ಪ್ರವೀಣ.ಬಿ.ಹೆಗಡೆ.
ಗಾವೋ ವಿಶ್ವಸ್ಯ ಮಾತರಃ. ಗೋವು ವಿಶ್ವದ ಮಾತೆ. ಯಾವ ಪೂರ್ವಾಗ್ರಹವಿಲ್ಲದೇ ಒಪ್ಪಿಕೊಳ್ಳುವ ಮಾತಿದು.ಎಲ್ಲರೂ ಹೇಳಿದಂತೆ ನಾವೆಲ್ಲ ಗೋವಿನ ಹಾಲನ್ನು ಕುಡಿದು ಬೆಳೆದವರು,ಗೋವಿನಿಂದಲೇ ಬದುಕಿದವರು ಇಂತಹ ಉರು ಹೊಡೆದ ಮಾತುಗಳನ್ನು ನಾನೀಗ ಹೇಳಲು ಹೊರಟಿಲ್ಲ. ಇಂದು ಕೆಮಿಕಲ್ ಹಾಲು ಕುಡಿಯುತ್ತಿರುವವರ ನಡುವೆ ನಾನು ಗೋವುಗಳ ಕಥೆಯನ್ನು ಹೇಳಹೊರಟರೆ ರಾಹುಲ್ ಗಾಂಧಿಯ ಜೋಕಿಗೆ ನಗುವಂತೆ ನಗುತ್ತಾರೆ. ಏಕೆ ಗೊತ್ತೆ ? ಗೋವಿನೊಂದಿಗೆ ಬದುಕುವವರು ಆ ಪ್ರಾಣಿಯೊಂದಿಗೆ ಹೊಂದಿರುವ ಪ್ರೇಮ ಪ್ಲ್ಯಾಸ್ಟಿಕ್ ಕೊಟ್ಟೆಯಲ್ಲಿ ಬರುವ ಬೆಳ್ಳಗಿನ ಹಾಲೆನ್ನುವ ಬಿಳೀ ದ್ರವವನ್ನು ಕುಡಿದವರಿಗೆ ಅರ್ಥವಾಗದು.
ನಮ್ಮಮ್ಮ ನಮ್ಮ ಮನೆಯಲ್ಲಿನ ಗೋವಿನೊಂದಿಗೆ ನಿತ್ಯ ಹರಟುತ್ತಾಳೆ. ಅವರಿಬ್ಬರ ಮಾತು ಕಥೆ ಮನುಷ್ಯರಿಬ್ಬರ ಭಾವನಾತ್ಮಕ ಬೆಸುಗೆಯಂತೆಯೇ ಇರುತ್ತದೆ. ಗೋವಿಗೆ ನೋವಾದರೆ ಅಮ್ಮ ಬೇಸರಿಸುತ್ತಾಳೆ. ಈಗಲೂ ನೆನಪಿದೆ.ಮೇಯಲು ಹೋದ ನಮ್ಮ ಮನೆಯ ಆಕಳು ಆಯ ತಪ್ಪಿ ಮೇಲಿನಿಂದ ಬಿದ್ದಾಗ ಅಯ್ಯೋ ಬಸುರಿ ಹೆಂಗಸು ಎಷ್ಟು ನೋವಾಯಿತೋ ಅಂತ ಅಮ್ಮ ಕಣ್ಣೀರಿಟ್ಟು ಅತ್ತಿದ್ದಳು.ಆ ಅಳು ಕೇವಲ ಹಣ ನಷ್ಟವಾಗುತ್ತದೆ ಎನ್ನುವುದಾಗಿರಲಿಲ್ಲ. ಅದು ನಮ್ಮ ಕುಟುಂಬದಲ್ಲೇ ಯಾರಿಗೋ ನೋವಾಯಿತು ಎನ್ನುವಂತಿತ್ತು. ಗ್ರಾಮೀಣ ಬದುಕಿನಲ್ಲಿ ಸಾಕುಪ್ರಾಣಿಗಳ ಒಡನಾಟ ಹಾಸುಹೊಕ್ಕಾಗಿರುತ್ತದೆ.ಅದರಲ್ಲೂ ಗೋವಿನ ಪಾತ್ರ ತುಂಬಾ ಮಹತ್ವದ್ದು.ಗೋಪೂಜೆಗಾದರೂ ಕೊನೇಪಕ್ಷ ಗೋವೊಂದು ಮನೆಯಲ್ಲಿರಬೇಕು ಎನ್ನುವದು ಗ್ರಾಮೀಣ ಪ್ರದೇಶದ ಜನರ ಸಾಮಾನ್ಯ ನಂಬಿಕೆ. ಕೋಳಿಯನ್ನು ಹಬ್ಬದ ಸಮಯದಲ್ಲಿ ಕೊಯ್ದು ತಿನ್ನುವದಕ್ಕಾಗಿ ಸಾಕಬಹುದು, ಕುರಿಯನ್ನೂ ಅದೇ ಉದ್ದೇಶಕ್ಕೆ ಸಾಕಬಹುದು.ಆದರೆ ಗೋವಿನೊಂದಿಗೆ ಒಡನಾಟವಿರುವ ಯಾವ ಕೃಷಿಕನೂ ಕಡಿಯುವದಕ್ಕಾಗಿ ಎಂದು ಗೋವನ್ನು ಸಾಕಿರುವದಿಲ್ಲ.
ಭಾರತ ಕೃಷಿ ಪ್ರಧಾನ ದೇಶ ಎಂದು ಎಷ್ಟೋ ವರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಸಾಫ್ಟವೇರ್ ಕಂಪನಿಗಳ ಸಂಖ್ಯೆ ಎಷ್ಟೇ ಹೆಚ್ಚಾದರೂ ಉಣ್ಣುವದಕ್ಕೆ ಅನ್ನವೇ ಬೇಕು. ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿದೆಯಾದರೂ ಅದನ್ನ ತಿಂದವರು ಬದುಕಲು ಸಾಧ್ಯವಿಲ್ಲ. ಊರಲ್ಲಿ ಎಲ್ಲರೂ ಎಸಿ ರೂಮಿನ ಒಳಗೆ ಕಂಪ್ಯೂಟರ್ ಎದುರು ಕೂತುಬಿಟ್ಟರೆ ಖಂಡಿತ ಹೊಟ್ಟೆ ತುಂಬುವದಿಲ್ಲ. ಅದಕ್ಕಾಗಿ ಕೃಷಿ ಮಾಡಲೇ ಬೇಕು. ಕೃಷಿ ಮಾಡುವದೆಂದರೆ ಒಂದಿಷ್ಟು ರಾಸಾಯನಿಕ ಗೊಬ್ಬರ ಹಾಕಿ ಒಂದಿಷ್ಟು ಔಷಧಿಗಳನ್ನು ಸಿಂಪಡಿಸಿಬಿಟ್ಟರೆ ಮುಗಿದುಹೋಗುವದಿಲ್ಲ. ನಾವು ಬೆಳೆದ ಬೆಳೆ ತಿನ್ನುವಂತಿರಬೇಕು.ಅದರಿಂದ ದೇಹಕ್ಕೆ ಸತ್ವ ದೊರಕಬೇಕೇ ವಿನಃ ವಿಷವಲ್ಲ. ನಾವೀಗ ತಿನ್ನುತ್ತಿರುವ ಬಹುತೇಕ ಆಹಾರ ಹಿಂದೆ ಮಾಡುತ್ತಿದ್ದ ಸಾವಯುವ ಕೃಷಿ ಪದ್ದತಿಯಲ್ಲಿ ಬೆಳೆದವುಗಳಾಗಿಲ್ಲ. ಅವೆಲ್ಲವೂ ರಾಸಾಯನಿಕ ಪದ್ಧತಿಯಲ್ಲಿ ವಿಷವನ್ನೇ ಉಂಡು ಬೆಳೆದವುಗಳಾಗಿದ್ದಾವೆ.ಆ ಸಸ್ಯಗಳು ಏನು ತಿಂದಿದ್ದಾವೋ ಅದನ್ನೇ ನಮಗೆ ತಿನ್ನಲು ಕೊಡುತ್ತವೆ. ಅದಕ್ಕಾಗಿ ಆಹಾರದಿಂದಲೇ ಅನಾರೋಗ್ಯಕ್ಕೀಡಾಗುತ್ತಿದ್ದೇವೆ.ಇತ್ತೀಚೆಗೆ ಜನರಲ್ಲಿ ಈ ಕುರಿತು ಜಾಗೃತಿ ಮೂಡುತ್ತಿದೆ. ಸಾವಯುವ ಆಹಾರವನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಪತಂಜಲಿಯಂತಹ ದೇಸೀ ಸಂಸ್ಥೆಯ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿರುವದು ಇದೇ ಕಾರಣಕ್ಕಾಗಿ.
ಸಾವಯುವ ಕೃಷಿ ಎಂದರೆ ಏನೆಂದು ಉತ್ತರಕನ್ನಡ ಜಿಲ್ಲೆಯ ಜನರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿ£ವರÀ ಕೃಷಿ ಪದ್ಧತಿ ಸಾವಯುವ ಕೃಷಿಯೇ ಆಗಿದೆ. ನೀವು ಗೋಕರ್ಣಕ್ಕೋ ಕುಮಟಾಕ್ಕೋ ಬಂದರೆ ಬುಟ್ಟಿಯಲ್ಲಿ ತರಕಾರಿ ಮಾರುವ ಮಹಿಳೆಯರನ್ನು ನೋಡಿರುತ್ತೀರಿ.ಅವರಲ್ಲಿ ಖರೀದಿಸಿದ ತರಕಾರಿಯ ರುಚಿ ಮತ್ತು ಪಟ್ಟಣದಲ್ಲಿ ತರಕಾರಿ ಅಂಗಡಿಯಲ್ಲಿ ಸಿಗುವ ತರಕಾರಿಯ ರುಚಿ ಗಮನಿಸಿದರೆ ನಿಮಗೆ ಯಾವುದು ಯಾವ ಕೃಷಿ ಪದ್ಧತಿಯಲ್ಲಿ ಬೆಳೆದದ್ದು ಎಂದು ತಿಳಿದುಬಿಡುತ್ತದೆ. ಹಸುವಿನ ಸಗಣಿ ಗೊಬ್ಬರಕ್ಕೆ ಅಂತಹ ಶಕ್ತಿಯಿದೆ ಎನ್ನುವದನ್ನು ನೀವು ನಂಬಲೇಬೇಕು.
ಈಗ ಹಣವಿದ್ದವನು ಶ್ರೀಮಂತ. ಹಣವಿಲ್ಲದವನು ಬಡವ.ನಿಮ್ಮ ಮನೆಗಳಲ್ಲಿ ಎಪ್ಪತ್ತುವರ್ಷ ಮೀರಿದ ಅಜ್ಜನೋ ಅಜ್ಜಿಯೋ ಇದ್ದರೆ ಕೇಳಿ. ಅವರ ಬಾಲ್ಯದ ಕಾಲದಲ್ಲಿ ಕೊಟ್ಟಿಗೆಯಲ್ಲಿ ಹೆಚ್ಚು ಹಸುಗಳಿದ್ದವನೇ ಶ್ರೀಮಂತ.ಯಾರ ಮನೆಯಲ್ಲಿ ಹಸುಗಳಿಲ್ಲವೋ ಅವನು ಬಡವ.ಈಗ ಹಣಕಾಸಿನ ವ್ಯವಹಾರಗಳು ಹೇಗೆ ನಡೆಯುತ್ತಿದ್ದವೋ ಹಾಗೆ ವಿನಿಮಯದ ಮಾಧ್ಯಮವಾಗಿ ಹಸುಗಳು ಬಳಸಲ್ಪಡುತ್ತಿದ್ದವು.ಅದೊಂದು ಕಾಲದಲ್ಲಿ ಉತ್ತರಕನ್ನಡದಲ್ಲಿ ಮದುವೆಗೆ ವಧುಗಳ ಕೊರತೆಯಿದ್ದಾಗ ವಧುದಕ್ಷಿಣೆ ಕೊಟ್ಟು ಮದುವೆಯಾಗಿಬರುತ್ತಿದ್ದರಂತೆ. ಆಗ ವಧುದಕ್ಷಿಣೆಗೆ ಕೊಡುತ್ತಿದ್ದುದು ಧನವಲ್ಲ ಬದಲಾಗಿ ದನಗಳಾಗಿದ್ದವು. ನಿನ್ನ ಅಜ್ಜಿಯ ಮನೆಯವರಿಗೆ ಐದು ಹಸುಗಳನ್ನು ವಧುದಕ್ಷಿಣೆಯಾಗಿ ಕೊಟ್ಟು ಮದುವೆಯಾಗಿಬಂದೆ ಎಂದು ಅಜ್ಜ ಆಗಾಗ ತಮಾಷೆ ಮಾಡುತ್ತಿದ್ದ ನೆನಪು ಇಂದಿಗೂ ಹಸಿರಾಗಿದೆ. ಎಂತೆಂತಹ ವಿನಿಮಯ ಪದ್ಧತಿಗಳು ನಡೆಯುತ್ತಿತ್ತು ಗೊತ್ತೆ ? ಪಕ್ಕದ ಮನೆಯವರ ಬೇಣದಲ್ಲಿ ನಮ್ಮ ಮನೆಯ ಹಸುವಿಗೆ ಹುಲ್ಲು ಕೊಯ್ದುಕೊಂಡುಬರುವದಕ್ಕೆ ಬದಲಾಗಿ ವರ್ಷಕ್ಕೆ ಇಪ್ಪತ್ತು ಬುಟ್ಟಿ ಗೊಬ್ಬರವನ್ನು ನಾವು ಕೊಡುವದು.ಒಟ್ಟಾರೆ ವ್ಯವಹಾರದಲ್ಲಿ ಎಲ್ಲೂ ಹಣಕಾಸಿನ ವ್ಯವಹಾರವೇ ಇಲ್ಲ. ಸಂಪೂರ್ಣ ಕ್ಯಾಷ್‍ಲೆಸ್ ವ್ಯವಹಾರ !
ಇದನ್ನೆಲ್ಲ ಹೇಳುವದಕ್ಕೆ ಕಾರಣವಿದೆ.ಹಿಂದೆ ಗೋವುಗಳಿಗೆ ರಾಜಾಶ್ರಯವಿತ್ತು. ಗೋಸಮೃದ್ಧತೆಯೇ ಒಂದು ರಾಜ್ಯದ ಸಂಪತ್ತಿನ ಲಕ್ಷಣವಾಗಿತ್ತು. ಹಿಂದೆಯೂ ಈ ಭೂಮಿಯನ್ನು ಹಲವು ರಾಜರುಗಳು ಆಳಿಹೋದರು. ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿತವಾದ ಭಾರತೀಯ ಸಂವಿಧಾನವೂ ಗೋವುಗಳ ರಕ್ಷಣೆಯ ಕುರಿತು ಹೇಳಿದೆ. ಸರಕಾರವೊಂದು ಕೃಷಿಕರ ಸಂವೇದನೆಗೆ ಪೂರಕವಾಗಿ ಸ್ಪಂದಿಸುತ್ತದೆ ಎನ್ನುವದಾದರೆ ಅದು ರೈತನ ಜೊತೆ ಜೊತೆಗೆ ಬದುಕಿರುವ ಗೋವುಗಳಿಗೂ ಸ್ಪಂದಿಸಬೇಕಾಗುತ್ತದೆ. ಗೋವುಗಳನ್ನು ಕೇವಲ ಹೈನುಗಾರಿಕೆಯ ವಸ್ತುವನ್ನಾಗಿ ನೋಡುವದೇ ತಪ್ಪು. ಬದಲಾಗಿ ಅನ್ನದ ಮೂಲವಾಗಿ ನೋಡಬೇಕು.ಆದರೆ ಭಾರತೀಯ ಸಂವಿಧಾನದಿಂದ ರಕ್ಷಣೆ ಪಡೆದ ಗೋವು ರಫ್ತಿನ ಮಾಂಸದ ಮೂಲವಾಗಿ, ರಾಜಕೀಯ ವೈಷಮ್ಯದ ಭಾಗವಾಗಿ, ದ್ವೇಶಕ್ಕೆ ಬಲಿಯಾಗುವ ಪ್ರಾಣಿಯಾಗಿ ಕಂಡುಬರುತ್ತಿರುವದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ.ರೈತರ ಪರಿಸ್ಥಿತಿಯನ್ನು ಕೇಳುವವರಿಲ್ಲ. ತಾವು ಸಾಕಿದ ಜಾನುವಾರುಗಳ ಹೊಟ್ಟೆ ತುಂಬಿಸುವದು ಹೇಗೆ ಎಂದು ರೈತ ಚಿಂತೆಯಲ್ಲಿದ್ದರೆ ರಾಜ್ಯದ ಅಧಿಕಾರಾರೂಢ ಮುಖ್ಯಮಂತ್ರಿಗಳು ತಲೆಯನ್ನೇ ಕೆಡಿಸಿಕೊಂಡಿಲ್ಲ. ಬದಲಾಗಿ ಬೆಂಗಳೂರಿನಲ್ಲಿ ಕಟ್ಟಲಾಗುತ್ತಿರುವ ಅತೀದೊಡ್ಡ ಕಸಾಯಿಖಾನೆ ವಿಷಯದಲ್ಲಿ ಮೌನವಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಉಪಚುನಾವಣೆಗಾಗಿ ತಿಂಗಳ ಸಮಯ ಹಾಳುಮಾಡುವದಕ್ಕೆ ಸಮಯವಿರುತ್ತದೆ. ಚುನಾವಣೆ ಗೆದ್ದ ಖುಶಿಯಲ್ಲಿ ಸಿನೇಮಾ ನೋಡುವದಕ್ಕೆ ಸಮಯವಿರುತ್ತದೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ನೋಡಿಬರಲು ಬಾಹುಬಲಿ ಚಲನಚಿತ್ರಕ್ಕೆ ನಲವತ್ತು ಸಾವಿರ ರೂಪಾಯಿ ತೆತ್ತು ಹೋಗಿಬರುವದಕ್ಕೆ ಏನೇನೂ ಸಮಸ್ಯೆಯಿಲ್ಲ.ಅದೇ ಸಮಯಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿರುವ ಹತ್ತು ಹದಿನೈದು ಸಾವಿರ ಗೋವುಗಳು ಮೇವಿಲ್ಲದೆ ನರಳುತ್ತಿವೆ. ಆದರೆ ಅದು ಇವತ್ತಿಗೂ ಅವರಿಗೆ ಸಮಸ್ಯೆಯೆಂದೆನಿಸಲೇಇಲ್ಲ. { ಹಿಂದೊಮ್ಮೆ ಇದೇ ಸಿದ್ದರಾಮಯ್ಯ ಪತ್ರಕರ್ತರು ನೀವೂ ಗೋಮಾಂಸ ತಿಂದಿದ್ದೀರಾ ಎಂದು ಕೇಳಿದ್ದಕ್ಕೆ ನಾನಿನ್ನೂ ತಿಂದಿಲ್ಲ. ಆದರೆ ತಿಂತೀನಿ ಎಂದು ಹೇಳಿದ್ದರು. ಮುಖ್ಯಮಂತ್ರಿ ಹಾಲು ಕುಡಿಯುತ್ತೇನೆ ಎಂದರೆ ರಾಜ್ಯಕ್ಕೆ ಒಂದು ಘನತೆ ಬರುತ್ತಿತ್ತು. ಅದು ಅವರ ಈಗಿನ ಮನಸ್ಥಿತಿಯ ಉತ್ತರವಿರಬಹುದು. ಇಂತಹ ಮುಖ್ಯಮಂತ್ರಿ ಮತ್ತು ಸರಕಾರ ಗೋವಿಗೆ ಮತ್ತು ಗೋವಿನಿಂದಾಧಾರಿತ ಕೃಷಿಯಲ್ಲಿ ತೊಡಗಿದವರಿಗೆ ಸಹಾಯ ಮಾಡುತ್ತಾರೆ ಎಂದು ಹೇಗೆ ನಂಬೋಣ?}
ಇದೇ ಸರಕಾರ ಮಾಡಬೇಕಾಗಿದ್ದ ಕೆಲಸವನ್ನು ಮಠವೊಂದು ಮಾಡುತ್ತಿದೆ.ಯಾವುದೇ ಪ್ರತಿಫಲವನ್ನು ನಿರೀಕ್ಷೆ ಮಾಡದೇ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಸುತ್ತ ಮುತ್ತಲ ಹಳ್ಳಿಗಳ ಗೋವುಗಳಿಗೆ ಅಲ್ಲಲ್ಲಿ 16 ಕೇಂದ್ರಗಳನ್ನು ಸ್ಥಾಪಿಸಿ ಮೇವನ್ನು ಉಚಿತವಾಗಿ ಪೂರೈಸುವದು ಸಾಮಾನ್ಯದ ಕೆಲಸವಲ್ಲ. ಸೋಮವಾರದ ಸಾಯಂಕಾಲದವರೆಗೆ 2000 ಟನ್ ಮೇವನ್ನು ಗೋವುಗಳಿಗೆ ಪೂರೈಸಲಾಗಿದೆ.ಮಠ ತನ್ನ ಭಕ್ತರಿಗೆ ದಿನ ಒಂದುಹೊತ್ತು ಉಪವಾಸವಿದ್ದು ಗೋವಿಗಾಗಿ ಒಂದು ಹೊತ್ತಿನ ಮೇವಿಗೆ ಸಹಾಯಮಾಡಲು ಸ್ಪಂದಿಸಿ ಎಂದು ಕರೆ ನೀಡಿತ್ತು. ಅದರಂತೆ ಲಕ್ಷಾಂತರ ದಾನಿಗಳು ಇಂದಿಗೂ ಸಹಾಯ ಮಾಡುತ್ತಿದ್ದಾರೆ.ಇದು ಸಮಾಜವಾದ. ಏಕೆಂದರೆ ಎಲ್ಲಿಯ ರಾಮಚಂದ್ರಾಪುರ ಮಠ, ಎಲ್ಲಿಯ ಮಲೆಮಹದೇಶ್ವರ ಬೆಟ್ಟ. ಮಠದ ವ್ಯಾಪ್ತಿಯ ಶಿಷ್ಯರು ಹೆಚ್ಚಾಗಿರುವ ಸ್ಥಳವೂ ಅದಲ್ಲ. ಆದರೆ ಮಠ ಮತ್ತು ಭಕ್ತರು ಅಲ್ಲಿಯ ಮೇವಿನ ಸಮಸ್ಯೆಗೆ ಸ್ಪಂದಿಸಿದ್ದು ಮಾತ್ರ ಅದ್ಭುತ. ಅಲ್ಲಿಯ ರೈತರನ್ನು ಮಾತಾಡಿಸಿದರೆ ನಿಮಗದು ಅರ್ಥವಾದೀತು.
ನಮಗಿಲ್ಲಿ ಎರಡು ವಿಧದ ಆಡಳಿತ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ಹೊಟ್ಟೆಗಿಲ್ಲದೇ ಸಾಯುವ ಗೋವುಗಳಿಗಾಗಿ ಸ್ಪಂದಿಸದೇ ಸಿನೆಮಾ ವೀಕ್ಷಿಸುತ್ತ ನಿದ್ದೆ ಮಾಡುತ್ತ ದಿನಕಳೆಯುತ್ತಿರುವ ಸರಕಾರವೊಂದರ ಮುಖ್ಯಸ್ಥರು ಮತ್ತೊಂದೆಡೆ ಹಗಲಿರುಳೂ ಗೋವಿನ ಮೇವಿಗಾಗಿ ಶ್ರಮಿಸುತ್ತಿರುವ ಮಠವೊಂದರ ಕಾರ್ಯಕರ್ತರು ಮತ್ತು ಆ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ರಾಮಚಂದ್ರಾಪುರ ಮಠದ ಶ್ರೀಗಳು. ಮಠಗಳಿಗೆ ಹಣಕಾಸಿನ ನೆರವು ಕೊಟ್ಟಾಗ ಬೊಬ್ಬೆ ಹಾಕಿದ ಸರಕಾರದ ಮಂತ್ರಿಗಳ ಮಾತನ್ನು ಕೇಳಿದ್ದೀರಿ. ಸ್ವತಃ ದಾನಿಗಳಿಂದ ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ರೈತರ ಜೀವಕ್ಕೆ ಜೀವವಾಗಿ ದುಡಿಯುತ್ತಿರುವ ಮಠವೊಂದರ ಕಾರ್ಯಕರ್ತರ ಶ್ರಮವನ್ನು ಅಲ್ಲಿಗೇ ಹೋಗಿ ನೋಡಿಬನ್ನಿ.