ನನ್ನ ಒಂದು ಲೇಖನ ಇಷ್ಟು ಪರಿಣಾಮ ಬೀರಬಹುದು ಎಂದು ನಾನದನು ಬರೆಯುವಾಗ ನಿರೀಕ್ಷೆ ಮಾಡಿರಲಿಲ್ಲ. ನನ್ನೂರಿನ ಮಗಳು ಪುಟಾಣಿ ರಿತಿ ಪ್ರಸಾದ ಜೈನ್ ರಕ್ತದ ಕ್ಯಾನ್ಸರ್ ಗೆ ಸಿಲುಕಿ ಮಣಿಪಾಲ್ ಆಸ್ಪತ್ರೆ ಸೇರಿದ ವಿಷಯ ತಿಳಿದು ಪುರಾಣದ ಮಾರ್ಕಾಂಡೇಯನಂತೆ ಯಮನನ್ನೇ ಗೆದ್ದು ಬಾ ಎಂದು ಹಾರೈಸಿ ಬರೆದ ಲೇಖನ ಪ್ರಕಟವಾದ ದಿನವೇ ಅದನ್ನು ಓದಿದ ಕುಮಟಾ ಭಾರತೀಯ ಜನತಾ ಪಾರ್ಟಿಯ ಮಾಜಿ ತಾಲೂಕಾ  ಅಧ್ಯಕ್ಷರಾದ ಕುಮಾರಮಾರ್ಕಾಂಡೆ ಯವರು ನನಗೆ ಪೋನಾಯಿಸಿ ಪೋನಾಯಿಸಿ ” ಏನ್ರೋ ನನ್ನ ಹೆಸರೂ ಬರ್ದಿದ್ರಿ ಅಂತ ತಮಾಷೆಮಾಡಿ ಪ್ರಸಾದನ ಮಗಳಿಗೆ ಬಂದ ಕಷ್ಟ ತಿಳಿದುಕೊಂಡು ಬಹಳ ಪಶ್ಚಾತ್ತಾಪ ಪಟ್ಟರು ಹಾಗೂ ಪ್ರಸಾದನಿಗೆ ತನ್ನಿಂದ ಆದ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದರು ಅದೇ ದಿನ ಹಲಾವರು ಮಂದಿ ಫೇಸ್ಬುಕ್ ಮೂಲಕ ಪ್ರಸಾದನಿಗೆ ಹಣದ ಸಹಾಯ ಮಾಡುವ ಭರವಸೆ ನೀಡಿದ್ದರು .ಇವರುಗಳಲ್ಲಿ ಹೆಚ್ಚಿನವರೆಲ್ಲ ನನ್ನ ಪರಿಚಿತರು ಹಾಗೂ ನಮ್ಮೂರಿನವರೇ ಆಗಿದ್ದಾರೆ.

ಮೊನ್ನೆ ಭಟ್ಕಳದ ಮುರುಡೇಶ್ವರ ದಿಂದ ಮಂಕಾಳು ವೈದ್ಯರ ಅಭಿಮಾನಿಯೊಬ್ಬರು ಪೋನಾಯಿಸಿದ್ದರು.
ಖುದ್ದು ನನ್ನ ಪರಿಚಯ ಇಲ್ಲದಿದ್ದರೂ ಪರಿಚಿತರಂತೇ ಆತ್ಮೀಯವಾಗಿ ಮಾತನಾಡಿಸಿ ತಮ್ಮ ನಾಯಕರಾದ ಮಾಜಿ ಶಾಸಕ ಮಂಕಾಳು ವೈದ್ಯರ ಜನ್ಮದಿನ ಜೂನ್ ೫ ರಂದು ಇದೆ.ಕೊರೊನಾ ಸಂಕಟದ ಕಾರಣ ಯಾವುದೇ ಸಂಭ್ರಮಾಚರಣೆಗಳನ್ನು ನೆಡೆಸಬಾರದು ಎಂದು ಮಂಕಾಳು ವೈದ್ಯರು ತಾಕೀತು ಮಾಡಿದ್ದಾರೆ.ಅವರ ಅನುಯಾಯಿಗಳು ಅವರ ಮಾತನ್ನು ಮೀರುವುದಿಲ್ಲ.ಆದರೆ ಆ ದಿವಸ ಅವರು ಬಡಬಗ್ಗರಿಗೆ ಸಹಾಯ ಮಾಡುವ ಮೂಲಕ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಾರೆ.

ಕಾರಣ ರಿತಿಯ ಕುರಿತು ನಿಮ್ಮ ಲೇಖನ ಓದಿದ ಮೇಲೆ ನಮಗೂ ಸಹಾಯ ಮಾಡುವ ಮನಸ್ಸಾಗುತ್ತಿದೆ.ಮಂಕಾಳು ವೈದ್ಯರ ಜನ್ಮದಿನದ ಪ್ರಯುಕ್ತ ನಾವು ಒಂದು ಉತ್ತಮ ಮೊತ್ತವನ್ನು ನಿಮ್ಮ ಬಳಿ ಕೊಡುತ್ತೇವೆ ಆದಿನ ನಿಮ್ಮನ್ನು ಎಲ್ಲಿ ಭೇಟಿ ಆಗಲು ಬರಬೇಕು ಅಲ್ಲಿಗೇ ಬರುತ್ತೇವೆ ಎಂದರು.ನಾನು ದಯವಿಟ್ಟು ನೀವು ನನ್ನ ಕಾಣಲು ಅಷ್ಟುದೂರದಿಂದ ಬರುವುದು ಬೇಡ ಪರ್ಯಾಯ ದಾರಿಹುಡುಕೋಣ ಯಾವುದೂ ಮತ್ತೆ ನಿಮಗೆ ತಿಳಿಸುವೆ ಎಂದು ಹೇಳಿದ್ದೆ.ಈ ವಿಷಯವನ್ನು ಕುಮಾರ ಮಾರ್ಕಂಡೆ ಅವರ ಬಳಿ ಪ್ರಸ್ತಾಪಿಸಿದಾಗ ಅವರು ನಾವೇ ಖುದ್ದಾಗಿ ಹೋಗಿಬರೋಣ ಒಳ್ಳೆಯ ಕೆಲಸಕ್ಕೆ ಎಂದು ತನ್ನ ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೋಗುವುದಾಗಿ ಹೇಳಿದರು ಇಂದು ಜೂನ್ ೫ ರಂದು ಗೋಕರ್ಣ ಮಹಾಬಲೇಶ್ವರನ ಸನ್ನಿಧಿಯಿಂದ ಆರಂಭಿಸಿ ಮುರುಡೇಶ್ವರ ಸನ್ನಿಧಿಯ ತನಕದ ಪ್ರಯಾಣ ಬೆಳೆಸಿದೆವು.ಮುಂಜಾನೆ ಮನೆಯಿಂದ ಹೊರಟಾಗ ಬಾಡ ಕಾಂಚಿಕಾಂಬಾ ದೇವಸ್ಥಾನದ ಎದುರು ರಸ್ತೆಯಲ್ಲಿ ತಾಲೂಕಾ ಪಂಚಾಯತದ ಸದಸ್ಯರಾದ ಜಗನ್ನಾಥ ನಾಯ್ಕರು ನನ್ನನ್ನು ತಡೆದು ನಿಲ್ಲಿಸಿ ರಿತಿಗೆ ತಲುಪಿಸಿ ಎಂದು ಧನಸಹಾಯ ಮಾಡಿದರು.ಬೋಣಿಗೆಯೇ ಬಹಳ ಶುಭಕರ ಎನ್ನುವಂತೆ ಗಿಬ್ ಸರ್ಕಲ ಬಳಿ ಅಪರೂಪಕ್ಕೆ ದೊರೆತ ಉಡದಂಗಿ ಸುಬ್ರಹ್ಮಣ್ಯ ನನ್ನನ್ನು ಮಾತಾಡಿಸಿ ನಾನು ಹೊರಟು ನಿಂತ ವಿಷಯ ತಿಳಿದು ರಿತಿಗೆ ಸಹಾಯ ಆಗಲಿ ಎಂದು ನನ್ನೆದುರೇ ಪ್ರಸಾದನ ಬ್ಯಾಂಕ ಖಾತೆಗೆ ಎರಡು ಸಾವಿರ ರೂಪಾಯಿ ಸ್ಥಳದಲ್ಲಿಯೇ ವರ್ಗಾಯಿಸಿದನು.ಅಂತೂ ಅಲ್ಲಿಂದ ಕಾರಿನಲ್ಲಿ ಮುರುಡೇಶ್ವರದ ಮಂಕಾಳು ವೈದ್ಯರ ಮನೆ ತಲುಪುವಾಗ ಮುಂಜಾನೆ ಹನ್ನೊಂದು ಗಂಟೆ ಕಳೆದಿತ್ತು.ಮಾಜಿ ಶಾಸಕರ ಮನೆಯಲ್ಲಿ ಕೆಲವೇ ಮಂದಿ ಅವರ ಅಭಿಮಾನಿ ಯುವಕರು ಇದ್ದರು.ನಾನು ಹಾಗೂ ಮಾರ್ಕಂಡೆ ಬಂದಿದ್ದನ್ನು ಗಮನಿಸಿದ ವೈದ್ಯರು ಹೊರಗಡೆ ಬಂದು ನಮ್ಮನ್ನು ಬರಮಾಡಿ ಕೊಂಡು ಕುಳ್ಳಿರಿಸಿಕೊಂಡು ಮಾತನಾಡಿಸಿದರು. ಅವರು ಕುಳಿತ ಭಂಗಿಯನ್ನು ಗಮನಿಸಿದಾಗ ಮಾಜಿ ಶಾಸಕರಾದ ದಿವಂಗತ ಮೋಹನ ಶೆಟ್ಟರ ನೆನಪಾದದ್ದು ಸುಳ್ಳಲ್ಲ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಏನಾದರೂ ವಿಶೇಷ ಹಬ್ಬ ಹರಿದಿನ ಬಂದಾಗ ಮನೆಬಾಗಿಲಿಗೆ ಬಂದವರಿಗೆ ಹಣನೀಡಲು ತಮ್ಮ ಬಳಿ ಹಣದ ಕಂತೆ ಇಟ್ಟುಕೊಂಡು ರಸ್ತೆಯಲ್ಲಿ ಹೋಗುವವರನ್ನು ಕೈಬೀಸಿ ಕರೆದು ಕೂಹೂ ಹಾಕಿ ಅವರಿಂದಲೇ ಕವಳ ಪಡೆದು ಹಾಸ್ಯದ ಚಟಾಕಿ ಹಾರಿಸುವುದು ಮೋಹನ ಶೆಟ್ಟರ ವಿಶೇಷ ಗುಣವಾಗಿತ್ತು.ಇದನ್ನು ಒಂದೆರಡುಬಾರಿ ಸ್ವತಃ ಅನುಭವಿಸಿ ಕಂಡವನು ನಾನು.ಮಂಕಾಳು ವೈದ್ಯರೂ ಕೂಡ ಭಟ್ಕಳದ ಜನತೆಯ ಪಾಲಿನ ದಾನಶೂರ ಎಂದೇ ಅವರ ಅಭಿಮಾನಿ ವಲಯದವರು ಗುಣಗಾನ ಮಾಡುತ್ತಾರೆ .

ಯಾರ ಹೃದಯದಲ್ಲಿ ಪ್ರೀತಿ,ವಿಶ್ವಾಸ, ದಯೆ,ಕರುಣೆ, ಅನುಕಂಪಗಳು ತುಂಬಿರುತ್ತದೆಯೊ ಅವರ ಹೃದಯದಲ್ಲಿ ಮಾತ್ರವಲ್ಲ ಅವರ ಮನೆಯಲ್ಲಿ ದೇವರು ನೆಲೆನಿಲ್ಲುತ್ತಾನೆ. ದೇವರನ್ನು ಕಾಣಬೇಕು ಎಂದು ಹಂಬಲಿಸುವರು ತೀರ್ಥಯಾತ್ರೆಗಳ ಒದ್ದಾಟದಿಂದ ಬಳಲಬೇಕಾದದ್ದು ಇಲ್ಲ. ಯಾರು ಹಸಿದವನಿಗೆ ಅನ್ನ ,ವಸ್ತ್ರ ಹೀನನಿಗೆ ವಸ್ತ್ರ, ರೋಗದಿಂದ ಬಳಲುವನಿಗೆ ಔಷಧಿ, ಜ್ಞಾನ ಪಿಪಾಸುವಿಗೆ ವಿದ್ಯಾ ದಾನದ ವ್ಯವಸ್ಥೆ ಮಾಡುತ್ತಾನೆಯೊ ಅಂತವರಿಗೆ ಭಗವಂತನು ಒಲಿದು ಅವರ ಬಳಿಗೆ ಬಂದು ಅನುಗ್ರಹ ಮಾಡುತ್ತಾನೆ.ಎಂಬುದು ಸತ್ಯ ಈ ಸತ್ಯ ನಿದರ್ಶನ ಆಗುವುದು ಇಡಿ ಮಂಕಾಳ ವೈದ್ಯರ ಜೀವನವನ್ನು ನೋಡಿದಾಗ ತಿಳಿಯುತ್ತದೆ.

ಒಂದು ಕಾಲದಲ್ಲಿ ಉಣ್ಣುವುದಕ್ಕೂ ಹಾಕಿಕೊಳ್ಳುವುದಕ್ಕೂ ಬಟ್ಟೆ ಸಹ ಇಲ್ಲದ ಅತ್ಯಂತ ಕಷ್ಟದ ಜೀವನ ನೆಡೆಸುತ್ತಿದ್ದರು, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಇದ್ದ ಹಾಗೆ ತನ್ನ ದುಡಿಮೆಯ ಒಂದು ಭಾಗವನ್ನು ಬಡವರಿಗೆ,ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದರು ಇಂದು ಮಂಕಾಳ ವೈದ್ಯರು ಸಾಕಷ್ಟು ಜನಕ್ಕೆ ಉದ್ಯೋಗ ಹಾಗೂ ಅನಾರೋಗ್ಯ ಪಿಡಿತರಿಗೆ,ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾರೆ ಅಂತಾದರೆ ದೇವರ ಆಶೀರ್ವಾದವೇ ಕಾರಣ.ಎಂಬುದು ಅವರ ಅನುಯಾಯಿಗಳು ಆಡುವ ಮಾತಾಗಿದೆ.

RELATED ARTICLES  ಚಂಡಮಾರುತದ ಎಫೆಕ್ಟ್ : ಹಲವೆಡೆ ಮಳೆ.

ಮಂಕಾಳು ವೈದ್ಯರು ಉಭಯ ಕುಶಲೋಪರಿಯ ಮಾತುಗಳನ್ನಾಡಿದರು.ನಡುವೆ ದೂರವಾಣಿಯ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿತ್ತು.ಹಾಗಾಗಿ ಮಾತನಾಡಿಸಲು ಸಮಯ ಇರದಿದ್ದರು ಒಂದು ತಾಸಿನವರೆಗೂ ಜೊತೆಗಿದ್ದೆವು.ಕುಮಾರ ಮಾರ್ಕಂಡೆ ಅವರನ್ನು ಚೆನ್ನಾಗಿಪರಿಚಯಿಸುವ ಅವರ ಪಾಲಿಗೆ ನಾನು ಹೊಸಬ.ಅವರ ಮನೆಯಿಂದಲೇ ಮಣಿಪಾಲದ ಆಸ್ಪತ್ರೆಯಲ್ಲಿರುವ ರಿತಿಯ ತಂದೆಗೆ ಪೋನಾಯಿಸಿದೆ.ಅವಳ ಆರೋಗ್ಯದ ಬಗ್ಗೆ ಕೇಳಿದೆ ಒಂದು ತಿಂಗಳು ರಿತಿ ಆಯ್ ಸಿ ಯೂ ನಲ್ಲಿಯೇ ಇರಬೇಕು ಅವಳ ತಾಯಿಮಾತ್ರ ಒಳಗಡೆ ಇರುತ್ತಾಳೆ. ಅವಳೂ ಕೂಡ ಒಂದು ತಿಂಗಳು ಹೊರ ಬರುವ ಹಾಗಿಲ್ಲ.ನಾನೂ ಮಗಳ ಮುಖ ನೋಡಲಾಗುತ್ತಿಲ್ಲ ಅವಕಾಶ ಇಲ್ಲ ಎಂದು ಹೇಳಿದ .ವಿಷಯ ತಿಳಿದು ಮನಸ್ಸು ಭಾರವಾಯಿತು.
ಮಂಕಾಳು ವೈದ್ಯರು ನಾಗೇಶ ಅವರ ಮೂಲಕ ಇಪ್ಪತ್ತು ಸಾವಿರ ರೂಪಾಯಿಯನ್ನು ನನಗೆ ಕೊಡಿಸಿದರು.ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ.ಹಣ ನೀಡಿದಕ್ಕಾಗಿ ಒಂದು ಫಟೋ ತೆಗೆಸಿಕೋಳ್ಳಣ ಎಂದು ವಿನಂತಿಸಿದೆವು .ಸುತಾರಾಂ ಒಪ್ಪಲಿಲ್ಲ.ನೀವು ಹುಡುಗಿಗೆ ಚಿಕಿತ್ಸೆ ಕೊಡಿಸಿ ಅವಳು ಆರಾಂ ಆಗಿ ಬಂದ ನಂತರ ತಾನೇ ಖುದ್ದಾಗಿ ಅವಳಿದ್ದಲಿಗೇ ಬಂದು ಅವಳ ಜೊತೆಯೇ ಪೋಟೋ ತೆಗೆಸಿಕೊಳ್ಳುವೆ ಎಂದು ಹೇಳಿದರು.ನಿಜಕ್ಕೂ ಇದು ಅಭಿಮಾನದ ಸಂಗತಿ ರಿತಿ ಅವರ ಮತಕ್ಷೇತ್ರದ ವ್ಯಾಪ್ತಿಗೊಳಪಟ್ಟ ಹುಡುಗಿ ಅಲ್ಲ.ಅವರ ಬಳಿ ಸಹಾಯವನ್ನು ಖುದ್ದಾಗಿ ಯಾಚಿಸಿರಲಿಲ್ಲ ಅವರೇ ಕೇಳಿ ತಿಳಿದು ನೀಡಿದ ನೆರವು ಇದು. ಅದೂ ಪೋಟೋ ಹೊಡೆಸಿಕೊಳ್ಳದೇ ! ಅವರ ವಿಶಾಲ ಮನಸ್ಸಿನ ಸಹಾಯಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಕಾರಿನಲ್ಲಿ ಕುಮಟಾದ‌ಕಡೆ ಹೊರಡುವ ಮುನ್ನ ಮುರುಡೇಶ್ವರ ದೇವಾಲಯದ ಎದುರು ಹೋಗಿ ಕಾರಿನೊಳಗಿಂದಲೇ ಮುಚ್ಚಿರುವ ದೇಗುಲದ ಹೆಬ್ಬಾಗಿಲಿಗೆ ಕೈಮುಗಿದೆವು.ಅಲ್ಲಿ ಮುರುಡೇಶ್ವರ ಕಾಣಲಿಲ್ಲ ಹೇಗೆ ಕಂಡಾನು ಹೇಳಿ?
ಅವನಾಗಲೇ ರಿತಿಯ ನೆರವಿಗೆಂದು ಮಂಕಾಳು ವೈದರ ಮನದಲ್ಲಿಯೇ ಕಾಣಿಸಿಕೊಂಡಾಗ…

ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು
ಪರಿಣಾಮ ವಕ್ಕು ಪದವಕ್ಕು/ಕೈಲಾಸ
ನೆರಮನೆಯೇ ಅಕ್ಕು ಸರ್ವಜ್ಞ.

ಮಂಕಾಳು ವೈದ್ಯರಿಗೆ ದೇವರು ಒಳಿತನ್ನು ಮಾಡಲಿ.

ನಮಸ್ಕಾರ.

ಚಿದಾನಂದ ಭಂಡಾರಿ ಕಾಗಾಲ.

(ಆತ್ಮೀಯರೇ ಈ ವರದಿ ಓದಿದ ಬಳಿಕ ಯಾವುದೇ ಮೆಚ್ಚುಗೆ ಬೇಡ. ಆದರೆ ವರದಿಯನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಇದು ಅನ್ಯರಿಗೆ ಪ್ರೇರಣೆಯಾದರೆ ಅದೇ ನೀವು ರಿತಿಗೆ ಮಾಡುವ ಸಹಕಾರ.)