ಯಕ್ಷಗಾನದಲ್ಲಿ ಬರಿಯ ಮನೋರಂಜನೆಯೊಂದೇ ಇಲ್ಲ, ಇದರಲ್ಲಿ ಜ್ಞಾನವಿದೆ. ಶತ ಶತಮಾನಗಳಿಂದ ಯಕ್ಷಕಲೆಯ ಅಭಿವೃದ್ಧಿಗಾಗಿ ಅದೆಷ್ಟೋ ಕಲಾವಿದರು, ಸಾಹಿತಿಗಳು ಅಧ್ಯಯನಕಾರರು ಶ್ರಮಿಸಿದ್ದಾರೆ. ಇದೊಂದು ಶುದ್ಧ ಜ್ಞಾನದ ಕಲೆ, ರಾಜರ ಕಾಲದಿಂದಲೂ ಸಮಾಜದಲ್ಲಿ ಅತ್ಯಂತ ಗೌರವ ಪಡೆದುಕೊಂಡಿದ್ದ ಸಮೃದ್ಧವಾದ, ಶ್ರೀಮಂತ ಕಲೆಯೊಂದು ನಮ್ಮ ನಾಡಿನಲ್ಲಿ, ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂಬುದು ನಮ್ಮೆಲ್ಲರ ಹೆಮ್ಮೆಯೇ ಸರಿ.
ಸಂಸ್ಕೃತಿಯೊಂದಿಗೆ ಹೊಸೆದುಕೊಂಡಿರುವ ಸಮರ್ಥ ಕಲೆಯೇ ಯಕ್ಷಗಾನ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಅಲ್ಲಿಯ ಜನರ ಜೀವನಾಡಿ.
ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಹಾಗೂ ಉತ್ತರತಿಟ್ಟು ಎಂಬ ವಿಧಗಳಿಗೆ. ಪಾತ್ರಧಾರಿ ಅಭಿನಯಿಸುವ ರೀತಿ, ವೇಷಭೂಷಣಗಳಲ್ಲಿ ಭಿನ್ನತೆ, ಹಾಗೂ ಭಾಗವತಿಕೆಯಲ್ಲಿ ವ್ಯತ್ಯಾಸವಿರುವ ಈ ಮೂರೂ ವಿಧಗಳೂ ಕೂಡ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.
ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆ ನಮ್ಮ ನಾಡಿನ ವಿಶೇಷತೆಗಳಲ್ಲೊಂದು.
ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ತನ್ನೆಲ್ಲ ವಿಶೇಷತೆಗಳನ್ನೂ ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗ ಮಾಡಲಾದ ಅದ್ಭುತ ಕಲೆ.
ಯಕ್ಷಗಾನದ ಇತಿಹಾಸ ಕೂಡ ಪುರಾತನವಾದದ್ದು. ತಂಜಾವೂರಿನ ಅರಸರು, ಮೈಸೂರಿನ ಮುಮ್ಮುಡಿ ಕೃಷ್ಣರಾಜರು, ಸಾಹಿತ್ಯದಲ್ಲಿ ಗಣ್ಯಸ್ಥಾನ ಗಳಿಸಿದ ಮುದ್ದಣಾದಿಗಳು ಯಕ್ಷಗಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಇದು ಜಾನಪದ ಕಲೆಯೇ ಅಥವಾ ಶಾಸ್ತ್ರೀಯ ಕಲೆಯೇ ಎಂಬುದರ ಕುರಿತು ಚರ್ಚೆಗಳಿವೆ. ಆದರೆ, ಯಕ್ಷಗಾನ ಕಲಾವಿದರು ಹಾಗೂ ಅಧ್ಯಯನಕಾರರ ಪ್ರಕಾರ, ಈ ಕಲೆ ಸಂಗೀತದ ದೃಷ್ಟಿಯಿಂದ ಶಾಸ್ತ್ರೀಯ ಸಂಗೀತದಂತೆಯೇ ದೇಶೀ ಸಂಗೀತದ ಒಂದು ಪ್ರಕಾರವೇ ಹೊರತು ಶುದ್ಧ ಜಾನಪದವಲ್ಲ. ಶುದ್ಧ ಜಾನಪದವೆಂದರೆ ಗ್ರಂಥಸ್ಥವಲ್ಲದ ಮತ್ತು ಕೇವಲ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಸಾಗಿಸಬಹುದಾದಂತುಹುದು ಎಂದರ್ಥ. ಯಕ್ಷಗಾನವು ಈ ರೀತಿಯ ಶುದ್ಧ ಜಾನಪದವಂತೂ ಅಲ್ಲ ಎಂಬುದು ಹಲವರ ಅಭಿಪ್ರಾಯ