ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

ಶ್ರೀ ಕೃಷ್ಣಮೂರ್ತಿ ಭಟ್ಟ (ಶಿವಾನಿ)

ನದಿಗಳು ಕೆಲವೊಂದು ಪೂರ್ವಾಭಿಮುಖವಾಗಿ ಹರಿಯುತ್ತವೆ. ಕೆಲವೊಂದು ಪಶ್ಚಿಮಾಭಿಮುಖವಾಗಿ ಹರಿಯುತ್ತವೆ. ಹಾಗಂತ ಅವು ಯಾಕೆ ಒಂದೇ ದಿಕ್ಕಿಗೆ ಹರಿಯುವುದಿಲ್ಲ ಎಂದು ಯಾರೂ ಪ್ರಶ್ನೆ ಮಾಡಬಾರದು. ಯಾಕೆಂದರೆ ಅವು ಇಳಿಜಾರಿದ್ದಲ್ಲಿ ತನ್ನಷ್ಟಕ್ಕೇ ತಾನು ಹರಿದುಕೊಂಡು ಹೋಗುತ್ತದೆ. ಅವುಗಳ ಮೇಲೆ ಯಾರ influence ಕೂಡ ನಡೆಯುವುದಿಲ್ಲ. ಅವುಗಳು ಎಷ್ಟಾದರೂ ದೂರ ಮನಸೋ ಇಚ್ಛೆ ಹರಿದು ಸಾಗರದಲ್ಲಿ ಲೀನವಾಗುತ್ತವೆ. ಸಾಗರಕ್ಕೂ ಈ ವಿಚಾರದಲ್ಲಿ ತಂಟೆ ತಕರಾರಿಲ್ಲ. ಯಾಕೆಂದರೆ ಯಾವ ಸಾಗರವೂ ನೀರಿಲ್ಲದೇ ಬತ್ತಿ ಹೋಗುವುದಿಲ್ಲ. ಈ ನದಿಗಳು ಹರಿಯುವಾಗ ಸಣ್ಣ ಪುಟ್ಟ ಹಳ್ಳ ಕೊಳ್ಳಗಳು ಈ ನದಿಯನ್ನೇ ಬಂದು ಸೇರಿಕೊಳ್ಳುತ್ತವೆ. ಅವು ಕೆಲವು ಬುಡದಲ್ಲೇ ಸೇರಿಕೊಂಡರೆ ಮತ್ತೆ ಕೆಲವು ಮಧ್ಯದಲ್ಲಿ ಸೇರಿ ಕೊಳ್ಳುತ್ತವೆ. ಕೆಲವು ಇನ್ನೇನು ಸಮುದ್ರ ಸೇರಬೇಕು…ಆಗ ಬಂದು ಕೂಡಿಕೊಳ್ಳುತ್ತವೆ. ಯಾರು ಯಾವಾಗ ಬೇಕಾದರೂ ಬಂದು ಸೇರಿಕೊಳ್ಳಲಿ ನದಿ ಬೇಸರಿಸುವುದಿಲ್ಲ. ಎಲ್ಲರನ್ನೂ ಒಟ್ಟಿಗೇ ಕೊಂಡೊಯ್ಯುತ್ತದೆ. ಕೊನೆಗೆ ನದಿಯ ಹೆಸರೂ ಸಾಗರ ಎಂಬ ಒಂದೇ ಶಬ್ದದಲ್ಲಿ ಲೀನವಾಗುತ್ತದೆ. ಹೆಸರು ಕಳೆದು ಹೋಗುತ್ತದೆಂದು ಗೊತ್ತಿದ್ದ ನದಿ ತನ್ನ ಪಾತ್ರಗಳನ್ನೆಲ್ಲಾ ಹಸಿರುಗೊಳಿಸಿ ಕೊನೆಗೂ ಹೆಸರಾಗಿ ಉಳಿಯುತ್ತದೆ. ಹಲವರ ಪಾಲಿಗೆ ಕೃಷ್ಣಾ ನದಿಯೇ ಆದ ಕೃಷ್ಣಮೂರ್ತಿ ಭಟ್ಟ ಶಿವಾನಿ ಇಂದಿನ ನನ್ನ ಅಕ್ಷರ ಅತಿಥಿ.

‌‌‌ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದವರಾದ ಕೃಷ್ಣಮೂರ್ತಿ ಭಟ್ಟರು ಶಿವಾನಿ ಬುಕ್ ಸ್ಟಾಲ್ ಹೊನ್ನಾವರ ಇದರ ಪ್ರೊಪ್ರೈಟರ್. ಶ್ರೀ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಶಾಲೆ ಖರ್ವಾ ಇದರ ಸಂಸ್ಥಾಪಕರು. ಎಂ.ಪಿ.ಇ ಸೊಸೈಟಿಯ ಗೌರವಾನ್ವಿತ ಸದಸ್ಯರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸರಳ ಸಜ್ಜನಿಕೆಯ ಸ್ನೇಹಜೀವಿ. ಹಲವರಿಗೆ ಅವರವರ ಊರು ಅವರ identity ಆದರೆ ಅವರಿಗೆ ಅವರ ಅಂಗಡಿಯ ಹೆಸರೇ identity. ಶಿವಾನಿ ಹೆಸರಿನಲ್ಲಿ ಹೊನ್ನಾವರ ಮತ್ತು ಶಿರಸಿಯಲ್ಲಿ ಪುಸ್ತಕ ಮಳಿಗೆಗಳಿವೆ. ಅವೆರಡನ್ನೂ ಅತ್ಯಂತ ಸುವ್ಯವಸ್ಥಿತವಾಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದವರು ಕೃಷ್ಣಮೂರ್ತಿ ಭಟ್ಟರು. ಇದೀಗ ಶಿವಾನಿ ನಮ್ಮ ಜಿಲ್ಲೆಯ ಜನರೆಲ್ಲರ ಬಾಯಲ್ಲೂ ಜನಜನಿತ. ಕೃಷ್ಣಮೂರ್ತಿ ಭಟ್ಟರು ಶಿವಾನಿ ಕೃಷ್ಣಮೂರ್ತಿ ಭಟ್ಟ ಎಂದೇ ಗುರುತಿಸಲ್ಪಡುವಷ್ಟು ಅದು ಖ್ಯಾತಿ ಪಡೆದಿದೆ.

RELATED ARTICLES  ಪ್ರಾಚೀನ ಕಾಲದ ಪ್ರಥಮ ಚಿಕಿತ್ಸೆ ಈಗಲೂ ಸೂಕ್ತ..!

ಮೂಲತಃ ಪ್ರಖ್ಯಾತ ವೈದಿಕ ಕುಟುಂಬದವರು ಅವರು. ಕೃಷ್ಣಮೂರ್ತಿ ಭಟ್ಟರ ತಂದೆ ಕೊಡ್ಲಮನೆ ರಾಮಚಂದ್ರ ಭಟ್ಟರು ಹಲವು ಕುಟುಂಬದವರಿಗೆ ಕುಲಪುರೋಹಿತರು. ಅಪಾರ ಶಿಷ್ಯ ವರ್ಗ ಅವರಿಗಿದೆ. ಹೀಗಿದ್ದೂ ಮಗನಿಗೆ ಬೆಂಗಾವಲಾಗಿ ನಿಲ್ಲುವ ಅವರು ತಮ್ಮ ಇಳಿ ವಯಸ್ಸಿನಲ್ಲಿ ಕೂಡ ದಣಿವರಿಯದಂತೆ ಕ್ರಿಯಾಶೀಲರಾಗಿರುತ್ತಾರೆ. ಬಿಡುವಾದಾಗ ಸ್ವತಃ ಶಿವಾನಿಯಲ್ಲಿದ್ದು ವ್ಯವಹಾರದಲ್ಲಿ ಸಕ್ರಿಯವಾಗಿ ಸಹಾಯ ಮಾಡುತ್ತಾರೆ.
ಶಿವಾನಿ ಪ್ರಾರಂಭವಾಗಿ ಸರಿಸುಮಾರು ಎರಡು ದಶಕಗಳೇ ಸಂದು ಹೋದವು. ಒಂದು ಕಾಲಕ್ಕೆ ನಮ್ಮವರ ಹತ್ತಿರ ಈ ವ್ಯಾಪಾರ ವ್ಯವಹಾರ ಸಾಧ್ಯವಾದುದಲ್ಲ. ಅದೇನಿದ್ದರೂ ಬೇರೆಯವರಿಗೇ ಎಂಬ ವಾದವಿತ್ತು. ಮಾಡಿದವರೂ ಅನೇಕರು ಕಾಕತಾಳೀಯವೆಂಬಂತೆ ದಿವಾಳಿಯಾದಾಗ ಈ ವಾದವೇ ಸಿದ್ಧಾಂತ ಎಂಬಂತೆ ಕಂಡಿದ್ದು ನನಗೆ. ಆದರೆ ಕೃಷ್ಣಮೂರ್ತಿ ಭಟ್ಟರು ಈ ಅಪವಾದವನ್ನು ಅಳಿಸಿ ಹಾಕಿದರು. ಶಿವಾನಿ ಹೆಸರಿನಲ್ಲಿ ಮೊದಲೊಂದು ನೋಟ್ ಬುಕ್ ಮಳಿಗೆ ಹಾಕಿದವರು..ಕೊನೆಗೆ ಪುಸ್ತಕ ಮಳಿಗೆ, ಕಂಪ್ಯೂಟರ್ ಮತ್ತು ಜೆರಾಕ್ಸ್ ಸೆಂಟರ್, ಮುದ್ರಣಾಲಯ, ಹೀಗೆ ತಮ್ಮ ವ್ಯವಹಾರವನ್ನು ಸಾಕಷ್ಟು ವಿಸ್ತರಿಸಿಕೊಂಡರು. ಇಂದು ಶಿವಾನಿಯಲ್ಲಿ ಏನುಂಟು?! ಏನಿಲ್ಲ?! ಇದು ಇಂದು ದಿನದ ಬಹುತೇಕ ಸಮಯದಲ್ಲಿ ಕಿಕ್ಕಿರಿದು ಜನ ತುಂಬಿರುವ ಒಂದು ಮಳಿಗೆ. ಹಲವಾರು ಜನ ಇಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಸುಬ್ರಹ್ಮಣ್ಯ ಬಂಡಾರಿಯವರಿರಬಹುದು.. ರಾಘು ಇರಬಹುದು… ಬಂಗಾರಮಕ್ಕಿ ಗಣಪತಿ ಇರಬಹುದು… ಭಾಗವತರಿರಬಹುದು….ಹೀಗೆ ಹತ್ತು ಹಲವಾರು ಜನ ಇಲ್ಲಿ ಕೃಷ್ಣಮೂರ್ತಿ ಭಟ್ಟರಿರದಿದ್ದರೂ ಒಂದೇ ಒಂದು ಪೈಸಾ ಅವ್ಯವಹಾರ ನಡೆಯದಂತೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾರೆಂದರೆ ಅದು ಕೃಷ್ಣಮೂರ್ತಿ ಭಟ್ಟರ ಮೇಲೆ ಅವರಿಗಿರುವ ಗೌರವವನ್ನು ಸೂಚಿಸುತ್ತದೆ. ಅದು ಕೃಷ್ಣಮೂರ್ತಿ ಭಟ್ಟರ ಕಾರ್ಯಕ್ಷಮತೆಗೂ ಸಾಕ್ಷಿ.
‌‌‌ ಶಿವಾನಿ ಶಿಕ್ಷಕ ಮಿತ್ರ ಇದ್ದಂತೆ. ಇದು ವಿದ್ಯಾರ್ಥಿ ಮಿತ್ರವೂ ಹೌದು. ಇಲ್ಲಿ ಕ್ರೀಡಾ ಸಾಮಗ್ರಿಗಳು, ಪುಸ್ತಕ, ಲೇಖನ ಸಾಮಗ್ರಿ, ಪೀಠೋಪಕರಣಗಳು, ಪಾಠೋಪಕರಣಗಳು, ಹೀಗೆ ಪ್ರತಿಯೊಂದೂ ಸಿಗುತ್ತವೆ. ಗುಣಮಟ್ಟದ ಜೊತೆಗೆ ಜನರ ಕೈಗೆಟಕುವ ದರದಲ್ಲಿ ಇವು ಸಿಗುವುದರಿಂದಲೇ ಇದು ಬಹುಬೇಗ ಪ್ರಸಿದ್ಧಿಗೆ ಬಂದದ್ದು. ಇದರ ಜೊತೆ ಜೊತೆಗೆ ಕೃಷ್ಣಮೂರ್ತಿ ಭಟ್ಟರು ಶ್ರೀ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಶಾಲೆಯನ್ನು ಕೊಳೆಗದ್ದೆಯಲ್ಲಿ ತೆರೆದು ಅನೇಕ ವಿದ್ಯಾಕಾಂಕ್ಷಿಗಳಿಗೆ ನೆರವಾದರು. ಕೆಲವೇ ಕೆಲವು ವರ್ಷಗಳಲ್ಲಿ ಇದು ತಾಲೂಕಿನ ಮುಂಚೂಣಿ ವಿದ್ಯಾಸಂಸ್ಥೆಯಲ್ಲಿ ಒಂದಾಗಿ ಇದೀಗ ಎಲ್ ಕೆ ಜಿಯಿಂದ ಎಸ್ ಎಸ್ ಎಲ್ ಸಿ ಯವರೆಗೆ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಾಗಿದೆ. ಇಷ್ಟಲ್ಲದೇ ಎಂ.ಪಿ.ಇ ಸೊಸೈಟಿಯ ಒಬ್ಬ ಗೌರವಾನ್ವಿತ ನಿರ್ದೇಶಕರಾಗಿ ಕೂಡ ಕಾರ್ಯನಿರ್ವಹಿಸುವ ಕೃಷ್ಣಮೂರ್ತಿ ಭಟ್ಟರು ಮೇರು ವ್ಯಕ್ತಿತ್ವದ ಜೊತೆಗೆ ಸರಳ ಸಜ್ಜನಿಕೆಯನ್ನು ಬಿಟ್ಟುಕೊಡದೆ ಬದುಕುತ್ತಾರೆ. ಎಷ್ಟೇ ಅವಸರದಲ್ಲಿದ್ದರೂ ಮುಗುಳುನಗು ತೋರುತ್ತಾ ಸ್ವಾಗತಿಸುತ್ತಾರೆ. ಬಂದವರನ್ನು ಅತ್ಯಂತ ಗೌರವದಿಂದ ಮಾತನಾಡಿಸುತ್ತಾ ವಿನಯಪೂರ್ವಕವಾಗಿ ವ್ಯವಹರಿಸುತ್ತಾರೆ.
ನನ್ನ ಸಾಹಿತ್ಯಿಕ ಚಟುವಟಿಕೆಗಳನ್ನು ಪ್ರಾರಂಭದಿಂದಲೂ ಪ್ರೋತ್ಸಾಹಿಸಿಕೊಂಡು ಬಂದ ಕೃಷ್ಣಮೂರ್ತಿ ದಂಪತಿಗಳು ಶಿವಾನಿಯ ಮೂಲಕ ನಾಡಿನ ಹಲವರು ನನ್ನ ಪುಸ್ತಕಗಳನ್ನು ಓದಲು ಅವಕಾಶ ಕಲ್ಪಿಸಿದರು. ಇಂದಿಗೂ ನನ್ನನ್ನು ಪ್ರೀತ್ಯಾದರಗಳಿಂದ ನಡೆಸಿಕೊಳ್ಳುವ ಅವರು ಅಷ್ಟು ಪ್ರಭಾವಿ ವ್ಯಕ್ತಿಗಳಾದರೂ ನನ್ನಂತಹ ಕಿರಿಯನನ್ನೂ ಬಹುವಚನದಿಂದಲೇ ಸಂಬೋಧಿಸುತ್ತಾರೆ. ನಾನು ಅವರ ಬಳಿ ಹೋದಾಗಲೆಲ್ಲಾ ಕುಳ್ಳಿರಿಸಿ ಸೌಜನ್ಯದಿಂದ ವಿಚಾರಿಸುತ್ತಾರೆ. ಕೃಷ್ಣಮೂರ್ತಿ ಭಟ್ಟರ ಬಳಿ ಅಗಾಧ ಅನುಭವವಿದೆ. ಅದನ್ನು ಸುಸ್ಪಷ್ಟ ಭಾಷೆಯಲ್ಲಿ ವಿವರಿಸುವ ಸಾಮರ್ಥ್ಯವನ್ನು ಕೂಡ ಅವರು ಹೊಂದಿದ್ದಾರೆ. ಅದರೂ ಅವರು ಹೇಳುವುದಕ್ಕಿಂತಲೂ ಹೆಚ್ಚು ಸಮಯವನ್ನು ಕೇಳುವುದಕ್ಕೆ ನೀಡುತ್ತಾರೆ. ಅವರ ಬಳಿ ನೂರಾರು ಬಳಿ ಮಾತನಾಡಿದ ಸಂದರ್ಭದಲ್ಲೂ ಯಾರ ಬಗೆಗೂ negative comment ಕೊಟ್ಟ ಉದಾಹರಣೆ ಇಲ್ಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‌‌‌‌‌ ಕೃಷ್ಣಮೂರ್ತಿ ಭಟ್ಟರು ನಿಗರ್ವಿ ಸ್ನೇಹಜೀವಿ. ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳದ ಸಮಾಜಮುಖಿ. ನಾನು ಅನೇಕ ವಿಷಯಗಳಲ್ಲಿ ಅವರಿಂದ ಪ್ರಭಾವಗೊಂಡಿದ್ದೇನೆ. ಅವರನ್ನು ನೋಡಿದಾಗೆಲ್ಲಾ ಸ್ಫೂರ್ತಿಗೊಳ್ಳುತ್ತೇನೆ. ಸುಖೀ ಸಮಾಧಾನಿ ಕುಟುಂಬ ಅವರದ್ದು. ಮಗ, ಮಗಳು ಮಡದಿ, ತಂದೆ, ತಾಯಿ ಸುಸಂಸ್ಕೃತ ಕುಟುಂಬಕ್ಕೆ ಒಂದು ನೈಜ ಉದಾಹರಣೆ ನಮ್ಮ ಬಳಿಯೇ ಇದೆ.

ನಮ್ಮ ನಡುವೆಯೇ ಸಾಧಕರಿದ್ದಾರೆ. ಸಾಧಿಸುವ ಛಲವಿರುವ ಮನಸ್ಸುಗಳಿವೆ. ಪ್ರಚಾರ ಬಯಸದ ಸಾದಾ ಸೀದಾ ಜನರಿದ್ದಾರೆ. ತಾವೂ ಬದುಕಿ ಬದುಕಾಗುವ ವ್ಯಕ್ತಿತ್ವಗಳಿವೆ. ಬೆರೆಯುವ ಕೃಷ್ಣಮೂರ್ತಿ ಭಟ್ಟರ ಬಗ್ಗೆ ಇಷ್ಟಾದರೂ ಬರೆಯಬೇಕೆನಿಸಿತು. ಅವರದ್ದು ಬರೀ business mind ಅಲ್ಲ. Sharp mind soft heart ಇರುವ ಕೃಷ್ಣಮೂರ್ತಿ ಭಟ್ಟ ನನ್ನ ಬದುಕಿನ ಪುಟದ ಶಾಶ್ವತ ಬಣ್ಣ.

ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.

*ಕೃಷ್ಣಮೂರ್ತಿ ಭಟ್ಟ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು*