ಕುಮಟಾ: ರೋಟರಿ ಕ್ಲಬ್ ಆಶ್ರಯದಲ್ಲಿ ಇಲ್ಲಿಯ ರಾಷ್ಟೀಯ ಹೆದ್ದಾರಿ ಹತ್ತಿರದಲ್ಲಿರುವ ನಾದಶ್ರೀ ಕಲಾಕೇಂದ್ರದಲ್ಲಿ ಮರುನಿರ್ಮಿಸಿದ ಹೊರಾಂಗಣದಲ್ಲಿ ಹೂ-ಹಣ್ಣು-ಔ಼ಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಪಟ್ಟಣ ಪ್ರದೇಶದಲ್ಲಿ ಗಿಡನೆಡುವ ಮೂಲಕ ಶುದ್ಧಗಾಳಿ, ಪರಿಸರ ಸೌಂದರ್ಯ, ಪಶು-ಪಕ್ಷಿಗಳಿಗೆ ಆಹಾರ, ಆಶ್ರಯ ಹೀಗೆ ವಿಭಿನ್ನ ಆಶಯಗಳೊಂದಿಗೆ, ಮುಖ್ಯವಾಗಿ ಯುವಪೀಳಿಗೆ ಗಿಡಿ-ಮರ-ಪರಿಸರ ತನ್ನದೆನ್ನುವ ಆತ್ಮೀಯ ಭಾವ-ಸ್ಪರ್ಶವನ್ನು ಬಿತ್ತುವ ಮಹೋದ್ದೇಶದಿಂದ ವನಮಹೋತ್ವವ ಆಚರಿಸುವ ಪದ್ಧತಿ ಜಾರಿ ಬಂದಿರುವುದಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚೇತನ ನಾಯ್ಕ ಅಭಿಪ್ರಾಯಪಟ್ಟರು.
ವನಮಹೋತ್ಸವ ಆಚರಣೆಯ ಅಂಗವಾಗಿ ಪಟ್ಟಣ ಪ್ರದೇಶದಲ್ಲಿ ಬೆಳೆಸಬಹುದಾದ ಸಸ್ಯಸಂಕುಲಗಳನ್ನು ಪರಿಚಯಿಸುತ್ತಾ, ತೋಟಗಾರಿಕಾ ಇಲಾಖೆಯ ಯೋಜನೆ, ಸಂರಕ್ಷಣೆ ಹಾಗೂ ಪಾಲನೆಯ ಕುರಿತಾಗಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ನಮೃತಾ ಶಾನಭಾಗ, ಪ್ರತಿಯೊಬ್ಬ ರೋಟರಿ ಸದಸ್ಯರು ತಲಾ ನಾಲ್ಕು ಗಿಡಗಳನ್ನು ನೆಟ್ಟು ಅವನ್ನು ಬೆಳೆಸುವ ಜವಾಬ್ದಾರಿ ವಹಿಸುವ ವಿನೂತನ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಪ್ರಕಟಿಸಿದರು. ರೋಟರಿ ಕಾರ್ಯದರ್ಶಿ ಶಿಲ್ಪಾ ಜೈನ್ ವಂದಿಸಿದರು. ಈ ಸಂದರ್ಭದಲ್ಲಿ ರೋಟರಿ, ರೋರ‍್ಯಾಕ್ಟ್ ಹಾಗೂ ನಾದಶ್ರೀ ಕಲಾಕೇಂದ್ರದ ಹಿರಿಕಿರಿಯ ಸದಸ್ಯರೆಲ್ಲ ಉಪಸ್ಥಿತರಿದ್ದು ಗಿಡನೆಟ್ಟು ಸಂಭ್ರಮಿಸಿದರು.