ಲೇಖನ- ಉಮೇಶ ಮುಂಡಳ್ಳಿ ಭಟ್ಕಳ

ಭಾರತೀಯ ಸಂಸ್ಕೃತಿ ಸಂಪ್ರದಾಯ ಧಾರ್ಮಿಕ ಆಚರಣೆ ಇಲ್ಲಿನ ಯೋಗ, ಆಯುರ್ವೇದ,ಖಗೋಳ ಜ್ನಾನ ಮೊದಲಾದವು ಜಗತ್ತಿನಲ್ಲಿಯೇ ಉನ್ನತವಾದದ್ದು, ದಿವ್ಯವಾದದ್ದು ಸರ್ವಶ್ರೇಷ್ಠ ವಾದ್ದದ್ದು.ಇದನ್ನು ನಮಗಿಂತ ಹೆಚ್ಚಾಗಿ, ಈ ಸಂಸ್ಕೃತಿಗಳನ್ನು ವಿರೋಧಿಸುವವರೇ ತಿಳಿದಿದ್ದಾರೆ.ಒಪ್ಪಿಕೊಳ್ಳುವ ಮನಸ್ಥಿತಿ ಅವರದಲ್ಲ ಅಷ್ಟೆ. ಅಂತ ಮನಸ್ಥಿತಿ ಈ ದೇಶದ ಹೊರಗೆ ಇರುವುದರ ಜೊತೆಗೆ ಒಳಗೂ ಇರುವುದು ಈ ದೇಶದ ದುರಂತ. ಏನೇ ಇರಲಿ ಈ ಜಗದಲ್ಲಿ ನಮ್ಮ ಸಂಸ್ಕೃತಿ ಬೆಳಗುತ್ತಿರುವುದು ಸುಳ್ಳಲ್ಲ. ಅದು ಸದಾ ಬೆಳಗುವ ಜೀವಂತ ಹಣತೆ ಎಂಬುದು ಸಾರ್ವಕಾಲಿಕ ಸತ್ಯ.
ಭಾರತೀಯರು ಪ್ರತಿದಿನವನ್ನೂ ಸಂಭ್ರಮಿಸುವವರು. ಇದಕ್ಕಾಗಿ ಅವರಿಗೊಂದು ನೆಪ ಬೇಕಾಗಿರುತ್ತಿತ್ತು.ವರ್ಷದ ಮುನ್ನೂರ ಅರವತ್ತೈದು ದಿನಗಳೂ ಹಬ್ಬಗಳಂತೆ ಕಳೆಯುತ್ತಿದ್ದವರು ಇವರು. ಬೇರೆ ಬೇರೆ ಕಾರಣಗಳಿಗೆ ಮತ್ತು ಜೀವನದ ಬೇರೆ ಬೇರೆ ಉದ್ದೇಶಗಳ ನೆಪ ಮಾಡಿ ದಿನಗಳನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ನಾನಾ ರೀತಿಯ ಐತಿಹಾಸಿಕ ಘಟನೆಗಳು, ಗೆಲುವುಗಳು, ಜೀವನದ ಒಂದೊಂದು ಸಂದರ್ಭ ಬಿತ್ತನೆ,ನಾಟಿ ಮತ್ತು ಕೊಯ್ಲು ಮಾಡುವುದನ್ನು ಸಂಭ್ರಮಿಸಲು ಹಬ್ಬಗಳನ್ನು ಆಚರಿಸುತ್ತಿದ್ದರು. ಪ್ರತಿ ಹಬ್ಬಕ್ಕೂ ಒಂದು ವೈಜ್ಞಾನಿಕ ವೈಚಾರಿಕ ಕಾರಣವೂ ಬೆಸೆದುಕೊಂಡಿರುತ್ತಿತ್ತು.ಇಂತಹ ಭಾರತೀಯರ ಮಹತ್ವದ ಹಬ್ಬಗಳಲ್ಲಿ ಮಹಾಶಿವರಾತ್ರಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ಎಲ್ಲ ದಿನಕ್ಕಿಂತ ಮಹಾಶಿವರಾತ್ರಿಯು ಅತಿ ಹೆಚ್ಚಿನ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ ದಿನವಾಗಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಶಕ್ತಿಯ ನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗಕ್ಕೆ ತಳ್ಳುತ್ತಿರುತ್ತದೆ ಎನ್ನುತ್ತಾರೆ ಅನೇಕ ಮಹಾನ್ ದಾರ್ಶನಿಕರು ಸಿದ್ದಿ ಪುರುಷರು. ಹಾಗಾಗಿ ನಾವಿದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದೇ ಪೂರ್ವಜರು ನಮ್ಮ ಸಂಪ್ರದಾಯದಲ್ಲಿ, ರಾತ್ರಿಯಿಡೀ ಜರುಗುವಂತಹ ಈ ಉತ್ಸವವನ್ನು ನಿಗದಿಪಡಿಸಿದ್ದಿರಬಹುದು ಎಂದು ಈಗ ಮನವರಿಕೆಯಾಗುತ್ತಿದೆ.

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿಯು ಬಹಳ ಪ್ರಮುಖವಾದದ್ದು. ಆಧ್ಯಾತ್ಮಿಕ ಸಾಧಕರು, ಮುನಿಗಳು, ತಪಸ್ವಿಗಳು, ಯೋಗಿಗಳಿಗೆ ಮಹಾಶಿವರಾತ್ರಿಯು ಶಿವನು ಕೈಲಾಸ ಪರ್ವತದೊಂದಿಗೆ ಐಕ್ಯವಾದ ದಿನ. ಯೋಗ ಪರಂಪರೆಯಲ್ಲಿ, ಶಿವನನ್ನು ಒಬ್ಬ ದೇವರೆಂದು ಪೂಜಿಸಲಾಗುವುದಿಲ್ಲ ಬದಲಾಗಿ ಯೋಗ ವಿಜ್ಞಾನದ ಉಗಮಕಾರಕ, ಆದಿ ಗುರು ಎಂದು ಪರಿಗಣಿಸಲಾಗುತ್ತದೆ. ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲನಾದನು. ಆ ದಿನವೇ ಮಹಾಶಿವರಾತ್ರಿ.

ಭಾರತದ ಪಂಚಾಂಗದಲ್ಲಿ ಅತ್ಯಂತ ಮಹತ್ವದ ಆಚರಣೆಯಾದ ಮಹಾ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿಯೇ ಶಿವರಾತ್ರಿ ಹಬ್ಬ ಬರುತ್ತದೆ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇಂದಿಗೂ ಇದೆ.

RELATED ARTICLES  ಶ್ರೀರಾಮನ ಧರ್ಮದೃಷ್ಟಿಯ ಬಗ್ಗೆ ಶ್ರೀಧರರ ನುಡಿಗಳು.

ಮುಕ್ಕೋಟಿ ದೇವತೆಗಳನ್ನು ಆರಾಧಿಸುವ ಹಿಂದುಗಳಿಗೆ ಶಿವನ ಮೇಲೆ ವಿಶೇಷ ಭಕ್ತಿ. ಶಿವ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದವ, ದಯಾಮಯಿ ಅವನು ಎನ್ನುವ ಕಾರಣವೂ ಇರಬಹುದು. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಒಂದೇ ಸಮಯದಲ್ಲಿ ಆಚರಿಸುವ ಹಬ್ಬ ಶಿವರಾತ್ರಿ . ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡುವುದರ ಜೊತೆಗೆ ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಭಜನೆ ಶಿವ ನಾಮ ಸಂಕೀರ್ಥನೆ ಜೊತೆ ಆರಾಧಿಸುವ ಸಂಪ್ರದಾಯವಿದೆ.

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಆತ ಭಸ್ಮ ಪ್ರಿಯ, ನಾದಪ್ರಿಯನು. ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿಯೇ ಕಳೆದ ಸರಳ ಮತ್ತು ಅಮೋಘ ಶಕ್ತಿ ಎನ್ನುತ್ತಾರೆ ದಾರ್ಶನಿಕರು. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯನಾದ ಶಿವನು ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎನ್ನುವುದು ನಂಬಿಕೆ.

ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದಿನವೇ ದರ್ಶನ ನೀಡಿದ ಎಂಬುದು ಪ್ರತೀತಿ.

RELATED ARTICLES  ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ

‘ಶಿವ ಪುರಾಣ ‘ ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ.’ಸ್ಕಂದ ಪುರಾಣ ‘ದ ಬೇಡ ಚಂದನನ ಕಥೆ…, ‘ ಗರುಡ ಮತ್ತು ಅಗ್ನಿ ಪುರಾಣ ‘ ಗಳ ಬೇಡ ಸುಂದರ ಸೇನನ ಕಥೆ… ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂದು ಶಾಸ್ತ್ರವೂ ಉಲ್ಲೇಖಿಸುತ್ತದೆ ಎಂದಿದ್ದಾರೆ ಶಾಸ್ತ್ರ ಪಾರಂಗತರು.

ಅಪರಿಮಿತವಾದುದ್ದನ್ನು ತಿಳಿಯಲು, ಅಸ್ತಿತ್ವದಲ್ಲಿನ ಏಕತೆಯನ್ನು ಅನುಭವಿಸಲು ಇರುವ ತೀವ್ರವಾದ ಹಾತೊರೆಯುವಿಕೆಯೇ ಯೋಗ ಎಂದು ನಂಬಲಾಗಿದೆ. ಮಹಾಶಿವರಾತ್ರಿಯ ರಾತ್ರಿಯು ಈ ಏಕತೆಯನ್ನು ಅನುಭವಿಸುವ ಸದವಕಾಶವನ್ನು ತಮಗೆ ನೀಡುತ್ತದೆ ಎಂದು ಬಲವಾಗಿ ನಂಬುತ್ತಾರೆ ಯೋಗಿಗಳು.

ಈ ಎಲ್ಲ ನಂಬಿಕೆ ಜಿಜ್ಞಾಸೆಗಳು ಏನೇ ಇದ್ದರೂ
ಎಲ್ಲ ಆಡಂಬರಗಳಿಂದ ನಾವು ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಪ್ರೀತಿಯಿಂದ ಶಿವರಾತ್ರಿಯನ್ನು ಆಚರಿಸೋಣ. ನಿರಾಕಾರ, ನಿರ್ಗುಣ ,ನಿರಾಭರಣ ಭಕ್ತಪ್ರಿಯನಾದ ಪರಶಿವನು ಈ ಸಮಸ್ತ ಲೋಕಕ್ಕೆ ಕಲ್ಯಾಣವನ್ನು ಮಾಡಲಿ. ಸರ್ವೇ ಜನಾಃ ಸುಖಿನೋ ಭವಂತು.