ಹೊನ್ನಾವರ: ತಾಲೂಕಿನ ಗೇರುಸೊಪ್ಪದಿಂದ ವಾಪಸ್ ಹೊನ್ನಾವರಕ್ಕೆ ಬರುತ್ತಿರುವಾಗ ಬಾಸ್ಕೇರಿ ಹತ್ತಿರ ಎದುರು ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಪೊಲೀಸ್ ವಾಹನ ಗುದ್ದಿದ ಘಟನೆ ವರದಿಯಾಗಿದೆ.
ತಾಲೂಕಿನ ಪೊಲೀಸ್ ಠಾಣೆಯ ಗ್ರೇಡ್ 2 ಪಿಎಸ್‌ಐ ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ದ ಜೀಪು ಇದಾಗಿದ್ದು, ಹೊನ್ನಾವರ ತಾಲೂಕಿನ ಭಾಸ್ಕೇರಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತಕ್ಕೆ ಒಳಗಾಗಿದೆ.
ಈ ಘಟನೆಯಲ್ಲಿ ಜೀಪು ಭಾಗಶಃ ಜಖಂ ಆಗಿದ್ದು ಜೀಪಿನಲ್ಲಿದ್ದ ಪಿಎಸ್‌ಐ ಮಹಾಂತೇಶ ನಾಯ್ಕ ಮತ್ತು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅಪಘಾತವಾದ ರಬಸಕ್ಕೆ ವಿದ್ಯುತ್ ತಂತಿ ತುಂಡಾಗಿ ಜೀಪ್ ಮೇಲೆಯೇ ಬಿದ್ದರು ಕೂಡ ಯಾವುದೇ ಅಪಾಯವಾಗಿಲ್ಲ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ. ಜೀಪ್ ವಿದ್ಯುತ್ ಕಂಬಕ್ಕೆ ಗುದ್ದಿದ ಕ್ಷಣದಲ್ಲಿ ತುಂಡಾದ ತಂತಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ, ಹೀಗಾಗಿ ದೊಡ್ಡ ಅವಘಡ ತಪ್ಪಿದೆ.
ವಿದ್ಯುತ್ ಸಂಪರ್ಕ ಇದ್ದರೆ ವಾಹನದಲ್ಲಿದ್ದವರಿಗೆ ಅಪಾಯ ಆಗುವ ಸಾಧ್ಯತೆಯಿತ್ತು. ಆದರೆ, ಅದೇ ಕಂಬದ ವಿದ್ಯುತ್ ತಂತಿ ಜೀಪಿಗೆ ಅಡ್ಡ ಸಿಕ್ಕಿ ತಡೆದು ನಿಲ್ಲಿಸಿದ್ದರಿಂದ ಹೊಂಡಕ್ಕೆ ಬೀಳುವುದು ತಪ್ಪಿದೆ. ಪೋಲಿಸ್ ವಾಹನ ಜಖಂ ಆಗಿದ್ದು ವಾಹನದಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ.