ಲೇಖನ- ಉಮೇಶ ಮುಂಡಳ್ಳಿ ಭಟ್ಕಳ
ಅನೇಕ ಸವಾಲುಗಳ ಜೀವನಗಳಲ್ಲಿ ಪತ್ರಿಕಾ ರಂಗ ಕೂಡ ಒಂದು. ಮೆಲ್ನೊಟಕ್ಕೆ ಸುಲಭ ಹಾಗೂ ಸುಖದಾಯಕ ಅಂತ ಅನ್ನಿಸುವ ಈ ಪತ್ರಿಕಾರಂಗ ಒಂದು ಹೋರಾಟವಿದ್ದಂತೆ. ಇದರಲ್ಲಿ ಎದ್ದವರಿಗಿಂತ ಬಿದ್ದವರೇ ಹೆಚ್ಚು. ಹಲವರು ಕಳೆದುಕೊಂಡರೆ ಕೆಲವರು ಮಾತ್ರ ಉಳಿಸಿ ಗಳಿಸಬಲ್ಲರು. ಉಳಿಕೆ ಗಳಿಕೆಗಳ ಲೆಕ್ಕಾಚಾರ ಏನೇ ಇದ್ದರೂ ಬಿದ್ದು ಎದ್ದು ಗೆದ್ದವರ ಸಾಲಲ್ಲಿ ನಿಂತ ಜಿಲ್ಲೆಯ ಸಹೃದಯಿ ಪತ್ರಿಕರ್ತರೊಬ್ಬರ ಪರಿಚಯಿಸುವ ಪುಟ್ಟ ಪ್ರಯತ್ನ ಈ ಲೇಖನ.
ತೊಂಬತ್ತರ ದಶಕದಲ್ಲಿ ಅಂದರೆ ಇಂದಿಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಬುದ್ದಿವಂತಿಕೆ ಕಲಿಯುವ ಉತ್ಸಾಹ ಬೆಟ್ಟದಷ್ಟು ಕನಸುಗಳನ್ನ ಹೊತ್ತ ಹುಡುಗ ಮನೆಯಲ್ಲಿನ ಕಡುಬಡತನದ ಕಾರಣ ಅರ್ಧದಲ್ಲಿಯೇ ಓದಿಗೆ ವಿದಾಯ ಹೇಳಿ ಕಣ್ಣೆದುರು ಕಾಣುವ ಪತ್ರಿಕೆ ಹಂಚುವ ಕಾಯಕಕ್ಕೆ ಸೈಕಲ್ ಏರುತ್ತಾನೆ.ಆಗ ಅವನಿಗೆ ಸೈಕಲ್ ತುಳಿಯುತ್ತಾ ಮನೆ ಮನೆಗೆ ಹೋಗಿ ಪತ್ರಿಕೆ ಹಾಕುವುದೇ ಬದುಕಿಗೆ ದಾರಿಯಾಗಿರುತ್ತದೆ.
ಧ್ಯೇಯನಿಷ್ಠ ಪತ್ರಕರ್ತ ಮತ್ತು ಹೊಸದಿಗಂತ ಪತ್ರಿಕೆಯ ವಿತರಕನಾಗುವ ಮೂಲಕ ಪತ್ರಿಕೋದ್ಯಮಕ್ಕೆ ಅದಿಕೃತವಾಗಿ ಪಾದಾರ್ಪಣೆ ಮಾಡುತ್ತಾನೆ. ಹೀಗೆ ಸುಮಾರು ಹದಿನೇಳು ವರ್ಷ ಮಳೆ ಚಳಿ ಬಿಸಿಲು ಎನ್ನದೇ ಮನೆಮನೆ ತಿರುಗಿ ಪತ್ರಿಕೆ ವಿತರಿಸುತ್ತಲೇ ಬದುಕುಕಟ್ಟಿಕೊಳ್ಳತೊಡಗುತ್ತಾನೆ. ಆದರೂ ತನ್ನ ಕನಸುಗಳ ಸಾಕಾರತೆಗಾಗಿ ಮೂರ್ನಾಲ್ಕುಕಡೆ ಸರಕಾರಿ ನೌಕರಿಗಾಗಿ ಸಂದರ್ಶನ ನೀಡುತ್ತಾನೆ. ಸಂದರ್ಶನದಲ್ಲಿ ಗೆದ್ದರೂ , ಮಧ್ಯವರ್ತಿಗಳು ಸಂದರ್ಶಕರ ಜೇಬು ಸಮಾಧಾನ ಪಡಿಸಲು ವಿಫಲವಾದ ಕಾರಣ ಒಳ್ಳೆಯ ಉದ್ಯೋಗಕ್ಕೆ ಹೋಗಬೇಕೆಂಬ ಕನಸು ಕಮರಿ ಹೋಗುತ್ತದೆ. ಮತ್ತೆ ಪತ್ರಿಕಾ ರಂಗವೇ ಅವನ ಮುಂದಿನ ಎಲ್ಲವೂ ಆಗಿಬಿಡುವಷ್ಟು ಆ ರಂಗಕ್ಕೆ ಅಂಟಿಕೊಂಡು ಹೊಸದಿಗಂತದ ತಾಲೂಕು ವರದಿಗಾರ, ಜಿಲ್ಲಾ ವರದಿಗಾರ, ವಿಶೇಷ ವರದಿಗಾರನಾಗಿ ಹೆಸರು ಮಾಡುತ್ತಾನೆ.ಜಿಲ್ಲೆಯ ಪ್ರತತಿಯೊಬ್ಬರರಿಗೂ ಪರಿಚಿತ ಎನ್ನುವಷ್ಟು ಬೆಳೆಯುತ್ತಾನೆ. ಇಷ್ಟೆಲ್ಲ ಏರಿಕೆ ಕಾಣುತ್ತಾ ಬೆಳೆದ ಆ ಹುಡುಗ ಇಂದು ರಾಜ್ಯದ ಪ್ರತಿಷ್ಠಿತ ಪತ್ರಿಕೆ ಹೊಸದಿಗಂತದ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥನಾಗೋ ವರೆಗೂ ಬೆಳೆಯುತ್ತಾನೆ. ಈತ ಮತ್ಯಾರು ಅಲ್ಲ ಅಂಕೊಲಾದ ಶ್ರೀ ವಿಠ್ಠಲದಾಸ್ ಕಾಮತ್ . ವಿಠ್ಠಲ ದಾಸ್ ಕಾಮತ್ ಅವರು ಹೊಸದಿಗಂತ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿ ಇಂದಿಗೆ ನಾಲ್ಕು ವರ್ಷ.ಬಯಲು ನಾಡಿನ ಸುಮಾರು ಹದಿಮೂರು ಜಿಲ್ಲೆಗಳನ್ನು ಒಳಗೊಳ್ಳುವ ಹುಬ್ಬಳಿ ಆವೃತ್ತಿಯಲ್ಲಿ ಅನೇಕ ಹೊಸತನಗಳನ್ನು ವಿಶೇಷ ಪುರವಣಿಗೆಗಳನ್ನು ತಂದು ಈ ಭಾಗದಲ್ಲಿ ಹೊಸದಿಗಂತವನ್ನು ಮನೆ ಮಾತಾಗಿಸಿದ ಶ್ರೇಯಸ್ಸು ಕಾಮತ್ ಅವರಿಗೆ ಸಲ್ಲುತ್ತದೆ.
ಪತ್ರಿಕಾ ರಂಗದಲ್ಲಿದ್ದು ತಮ್ಮ ಪ್ರಾಮಾಣಿಕತೆ ಸಹೃದಯತೆ ಮತ್ತು ಹಿರಿಕಿರಿಯರೆನ್ನದೆ ಬೆರೆಯುವ ಸ್ನೇಹಪರತೆ ಗುಣಗಳಿಂದ ಮೂವತ್ತು ವರ್ಷಗಳ ಕಾಲ ಪತ್ರಿಕೋಧ್ಯಮದಲ್ಲಿ ವಿಠ್ಠಲ ದಾಸ್ ಕಾಮತ್ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ೨೦೨೧ ರ ಜಿಲ್ಲಾ ಪತ್ರಿಕಾ ರಂಗದ ಪ್ರತಿಷ್ಠಿತ ಪ್ರಶಸ್ತಿ ಯಾದ ಶ್ಯಾಮರಾಮ ದತ್ತಿ ನಿಧಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿರುತ್ತದೆ.
ಅನೇಕ ಕಿರಿಯರನ್ನು ತಮ್ಮ ಬರವಣಿಗೆಯ ಮೂಲಕ ಪ್ರೋತ್ಸಾಹ ನೀಡುವ ಮೂಲಕ ಬೆನ್ನು ತಟ್ಟಿ ಸದಾ ಹರಸುವ ಈ ಸಹೃದಯಿಗೆ ಇಂದು ಈ ಪ್ರಶಸ್ತಿ ಬಂದಿರುವುದು ಆ ಎಲ್ಲ ಕಿರಿಯರಿಗೂ ಬಂದ ಪ್ರಶಸ್ತಿ ಎಂದು ಅನೇಕರು ಹೇಳಿಕೊಂಡು ಸಂಭ್ರಮಪಡುತ್ತಿರುವುದು ಕಾಮತ್ ಅವರ ಪ್ರೀತಿಗೆ ಕಾರಣ. ಅವರು ಇನ್ನಷ್ಟು ಯಶಸ್ಸು ಈ ರಂಗದಲ್ಲಿ ಸಾಧನೆ ಮಾಡಲಿ ಅವರಿಗೆ ಅನೇಕ ಗೌರವಗಳು ಅರಸಿ ಬರಲಿ ಎನ್ನುವುದು ಲೇಖಕನಾದ ನನ್ನ ಅಭಿಪ್ರಾಯ ಕೂಡ.