ಮಂಡ್ಯ ನಗರಕ್ಕೆ ಸಮೀಪದಲ್ಲಿರುವ ಹೊಸಬೂದನೂರಿನಲ್ಲಿರುವ ಈ ಅನಂತಪದ್ಮನಾಭದೇವಾಲಯ ನೋಡಲು ನಯನಮನೋಹರವಾಗಿದೆ. ಅದ್ಬುತವಾದ ಶೈಲಿಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

ಪುರಾತನವಾದ ಈ ದೇಗುಲ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಬೂದನೂರಿನಿಂದ ಸುಮಾರು ಒಂದ ಕಿಲೋಮೀಟರ್ ನಷ್ಟು ಒಳಗಿದೆ. ಮಂಡ್ಯದಲ್ಲಿ ಹಲವು ಪುರಾತನ ದೇವಸ್ಥಾನಗಳಿವೆ . ಮೈಸೂರು ಮಹಾರಾಜರ ಕಾಲದಲ್ಲಿ ಹಾಗೂ ಅದಕ್ಕೂ ಹಿಂದೆ ನಿರ್ಮಾಣದಂಥ ಹಲವಾರು ದೇವಾಲಯಗಳ ಸಮೂಹವೇ ಇಲ್ಲಿದೆ . ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಪ್ರವಾಸೋದ್ಯಮ ಇಲಾಖೆಯ ನಿಲಕ್ಷ್ಯವೋ ಇಲ್ಲಿನ ಹಲವು ದೇವಾಲಯಗಳು ಪಾಳುಬಿದ್ದು ಹೋಗಿವೆ. ಇನ್ನು ಕೆಲವು ದೇವಸ್ಥಾನಗಳು ಮೈಸೂರು ಬೆಂಗಳೂರು ಹೆದ್ದಾರಿಯಿಂದ ಒಳಗಿರುವ ಕಾರಣ ಹೊರಗಿನ ಜನರಿಗೆ ಅವು ಅಷ್ಟಾಗಿ ತಿಳಿದಿಲ್ಲ . ಮಂಡ್ಯ ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವಂತಹ ಬೂದನೂರಿನ ಅನಂತಪದ್ಮನಾಭಸ್ವಾಮಿ ದೇವಸ್ಥಾನ
ಹೊಯ್ಸಳರ ಕಾಲದ ಪುರಾತನ ಮಂದಿರ.
ಹೊಯ್ಸಳರ ಕಾಲದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಾಸಿ ಕಲೆಯ ಬೀಡಾಗಿಸಿದ್ದರು. ಇತಿಹಾಸದ ಪ್ರಕಾರ ಈ ಊರಿಗೆ ಸರ್ವಜ್ಞಪದುಮನಾಭಪುರವೆಂದು ಕರೆಯುತ್ತಿದ್ದರು. ಹೊಯ್ಸಳರ ರಾಜ ಮೂರನೇ ನರಸಿಂಹ ಇಲ್ಲಿ ಕೇಶವದೇವಾಲಯ ನಿರ್ಮಾಣ ಮಾಡಿದರೂ, ಪದುಮನಾಭಪುರದಲ್ಲಿದ್ದ ಕಾರಣದಿಂದ ಈದೇಗುಲಕ್ಕೆ ಪದ್ಮನಾಭ ದೇವಸ್ಥಾನವೆಂದೇ ಹೆಸರಾಯಿತು. ಅನಂತಪದ್ಮನಾಭನೆಂದೊಡನೆ ಶೇಷಶಯನನಾಗಿರುವ ಮಹಾವಿಷ್ಣುವಿನ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತದೆ . ಬೂದನೂರಿನ ಈ ದೇವಾಲಯದಲ್ಲಿ ಪದ್ಮನಾಭಸ್ವಾಮಿ ನಿಂತಿರುವ ಭಂಗಿಯಲ್ಲಿದ್ದಾನೆ.
ಇಲ್ಲಿನ ಪೂಜಾ ಕೆಲಸಕ್ಕಾಗಿ ಇಲ್ಲಿಗೆ ಸಮೀಪದ ಗುತ್ತಲು ಗ್ರಾಮದ ಕೇಶವ ಸ್ಥಾನಿಕ ನಂಬಿಪಿಳ್ಳೈ ವಂಶಸ್ಥರು ದತ್ತಿ ಕೊಟ್ಟಿರೆಂಬ ಶಾಸನದ ಉಲ್ಲೇಖವಿದೆ.

RELATED ARTICLES  ಹಿಂಸಾತ್ಮಕವಾಗಿ ಗೋವುಗಳ ಸಾಗಾಟ :ವಾಹನ ತಡೆದ ಸ್ಥಳಿಯರು

 

ವೀರನಾರಸಿಂಹನೆಂಬ ರಾಜ 1098ರ ಧಾತು ನಾಮಸಂವತ್ಸರದ ಪುಷ್ಯ ಶುದ್ಧ ಸೋಮವಾರದಂದು ಈ ದೇವಸ್ಥಾನ ಕಟ್ಟಿದ್ದಾನೆನ್ನುತ್ತದೆ ಇತಿಹಾಸ .
ರಾಜ್ಯದ ಮೂಲೆ ಮೂಲೆಯಲ್ಲೂ ಈ ದೇವರಿಗೆ ಭಕ್ತರಿದ್ದಾರೆ.
ಅನಂತಪದ್ಮನಾಭ ಸ್ವಾಮಿ ದೇವಾಲಯ ನಕ್ಷತ್ರಾಕಾರದ ಜಗಲಿಯ ಮೇಲಿದ್ದು ಮುಖಮಂಟಪ, ಪರಊರಿನಿಂದ ಬರುವ ಭಕ್ತರಿಗಾಗಿ ಕಲ್ಲಿನಿಂದ ಕಟ್ಟಿದ ಕಟ್ಟಣೆಯಿದೆ., ಪ್ರವೇಶದ್ವಾರದಲ್ಲೂ ಅಪರೂಪದ ಕೆತ್ತನೆಗಳಿವೆ.
ನವರಂಗ, ಸುಖನಾಸಿ, ಭುವನೇಶ್ವರಿ, ಅಂತರಾಳ, ಗರ್ಭಗೃಹ, ಜಾಲಂದ್ರಗಳಿವೆ. ಭುವನೇಶ್ವರಿಗಳಲ್ಲಿ ಹೊಯ್ಸಳರ ಶೈಲಿ ಮನಸೊರೆಗೊಳ್ಳುತ್ತದೆ. ನಾಜೂಕಾದ ಕೆತ್ತನೆಗಳಿವೆ. ನವರಂಗದಲ್ಲಿ ವೃತ್ತಾಕಾರದ ಕಂಬಗಳಿವೆ. ಪುರಾಣ, ಪುಣ್ಯಕಥೆ, ಭಾಗವತದ ಚಿತ್ತಾರಗಳಿಲ್ಲದಿದ್ದರೂ, ಅರೆಕಂಬಗಳಿಂದ ಕೂಡಿದ ಸಾಧಾರಣ ಕೆತ್ತನೆಯ ಭವ್ಯ ದೇವಾಲಯ ಇದಾಗಿದೆ. ಗರ್ಭಗುಡಿಯ ಮೇಲಿರುವ ಗೋಪುರ ಕಲಾತ್ಮಕವಾಗಿದೆ. ಸಂಪೂರ್ಣ ಶಿಥಿಲವಾಗಿದ್ದ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಪ್ರಸನ್ನಗಣಪತಿ ಹಾಗೂ ಲಕ್ಷ್ಮೀ ದೇವಿಯ ಸುಂದರ ವಿಗ್ರಹಗಳಿವೆ.
ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ನಿಂತಿರುವ ಅನಂತಪದ್ಮನಾಭಸ್ವಾಮಿಯ ಮೂರ್ತಿ ಆಕರ್ಷಕವಾಗಿದೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದ ದೇವರು ಸೂಕ್ಷ್ಮ ಕೆತ್ತನೆಗಳಿಂದ ಕಂಗೊಳಿಸುತ್ತದೆ. ಸರ್ಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಬೂದನೂರಿನ ಈ ದೇಗುಲ ಗತ ಇತಿಹಾಸವನ್ನು ಸಾರುತ್ತಾ ನಿಂತಿದೆ. ಒಮ್ಮೆ ನೋಡಿ ಕಣ್ಮನತುಂಬಿಸಿಕೊಳ್ಳಿ. ಪುರಾತತ್ವ ಇಲಾಖೆಗೊಳಪಡುವ ಈ ದೇಗುಲದ ಕುರಿತು ಮುಖ್ಯರಸ್ತೆಯಲ್ಲಿ ಮಾಹಿತಿಫಲಕ ಅವಳವಡಿಸಿದರೆ ಹೊರಭಾಗದಿಂದ ಬರುವ ಪ್ರವಾಸಿಗಳಿಗೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇಲಾಖೆ ಇಂತಹ ದೇಗುಲ ಸ್ಥಳಗಳ ಕುರಿತು ಮಾಹಿತಿ ಪ್ರಕಟಿಸಿದರೆ ಜನರಿಗೆ ಅನುಕೂಲವಾಗುತ್ತದೆ.

RELATED ARTICLES  ಕುಮಟಾದಲ್ಲಿ ಅಪಘಾತ : ಬೈಕ್ ಚಾಲಕ ಮಣಿಪಾಲಕ್ಕೆ