❤️????????❤️????????❤️???
ಬದುಕಿಗೆ ಬಣ್ಣ ತುಂಬಿದವರು;-(ಸಂಚಿಕೆ-100)
ಮಿಡಿದ ಮನಗಳು ನೂರು, ಬಿಡದ ಭಾವವು ನೂರು, ಹಿಡಿದ ಕೆಲಸವು ನೂರು, ಬರೆವ ಬರಹವು ನೂರು, ಜರೆವ ಮನಗಳು ನೂರು, ತೊರೆವ ಮನುಜರು ನೂರು, ಮರೆವ ಜನಗಳು ನೂರು, ಅರಿವವರು ನೂರು, ಕರೆವ ಮಂದಿಯು ನೂರು, ಬೆರೆವ ಮಂದಿಯು ನೂರು, ಬದುಕಿನ ಬಣ್ಣಗಳು ನೂರು ನೂರು, ಯೋಚಿಸುವ ಮತಿ ನೂರು, ಜೀವದ ಗತಿ ನೂರು, ಪ್ರೀತಿಯಲಿ ಕಾಣುವವರಿಲ್ಲಿ ನೂರು, ಇಟ್ಟ ಹೆಸರವು ನೂರು, ಕೊಟ್ಟ ಮಾತದು ನೂರು, ಕಟ್ಟಿಟ್ಟ ಕನಸುಗಳು ಮತ್ತೆ ನೂರು, ಸುಟ್ಟ ಸ್ವಪ್ನವು ನೂರು, ತೊಟ್ಟ ಭಾಷೆಯು ನೂರು, ಬಿಚ್ಚಿಟ್ಟ ಸಂಗತಿಯು ನೂರು ನೂರು. ಕೇಳದಿರಿ ಮತ್ತೆ ನೀವ್ ನೂರು ಯಾರು?!
ಬಣ್ಣ ತುಂಬಿದ ಭಗವಂತ
ನಾವಂದುಕೊಂಡಂತೆ ಎಲ್ಲವೂ ನಡೆಯುವ ಹಾಗಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಶ್ರೀರಾಮನಂಥವರಿಗೂ ವನವಾಸ, ಏಸುವಿಗೂ ಶಿಲುಬೆ, ಅಭಿಮನ್ಯುವಿನಂಥವರಿಗೂ ಕ್ರೂರ ಮೃತ್ಯು, ಸೀತೆಗೂ ಅಪವಾದ, ಪೈಗಂಬರರಿಗೂ ಊಹಿಸಲಾಗದ ಕಷ್ಟ, ಎಲ್ಲ ಸುಖೋಪಭೋಗಗಳನ್ನೂ ಅನುಭವಿಸಬಹುದಾಗಿದ್ದ ಶಾಕ್ಯರಾಜಕುಮಾರ ಸಿದ್ಧಾರ್ಥನಿಗೋ ಬುದ್ಧನಾಗುವ ಬಯಕೆ, ರಾಜ್ಯ ಗೆದ್ದರೂ ಗೊಮ್ಮಟೇಶ್ವರನಾಗಿ ನಿಂತ ಬಾಹುಬಲಿ, ಸ್ವಾತಂತ್ರ್ಯ ತಂದುಕೊಟ್ಟರೂ ಗುಂಡೇಟಿಗೆ ಬಲಿಯಾದ ಗಾಂಧಿ, ಕೆಲವೇ ಕೆಲವು ಕಾಲ ಮಿಂಚಿ ಮರೆಯಾಗಿ ಹೋದ ಶಂಕರಾಚಾರ್ಯರು, ವಿವೇಕಾನಂದರು, ಭಗತ್ ಸಿಂಗರಂಥವರು, ಇನ್ನೂ ಬೇಕು ಎನ್ನುವಾಗಲೇ ನಮ್ಮನ್ನಗಲಿದ ಶಂಕರ್ ನಾಗ್, ಕಾಳಿಂಗನಾವುಡರು, ಕೊನೆಯ ಬೆಂಚಿನ ವಿದ್ಯಾರ್ಥಿಯೊಬ್ಬ ಬೆಂಝ್ ಕಾರಿನಲ್ಲಿ ತಿರುಗುತ್ತಾನೆ….First rank ಪಡೆದ ವಿದ್ಯಾರ್ಥಿ ಜೀವನವನ್ನೇ ಸಾಗಿಸಲಾಗದೇ ಪರದಾಡುತ್ತಾನೆ. ಕೋಟಿ ಕೋಟಿ ಗಳಿಸಿದವನಿಗೂ ಬರಬಾರದ ಮಹಾರೋಗ, ಮೋರಿಗಂಡಿಯಲ್ಲಿ ಮನೆ ಮಾಡಿಕೊಂಡವನಿಗೂ ಸುಖನಿದ್ದೆ. ನಿನ್ನೆ ಏನಿಲ್ಲವಾದವನು ಇಂದು ಏನಿಲ್ಲ?! ಎಂದು ಕೇಳುವ ಪರಿಸ್ಥಿತಿ. ಇಂದು ಎಲ್ಲಾ ಇದ್ದವನೂ ನಾಳೆ ಯಾರಿಗೂ ಬೇಡದವನಾಗಿ ತಿರುಗುವ ಸ್ಥಿತಿ. ಜಿಪುಣಾಗ್ರೇಸರನೂ ಉದಾರಿ ಆದ ಕಥೆಯಿದೆ. ಉದಾರಿಯೂ ದಿವಾಳಿಯಾದ ಉದಾಹರಣೆ ಇದೆ. ಕಾಣದ ಚಿಕ್ಕ ವೈರಾಣು ವಿಶ್ವವನ್ನೇ ಹೆದರಿಸುತ್ತದೆ. ಮಿತ್ರನೂ ಶತ್ರುವಾಗುತ್ತಾನೆ, ಶತ್ರುವೂ ಪರಮ ಮಿತ್ರನಾಗಿ ಮಾರ್ಪಡುತ್ತಾನೆ. ಸೋತವನೂ ಗೆಲ್ಲುತ್ತಾನೆ, ಗೆದ್ದವನೂ ಸೋತು ಸುಣ್ಣವಾಗುತ್ತಾನೆ. ಮಳೆಯನ್ನು ನಿಲ್ಲಿಸಲಾಗಿಲ್ಲ, ಭೂಕಂಪ ತಡೆಯಲಾಗಿಲ್ಲ, ಸುನಾಮಿಯ ಸೇನೆಗೆ ಸಾವಿನ ಮನೆ ಸೇರಿದವರ ಸಂಖ್ಯೆ ಅದೆಷ್ಟೋ! ಬ್ರಹ್ಮಗಿರಿ ಬೆಟ್ಟ ಕುಸಿತವನ್ನು ಯಾರು ತಡೆಯಲಾಯಿತು?! ಲಕ್ಷ ಲಕ್ಷ ಸಂಬಳ ಎಣಿಸಿ ಐಷಾರಾಮಿ ಹೊಟೆಲಿನಲ್ಲೇ ಬಹುತೇಕ ವಾಸ್ತವ್ಯ ಮಾಡುವವರೂ ಇದ್ದಾರೆ…ಬೆಳಗಾದರೆದ್ದು ನೂರು ರೂಪಾಯಿಗಾಗಿ ಪ್ಲಾಸ್ಟಿಕ್ ಕೊಟ್ಟೆ, ಚಿಂದಿ ಆಯುವವರೂ ಇದ್ದಾರೆ. ಮನುಷ್ಯನ ಬದುಕೇ ಪೂರ್ವ ಜನ್ಮದ ಕರ್ಮಫಲ ಎನ್ನುವವರೂ ಇದ್ದಾರೆ. ನಮ್ಮ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಉಳಿದಿದ್ದೆಲ್ಲಾ ಢಂಬಾಚಾರ ಎನ್ನುವವರೂ ಇದ್ದಾರೆ. ನಮ್ಮ ಬದುಕೇ ನಮಗಿಂದು ವಿಚಿತ್ರ ಸಂಭಾವ್ಯತೆಗಳ ಸಂಚಯ. ಆಸ್ತಿಕನಾದ ನನ್ನ ಪಾಲಿಗಂತೂ ಭಗವಂತನೇ ನನ್ನ ಜಯಾಪಜಯಗಳ ಕಾರಣ. ನನ್ನ ಪಾಲಿಗಾದ ಶ್ಲಾಘನೆಯೂ ಅವನದ್ದೇ, ನಿಂದೆಯೂ ಅವನದ್ದೇ ಲೀಲೆ. ದೇವನೊಬ್ಬ ನಾಮ ಹಲವು. ಬಣ್ಣ ತುಂಬಿದ ಭಗವಂತನ ಬಗೆಗೇ ನನ್ನ ನೂರನೆಯ ಸಂಚಿಕೆ ಅರ್ಪಿತ.
ನಾನು ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮದ ಮೇಲಿನಗಂಟಿಗೆಯಲ್ಲಿ ಶ್ರೀ ಶಂಭು ಭಟ್ಟ ಹಾಗೂ ಮುಕಾಂಬಾ ದಂಪತಿಗಳಿಗೆ ಮಗನಾಗಿ ಹುಟ್ಟುತ್ತೇನೆಂದು ಅವನಿಗೆ ಮಾತ್ರ ಗೊತ್ತಿತ್ತು. ನಾ ಹುಟ್ಟುವ ಕ್ಷಣಕ್ಕೇ ಎಷ್ಟೋ ಮಕ್ಕಳು ವಿಶ್ವದ ಎಷ್ಟೋ ರಾಷ್ಟ್ರಗಳ ಎಷ್ಟೋ ಸ್ಥಳಗಳಲ್ಲಿ ಜನ್ಮ ತಳೆದಿರಬೇಕು. ಮತ್ತು ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಇಂದು ಬದುಕು ಕಟ್ಟಿ ಕೊಂಡಿರಬೇಕು. ಕೆಲವರು ಬದುಕನ್ನೇ ಕಳೆದು ಕೊಂಡಿರಲೂ ಬೇಕು. ನನ್ನ ತಂದೆ ತಾಯಿಗಳಿಗೆ ನಾನು ಮಗನಾಗಿ ಜನಿಸಿದ್ದೇ ನನ್ನ ಮೊದಲನೆಯ ಭಾಗ್ಯ. ಅದೂ ಈ ಕನ್ನಡ ನಾಡಿನ ಪುಣ್ಯಭೂಮಿ ನನ್ನ ಜನ್ಮಭೂಮಿಯಾಗಿದ್ದಕ್ಕೆ ನಾನು ಅತ್ಯಂತ ಹೆಮ್ಮೆ ಪಡುತ್ತೇನೆ. ಭಾರತದಂತಹ ದೇವರೇ ಹುಟ್ಟಿ ನಡೆದಾಡಿದ ಸ್ಥಳದಲ್ಲಿ ಹುಟ್ಟಿದೆನಲ್ಲ ಇದೆಂತಹ ಭಾಗ್ಯ. ಇಲ್ಲಿ ನನ್ನ ಹೆಸರೆಂಬುದು ಸಾಂಕೇತಿಕ ಮಾತ್ರ. ನಿಮ್ಮ ಪಾಲಿಗೂ ಇದೇ ಒಂದು ಭಾಗ್ಯ ಅಲ್ಲವೇ?! ಸುಸಂಸ್ಕೃತರಾದ ಪ್ರತಿಯೊಬ್ಬ ಮಕ್ಕಳಿಗೂ ಅವರ ತಂದೆ ತಾಯಿಯೇ ಮೊದಲ ದೇವರು…..ಮತ್ತು ಜೀವನದಲ್ಲಿ ಅಪ್ಪ ಅಮ್ಮನ ಸ್ಥಾನವನ್ನು ಯಾರೂ ತುಂಬಲಾರರು. ಅದು ತೀರಿಸಲಾಗದ ಋಣ. ನಾನು ಮೊದಲ ಬಾರಿಗೆ ಭೂಮಿಯಲ್ಲಿ ಉಸಿರಾಡಿದಾಗ ನನ್ನ ಬಳಿಯಿದ್ದ ಆಯಿ, ನನ್ನ ಮೊದಲ ಅಳುವನ್ನು ಆಲಿಸಿದ ಅಪ್ಪನ ಜೊತೆಗೆ ಇಂದೂ ನಾನು ಇದ್ದೇನೆ. ಎಂದೂ ಎಂದೆಂದೂ.. ಅಪ್ಪನ ರಕ್ಷಣೆ, ಆಯಿಯ ವಾತ್ಸಲ್ಯವೇ ಈ ರೀತಿ ನಾನು ನಿಮ್ಮೆದುರು ಪರಿಚಿತಗೊಳ್ಳುವುದಕ್ಕೆ ಸಾಧ್ಯವಾಗಿದೆ. ಹೀಗಾಗಿ ಅಪ್ಪ ಕಟ್ಟಿದ ಮನೆಯಲ್ಲಿ ಅಪ್ಪ ಆಯಿಯ ಜೊತೆಗೆ ಬಾಳುವ ಸೌಭಾಗ್ಯ ನನ್ನ ಬದುಕಿನ ಈವರೆಗಿನ ಅತಿ ಶ್ರೇಷ್ಠ ಭಾಗ್ಯ.
ಹೀಗೆ ಹುಟ್ಟಿಸಿದ ಭಗವಂತ ನಾ ಬರುವುದಕ್ಕಿಂತ ನಾಲ್ಕು ವರ್ಷ ಮುಂಚಿತವಾಗಿಯೇ ನನ್ನಕ್ಕ ಸಂಧ್ಯಾಳನ್ನು ನಮ್ಮ ಮನೆಯ ಸೌಭಾಗ್ಯವಾಗಿ ತುಂಬಿಸಿದ್ದ. ಅವಳೇ ನನ್ನ ಜೊತೆ ಆಡಿದವಳು, ಅವಳೇ ನನಗೆ ಅಕ್ಷರ ಹೇಳಿಕೊಡುತ್ತಾ ತಾನೂ ಓದಿ ನನ್ನನ್ನೂ ಓದಿಸಿದವಳು, ನನ್ನ ಜೊತೆ ಪ್ರೀತಿಯಿಂದ ಕಾಡಿದವಳು, ಇಂದಿಗೂ ಅಯ್ಯೋ ಎಂದಾಗ ಮೊದಲಾಗಿ ಓಡಿ ಬರುವವಳು, ಶಿಕ್ಷಕಿಯಾಗಿ ಸುಖ ಸಮೃದ್ಧಿಯ ಬದುಕು ಕಟ್ಟಿಕೊಂಡವಳು, ಅಕ್ಕನಿಗೆ ರಕ್ಷಣೆಯಾದ ಭಾವ ಗೌರೀಶ, ಮಕ್ಕಳಾದ ಶ್ರಾವಣಿ, ಶ್ರೀವತ್ಸ, ಪ್ರೀತಿಯಿಂದ ನೋಡಿಕೊಳ್ಳುವ ಅತ್ತೆ ಸೌಭದ್ರಕ್ಕ, ಒಟ್ಟಿನಲ್ಲಿ ಭಗವಂತನೇ ನನ್ನ ರಕ್ಷಾ ಬಂಧನವಾಗಿ ಕಳುಹಿಸಿಕೊಟ್ಟ ಸ್ವಂತ ಸಹೋದರಿ ಆಕೆ.
ನನ್ನ ಜೀವನದಲ್ಲಿ ಸಿಕ್ಕ ಗುರು, ಗುರುಮಾತೆಯರಂತೂ ಎಂಥವರಿಗೂ ಹೊಟ್ಟೆಕಿಚ್ಚು ತರಿಸಬಲ್ಲಂಥವರು. ಅಪಾರ ಪಾಂಡಿತ್ಯ, ಅಷ್ಟೇ ಪ್ರಬುದ್ಧ ಬೋಧನೆ, ನನ್ನ ಮೇಲಂತೂ ಅವರು ತೋರಿದ ವಿಶೇಷ ಕಾಳಜಿ, ಇವತ್ತಿನ ನನ್ನ ಸ್ಥಿತಿಗೆ ಅವರಲ್ಲದೇ ಮತ್ತಾರು ಕಾರಣ?! ಹೀಗೆ ಅತ್ಯುತ್ತಮ ಗುರು ಬಳಗ ಹೊಂದಿದ ಅದೆಷ್ಟೋ ಜನ ಇಂದು ವಿಶ್ವದಾದ್ಯಂತ ಉನ್ನತ ಪದವಿ ಹೊಂದಿ ಸ್ವರ್ಗ ಸದೃಶ ಬದುಕು ಕಟ್ಟಿಕೊಂಡಿದ್ದಾರಲ್ಲವೇ?! ಸದಾ ಶಿಕ್ಷಿಸುವ…… ಪಾಠವನ್ನೇ ಹೇಳಿಕೊಡದ, ಫ್ಯಾಷನ್ ಮಾಡಿಕೊಂಡು, ಪಗಾರನ್ನು ಕಿಸೆಗೆ ಹಾಕಿ ಹಾಯಾಗಿ ಮಜಾ ಮಾಡುತ್ತಲೇ ಜೀವನ ಕಳೆದ, ಕುಡಿದು ತೂರಾಡುವ ಯಾವೊಬ್ಬ ಗುರುವೂ ನನ್ನ ಪಾಲಿಗೆ ಸಿಗಲಿಲ್ಲ. ಇದೂ ನನ್ನ ಪಾಲಿಗೆ ಭಗವಂತ ನೀಡಿದ ಮತ್ತೊಂದು ಭಾಗ್ಯ. ನನ್ನನ್ನು ರೂಪಿಸಿದ ಭಗವದ್ರೂಪಿ ಗುರು ಸಮೂಹಕ್ಕೆ ನನ್ನ ತಲೆ ಯಾವಾಗಲೂ ಬಾಗುತ್ತದೆ. ಬೀಗಿದಾಗ ನನಗೊಂದು ಗುದ್ದು ಹೇರುವ ಅಧಿಕಾರ ಇದ್ದರೆ ಅದು ಅವರಿಗೆ ಮಾತ್ರ.?
ಏನೋ ಆಗಬೇಕೆಂದು ಕನಸು ಕಂಡವನಿಗೆ ಭಗವಂತ ನಿನ್ನಿಂದಲೂ ನಾಲ್ಕು ಮಕ್ಕಳು ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲಿ ಎಂದು ಶಿಕ್ಷಕನಾಗಿಯೇ ನನಗೊಂದು ಉದ್ಯೋಗ ಕೊಟ್ಟ. ಬದುಕಿಗೊಂದು ಉದ್ಯೋಗವಾಯಿತು, ಮನೆಗೊಂದು ಆರ್ಥಿಕ ಭದ್ರತೆಯಾಯಿತು. ನನಗೆ ಸಿಕ್ಕ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರೂ ನನ್ನ ಬದುಕಿನ ನಿತ್ಯ ಬಣ್ಣ. ಅವರೂ ನನ್ನನ್ನು ನಗಿಸಿದ್ದಾರೆ, ಅಳಿಸಿದ್ದಾರೆ, ಗೌರವಿಸಿದ್ದಾರೆ, ಕಾಲು ಹಿಡಿದು ನಮಸ್ಕರಿಸಿದ್ದಾರೆ, ಇಂದಿಗೂ ನನ್ನ ಸ್ನೇಹಿತರೇ ಆಗಿ ನನ್ನ ಜೊತೆಗೆ ಜೊತೆಯಾಗಿದ್ದಾರೆ. ಒಂದೂವರೆ ವರ್ಷ ಬೆಳಗಾವಿ, ಆರು ವರ್ಷ, ಗರಡಿಬೈಲ, ಒಂಭತ್ತು ವರ್ಷ ಕೆರೆಕೋಣ, ಮತ್ತೊಂದೂರಿನ ದಾರಿ ಹಿಡಿಯಬೇಕು. ಅದಕ್ಕೂ ಭಗವಂತನೇ ದಾರಿ ಮಾಡಿ ಕೊಡಬೇಕು. ಯಾಕೆಂದರೆ ಮತ್ತಷ್ಟು ಜನರು ನನಗೆ ಪರಿಚಿತವಾಗಬೇಕಿದೆ. ಅವರಿಗೆ ನಾನೂ……..
ಬಾಲ್ಯದ ಸ್ನೇಹಿತನಾಗಿ, ನನ್ನೊಡನಾಡಿಯಾಗಿ ಬದುಕಿಗೆ ಬಂಗಾರದ ಬಣ್ಣ ತುಂಬಿದ ದೀಪಕ, ಒಡನಾಡಿಯಾಗಿ ಆಡಿದ ಸುಮಾ, ನನ್ನ class mates, ಸಹಪಾಠಿಯಾಗಿ ನನ್ನ ಜೊತೆಗೇ ಓದಿದ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಅವರೆಲ್ಲರೂ ನನಗೆ ಸಿಕ್ಕಿದ್ದೇ ವಿಶೇಷ. ಅವರನ್ನು ನನ್ನ ಜೊತೆ ಸೇರಿಸಿದ ಭಗವಂತನಿಗೆ ನಾನು ಋಣಿ. ಅವರೆಲ್ಲರಿಂದ ನನ್ನ ಜೀವನ ನಗುವಿನಿಂದ ತುಂಬುವಂತಾಯ್ತು. ನೋವು ನೀಡಿದ ಬಾಲ್ಯ ಸ್ನೇಹಿತರು ತುಂಬಾ ಕಡಿಮೆ. ಬೆರಳೆಣಿಕೆಯಷ್ಟು ಮಾತ್ರ. ಅದು ನಾನು ಮಾಡಿದ ತಪ್ಪಿಗೆ ಭಗವಂತ ನನಗೆ ನೀಡಿದ ಶಿಕ್ಷೆ ಎಂದು ನಾನಾದರೂ ಭಾವಿಸುತ್ತೇನೆ. ಬಾಲ್ಯದಲ್ಲಿ ನನಗೆ ದೂರದರ್ಶನ ನೋಡಲು ಅನುವು ಮಾಡಿಕೊಟ್ಟ ಗೊಟ್ಣಕೋಡ್ಲು ಸತೀಶಣ್ಣ ಮನೆಯವರಿಗೂ, ಅಲ್ತಾಫ, ಮಾಜೀದ, ಶಯನಾ, ಸಮೀನಾ ಮನೆಯವರಿಗೂ ನಾನು ತುಂಬು ಹೃದಯದಿಂದ ಕೃತಜ್ಞತೆ ಹೇಳಬೇಕು. ನನ್ನ ಬಾಲ್ಯದ ಓದಿಗೆ ಪುಸ್ತಕ, ದಿನಪತ್ರಿಕೆ ಒದಗಿಸಿಕೊಟ್ಟ ನನ್ನ ಗುರುಗಳಾದ ಎನ್.ಎಲ್.ಹೆಗಡೆಯವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ನನ್ನ ದೊಡ್ಡಪ್ಪಂದಿರಾದ ಶ್ರೀಯುತ ನಾರಾಯಣ ಭಟ್ಟ ಮೇಲಿನಗಂಟಿಗೆ, ಶ್ರೀಯುತ ಸುಬ್ರಹ್ಮಣ್ಯ ಭಟ್ಟ ಮೇಲಿನಗಂಟಿಗೆ, ಪ್ರಖ್ಯಾತ ಯಕ್ಷಗಾನ ಕಲಾವಿದರು ಮತ್ತು ನಮಗೆ ಇರಲೊಂದು ನೆಲೆ ಕಲ್ಪಿಸಿದವರು. ನಮ್ಮ ಸುಖ ದುಃಖಗಳಲ್ಲಿ ಸಮಭಾಗಿಯಾಗಿ ಪಾಲ್ಗೊಳ್ಳುವ ಅಣ್ಣಂದಿರು, ಅಕ್ಕಂದಿರು, ಅತ್ತೆಯಂದಿರು, ನನ್ನ ಹಿತೈಷಿಗಳಾದ ನೆಂಟರು, ಬಂಧು ಬಾಂಧವರು ಇವರೆಲ್ಲರನ್ನು ನೆನೆಸಿಕೊಳ್ಳದ ನನ್ನ ಬದುಕು ಅಪೂರ್ಣ. ಹೀಗಾಗಿ ಅವರೆಲ್ಲರೂ ನನ್ನ ಬದುಕಿನ ಭಾಗ.
ನನ್ನ ಜೊತೆಗೆ ಓದಿ ನನಗಿಂತ ಕೇವಲ ಎರಡು ತಿಂಗಳ ಸಣ್ಣವಳಾದ ಸರಸ್ವತಿ ನನ್ನ ಮಡದಿಯಾಗಿ ದೊರೆತಿದ್ದು ಬದುಕಿನ ಒಂದು ವಿಶೇಷ. ಒಂದೇ ಹೈಸ್ಕೂಲ್ ಒಂದೇ ಕಾಲೇಜು ಆದರೂ ಅವಳೇ ನನ್ನ ಮನೆ ದೀಪ ಬೆಳಗುವಳಾಗಿ ಬರುತ್ತಾಳೆಂಬುದು 25 ವರ್ಷದವರೆಗೂ ನನಗೆ ಗೊತ್ತಾಗಲೇ ಇಲ್ಲ. ಹೆಣ್ಣು ಮಕ್ಕಳ ಕೊರತೆಯಿದ್ದ ಕಾಲಕ್ಕೆ ಚಂದದ ಸುಸಂಸ್ಕೃತ ಉದ್ಯೋಗಸ್ಥ ಹೆಂಡತಿಯೊಂದು ಸಿಗುವುದಕ್ಕೂ ಭಾಗ್ಯ ಬೇಕು. ಆ ಲೆಕ್ಕಕ್ಕೆ ನನ್ನಷ್ಟು ಮಾತನಾಡದ ನನ್ನ ನೋವು ನಲಿವುಗಳಿಗೆ ಸಮಭಾಗಿಯಾಗಿ ನಿಲ್ಲುವ ನನ್ನ ಅರ್ಧಾಂಗಿ ನನ್ನದೇ ಅರ್ಧ ಜೀವ. ಅವಳನ್ನು ನನಗೆ ಸಂತೋಷದಿಂದ ಧಾರೆಯೆರೆದ ಮಾವ ಮಂಜುನಾಥ ಹೆಗಡೆಯವರನ್ನೂ ಹಾಗೂ ಗಿರಿಜತ್ತೆಯನ್ನೂ ಮರೆಯುವುದುಂಟೇ. ಸಹೋದರ ಪರಮೇಶ್ವರ ಆತನ ಪತ್ನಿ ಸ್ನೇಹಾ, ಮಗಳು ಆದ್ಯ, ಸ್ನೇಹಾಳ ತಂದೆ ಎಸ್.ಪಿ.ಹೆಗಡೆ ದಂಪತಿ, ಗಜಾನನ ಬಾವ, ಜ್ಯೋತಿ ಅಕ್ಕ, ದಾಂಪತ್ಯ ಕೂಡಿಸಿದ ಬೆಣ್ಣೆಮಾವ, ಆರೊಳ್ಳಿ ಗಜಾನನ ಬಾವ, ಹೀಗೆ ಪ್ರತಿಯೊಬ್ಬರೂ ನನ್ನ ಈ ಹೊತ್ತಿನ ಸಂತೋಷ.
ಮಗಳು ಸನ್ನಿಧಿ ನನ್ನ ಮುಂದಿನ ತಲೆಮಾರು. ಅವಳ ಗೆಜ್ಜೆಯ ದನಿ ನಮ್ಮ ಮನೆಯ ನಿತ್ಯ ಮಹೋತ್ಸವ. ಅವಳ ಗಲಾಟೆ ಗದ್ದಲವೇ ದಿನದ ಮಂಗಳದ ಆರತಿ. ಅವಳು ನಮ್ಮ ಸರ್ವಸ್ವ. ಮಗಳಿಗೆ ಹೆಸರು ಬರೆಸಿಕೊಂಡು ಬರುವಾಗ ಸನ್ನಿಧಿ ಸಂದೀಪ ಎಂದು ಜನ್ಮ ದಾಖಲೆಯಲ್ಲಿ ನಮೂದಿಸಿ ಬಿಟ್ಟಿದ್ದೇನೆ. ಗಂಡ ಅವಳಿನ ಹೆಸರಿನರ್ಧವಾದ ಕಾಲಕ್ಕೂ ಅವಳಿಗೆ ಅಪ್ಪ ನೆನಪಾಗಬೇಕು. ಚಿಕ್ಕದೊಂದು ಸ್ವಾರ್ಥವೂ ಇದ್ದೇ ಇದೆ ನನ್ನಲ್ಲಿ.
27 ವರ್ಷಗಳ ಕಾಲ ನಮ್ಮೊಟ್ಟಿಗೇ ಇದ್ದು ಕಾಲೈಕ್ಯವಾದ ನನ್ನ 98 ವರ್ಷದ ಅಬ್ಬೆ ಶಂಕರಿ, 60 ದಿನಗಳ ಸ್ನೇಹಿತ ಮಂಜು ದೇವಾಡಿಗರು ನನ್ನ ನಿತ್ಯ ಸ್ಮರಣೆ. ಅವರು ನನ್ನ ಬದುಕಿನ ಭಾಗವೇ ಆಗಿ ಈಗಲೂ ಇದ್ದಾರೆ ಎನಿಸುತ್ತದೆ. ಪ್ರತಿನಿತ್ಯದ ಊಟದ ಒಂದು ತುತ್ತು ಅವರ ಹೆಸರಿನದ್ದೇ ಆಗಿರುತ್ತದೆ. ಖುರಾನ್ ಗ್ರಂಥವನ್ನೇ ಉಡುಗೊರೆಯಾಗಿ ನೀಡಿದ ಯಾಸಿನ್ ಭಯ್ಯಾ….. ಮನೆ ಕಟ್ಟಿಕೊಟ್ಟ ಪರಾಸ್ಕ, ರಿಚರ್ಡ್, ಡುಮಿಂಗ್ ಬಾಂಧವರು, ವಾಹನ ಚಾಲನೆ ಹೇಳಿಕೊಟ್ಟ ಅಲ್ತಾಫ ಶೇಖ್, ಮನೆ ವೈದ್ಯರಾಗಿದ್ದ ದಿವಂಗತ ದಾಮೋದರ (ಅಚ್ಯುತ) ಪಂಡಿತರು, ಕುಲ ಪುರೋಹಿತರಾದ ಹಾರೂರಿ ಗಣಪ ಭಟ್ಟರು, ದಳಿ ರಾಜೇಶ ಭಟ್ಟರು, ನನ್ನೂರಿನ ಹಿರಿ ಕಿರಿಯ ಬಂಧುಗಳು ನಾನೆಂಬುವ ನನ್ನ ಬದುಕಿನ ಬಣ್ಣಗಳೇ.
ವಿದ್ಯಾರ್ಥಿ ಜೀವನದಲ್ಲಿ ಊಟ ಹಾಕಿ ಕಾಳಜಿಯಿಂದ ನೋಡಿಕೊಂಡ ಹೆಗಡೆ ಶಾಂತಿಕಾಂಬಾ ದೇವಾಲಯದ ಮುಖ್ಯ ಅರ್ಚಕರಾದ ತಿಮ್ಮಣ್ಣ ಭಟ್ಟರು, ವೇದಾಧ್ಯಯನಕ್ಕೆ ಸ್ಫೂರ್ತಿ ಆದ ಸುಬ್ಬಣ್ಣಪ್ಪಚ್ಚಿ, ಮಾರ್ಗದರ್ಶಿ ಆದ ಆರ್.ಪಿ. ಭಟ್ಟ ಬಾವ, ಕ್ರಿಕೆಟ್ ಆಟ ಕಲಿಸಿಕೊಟ್ಟ ಕೆಲ್ಲಂಗೆರೆ ಪಿ.ಕೆ.ಹೆಗಡೆ ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುವ ಶಾಸಕರಾದ ದಿನಕರ ಶೆಟ್ಟರು, ಸ್ನೇಹಿತ ರವಿ ಕುಮಾರ ಶೆಟ್ಟಿಯವರು, ಶ್ರೀಕಲಕ್ಕ, ಇವರೆಲ್ಲರನ್ನೂ ನಾನು ನೆನೆಸಿಕೊಳ್ಳಲೇ ಬೇಕು.
ನನ್ನನ್ನು ಬಾಲ್ಯದಲ್ಲಿ ಎತ್ತಿ ಆಡಿಸಿದ ಬೀರಜ್ಜಿ, ಇಲ್ಲಿಯವರೆಗೂ ಇಂತಿಷ್ಟು ಎಂದು ಬಾಯ್ಬಿಟ್ಟು ಕೇಳದೇ ತಲೆಗೂದಲನ್ನು ಒಪ್ಪ ಓರಣವಾಗಿಸುವ ಕೆಲಸಿ ಸುಬ್ರಾಯ ಕೊಡಿಯಾ, ಸರಸರನೆ ಮರ ಏರಿ ಬಹಳ ವರ್ಷಗಳ ಕಾಲ ಎಳೆನೀರು ಕೊಯ್ದುಕೊಟ್ಟ ಗಿಂಡಿ ಮುಕ್ರಿ, ಮನೆಯಲ್ಲೇ ಉಳಿದು ಮನೆಯವರಂತೆಯೇ ಆಗಿಹೋಗಿದ್ದ ಶಿವಾಚಾರಿ, ಇವರೆಲ್ಲರೂ ನನ್ನ ಅಕ್ಷರಗಳ ಸ್ಮರಣೆಯಲ್ಲಿ ಬರದೇ ಹೋದರೆ ನಾನು ಕೃತಘ್ನನಾದೇನು.
ಪ್ರತಿಯೊಬ್ಬನ ಬದುಕೂ ಇಂತಹ ಹಲವಾರು ಬಣ್ಣಗಳಿಂದ ತುಂಬಿರುತ್ತದೆ. ಹೆಸರುಗಳಷ್ಟೇ ಬದಲಿರಬಹುದು. ಭಗವಂತನ ಅನುಗ್ರಹ ನಮಗೆ ಅವರೆಲ್ಲರನ್ನೂ ಒದಗಿಸಿ ಕೊಟ್ಟು ಬದುಕನ್ನು ಹಸನಾಗಿಸುತ್ತದೆ. ನಾನೇನೋ ಬಹುದೊಡ್ಡ ಸಾಧಕನೆಂಬ ದೃಷ್ಟಿಯಿಂದ ಬರೆದ ಬರಹಗಳಲ್ಲ ಇವು. ನನ್ನ ಮೌನಕ್ಕೊಂದು ಅರ್ಥ ನೀಡುವ ಅಕ್ಷರಗಳಷ್ಟೆ.
ನಮ್ಮ ಮನೆಯ ಹೆಸರೂ ಶ್ರೀಧರಾನುಗ್ರಹ. ನಮ್ಮ ಮನೆಯ ಪ್ರತಿಯೊಂದೂ ಭಗವಾನ್ ಸದ್ಗುರು ಶ್ರೀಧರರ ಕೃಪಾಶೀರ್ವಾದ ಎಂದೇ ನಾವು ಭಾವಿಸುತ್ತೇವೆ. ಇಡಗುಂಜಿ ಮಹಾಗಣಪತಿ ನನ್ನ ಇಷ್ಟ ದೈವ ಮತ್ತು ನನ್ನ ಬದುಕಿನ ಹಲವು ಕಷ್ಟಗಳಿಗೆ ಅವನೇ ಪರಿಹಾರ ಸೂಚಕ. ಕುಲದೇವರಾದ ಉಮಾಮಹೇಶ್ವರ ಲಕ್ಷ್ಮೀ ನಾರಾಯಣರ ಅನುಗ್ರಹ ಭಗವಂತನ ದಯೆ ನನ್ನನ್ನಿಲ್ಲಿಯವರೆಗೂ ಬೆಳೆಸಿತು.
ಗೊತ್ತಿಲ್ಲ. ಹಿಂದೆ ಸಾಗಿ ಬಂದ ಮಾರ್ಗವೂ ಗೊತ್ತಿರಲಿಲ್ಲ. ಮುಂದೆ ಸಾಗುವ ಪಥದ ಅರಿವೂ ನನಗಿಲ್ಲ. ಮಣ್ಣಿನ ಮನೆಯಿದ್ದದ್ದು ಕಲ್ಲಿನ ಮನೆಯಾಗಿದೆ. ಚಿಮಣಿ ದೀಪದಲ್ಲಿ ಓದಿದ ಕಾಲ ಹೋಗಿ ಚಿಮಣಿ ದೀಪವೇ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ. ನೂರಾರು ಸ್ನೇಹಿತರು, ಅಭಿಮಾನಿಗಳು, ಓದುಗರು, ಜೀವಕ್ಕೆ ಜೀವ ಕೊಡುವ ಪ್ರಶಾಂತ ಸಾವಂತ್, ಸ್ವಾಮಿ, ಮುರುಡೇಶ್ವರ ಗಜಾನನ ಶೆಟ್ಟರು, ವಿನಾಯಕ, ಸುಬ್ಬು, ಶ್ಯಾಮ್, ಶ್ರೀನಿವಾಸ್, ಸುರೇಶ,ರಾಜೇಶ, ಗಣೇಶ, ಇವರೆಲ್ಲರೂ ನನಗಿಂತ ಒಳ್ಳೆಯವರು. ಮತ್ತು ನನ್ನ ನಿತ್ಯ ಗೆಲುವಿನ ಸ್ಫೂರ್ತಿ ಆದವರು.
ಧರ್ಮ, ಜಾತಿ, ಪಂಗಡ, ಭಾಷೆಗಳ ನಡುವೆ ಸಿಕ್ಕಿ ಒದ್ದಾಡುವದನ್ನು ಭಗವಂತ ನನಗೆ ಕರುಣಿಸಲಿಲ್ಲ. ಭಗವಾನ್ ಬುದ್ಧನ ತತ್ವಗಳಿಗೆ ನಾನು ಮಾರುಹೋಗಿದ್ದೇನೆ. ಬುದ್ಧ, ಮಹಾವೀರರಂಥ ಶಾಂತಿದೂತರ ಪ್ರತಿಮೆ ನನ್ನ ಜೀವನದ ಎಲ್ಲಾ ದುಃಖ ಮರೆಸುತ್ತದೆ. ಕೃಷ್ಣನ ಲೀಲೆಗಳಂತೂ ಓದಿದಷ್ಟೂ ಓದಬೇಕೆನ್ನುವ, ನೋಡಿದಷ್ಟೂ ನೋಡಬೇಕೆನ್ನುವ ಖರ್ಚೇ ಆಗದ ಖುಷಿ. ರಾಮಾಯಣ ಮಹಾಭಾರತ ಮಹಾಕಾವ್ಯಗಳು, ಪೌರಾಣಿಕ ಕಥೆಗಳು, ಇವೆಲ್ಲ ನಮ್ಮ ಜೀವನದ ಮೇಲೆ ಅಪಾರ ಪ್ರಭಾವ ಬೀರಿದವು.
ಶೃಂಗೇರಿಯ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ದಿವ್ಯ ಆಶೀರ್ವಾದ, ನಮ್ಮ ಹೊಸನಗರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಕೃಪಾ ಕಟಾಕ್ಷ, ಪೇಜಾವರ ಶ್ರೀಗಳ ಶ್ರೀರಕ್ಷೆ ನಮ್ಮನ್ನು ಬದುಕಿನ ಸಂಕಟಗಳಿಂದ ಪಾರುಮಾಡುತ್ತದೆನ್ನುವ ನಂಬಿಕೆ ನಮ್ಮದು. ಸ್ವರ್ಣವಲ್ಲಿ, ಆದಿ ಚುಂಚನಗಿರಿ, ಸಿದ್ಧಗಂಗಾ ಹೀಗೆ ಸಕಲ ಗುರುಮಠದ ಗುರುವರೇಣ್ಯರನ್ನೂ ಕಂಡು ನಮಿಸಿ ಅವರ ಆಶೀರ್ವಾದ ಪಡೆಯಬೇಕು. ಎಲ್ಲವನ್ನೂ ತ್ಯಜಿಸಿ ಸರ್ವಸಂಗ ಪರಿತ್ಯಾಗಿಗಳಾಗಿರುವ ಸಂತ ವರೇಣ್ಯರ ಕಾಲಿಗೆರಗಿ ಅವರ ಪೂರ್ಣಾನುಗ್ರಹಕ್ಕೆ ನಾನು ಪಾತ್ರನಾಗಬೇಕು.
ಸ್ವಾಮಿ ವಿವೇಕಾನಂದರ ತತ್ವಗಳು ನನ್ನನ್ನು ಬಹಳಷ್ಟು ಪ್ರಭಾವಯುತಗೊಳಿಸಿದವು. ಯಕ್ಷಗಾನ ನನ್ನ ಮನರಂಜನೆಯ ಮಾಧ್ಯಮವಷ್ಟೇ ಆಗಿರದೇ ಭಾಷೆಗೂ ಒಂದು ಹಿಡಿತ ಕೊಟ್ಟಿತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಪ್ಪಟ ಅಭಿಮಾನಿಗಳು ನಾವು.
ಬಣ್ಣ ತುಂಬಿದ ಭಗವಂತ. ಬರೆದಷ್ಟೂ ಮುಗಿಯುವುದಿಲ್ಲ. ಮತ್ತೂ ಬರೆಯಬೇಕು ಸಮಯ ಸಿಕ್ಕಾಗಲೆಲ್ಲ. ಯಾರನ್ನೂ ಮೆಚ್ಚಿಸುವುದಕ್ಕಾಗಿ ಅಲ್ಲ. ಕೃತಜ್ಞತೆಯ ಅರ್ಪಣೆಗಾಗಿ ಅಷ್ಟೇ. ಊಹಿಸಲಾಗದ ಸಂತೋಷದ ದಿನಗಳನ್ನು ತಂದುಕೊಟ್ಟಿದ್ದಕ್ಕೆ ನಾನು ಭಗವಂತನಿಗೆ ಋಣಿ. ಅವಮಾನವನ್ನೆದುರಿಸಿಯೂ ಆತ್ಮಹತ್ಯೆಯಂತ ಅಪಕೃತ್ಯಕ್ಕೆ ಪ್ರೇರೇಪಿಸದೇ ನನ್ನನ್ನು ಬದುಕಿಸಿರುವುದಕ್ಕೆ ಭಗವಂತನಿಗೆ ನಾನು ಋಣಿ, ಸಜ್ಜನರ ಸ್ನೇಹವನ್ನೊದಗಿಸಿಕೊಟ್ಟು ನನ್ನಿಂದ ಬಹಳಷ್ಟು ಕಾರ್ಯಕ್ಕೆ ಉತ್ಸಾಹ ತುಂಬುತ್ತಿರುವುದಕ್ಕೆ ಭಗವಂತನಿಗೆ ನಾನು ಋಣಿ, ಸಾಕಿಷ್ಟು ಎನ್ನುವ ಸಂತೃಪ್ತಿಯನ್ನೂ ಮನಸ್ಸಿಗೆ ತುಂಬುವ ಭಗವಂತನಿಗೆ ನಾನು ಋಣಿ. ನೂರು ಬರೆಸಿ ಮತ್ತಷ್ಟು ಬರೆಸುವ ಶಕ್ತಿ ತುಂಬುವ ಭಗವಂತನಿಗೆ ನಾನು ಋಣಿ. ನಿಮ್ಮಂತಹ ಓದುಗ ಅಭಿಮಾನಿಗಳನ್ನು ಆಸ್ತಿಯಾಗಿ ಒದಗಿಸಿ ಕೊಟ್ಟ ಭಗವಂತನಿಗೆ ನಾನು ಋಣಿ. ನನ್ನ ಗುರು-ಮಾತೆಯೇ ಆಗಿ ಜೀವನದ ದೇವತೆಯಾಗಿರುವ ಸಾಧನಾ ಪೈಯವರಂಥ ಆತ್ಮವಿಶ್ವಾಸದ ಜೀವಂತ ಉದಾಹರಣೆಯನ್ನು ನನ್ನ ಜೊತೆಯಾಗಿಸಿದ್ದಕ್ಕೆ ನಾನು ಭಗವಂತನಿಗೆ ಋಣಿ. ಪ್ರಾಣವನ್ನೇ ಪಣಕ್ಕಿಡುವ ಕಾಲಕ್ಕೂ ಜೊತೆಯಾದ ಕೊಡ್ಲಮಕ್ಕಿ ಶ್ರೀಧರಣ್ಣ, ಬೋಳ್ಗೆರೆ ಜಿ.ಜಿ.ಭಟ್ಟರು ನನ್ನ ಕೊನೆಯುಸಿರಿನವರೆಗೂ ಮರೆಯಲಾಗದ ಜೀವಗಳು. ನನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ಇನ್ನಷ್ಟು ಸಜ್ಜನರ ಭೇಟಿಯಾಗಲೆಂದು ನನ್ನನ್ನು ಹರಸಿ. ಸಾಹಿತ್ಯ ಲೋಕಕ್ಕೆ ಬದುಕಿಗೆ ಬಣ್ಣ ತುಂಬಿದವರು ಎಂಬ ಈ ವ್ಯಕ್ತಿ ವಿಶೇಷದ ಮಾಲಿಕೆಯನ್ನು ಅರ್ಪಿಸುತ್ತಿದ್ದೇನೆ. ನೂರು ಸಂಚಿಕೆಗಳನ್ನು ಬರೆಯುವುದಕ್ಕೆ ನನಗೆ ಆಲೋಚನೆಯಿತ್ತು ಬರಹವಾಗಿ ರೂಪಿಸಿದ ವಾಗ್ದೇವಿಗೆ….. ಇವು ನಾನು ಭಾವದುಂಬಿ ಹೃದಯದಿಂದ ಅರ್ಪಿಸುವ ನೂರು ಅಕ್ಷರ ಕುಸುಮಗಳಾಗಿರುತ್ತವೆ. ನಿಮ್ಮ ಹರಕೆ ಹಾರೈಕೆ ಇರುವವರೆಗೂ ಬದುಕಿನ ಬಣ್ಣ ಮಾಸದು. ಮತ್ತಷ್ಟು ವ್ಯಕ್ತಿಗಳ ಕುರಿತಾಗಿ ಬರೆಯಲಿಕ್ಕಿದೆ. ಸಮಯ ನಮಗಾಗಿ ಕಾಯುವುದಿಲ್ಲ. ಆದರೂ ನಾನು ಸಮಯಕ್ಕಾಗಿ ಕಾಯುತ್ತೇನೆ. ಶತಕದ ಸಂಭ್ರಮೋತ್ಸವಕ್ಕೆ ಸಾಕ್ಷಿಗೊಂಡ ನಿಮಗಿದೋ ಅನಂತ ನಮನಗಳು. ? ಮರಗಳ ನೆರಳಿನಲ್ಲಿ ಮುಂದೊಂದು ದಿನ ಜೋಕಾಲಿ ಕಟ್ಟಿಕೊಂಡು ನಾನೇ ಬರೆದ ಬರಹಗಳ ಪುಸ್ತಕ ಹಿಡಿದು ಅಕ್ಷರಕ್ಷರ ಬಿಡದೆ ಓದಬೇಕು. ಬದುಕಿನ ಬಣ್ಣ ತುಂಬಿದವರ ಪಾಲಿಗೆ ಕೈಜೋಡಿಸಿ ವಂದಿಸಿ ವಿರಮಿಸಬೇಕು.
ಬಹಳ ಸಮಯ ಬಹಳ ಜನಕ್ಕೆ ನಾನೂ ಏನಾದರೂ ಮಾಡಬೇಕೆನಿಸುತ್ತದೆ. ಮಾಡುವುದರೊಳಗೆ ಒಂದೋ ಅವರೇ ಇರುವುದಿಲ್ಲ. ಅಥವಾ ಮಾಡಬೇಕೆಂದುಕೊಂಡವನೇ ಇರುವುದಿಲ್ಲ. ಒಳ್ಳೆಯ ಕಾರ್ಯವೊಂದು ಮನಸ್ಸಿಗೆ ಹೊಳೆದರೆ ಇಂದೇ ನಮ್ಮ ಕೊನೆಯ ದಿನವೆಂಬಂತೆ ಆ ಕ್ಷಣ ಮಾಡಲೆತ್ನಿಸಿಬಿಡಬೇಕು. ಇನ್ನೊಬ್ಬರ ಕುರಿತಾಗಿ ನಾವು ಸೃಷ್ಟಿಸುವ ಒಂದೇ ಒಂದು ಸಂತಸದ ಕ್ಷಣ ಅವರ ಜೀವನದಲ್ಲೇ ಮರೆಯಲಾಗದ ಅವಿಸ್ಮರಣೀಯ ಕ್ಷಣವಾಗಿ ಮಾರ್ಪಡಬಹುದು. ನಾನು ವಿರಾಗಿಯೂ ಅಲ್ಲ. ತತ್ವಜ್ಞಾನಿಯೂ ಅಲ್ಲ. ನಾನು ಮಾಡದ್ದನ್ನು ನೀವೆಲ್ಲಾ ಮಾಡುವುದಾದರೆ ಮಾಡಿ ಎನ್ನುವ ಬೋಧಕನೂ ಅಲ್ಲ. ನನ್ನೊಳಗೂ ಸಾವಿರ ಕುಹಕಗಳು ಮನೆ ಮಾಡಿರಬಹುದು. ಅವಮಾನ ತಡೆಯಲಾರದೆ ಕೋಪ ಥಟ್ಟನೆ ಬರಬಹುದು. ಆದರೆ ನನ್ನೆಲ್ಲಾ ತಪ್ಪುಗಳಿಗೆ ನಿಮ್ಮ ಕ್ಷಮೆಯಿರಲಿ. ನನ್ನಿಂದ ಅನೇಕರು ಸ್ಫೂರ್ತಿ ಪಡೆದಿದ್ದಾರೆಂದು ನನ್ನ ಬಳಿ ಹೇಳುತ್ತಾರೆ. ಆದರೆ ನನಗನಿಸುತ್ತದೆ ಅವರೇ ನನಗಿಂತ ಎಷ್ಟೋ ಒಳ್ಳೆಯವರೆಂದು. ಅಭಿಮಾನ ಮರೆತು ಹೋಗುತ್ತದೆ. ಅವಮಾನ ನಮ್ಮನ್ನು ಕಣ್ಣು ಮುಚ್ಚಿದಾಗಲೂ ಕಾಡುತ್ತದೆ. ಆತ್ಮಕಥನವೊಂದನ್ನು ಬರೆದು ನೂರಾರು ಜನರನ್ನು ತೆಗಳಿ ಕೆಲವರನ್ನೇ ಹೊಗಳಿ ನನ್ನನ್ನೇ ವಿಜೃಂಭಿಸಿಕೊಳ್ಳುವುದಕ್ಕೆ ನನಗೆ ಮನಸ್ಸು ಬಾರದು. ಹೀಗಾಗಿ ಇದು ನನ್ನ ಆತ್ಮಕಥನವೆಂದೇ ನೀವು ತಿಳಿಯಬೇಕು. ಹಲವರು ನನಗೆ ಶಾಲು ಹೊದೆಸಿದ್ದಾರೆ ಅವರು ನೀಡಿದ ಶಾಲುಗಳು ನನ್ನ ಕಪಾಟಿನಲ್ಲಿ ಭದ್ರವಾಗಿವೆ. ಹಲವರು ನನಗೆ ಫಲಕ ನೀಡಿದ್ದಾರೆ. ಪ್ರಶಸ್ತಿ ಪತ್ರ ನೀಡಿದ್ದಾರೆ. ಅವೆಲ್ಲವೂ ನನ್ನ ಶೋ ಕೇಸಿನಲ್ಲಿ ಪ್ರದರ್ಶಿತಗೊಳ್ಳುತ್ತಿವೆ. ಹಲವರು ನನಗಾಗಿ ಕಣ್ಣೀರು ಮಿಡಿದಿದ್ದಾರೆ, ಹರಸಿ ತಲೆ ನೇವರಿಸಿದ್ದಾರೆ, ಮನದುಂಬಿ ಆಶೀರ್ವದಿಸಿದ್ದಾರೆ, ಅವರೆಲ್ಲರಿಗೂ ನಾನು ನೀಡಿದ್ದೇ ಕಡಿಮೆಯೆನ್ನುವ ಕೊರಗು ಮಾತ್ರ ಸದಾ ನನಗಿರುತ್ತದೆ. ಇಷ್ಟು ಮಾತ್ರ ಸತ್ಯ ನಾನು ನನ್ನನ್ನು ಹೊಗಳುವಷ್ಟು ಯೋಗ್ಯನೂ ಅಲ್ಲ. ನನ್ನನ್ನು ತೆಗಳುವಷ್ಟು ಅಯೋಗ್ಯನೂ ಅಲ್ಲ. ಬಾಲ್ಯವೆಂಬ ಮುಂಜಾವಿನಲ್ಲಿದ್ದವರು ಮುಪ್ಪಿನ ಸಂಜೆಯಲ್ಲಿದ್ದವರನ್ನು ಬೀಳ್ಕೊಡಬೇಕಾಗಿದೆ. ಯೌವನದ ನಡುಬಿಸಿಲಿನಲ್ಲಿದ್ದವರಿಗೆ ಸುಡುಬಿಸಿಲಿನಲ್ಲಿ ತಲೆತಿರುಗದಿದ್ದರೆ ಸಾಕು. ನೀನಿರುವಂತೆ ನಾನಿಲ್ಲ. ನೀನಂದುಕೊಂಡಂತೆಯೂ ಇಲ್ಲ. ಭಗವಂತ ನಿನಗಿತ್ತದ್ದೇ ಬೇರೆ ನನಗೀಯುತ್ತಿರುವುದೇ ಬೇರೆ. ಎಲ್ಲರನ್ನೂ ಕ್ಷಮಿಸಿಬಿಡು ಎನ್ನುವ ಏಸುವಿನ ದಯೆ ನಮಗೊದಗಲಿ. ಕೊನೆಗೆ ಮನಸ್ಸಿಗೆ ಹಿಂಸೆ ನೀಡಿ ಕೊಂದವನನ್ನೂ. ಸಮಯ ತೋರಿಸುವ ಗಡಿಯಾರ ಯಾವಾಗ ನಿಲ್ಲುತ್ತದೆನ್ನುವುದು ಯಾರಿಗೆ ಗೊತ್ತು?! ನಿಂತ ಗಡಿಯಾರ ಒಮ್ಮೊಮ್ಮೆ ಕೇವಲ ಸ್ಪರ್ಷ ಮಾತ್ರದಿಂದಲೇ ಚಲಿಸಬಹುದು. ಮತ್ತೆ ಕೆಲವೊಮ್ಮೆ ಆತ್ಮಶಕ್ತಿ ತುಂಬಬೇಕಾಗಿ ಬರಬಹುದು. ಕೆಲವೊಮ್ಮೆ ನಮ್ಮೆದುರೇ ಬಿದ್ದು ಛಿದ್ರವಾಗಬಹುದು. ನಿಲ್ಲುವವರೆಗೂ ಚಲಿಸಬೇಕು. ಪದೇ ಪದೇ ನೋಡುವವರಿರುತ್ತಾರಲ್ಲ. ನಾನು ಬರೆದು ಜಗತ್ತಿಗೇನೂ ಆಗಬೇಕಿಲ್ಲ. ನಿಮ್ಮೆಲ್ಲರ ಪ್ರೀತ್ಯಾದರಕ್ಕಾದರೂ ನಾನು ಬರೆಯಬೇಕಲ್ಲ.
???⚪⚫???????⚪⚫???????⚪
ದೇವನಿಲ್ಲದೆ ನಾನಿಲ್ಲ. ದೇವನೇ ನೀನೆಲ್ಲ
???⚪⚫???????⚪⚫???????⚪
✍ಸಂದೀಪ ಎಸ್ ಭಟ್ಟ
ಶ್ರೀಧರಾನುಗ್ರಹ
At ;- ಮೇಲಿನಗಂಟಿಗೆ
Po;- ಹೊಸಾಕುಳಿ
Tq :- ಹೊನ್ನಾವರ
ಉತ್ತರ ಕನ್ನಡ – 581334
?9480460035
❤️????????❤️????????❤️???