆಶೀರ್ವಾದ ವಿನಾಯಕ ಭಟ್ಟರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ವಿನಾಯಕ ಭಟ್ಟರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
???⚪⚫???????⚪⚫???????⚪
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 87620 30710
???⚪⚫???????⚪⚫???????⚪
✍ಸಂದೀಪ ಎಸ್ ಭಟ್ಟ
❤️????????❤️????????❤️???