ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದಲ್ಲಿ ನಡೆದ ಘಟನೆಯೊಂದು ಬಹುಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹುಜನರು ಬೇಸರ ವ್ಯಕ್ತಪಡಿಸಿದರೆ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾದರೆ ಆ ಘಟನೆ ಏನು ಅಂತೀರಾ? ಈ ವರದಿ ಓದಿ.
ಯಾಣದ ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಪ್ರವಾಸಿಗರು ಅಣಕಿಸಿದ ಘಟನೆಯಿದು. ಹೌದು ಯಾಣದಲ್ಲಿ ಪ್ರವಾಸಿಗರು ಓಡಾಡುವ ದಾರಿಯಲ್ಲಿ ಬಿದ್ದ ಕಸವನ್ನು ಹೆಕ್ಕುವ ಕಾರ್ಯ ನಿರ್ವಹಿಸುತ್ತಿರುವ ಶೈಲ ಎಂಬ ಮಹಿಳೆಯನ್ನು ಪ್ರವಾಸಿಗರು ಟೀಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈರೀತಿ ಸ್ವಚ್ಚತಾ ಸಿಬ್ಬಂಧಿಗಳ ಮೇಲೆ ವ್ಯಂಗ್ಯ ಮಾಡಿದ ಬಗ್ಗೆ ಪಶ್ಚಿಮ ಘಟ್ಟಗಳು – Western Ghat ಎಂಬ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಯಾಣ ಗ್ರಾಮ ಅರಣ್ಯ ಸಂಘ ಹಾಗೂ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಪ್ಲಾಸ್ಟಿಕ್ ತೆರವು ಕಾರ್ಯದಲ್ಲಿ, ತಮ್ಮ ತಂಡದೊಂದಿಗೆ ಕೆಲ ವರ್ಷಗಳಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯಾಣಕ್ಕೆ ಬಂದ ಪ್ರವಾಸಿಗರು, ಈ ಮಹಿಳೆಯನ್ನು ಟೀಕಿಸಿದ್ದು, “ನೋಡಪ್ಪ, ಮೋದಿ ಪ್ಯಾನು, ಸ್ವಚ್ಛ ಭಾರತ ಮಾಡ್ತಿದ್ದಾರೆ” ಅಂತ ಟೀಕಿಸಿ, ಅವರ ಎದುರಿನಲ್ಲೆ ಕಸ ಎಸೆದು ಅಮಾನವೀಯತೆ ತೋರಿದ್ದಾರೆ ಎಂದು ಟ್ವಿಟರ್ ಖಾತೆ ಟೀಕಿಸಿದೆ.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಸ್ವಚ್ಛತಾ ಕಾರ್ಯ ಮುಂದುವರೆಸಿದ್ದಾರೆ. ಇಂತಹ ಹೀನ ಮನಸ್ಥಿತಿ ಹೊಂದಿದವರಿಂದ ಅರಣ್ಯ ಸಂಪೂರ್ಣ ಕಸಮಯವಾಗುತ್ತಿದ್ದು, ಪ್ಲಾಸ್ಟಿಕ್ ಕಾಡಿನ ತುಂಬ ಪಸರಿಸುತ್ತಿದೆ. ವಿದ್ಯಾವಂತರು ಎಂದು ಕರೆಸಿಕೊಳ್ಳುವವರು, ಮತ್ತೊಬ್ಬರಿಗೆ ಗೌರವ ನೀಡಬೇಕು ಹಾಗೂ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿದುಕೊಳ್ಳುವ ಕನಿಷ್ಠ ಬುದ್ದಿಯೂ ಇಲ್ಲದಿದ್ದರೆ, ಕಲಿತದ್ದು ದಂಡವೇ ಸರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.