ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

ಶ್ರೀ ವಿದ್ಯಾಧರ ವಿ. ಅಡಿ

ಜೀವನವೆಂದರೇನು? ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ಕೊಡುವ ಉತ್ತರವೂ ಭಿನ್ನವಾಗಿಯೇ ಇರುತ್ತದೆ. ಕೋಗಿಲೆಗೆ ಹಾಡುವುದೇ ಬದುಕು. ಹಸುವಿಗೆ ಹಾಲನ್ನೀಯುವುದೇ ಬದುಕು. ಇರುವೆಗೆ ಪರಿಶ್ರಮವೇ ಬದುಕು. ಶಿಕ್ಷಕನಿಗೆ ಬೋಧನೆಯೇ ಬದುಕು. ವೈದ್ಯನಿಗೆ ರೋಗಿಗಳ ಸೇವೆಯೇ ಬದುಕು. ಕಲಾವಿದನಿಗೆ ನಟನೆಯೇ ಬದುಕು. ಹೀಗೆ ತಮ್ಮ ತಮ್ಮ ಜೀವನಾನುಭವಗಳ ಮಿತಿಯಲ್ಲಿ ಎಲ್ಲರೂ ಉತ್ತರಿಸಿಯಾರು. ಕೆಲವರು ಜೀವನವೇ ಶೂನ್ಯ ಎಂದು ಒಂದೇ ವಾಕ್ಯದಲ್ಲಿ ಕೂಡ ಉತ್ತರ ಬರೆಯಬಹುದು. ಕೆಲವರಿಗೆ 24 ಪುಟಗಳ ಪುಸ್ತಿಕೆಯೂ ಸಾಲದೇ ಪುರವಣಿ ಪಡೆಯಬೇಕಾಗಿ ಬರಬಹುದು. ಈ ಉತ್ತರ ಬರೆಯಬೇಕಾದಾಗ ಕಿರಿಯರಿಗೆ ಹಿರಿಯರು ಉತ್ತರ ಹೇಳಿಕೊಟ್ಟರೆ ಅದು ಅಪರಾಧವಲ್ಲ. ಅದಲ್ಲದೇ ನಾವು ಬೇರೆಯವರನ್ನು ನೋಡಿ ಬರೆಯುವುದಕ್ಕೂ ಅವಕಾಶವಿದೆ. ಒಟ್ಟಾರೆ ಜೀವನದ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗುವುದೇ ಮುಖ್ಯ. ಎಸ್ ಎಸ್ ಎಲ್ ಸಿ ಯಲ್ಲಿ 625/625 ಪಡೆದವನೂ ಜೀವನ ಪರೀಕ್ಷೆಯಲ್ಲಿ ಫೇಲಾಗಬಹುದು. ಹೇಳಲಾಗದು ಅದನ್ನು. ನನ್ನ ಜೀವನದ ಉತ್ತರ ಬರೆಯುವಾಗ ತಮ್ಮ ಜೀವನದ ಉತ್ತರ ತೋರಿಸಿದ ಶ್ರೀಯುತ ವಿದ್ಯಾಧರ ಅಡಿ ನನ್ನ ಇಂದಿನ ಅಕ್ಷರ ಅತಿಥಿ.
ನಿಧಾನ ನಡಿಗೆ, ಗಂಭೀರ ಸ್ವಭಾವ, ವಿವೇಕದ ನಡೆ, ವಿಚಾರಶೀಲ ಬದುಕು, ಸೌಜನ್ಯದ ನುಡಿ, ಸರಳತೆ, ಆತ್ಮಸಂತೃಪ್ತಿಯ ಬದುಕು, ಅಡಿ ಸರ್ ಪ್ರಚಾರ ಬಯಸದ ಪ್ರಗತಿಶೀಲ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಮಲ್ಲಾಪುರದವರಾದ ವಿದ್ಯಾಧರ ಅಡಿಯವರು ಪ್ರಸ್ತುತ ಕಂದಳ್ಳಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2005 ರಲ್ಲಿ ನಾನು ಶಿಕ್ಷಕನಾಗಿ ಸರಕಾರಿ ಸೇವೆಗೆ ನೇಮಕವಾದಾಗ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಬಡಾಳ ಸಂತೇಗುಳಿಯಲ್ಲಿ ಇದ್ದ ಅವರು ನನ್ನನ್ನು ತಮ್ಮದೇ ಮನೆಮಗನಂತೆ ಕಂಡು ಮಾರ್ಗದರ್ಶಿಸಿದವರು. ಈಗಲೂ ಅದೇ ಸ್ನೇಹ. ಅದೇ ಪ್ರೀತಿ. ಆದರ. ವೃತ್ತಿ ಜೀವನವೂ ಹಲವು ಸವಾಲು ಸಮಸ್ಯೆಗಳ ಆಗರ. ಹೀಗಾಗಿ ಅಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮತ್ತು ಅಪಾಯ ಬರದಂತೆ ನಮ್ಮನ್ನು ರಕ್ಷಿಸುವ ಗಾಡ್ ಫಾದರ್ ಒಬ್ಬರು ಬೇಕಾಗುತ್ತಾರೆ ಎಂಬುದೇ ನನ್ನ ಭಾವನೆ. ಹಾಗಲ್ಲದೇ ಹೋದರೆ ನಾವೇ ನಮ್ಮ ತಪ್ಪುಗಳಿಂದ ಕಲಿತುಕೊಳ್ಳುತ್ತಾ ಹೋಗುವಷ್ಟು ಬದುಕು ದಿರ್ಘವಾಗಿಲ್ಲ. ಅಡಿ ಸರ್ ನನ್ನ ಬದುಕಿನ ನಡೆಗಳಿಗೆ ಬೆಂಗಾವಲಾದವರು.

RELATED ARTICLES  ಶ್ರೀಧರರು‌ ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಆರನೆಯ ಭಾಗ

ಮಲ್ಲಾಪುರದಲ್ಲಿ ಅಡಿಯವರ ಮನೆ, ಮನೆತನ ಹೆಸರುವಾಸಿ. ಸುಸಂಸ್ಕೃತ ಸಜ್ಜನಿಕೆಯ ಕುಟುಂಬ ಅವರದ್ದು.‌ ಅಡಿ ಸರ್ ತಂದೆಯವರೂ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಅವರ ಕುಟುಂಬ ನಿರ್ವಹಣೆಯ ಚಾಲಾಕಿತನ, ಶಿಸ್ತು, ಗಂಭೀರತೆ, ಎಲ್ಲವೂ ನಮ್ಮ ಅಡಿ ಸರ್ ಗೆ ರಕ್ತಗತವಾಗಿಯೇ ಬಂದಿರಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಪರೋಪಕಾರದ ಗುಣ ಅವರ ವ್ಯಕ್ತಿತ್ವವನ್ನು ಘನತೆಯಿಂದ ನೋಡುವಂತೆ ಮಾಡಿದೆ.

ವಿದ್ಯಾಧರ ಅಡಿಯವರ ಪತ್ನಿ ಶ್ರೀಮತಿ ಸುಮಾ ಅಡಿ ವರಸೆಯಲ್ಲಿ ನಮ್ಮ ದಾಯಾದಿ ಅಕ್ಕ.‌ ಅವರೂ ಅಷ್ಟೆ. ಸಜ್ಜನಿಕೆಯೇ ಮೈವೆತ್ತ ಕ್ರಿಯಾಶೀಲ ಶಿಕ್ಷಕಿ. ಮನೆಯನ್ನು ಮುನ್ನಡೆಸಿಕೊಂಡು ಹೋಗುವ ತುಂಬು ಗೃಹಿಣಿ. ಮಗಳು ವೈದ್ಯೆ, ಮಗ ಇದೀಗಷ್ಟೇ ವೃತ್ತಿಗಿಳಿದಿದ್ದಾನೆ. ಸಂತೃಪ್ತ ಸಂಸಾರಿ ನಮ್ಮ ಅಡಿ ಸರ್.

‌ ಅತಿಯಾದ ಮಹತ್ವಾಕಾಂಕ್ಷೆ ಒಮ್ಮೊಮ್ಮೆ ಜೀವನವನ್ನು ಪ್ರಪಾತಕ್ಕೆ ತಳ್ಳಿ ಬಿಡುತ್ತದೆ. ಈ ಕಾರಣಕ್ಕಾಗಿಯೇ ಯುವ ಜನತೆಗೆ ದಾರಿ ತೋರುವ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅಡಿ ಸರ್ ನನ್ನನ್ನು ಒಬ್ಬ ಹಿರಿಯಣ್ಣನಂತೆ ನಡೆಸಿಕೊಂಡಿದ್ದಾರೆ. ಸಂದೀಪ ಹೀಗೆ ಮಾಡುವುದಲ್ಲ ಹೀಗೆ ಮಾಡಬೇಕು ಎಂದು ಎಚ್ಚರಿಸುತ್ತಾರೆ. ತಾನಾಯ್ತು ತನ್ನ ಕೆಲಸವಾಯ್ತು. ಗೊತ್ತಿದ್ದವರಲ್ಲಿ ಗೊತ್ತಿದ್ದವರಂತೆ ವ್ಯವಹರಿಸುತ್ತಾರೆ. ಗೊತ್ತಿಲ್ಲದವರಲ್ಲಿ ಗೊತ್ತಿಲ್ಲದವರಂತೆ ಸುಮ್ಮನಿದ್ದು ಬಿಡುತ್ತಾರೆ. ಬದುಕುವುದನ್ನು ಕಲಿಯಿರಿ ಪುಸ್ತಕ ಓದಿದಷ್ಟೇ ಖುಷಿ ನನಗೆ ಅವರ ಬದುಕನ್ನು ಓದುವುದು.

RELATED ARTICLES  ದೇವರು ಇದ್ದಾನೆಯೇ?

ಸೊಪ್ಪಿನ ಹೊಸಳ್ಳಿಯಲ್ಲಿ ಜಾಗ ಖರೀದಿಸಿ ಸ್ವತಃ ಗದ್ದೆ ಮಾಡಿದ ಪರಿಶ್ರಮಿ ಅವರು. ಕೃಷಿ ಎಂದರೆ ಪರಮಪ್ರೀತಿ ಅವರಿಗೆ. ಹಿರಿಕಿರಿಯರೆಲ್ಲರನ್ನೂ ಸಮತೂಗಿಸಿಕೊಂಡು ಹೋಗುವ ಅವರ ಸ್ವಭಾವ ನನಗೆ ಬಹಳ ಇಷ್ಟವಾಗುತ್ತದೆ. ಸೂಕ್ಷ್ಮದರ್ಶಕ ಅವರು. ನಮ್ಮ ಕಣ್ಣಿಗೆ ಕಾಣಿಸದ ಅದೆಷ್ಟೋ ವಿಚಾರಗಳು ಅವರಿಗೆ ನಮಗಿಂತ ಸ್ಪಷ್ಟವಾಗಿ ಅದೆಷ್ಟೋ ಮೊದಲೇ ಕಾಣಿಸುತ್ತದೆ. ಅಡಿ ಸರ್ ಪ್ರಾಮಾಣಿಕ ವ್ಯಕ್ತಿ. ಅದೆಷ್ಟೋ ದೊಡ್ಡವರಿಗೂ ಬುದ್ಧಿ ಹೇಳುವಷ್ಟು ಬುದ್ಧಿವಂತಿಕೆ ಅವರಲ್ಲಿದ್ದರೂ ವಿಧೇಯ ವಿದ್ಯಾಧರರಾಗಿಯೇ ಉಳಿಯುತ್ತಾರೆ. ತನ್ನ ವೃತ್ತಿಯನ್ನೂ ಪ್ರೀತಿಸುತ್ತಾ ಹಮ್ಮು ಬಿಮ್ಮು ತೋರದ ಬದುಕು ಸಾಗಿಸುತ್ತಾರೆ.

ನಾನು ನನ್ನ ಮೊದಲ ಪುಸ್ತಕ ಬರೆದ ವೇಳೆ ನನ್ನ ಬಳಿ ಬಂದ ಅಡಿ ಸರ್…. ಸಂದೀಪ ಚೊಲೋ ಬರದ್ದೆ ಹೇಳತಿದ್ದು ನಮ್ಮನೆ ಸುಮಾ…ಹತ್ತು ಪುಸ್ತಕ ಕೊಡು ನಮ್ಮ ಮಕ್ಕಳು ಓದಕಳ್ಳಲಿ ಎಂದು ಪ್ರೀತಿಯಿಂದ ಕೊಂಡು ಮಕ್ಕಳ ಕೈಗಿತ್ತರು. ಆ ವೇಳೆಗೆ ನನ್ನ ಬರವಣಿಗೆಗೆ ಇದು ಬಹುದೊಡ್ಡ ಪ್ರೋತ್ಸಾಹ ಆಗಿತ್ತು. ಅದನ್ನು ನಾನೆಂದೂ ಮರೆಯಲಾರೆ.

ಯಾರು ಎಷ್ಟೇ ಕೂಗಾಡಲಿ ಜೀವನದ ಶೃತಿ ಒಮ್ಮೆ ತಾರಕಕ್ಕೆ ಹೋದರೂ ಕೊನೆಗೆ ಮೂಲ ಶೃತಿಗೇ ಮರಳಬೇಕು. ಶೃತಿ ತಪ್ಪದ ಹಾಡು ನಮ್ಮದಾಗಬೇಕು. ಅಕಸ್ಮಾತ್ ತಪ್ಪಿದರೂ ಅದನ್ನು ಸರಿ‌ಮಾಡುವ ನಮ್ಮ ಗುರು, ಬಂಧು, ಸ್ನೇಹಿತ, ನಮ್ಮ ಬಳಿ ಇರಬೇಕು. ಅದರ ಸರಿಯಾದ ಆಯ್ಕೆ ನಮ್ಮದೇ ಆಗಿರುತ್ತದೆ. ನಮ್ಮನ್ನು ಹೊಗಳುವವರೆಲ್ಲಾ ನಮ್ಮ ಹಿತೈಷಿಗಳಲ್ಲ. ನಮ್ಮನ್ನು ತೆಗಳುವವರೆಲ್ಲ ನಮ್ಮ ಶತ್ರುಗಳೂ ಅಲ್ಲ. ಅಡಿ ಸರ್ ಅಂಥವರು ಬದುಕಿನ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕೊಟ್ಟಿದ್ದಾರೆ. ಎಂತಹ ಕಠಿಣ ಪ್ರಶ್ನೆಗಳಿಗೂ ಅವರ ಉತ್ತರ ಸರಳವಾಗಿಯೇ ಇರುತ್ತದೆ. ಹೀಗಾಗಿಯೇ ಅವರು ನನಗೆ ತುಂಬಾ ಇಷ್ಟವಾಗುತ್ತಾರೆ.

ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.