ಲೇಖನ: ಉಮೇಶ ಮುಂಡಳ್ಳಿ ಭಟ್ಕಳ
ಸಾಹಿತಿಗಳು ಲೇಖಕರು
9945840552

ಕೆಲವರು ಕಲೆಯನ್ನು ಬೆನ್ನಟ್ಟಿ ಹೋಗುತ್ತಾರೆ. ಇನ್ನೂ ಕೆಲವರನ್ನು ಕಲೆಯೇ ಬೆನ್ನಟ್ಟಿ ಬರುತ್ತದೆ.ಈ ವೈಪರೀತ್ಯಕ್ಕೆ ಜೀವಂತ ನಿದರ್ಶನವಾದವರೆಂದರೆ ಸಮಾಜಸೇವಕ ಸಾಹಿತಿ ಅಪ್ರತಿಮ ಪ್ರತಿಭೆ ಕೋಲಶಿರ್ಸಿಯ ಆರ್. ಭಾಸ್ಕರ ನಾಯ್ಕ.

ಬಡತನದ ಕುಟುಂಬದಲ್ಲಿ ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯಲ್ಲಿ ರಾಮ ನಾಯ್ಕ ಹಾಗೂ ನಾಗಮ್ಮ ಇವರ ಮಗನಾಗಿ ಜನಿಸಿದವರಿವರು ಅತ್ಯಂತ ಕಡುಬಡತದಲ್ಲಿ ಓದುವುದನ್ನು ಮುಂದುವರಿಸಲಾಗದ ಇವರಿಗೆ ಎಳವೆಯಲ್ಲಿಯೇ ಬರವಣಿಗೆ ಎಂದರೆ ಪಂಚಪ್ರಾಣ ಅತ್ಯಂತ ಮೆಚ್ಚು. ೧೯೭೦ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆದ ಭಜನಾ ಕಮ್ಮಟದಲ್ಲಿ ಶ್ರೀ ವಿರೇಂದ್ರ ಹೆಗ್ಗಡೆಯವರ ಎದುರಿನಲ್ಲಿಯೇ ಶ್ರೀ ಮಂಜುನಾಥ ಸ್ವಾಮಿಯ ಕುರಿತು ಆ ಕ್ಷಣದಲ್ಲೆ ಬರೆದು ಹಾಡಿದ ಇವರ ಭಕ್ತಿಗೀತೆ ಹೆಗ್ಗಡೆಯವರ ಹೃದಯದ ಕದ ತಟ್ಟಿತು. ಅಂದು ಹೆಗ್ಗಡೆಯವರಿಂದ “ಬರೆವಣಿಗೆ ಮುಂದುವರಿಸಿ ನಿಮ್ಮಲ್ಲಿ ಅಗಾದ ಮತ್ತು ಆಳವಾದ ಬರವಣಿಗೆ ಶಕ್ತಿ ಇದೆ ” ಎಂದು ಆಶಿರ್ವಾದ ಪಡೆದ ಭಾಸ್ಕರ ನಾಯ್ಕ ಭರವಣಿಗೆಯನ್ನು ಭಕ್ತಿ ಮತ್ತು ಶೃದ್ದೆಯಿಂದ ಮುಂದುವರಿಸಿದರು. ಹೆಗ್ಗಡೆಯವರ ಆಶಿರ್ವಾದ ಪಡೆದಂದಿನಿಂದ ಇವರು ಬರೆದ ಯಾವ ಗೀತೆಯೂ ಮತ್ತೊಮ್ಮೆ ತಿದ್ದಿಬರೆಯಲ್ಪಡಲಿಲ್ಲ.

ಇದುವರೆಗೂ ಭಾವಗೀತೆ ರಂಗಗೀತೆ ಲಾವಣಿಪದಗಳು ಗೀಗಿಪದ ತತ್ವಪದಗಳು ಜನಪದ ಗೀತೆ ಎಂದು ಸುಮಾರು ೪೫೦ ಕ್ಕೂ ಹೆಚ್ಚಿನ ಹಾಡುಗಳನ್ನು ಇವರು ಬರೆದಿದ್ದಾರೆ.

ಯುವಜನ ಮೇಳಗಳಲ್ಲಿ ಪ್ರಥಮವಾಗಿ ತಮ್ಮನ್ನು ಗುರುತಿಸಿಕೊಂಡ ಇವರು ಸಿದ್ದಾಪುರ ತಾಲೂಕಿಗಷ್ಟೇ ಸೀಮಿತವಾಗದೆ ಕೋಲಸಿರ್ಸಿ ಭಾಸ್ಕರಣ್ಣ ಎಂದು ಜಿಲ್ಲೆಗೆ ಪರಿಚಿತರಾದವರು.
ಅಂದು ಗ್ರಾಮೀಣ ಯುವ ಜನರ ಅತ್ಯಂತ ಸಂಭ್ರಮದ ಉತ್ಸವವಾದ ಯುವಜನ ಮೇಳಗಳಿಗಾಗಿ ತಾವೇ ಸ್ವತಃ ಗೀತೆಗಳನ್ನು ಬರೆದು ಯುವಜನರಿಗೆ ತರಬೇತಿ ನೀಡಿ ಹಾಡಿಸುತ್ತಿದ್ದರು. ನಾಟಕಗಳನ್ನು ಬರೆದು ನಿರ್ದೇಶಿಸಿ ಅದಕ್ಕೆತಕ್ಕಂತೆ ರಂಗಗೀತೆಯನ್ನು ಬರೆದು ರಂಗದ ಮೇಲೆ ಪ್ರದರ್ಶನ ಮಾಡಿಸುತ್ತಿದ್ದರು. ಇಂದಿಗೂ ಸಿದ್ದಾಪುರದಲ್ಲಿ ಮಾತ್ರ ಇವರನ್ನು ನಾಟಕ ಮಾಸ್ಟರ್ ಭಾಸ್ಕರಣ್ಣ ಎಂತಲೇ ಕರೆಯುತ್ತಾರೆ.

RELATED ARTICLES  ಮಗು……ಮನಸು

ಜಿಲ್ಲೆಯ ಹತ್ತಾರು ಕಾಲೇಜುಗಳಲ್ಲಿ ಎನ್ ಎಸ್ ಎಸ್ ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ನಾಯ್ಕರಿಗೆ ಸಲ್ಲುತ್ತದೆ. ಇವರು ಎನ್ ಎಸ್ ಎಸ್ ಶಿಬಿರ ಗೀತೆಗಳನ್ನೂ ಬರೆದು ವಿದ್ಯಾರ್ಥಿಗಳ ಮನದಲ್ಲಿ ಅಚ್ಚಳಿಯದ ನೆನಪಾಗಿಯೂ ಉಳಿದಿದ್ದಾರೆ. ನಾಟಕ ಕುಣಿತ ಹಾಡುಗಾರಿಕೆಯಲ್ಲಿ ತಮ್ಮ ಹೆಚ್ವಿನ ಅವದಿಯನ್ನು ಕಳೆಯುತ್ತಿದ್ದ ಇವರು ಅಂದಿನ ದಿನದಲ್ಲಿ ಕರ್ಮಾಟಕದ ಸಾಗರ ಸೊರಬ ಶಿವಮೊಗ್ಗ ಧರ್ಮಸ್ಥಳ ಹಾಸನ ಹೀಗೆ ಅನೇಕ ಕಡೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಜನಮಾನಸರಾಗಿದ್ದರು.
ವ್ಯತಿರಿಕ್ತ ಎಂಬಂತೆ ಕಲೆಗೆ ಮಾತ್ರವೇ ಸೀಮಿತವಾಗದ ನಾಯ್ಕರು ಸಮಾಜ ಸೇವೆಯಲ್ಲಿಯೂ ಅಂದಿನಿಂದ ಇಂದಿಗೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ೧೯೮೫ ರಿಂದ ೧೯೯೦ ರವರೆಗೆ ಮುಂಬಯಿನ ಕಲ್ಯಾಣದಲ್ಲಿ ವೃತ್ತಿ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೂ ಅನೇಕ ಕನ್ನಡಿಗರನ್ನು ಒಟ್ಟುಗೂಡಿಸಿ ಭಜನಾ ಮಂಡಳಿಗಳನ್ನು ಸಮಿತಿಗಳನ್ನು ಕಟ್ಟಿ ಸಾಮರಸ್ಯ ಸಾಧಿಸಿದ ಹೆಗ್ಗಳಿಗೆ ಇವರದು. ಸತ್ಯ ಸಾಯಿ ಬಾಬಾ ಅವರ ಪರಮ ಭಕ್ತರಾದ ಭಾಸ್ಕರ ನಾಯ್ಕ ೧೯೯೧ ರಂದು ಸಿದ್ಸಾಪುರದಿಂದ ಭಟ್ಕಳಕ್ಕೆ ಬಂದು ನೆಲೆಸಿ ತಮ್ಮ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಂದಿನಿಂದ ಇಂದಿನವರೆಗೆ ಅನೇಕ ಅಶಕ್ತ ರೋಗಿಗಳ ಕಣ್ಣಿರು ಒರೆಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ೧೯೯೧ ರಿಂದ ಇಂದಿನವರೆಗೆ ಸುಮಾರು ೪೧೦ ಕ್ಕೂ ಹೆಚ್ಚಿನ ಬಡ ಹೃದಯ ರೋಗಿಗಳು ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿರುವವರು ಮುಂತಾದ ಅನೇಕ ವಿಧದ ರೋಗಿಗಳನ್ನು ಬೆಂಗಳೂರಿನ ಸತ್ಯ ಸಾಯಿ ಬಾಬಾ ಅವರ ಆಸ್ಪತ್ರೆ ಯಲ್ಲಿ ಉಚಿತವಾಗಿ ಚಿಕಿತ್ಸೆ ದೊರಕುವಂತೆ ಮಾಡಿದ್ದೂ ಅಲ್ಲದೇ ಅವರ ಮನೆಯವರಂತೆ ಸ್ವತಃ ರೋಗಿಯೊಂದಿಗೆ ಆಸ್ಪತ್ರೆಯಲ್ಲಿಯೇ ಕಳೆದು ಅವರ ಮರುಹುಟ್ಟಿಗೆ ಕಾರಣರಾಗಿದ್ದಾರೆ. ತನ್ಮೂಲಕ ಅವರ ಆಶಿರ್ವಾದ ವನ್ನು ಪಡೆದುಕೊಂಡಿದ್ದಾರೆ.

RELATED ARTICLES  ಗೋಮಾಂಸ ತಿಂದಿಲ್ಲ, ತಿನ್ನುತ್ತೇನೆ ಎನ್ನುವವರು ರೈತಪರವಂತೆ !

೧೯೯೩ ರಲ್ಲಿ ಅಯೋದ್ಯೆಗೆ ಹೊರಟದ್ದು ಅಲ್ಲಿ ಸಾತಾನಾದಿಂದ ಚಿತ್ರಕೂಟ ಪರ್ವತದವರೆಗೆ ೫೦ ಕಿ.ಮಿ.ನಷ್ಟು ದುರ್ಗಮ ಕಣಿವೆ ಮಾರ್ಗದಲ್ಲಿ ಭಜನೆ ಮತ್ತು ನಾಮಸಂಕಿರ್ತನೆಯೊಂದಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದು ಜೀವಮಾನದ ಒಂದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ ಭಾಸ್ಕರ ನಾಯ್ಕರು.

ಆಗಾಗ ಗುರುವಿನಿಂದ ಜಗದ್ಗುರುವಿನ ಕೃಪೆ ದೊರೆಯಿತೆಂದು ಭಾವಿಸುವ ನಾಯ್ಕರು ಆಧ್ಯಾತ್ಮದಲ್ಲಿ ಸಾಕಷ್ಟು ಅನುಭವ ಜ್ಞಾನ ಸಂಪ್ಪನ್ನತೆಯನ್ನು ಪಡೆದುಕೊಂಡಿದ್ದಾರೆ. ರಾಮಾಯಣ ಮಹಾಭಾರತ ಭಗವದ್ಗೀತೆಯನ್ನು ಆಳವಾಗಿ ಅಧ್ಯಯನ ಮಾಡಿದ ಭಾಸ್ಕರ ನಾಯ್ಕರು ಆಧ್ಯಾತ್ಮಿಕವಾಗಿ ಎರಡು ಮೂರು ಗಂಟೆಗಳ ವರೆಗೂ ನಿರರ್ಗಳವಾಗಿ ಉಪನ್ಯಾಸ ನೀಡಬಲ್ಲ ಧರ್ಮಪರ ಚಿಂತಕರಾಗಿದ್ದಾರೆ. ಧಾರ್ಮಿಕ ,ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹೀಗೆ ಕಾರ್ಯಕ್ರಮ ಯಾವುದೇ ಆಗಿರಲಿ ಅದನ್ನು ಅಚ್ಚುಕಟ್ಟಾಗಿ ಅರ್ಥಪೂರ್ಣ ನಿರ್ವಹಿಸುವುದು ಇವರಿಗೆ ಯುವಕರಾಗಿದ್ದಾಗಿಯೇ ಒಲಿದು ಬಂದ ಒಂದು ಅದ್ಬುತ ಕೌಶಲ್ಯ. ಇವರ ಮಾತಿನ ಪ್ರಭಾವಕ್ಕೆ ಒಳಗಾಗದವರೇ ಇಲ್ಲ ಎನ್ನಬಹುದು.
ಹೀಗೆ ಬಹುಮುಖ ಪ್ರತಿಭೆಯುಳ್ಳ ಸೇವಾಗುಣ ಸಂಪ್ಪನ್ನರಾದ ಇವರನ್ನು ಸಕಲ ಕಲಾ ಸೇವಾ ವಲ್ಲಭ ಎಂದರೂ ಅತಿಶಯೋಕ್ತಿ ಅನ್ನಿಸಲಾರದು.

ತಮ್ಮ ಸುದೀರ್ಘ ಜೀವಿತಾವದಿಯಲ್ಲಿ ಸ್ವಾರ್ಥ ರಹಿತವಾಗಿಯೇ ಇದ್ದು ಯಾವ ಪ್ರಶಸ್ತಿ ಸನ್ಮಾನ ಗೌರವಗಳಿಗೆ ಆಸೆ ಪಡದೆ ಯಾರ ಶಿಪಾರಸ್ಸು ಮಾಡದೇ ತನ್ನ ಕರ್ತವ್ಯದಲ್ಲೇ ಆತ್ಮಸಂತೃಪ್ತಿ ಕಂಡು ಕೊಂಡ ಸಮಾಜ ಸೇವಕ ಸಾಹಿತಿ ಗಾಯಕ ಕಲಾವಿದನಿಗೆ ಇದುವರೆಗೂ ಕಂಡವರೂ ಗುರುತಿಸದೇ ಹೊದದ್ದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಈ ಸಾಧಕ ಜೀವಿಯ ಸಾರ್ಥಕ್ಯ ಸೇವೆಗೆ ನ್ಯಾಯ ಸಿಗಲಿ ಎಂಬ ಪ್ರೀತಿಯ ಆಶಯ ನನ್ನದು.

ಭಾಸ್ಕರ ನಾಯ್ಕ ಅವರ ಸಂಪರ್ಕ ಸಂಖ್ಯೆ –
80888 80260