ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.
*ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ*
ಭಗವಂತ ಕೆಲವರಿಗೆ ಬದುಕಿಗೆ ಕಾಲಿಡುವ ಮೊದಲೇ ಕೊಟ್ಟಿರುತ್ತಾನೆ. ಕೆಲವರಿಗೆ ಜೀವನದ ಮಧ್ಯದಲ್ಲಿ ಕೊಡುತ್ತಾನೆ. ಕೆಲವರಿಗೆ ಜೀವನದ ಕೊನೆಯ ಕಾಲದಲ್ಲಿ ಕೊಡುತ್ತಾನೆ. ಮೊದಲೇ ಪಡೆದವ ಒಮ್ಮೊಮ್ಮೆ ತಾನೇ ಕಳೆದುಕೊಳ್ಳುತ್ತಾನೆ. ಮಧ್ಯದಲ್ಲಿ ಪಡೆದವ ಅದನ್ನು ಕೊನೆಯವರೆಗೂ ಕಾಪಾಡಲು ಹರ ಸಾಹಸ ಪಡುತ್ತಾನೆ. ಜೀವನದ ಕೊನೆಯಲ್ಲಿ ಪಡೆದವ ಈಗಲಾದರೂ ಸಿಕ್ಕಿತಲ್ಲ ಎಂದು ಸಂತೃಪ್ತಿಯ ಕೊನೆಯುಸಿರು ಎಳೆಯುತ್ತಾನೆ. ಅಷ್ಟಕ್ಕೂ ಎಲ್ಲರಿಗೂ ಎಲ್ಲವೂ ಸಿಕ್ಕುವುದಿಲ್ಲ. ಸಿಕ್ಕಿದರೂ ಒಮ್ಮೊಮ್ಮೆ ದಕ್ಕುವುದಿಲ್ಲ. ಭಗವಂತ ತನಗೇನು ನೀಡಿದ್ದಾನೆ ಎಂಬುದನ್ನು ನಾವೇ ಮೊದಲು diagnose ಮಾಡಬೇಕು. ಅದಕ್ಕೆ ನಮ್ಮ ಪಾಲಕರು, ಗುರುಗಳು, ಆಪ್ತ ಬಂಧುಗಳು ಖಂಡಿತ ನೆರವಾದಾರು. ಕ್ಷೇತ್ರದ ಆಯ್ಕೆಯಷ್ಟೇ ಸಾಲದು. ನಮ್ಮ ಶೃದ್ಧೆಯ ಫಲ ಅದರಲ್ಲಿ ಸಿಗಬೇಕು. ಹಾಗಾಗುವುದಕ್ಕೆ ನಮ್ಮ ಅಚಲ ನಂಬಿಕೆ, ಅವಿಶ್ರಾಂತ ಪ್ರಯತ್ನ ಎರಡೂ ಬೇಕು. ಅಷ್ಟೂ ಸಾಲದು ಭಗವಂತನ ಸಂಪೂರ್ಣ ಆಶೀರ್ವಾದ ಜೊತೆಗೆ ಅದೃಷ್ಟವೂ ಇದ್ದಾಗ ಮಾತ್ರ ವ್ಯಕ್ತಿಯ ಜೀವನ ಸಾಧನೆಯಾಗುತ್ತದೆ. ಸಾಧನೆಯಿಂದ ಹೆಸರು ಜನ ಜನಿತವಾಗುತ್ತದೆ. ಹೆಸರಿನ ಹಿಂದೆ ಹಣವೂ… ಬಿರುದುಗಳೂ…ಪ್ರಶಸ್ತಿಗಳೂ… ಫಲಕಗಳೂ…ಶಾಲು…ಹಾರ….ಪೇಟ…..ಅಬ್ಭಾ…..ಅಸಂಖ್ಯಾತ ಅಭಿಮಾನಿಗಳ ಹಾರೈಕೆಯೇ ಪ್ರವಾಹೋಪಾದಿಯಲ್ಲಿ ಬರುತ್ತದೆ. ಈ ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಸಾಧಕನೊಬ್ಬನನ್ನು ಕಾಪಾಡುವುದು ಅವನ ವಿನಯ, ಸಜ್ಜನಿಕೆ ಮಾತ್ರ. ಇಂದಿನ ನನ್ನ ಅಕ್ಷರ ಅತಿಥಿ ಅಂತಹ ಒಬ್ಬ ಅದ್ಭುತ ಸಾಧಕ ಕರಾವಳಿಯ ಗಾನ ಕೋಗಿಲೆ, ಕನ್ನಡ ನಾಡಿನ ಯಕ್ಷ ಸ್ವರ ಸಾಮ್ರಾಟ ಶ್ರೀ ರಾಘವೇಂದ್ರ ಆಚಾರ್ಯ ಜನಸಾಲೆ.
ಯಕ್ಷಗಾನ ಭಾಗವತಿಕೆಯಲ್ಲಿ ಹೊಸ ಭಾಷ್ಯ ಬರೆದ ಯುವೋತ್ಸಾಹಿ, ಬಡತನದ ಮಧ್ಯೆಯೂ ತನ್ನ ಸ್ವ ಸತ್ವಾತಿಶಯದಿಂದಲೇ ಸೆಟೆದು ನಿಂತು ನಾಡೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ ಚಿಗುರು ಮೀಸೆಯ ಮಹಾನ್ ಮೋಡಿಗಾರ, ಕಾಳಿಂಗ ನಾವುಡರೇ ಮತ್ತೆ ಹುಟ್ಟಿಬಂದರೇನೋ ಎನ್ನುವಷ್ಟು ಅಭಿಮಾನ ಗಳಿಸಿದ ಕಂಚಿನ ಕಂಠದ ಗಾನ ಗಾರುಡಿಗ, ಯಕ್ಷಗಾನವನ್ನು ವಿಶ್ವಗಾನವಾಗಿಸಬಲ್ಲ ತಾಕತ್ತಿದ್ದ ಪ್ರತಿಭಾಶಾಲಿ, ಸಂಪ್ರದಾಯಗಳನ್ನೂ ಬಿಡದೇ ಸ್ಪಷ್ಟತೆ, ಭಾವಸ್ಫುರಣ, ಸ್ವರಗಳೇರಿಳಿತದಲ್ಲಿ ನಮ್ಮ ಮುಂದೊಂದು ಯಕ್ಷ ಸ್ವರ್ಗವನ್ನೇ ಧರೆಗಿಳಿಸುವ ರಾಘವೇಂದ್ರ ಆಚಾರ್ಯರು ಗಾನ ಸರಸ್ವತಿಯೇ ಹರಸಿ ಕಳುಹಿಸಿದಂತೆ ತೋರುವ ಪ್ರತಿಭಾಸಂಪನ್ನರು.
ಅವತ್ತೊಂದಿನ ನಮ್ಮ ಅಣ್ಣ ಫೋನ್ ಮಾಡಿದ್ದ. ಈ ವರ್ಷ ಪೆರ್ಡೂರು ಮೇಳಕ್ಕೆ ಎರಡು ಹೊಸ ಭಾಗವತರು ಬಂದಿದ್ದಾರೆ. ಮಸ್ತಿದ್ದಾರೆ ಮಾರಾಯ….ಎಂಥ ಭಾಗವತಿಕೆ ಮಾಡತಾರೆ ಅಂದ್ರೆ ಬೆಳ್ಳಾನು ಬೆಳಿಗ್ಗೆಯವರೆಗೂ ಬೇಸರವೇ ಬರುವುದಿಲ್ಲ…. ಅಂತ. ನನಗೂ ಒಂದು ಕುತೂಹಲ ಕಾಡಿದ್ದು. ಸುಬ್ರಹ್ಮಣ್ಯ ಧಾರೇಶ್ವರರಂಥ ಖ್ಯಾತ ನಾಮರು ಮುನ್ನಡೆಸಿದ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರಿಗೆ ಎರಡು ಹೊಸ ಭಾಗವತರ ಪ್ರವೇಶ ಆಗಿದೆಯೆಂದಾದರೆ ಒಮ್ಮೆ ಯಕ್ಷಗಾನ ನೋಡಿಯೇ ಬರಬೇಕೆಂದು ಹೋಗಿದ್ದು ನಾನು. ನಿಜಕ್ಕೂ ಆಶ್ಚರ್ಯವೇ ಕಾದಿದ್ದು ನನಗೆ. ಸಣಕಲು ಶರೀರದ ಬ್ರಹ್ಮೂರರೂ, ಆಚಾರ್ಯರೂ ಭಾಗವತಿಕೆ ಮಾಡಿದ ರೀತಿ ನೋಡಿ ದಂಗಾಗಿ ಹೋಗಿದ್ದು ನಾನು. ಅವರ ಶರೀರವೋ…. ಶಾರೀರವೋ…..ನಿಜಕ್ಕೂ ಯಕ್ಷಗಾನದ ಒಬ್ಬ ಅಪ್ಪಟ ಅಭಿಮಾನಿಯಾಗಿ ಭಾಗವತಿಕೆಯ ಮತ್ತೊಂದು ತಲೆಮಾರು ಸೃಷ್ಟಿಯಾಗುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆಯಾಗಿತ್ತು.
ಒಬ್ಬ ಪಾತ್ರಧಾರಿಗೆ ತನ್ನ ಪಾತ್ರದ ಮೇಲೇ ಹೆಚ್ಚು ಲಕ್ಷ್ಯವಿದ್ದರೆ ಭಾಗವತನಿಗೆ ಹಾಗಲ್ಲ. ಭಾಗವತರು ಗೆಲ್ಲುವುದು ಆ ದಿನದ ಯಕ್ಷಗಾನ ಗೆದ್ದಾಗ ಮಾತ್ರ. ಹೀಗಾಗಿ ತಮ್ಮ ಭಾಗವತಿಕೆಯ ಜೊತೆ ಜೊತೆಗೆ ಪ್ರಸಂಗವೊಂದನ್ನು ನಡೆಸಿಕೊಂಡು ಹೋಗುವ ರೀತಿಯೂ ಪ್ರಾಧಾನ್ಯ ಆಗಿರುತ್ತದೆ. ಭಾಗವತರೆಂದರೆ ಒಂದರ್ಥಕ್ಕೆ captain ಇದ್ದಂತೆ. ಅದರಲ್ಲೂ ನನ್ನಂಥ ಅಭಿಮಾನಿಯ ಪಾಲಿಗೆ ಯಕ್ಷಗಾನದ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿಯೇ ಆಗಿ ರಾಘವೇಂದ್ರ ಆಚಾರ್ಯರು ತೋರುತ್ತಾರೆ. ಅತಿಶಯೋಕ್ತಿಯಾಗಿ ಹೊಗಳಬಾರದೆಂದರೂ ಈ ವಿಷಯದಲ್ಲಿ ನನ್ನ ಮನಸ್ಸು ಕೇಳುವುದಿಲ್ಲ. ಒಂದರ್ಥಕ್ಕೆ ರಾಘವೇಂದ್ರ ಆಚಾರ್ಯರು ನಮ್ಮ ಪಾಲಿಗೆ ಮತ್ತೆ ಹುಟ್ಟಿ ಬಂದ ಕಾಳಿಂಗ ನಾವುಡರೇ!
ರಾಘವೇಂದ್ರ ಆಚಾರ್ಯರು ಇಂದು ಬಡಗು ತಿಟ್ಟಿನ ಮುಂಚೂಣಿ ಭಾಗವತರಾಗಿ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರನ್ನು ಮುನ್ನಡೆಸುತ್ತಾರೆ. ಹೊಸ ಪ್ರಸಂಗಗಳಿರಲಿ ಹಳೆಯ ಪೌರಾಣಿಕ ಪ್ರಸಂಗಗಳೇ ಇರಲಿ ರಾಘವೇಂದ್ರರ ವಿಭಿನ್ನ ವಿಶಿಷ್ಟ ಶೈಲಿಯ ರಾಗಗಳೇರಿಳಿತ ನೋಡಲು ಜನ ಕಾತುರರಾಗಿರುವುದಂತೂ ಗ್ಯಾರಂಟಿ. ಅನುಕರಿಸದ ಅನನ್ಯ ಭಾಗವತಿಕೆ ಅವರದ್ದು. ಭಾಮಿನಿಯೊಂದನ್ನು ಉಸುರಿದರೆ ಒಮ್ಮೆ ನಮ್ಮ ಉಸಿರನ್ನೇ ಕ್ಷಣಕಾಲ ಹಿಡಿದಿಟ್ಟುಕೊಳ್ಳುವ ಅನುಭವ. ಬಿದ್ದು ಹೋಗುವ ಕಾಲಕ್ಕೂ ಯಕ್ಷಗಾನ ಪ್ರಸಂಗವೊಂದನ್ನು ಎದ್ದು ನಿಲ್ಲಿಸುವ ತಾಕತ್ತು ನಮ್ಮ ಭಾಗವತರಿಗಿದೆ. ರಾಘವೇಂದ್ರ ಆಚಾರ್ಯರ ಭಾಗವತಿಕೆ ಕೇಳುವುದೇ ಒಂದು ಗಮ್ಮತ್ತು.
ಇಂದು ಎಷ್ಟೋ ಜನರ ರಿಂಗ್‌ಟೋನ್ ರಾಘವೇಂದ್ರ ಆಚಾರ್ಯರ ಯಕ್ಷಗಾಯನ. ಇಂದು ಎಷ್ಟೋ ಜನರ ಮನಮನೆಗಳಲ್ಲಿ ಅವರದ್ದೇ CD. ಇಂದು ಎಷ್ಟೋ ಜನ ಯಕ್ಷಗಾನಕ್ಕೆ ಹೋಗುವುದೇ ಅವರ ಭಾಗವತಿಕೆ ಕೇಳುವುದಕ್ಕಾಗಿ. ಇಂದು ಗಲ್ಲಾಪೆಟ್ಟಿಗೆ ತುಂಬಿಸಬಲ್ಲ ಮುಂಚೂಣಿ ಭಾಗವತರಿದ್ದರೆ ಅದು ಒಂದು ರಾಘವೇಂದ್ರ ಆಚಾರ್ಯರು ಮತ್ತೊಬ್ಬರು ಹಿಲ್ಲೂರರು. ಇಂದು ನಮ್ಮೆಲ್ಲರ ಅಭಿಮಾನಕ್ಕೆ ಪಾತ್ರರಾದ ಇಂಥ ಭಾಗವತರಿಗೆ ಅಭಿಮಾನದ ಎರಡು ನುಡಿಗಳನ್ನು ಬರೆಯಬೇಕೆನಿಸಿದ್ದು ನನಗೆ.
ಮೊನ್ನೆ ಮೊನ್ನೆ ನಮ್ಮೂರಿನಲ್ಲಿ ರಾಘವೇಂದ್ರ ಆಚಾರ್ಯರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಅವರ ಪ್ರತಿಭೆಯನ್ನು ನಾವು ಅಭಿನಂದಿಸಿದೆವು. ಅವರೆದುರಿನಲ್ಲಿ ಅವರಿಗೊಂದು ಅಭಿನಂದನಾ ನುಡಿ ಸಮರ್ಪಿಸುವ ಅವಕಾಶ ಸಿಕ್ಕಿದ್ದು ನನಗೂ ಒಂದು ಅದೃಷ್ಟ. ರಾಘವೇಂದ್ರ ಆಚಾರ್ಯರು ಆ ದಿನ ಆಡಿದ ಮಾತುಗಳೂ ನನ್ನನ್ನು ಬೆರಗುಗೊಳಿಸಿದವು. ಸುಸ್ಪಷ್ಟ ಸಮಯೋಚಿತ ಮಾತುಗಳನ್ನೂ ಆಡಬಲ್ಲೆ ತಾನು ಎಂಬುದನ್ನು ಅವರು ಸಮರ್ಥಿಸಿದರು. ಒಬ್ಬ ವೇಷಧಾರಿಯೂ ಆಗಿ ಅವರು ರಂಗಸ್ಥಳದಲ್ಲಿ ಪಾತ್ರ ಮಾಡಬಲ್ಲರು ಎಂಬುದನ್ನು ನಾನು ಕೇಳಿದ್ದೇನೆ. ಒಂದು ಕಾಲಕ್ಕೆ ಮಾರಣಕಟ್ಟೆ ಮೇಳದ ಪ್ರಧಾನ ಭಾಗವತರಾಗಿ ಮೆರೆದ ರಾಘವೇಂದ್ರ ಆಚಾರ್ಯರು ಮಾರಣಕಟ್ಟೆ ಮೇಳವನ್ನೂ ಅಲ್ಲಿನ ಕಲಾವಿದರುಗಳನ್ನೂ ಅಭಿಮಾನದಿಂದ ಸ್ಮರಿಸುತ್ತಾರೆ.
ದುರಹಂಕಾರ, ದುಶ್ಚಟ, ದುಷ್ಟ ಜನರ ಸಹವಾಸಗಳಿಂದ ದೂರವಿದ್ದವ ಮಾತ್ರ ತನ್ನ ಸಾಧನೆಯ ಶಿಖರವನ್ನು ನಿರಂತರವಾಗಿ ಏರಬಲ್ಲ ಎಂಬುದಕ್ಕೆ ಪಕ್ಕಾ ಉದಾಹರಣೆ ಅವರು. ಕೆಲವರು ಯಕ್ಷಗಾನ ಕ್ಷೇತ್ರವನ್ನು ತಮ್ಮ ಉಳಿವಿಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಾಘವೇಂದ್ರ ಆಚಾರ್ಯರನ್ನು ಯಕ್ಷಗಾನ ಕ್ಷೇತ್ರವೇ ಆಯ್ಕೆ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ನಾನು ಅವರ ರಕ್ತಸಂಬಂಧಿ ಅಲ್ಲ, ದಾಯಾದಿ ಅಲ್ಲ, ಊರಿನವನಲ್ಲ, ಜೊತೆಗೆ ಕಲಿತವನಲ್ಲ, ವ್ಯವಹಾರ ಸಂಬಂಧಿಯೂ ಅಲ್ಲ, ವೃತ್ತಿ ಬಂಧುವೂ ಅಲ್ಲ. ಆದರೂ ಅವರ ಅಸಾಮಾನ್ಯ ಪ್ರತಿಭೆಯನ್ನು ಮೆಚ್ಚಿದ ಒಬ್ಬ ಸಾಮಾನ್ಯ ಅಭಿಮಾನಿ ಮಾತ್ರ.
ಅವಸರದ ಬದುಕು ಅವರದ್ದು ಈಗ. ದಿನನಿತ್ಯ ಎಲ್ಲೆಲ್ಲೋ ಯಾವ್ಯಾವುದೋ ಊರಿನಲ್ಲಿ ಕಾರ್ಯಕ್ರಮ. ಕಡತೋಕಾ ಸುನೀಲ್ ಭಂಡಾರಿ ಅವರ ಸಾಥ್, ಸುಜನ್ ಹಾಲಾಡಿಯವರ ಚಂಡೆ ಅವರ ಭಾಗವತಿಕೆಗೆ ಮತ್ತಷ್ಟು ಮೆರಗು ತುಂಬುತ್ತದೆ. ಧ್ವನಿಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಸುಲಭ ಕಾರ್ಯವಲ್ಲ. ಆಸೆಯಾದರೂ ಭಜೆ ತಿನ್ನುವಂತಿಲ್ಲ.. ಆಸರಾದರೂ ತೀರಾ ತಂಪು ಕುಡಿಯುವಂತಿಲ್ಲ. ಭಾಗವತರ ಕೆಲಸವೇನು ಸುಲಭವೇ?! ರಾತ್ರಿಯೇ ಹಗಲು ಅವರಿಗೆ. ರಂಗರಾಜನಾಗಿ ಮಿಂಚುವ ರಾಘವೇಂದ್ರ ಆಚಾರ್ಯರ ಯೋಗಕ್ಕೆ ನಾವು ಕ್ಷೇಮವನ್ನು ಹಾರೈಸುತ್ತೇವೆ.
ನಾನು ನನ್ನ ಸಾಹಿತ್ಯಿಕ ಕೆಲಸ ಮಾಡುವಾಗೆಲ್ಲಾ ಅವರ ಗಾಯನವನ್ನು ಹಿನ್ನೆಲೆಯಲ್ಲಿ ಹಾಕಿಕೊಂಡು ಆಸ್ವಾದಿಸುತ್ತೇನೆ. ಕಾರಿನ ಪ್ರಯಾಣದಲ್ಲಂತೂ ರಾಘವೇಂದ್ರ ಆಚಾರ್ಯರು ಗಾಯನದ ಜೊತೆಗೆ ನನ್ನ ಜೊತೆಗೇ. ಪಾತ್ರಧಾರಿಗಳಿಗೆ ಉತ್ತೇಜನ ನೀಡುವ ಅವರ ಸ್ವರ ಮಾಧುರ್ಯ, ಭಾಗವತಿಕೆಯ ಶೈಲಿ, ಸ್ಪಷ್ಟ ಉಚ್ಛಾರ, ಏರು ಶೃತಿ ನಿಜಕ್ಕೂ ಸ್ಫೂರ್ತಿದಾಯಕ.
ದೊಡ್ಡವರನ್ನು ಹೊಗಳಿಯೇ ಮನುಷ್ಯ ದೊಡ್ಡವನಾಗುವುದಿಲ್ಲ. ದೊಡ್ಡ ಮನುಷ್ಯನಾಗುವುದಕ್ಕೆ ಮೊದಲಿನಿಂದಲೇ ದೊಡ್ಡವನಾಗಬೇಕೆಂಬ ನಿಯಮವೂ ಇಲ್ಲ. ದೊಡ್ಡತನ ಅವರ ಆರ್ಥಿಕ ಶ್ರೀಮಂತಿಕೆಯಲ್ಲಷ್ಟೇ ಗುರುತಿಸಲ್ಪಡುವದಿಲ್ಲ ಅವರ ನಡೆನುಡಿಗಳಿಂದ ಗುರುತಿಸಲ್ಪಡುತ್ತದೆ. ದೊಡ್ಡ ಹೆಸರು ಮಾಡುವವರೆಗೆ ಅಭಿಮಾನಿಗಳು ಬೇಕು. ಕೊನೆಗೆ ಅವರ ಜೊತೆಗೆ ಮಾತನಾಡುವ ಸೌಜನ್ಯವನ್ನೂ ತೋರುವುದಿಲ್ಲ ಕೆಲವರು. ಆದರೆ ರಾಘವೇಂದ್ರ ಆಚಾರ್ಯರ ಜೊತೆಗೆ ಬಹಳ ಮಾತಾಡಿದವನಲ್ಲ ನಾನು. ಅವರಿಗೆ ನಾನು ಇದುವರೆಗೂ ಕೊಟ್ಟಿದ್ದು ಬರೀ ಚಪ್ಪಾಳೆ ಸಿಳ್ಳೆಗಳು ಮಾತ್ರ. ನಿಮ್ಮ ಬಗ್ಗೆ ನನ್ನ ಅಕ್ಷರಗಳ ಗೌರವಾರ್ಪಣೆ ಮಾಡಬೇಕೆಂದು ಫೋನಾಯಿಸಿದಾಗಲೂ ಅದೇ ಸೌಜನ್ಯ ತೋರಿದ ರಾಘವೇಂದ್ರ ಆಚಾರ್ಯರಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಲೆಂಬುದೇ ಅಭಿಮಾನಿಗಳ ಹಾರೈಕೆ.
ಯುವಕರೆಲ್ಲಾ ಇಂಜನಿಯರೇ ಆಗಬೇಕೆಂದೋ ಡಾಕ್ಟರ್ ಆಗಬೇಕೆಂದೋ ಐ ಎ ಎಸ್, ಕೆ.ಎ.ಎಸ್ ಆಗಬೇಕೆಂದೋ ಕನಸು ಕಾಣುವುದರಲ್ಲಿ ತಪ್ಪಿಲ್ಲ. ರಾಜಧಾನಿಯ ಬಸ್ಸು ಹತ್ತಿದ ಮಾತ್ರಕ್ಕೆ ಎಲ್ಲಾ ಕನಸುಗಳೂ ನನಸಾಗುವುದೂ ಇಲ್ಲ. ಒಬ್ಬ ಕಲಾವಿದನಾಗಿಯೂ ತನ್ನ ಊರನ್ನೇ ರಾಜಧಾನಿಯ ಖ್ಯಾತಿಗೆ ಕೊಂಡೊಯ್ವ ತಾಕತ್ತು ಯುವಕರಿಗಿದೆ. ಶೃದ್ಧೆ ಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಊರಿನ ಹೆಸರನ್ನೂ ತಮ್ಮೊಂದಿಗೆ ರಾಜಧಾನಿ ತಲುಪಿಸುವ ಶೃದ್ಧೆ ಬೇಕು. ಬಡಗು ತೆಂಕು ಎರಡೂ ಶೈಲಿಯಲ್ಲೂ ಭಾಗವತಿಕೆ ಮಾಡಿ ಸೈ ಎನಿಸಿಕೊಳ್ಳುವ ನಿಮ್ಮಂಥವರು ನಮ್ಮ ಸಮಾಜದ ಸಂತೋಷವನ್ನು ಕಾಪಾಡುವುದಕ್ಕಾಗಿ ನೂರ್ಕಾಲ ಬದುಕಬೇಕು. ನಿಮ್ಮ ಜೊತೆ ನಮ್ಮವರು ನಿಲ್ಲಬೇಕು. ಅಭಿಮಾನದಿಂದ ಹರ್ಷಿಸಬೇಕು. ನಿಮ್ಮ ಗಾನ ಬದುಕಿನ ಬೇಸರದ ನೀರವ ಮೌನವನ್ನು ತೊಡೆಯುವುದಕ್ಕೊಂದು ದಿವ್ಯ ಔಷಧ ನನಗೆ. ನಿಮಗೆ ಗೆಲುವಾಗಲಿ, ಗೆಲುವಾಗುತ್ತಲೇ ಇರಲಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರಾಘವೇಂದ್ರ ಆಚಾರ್ಯರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.
*ಶ್ರೀಯುತ ರಾಘವೇಂದ್ರ ಆಚಾರ್ಯ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು*