ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

*ಶ್ರೀರಾಮ, ಮತ್ತು ಶ್ರೀಧರ ಎನ್ ಭಟ್ಟ ಬೆಳ್ಳಿಮಕ್ಕಿ*

ಓಟದ ಸ್ಪರ್ಧೆಯಲ್ಲಿ ಸರಿಯಾದ ಟ್ರ್ಯಾಕ್ ಇದ್ದು ನಡೆಸಿದಾಗ ಸ್ಪರ್ಧಿಗಳ ನಿರ್ಣಯ ಬರುವಲ್ಲಿ ಅನ್ಯಾಯವಾಗುವುದಿಲ್ಲ. ಆದರೆ ಸರಿಯಾದ ಟ್ರ್ಯಾಕ್ ಇಲ್ಲದೇ ನಡೆಸಿದ ಓಟಗಳ ಸ್ಪರ್ಧೆಯಲ್ಲಿ ಬೇರೆಯವರನ್ನು ಕಾಲುಕೊಟ್ಟು ಬೀಳಿಸಿ ಮುಂದೆ ಓಡುವವರು ಇರುತ್ತಾರೆ. ಅಥವಾ ಇನ್ನೊಬ್ಬನ ಹೆಗಲು ಹಿಡಿದು ಜಗ್ಗುತ್ತಾರೆ. ಸ್ವಂತ ಸಾಮರ್ಥ್ಯದಿಂದಲೇ ಸ್ಪರ್ಧೆಯಲ್ಲಿ ಗೆಲ್ಲುವುದೊಂದು ವಿಧ. ಮೋಸ ಮಾಡಿ ಗೆಲ್ಲುವುದೊಂದು ವಿಧ. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯ ಹೇಗಾದರೂ ಸರಿ ಎಂದುಕೊಂಡವರಿಗೆ ಅದು ಸರಿಯೇ ಆಗಿರಬಹುದು. ಆದರೆ ಲೋಕಮುಖಕ್ಕೆ ಸಭ್ಯರಿಗೆ, ಸಜ್ಜನರಿಗೆ ಅದು ಸಹ್ಯವಾದುದಲ್ಲ. ಸೋತರೂ ಸರಿ…. ಸರಿಯಾದ ಗೆಲುವಿಗಾಗಿಯೇ ನಮ್ಮ ಹಂಬಲವಿರಬೇಕು. ನಮ್ಮ ಗೆಲುವು ಕೆಲಕಾಲ ಮುಂದೂಡಲ್ಪಡಬಹುದು… ಆದರೆ ಸಿಕ್ಕೇ ಸಿಗುತ್ತದೆ ಎನ್ನುವುದರಲ್ಲಿ ಸಂಶಯ ಬೇಡ. ನನ್ನ ವೃತ್ತಿಯಲ್ಲಿ ಸಿಕ್ಕ ಪ್ರಾಮಾಣಿಕ, ವಿಧೇಯ, ಹಾಗೂ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನನ್ನು ನಾನಿಂದು ಪರಿಚಯಿಸಬೇಕು. ಶ್ರೀಧರ ನಾಗೇಶ ಭಟ್ಟ ಹಾಗೂ ಸಹೋದರ ಶ್ರೀರಾಮ ಭಟ್ಟ ಬೆಳ್ಳಿಮಕ್ಕಿ ಇಂದಿನ ನನ್ನ ಅಕ್ಷರ ಅತಿಥಿ.

‌‌‌‌‌ ಎಷ್ಟು ಪ್ರೀತಿ ಗೌರವ ಆತನಿಗೆ. ಎಷ್ಟು ವಿಧೇಯತೆ ಗುರುಗಳೆಂದರೆ… ಎಷ್ಟು ಶಿಸ್ತು, ಅಚ್ಚುಕಟ್ಟುತನ ಅವನಿಗೆ….ಶ್ರೀಧರ ನಾಳೆ ಹೀಗೆ ಮಾಡಿಕೊಂಡು ಬಾ ಎಂದರೆ ಒಂದೇ ಒಂದು ದಿನವೂ ತಪ್ಪಿಸದೇ ಒಪ್ಪಿಸುತ್ತಿದ್ದ ನಿಷ್ಠಾವಂತ ವಿದ್ಯಾರ್ಥಿ ಇಂದು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ಸಿ.ಇ.ಟಿಗಾಗಿ ಎದುರು ನೋಡುತ್ತಿದ್ದಾನೆ. ಶ್ರೀಧರನ ಗುಣಕ್ಕೆ ಎಂಥವರೂ ತಲೆದೂಗಲೇಬೇಕು. ಶ್ರೀಧರ ಉದಾಹರಿಸಬಹುದಾದ ಒಬ್ಬ ಆದರ್ಶ ವಿದ್ಯಾರ್ಥಿ.
‌‌ ವಿದ್ಯಾರ್ಥಿಗಳು ಗುರುಗಳಿಂದಲೇ ಎಲ್ಲವನ್ನೂ ಕಲಿತುಕೊಳ್ಳುತ್ತಾರೆಂದಲ್ಲ. ಅಪ್ಪ, ಅಮ್ಮ ನೀಡುವ ಸಂಸ್ಕಾರ, ಸುತ್ತಲಿನ ವಾತಾವರಣ, ಸಮಾಜ, ಸ್ನೇಹಿತರು, ಗುರುವೃಂದ ಹೀಗೆ ಪ್ರತಿಯೊಂದೂ ಅವರ ಯಶಸ್ಸಿಗೆ ಮೆಟ್ಟಿಲಾಗಿರುತ್ತದೆ. ಏರುವ ಛಲವೂ ಆತನಿಗಿರಬೇಕಾಗುತ್ತದೆ. ಹಾಗಲ್ಲದೇ ಹೋದರೆ ಕಲಿಕೆಯೊಂದು ಪೂರ್ಣವಾಗುವುದೇ ಇಲ್ಲ.
ಬೆಳ್ಳಿಮಕ್ಕಿಯ ಶ್ರೀರಾಮ, ಶ್ರೀಧರ ಇಬ್ಬರೂ ನಮ್ಮ ಶಾಲೆಯಲ್ಲೇ ಕಲಿತವರು. ಅಣ್ಣ ತಮ್ಮ ಇಬ್ಬರಿಗೂ ಒಳ್ಳೆಯ ಸಂಸ್ಕಾರವನ್ನು ಅಪ್ಪ ಅಮ್ಮ ನೀಡಿದ್ದಾರೆ. ಅಜ್ಜನ ಮನೆ ಕೆರೆಕೋಣದಲ್ಲಿ ಇದ್ದುಕೊಂಡು ತಮ್ಮ ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಅಜ್ಜಿಗೆ ಅಡುಗೆ, ಕೃಷಿ ಎರಡೂ ಕೆಲಸಕ್ಕೆ ನೆರವಾಗಿ ಇತ್ತ ಶಾಲೆಯಲ್ಲೂ ಉತ್ತಮ ವಿದ್ಯಾರ್ಥಿಗಳೆನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಶ್ರೀರಾಮ ಓದಿನಲ್ಲಿ ಅಷ್ಟು ಮುಂದುವರಿಯದಿದ್ದರೂ ಅಪ್ಪನ ವೈದಿಕ ವೃತ್ತಿಯನ್ನೇ ಶೃದ್ಧೆಯಿಂದ ಮುಂದುವರಿಸುತ್ತಿದ್ದಾನೆ. ಛಾಯಾಗ್ರಹಣವನ್ನೂ ಮಾಡಬಲ್ಲ ಶ್ರೀರಾಮ ಕೆಲಕಾಲ ಕೆ.ಪಿ.ಸಿ. ಗೇರುಸೊಪ್ಪಾದಲ್ಲಿ‌ night watchman ಆಗಿ ಕೂಡ ಕಾರ್ಯನಿರ್ವಹಿಸಿದವನು. ದುಡಿಯಬೇಕು. ಬಿಂದಾಸಾಗಿ ಇರಬೇಕು ಎನ್ನುವ ಶ್ರೀರಾಮ ಅಪ್ಪಟ ಯಕ್ಷಗಾನ ಪ್ರೇಮಿ. ಶ್ರೀರಾಮನಿಗೂ ಶ್ರೀಧರನಿಗೂ ಬೆಳ್ಳಿಮಕ್ಕಿಯ ಹನುಮನ ಸಂಪೂರ್ಣ ಆಶೀರ್ವಾದವೇ ಇರಬೇಕೆಂದು ನಾನಾದರೂ ಭಾವಿಸುತ್ತೇನೆ.

RELATED ARTICLES  ಪ್ರಾಣಾಯಾಮಗಳ ಬಗ್ಗೆ ಶ್ರೀಧರರು ಹೇಳಿದ ಮಾತುಗಳಿವು

ನಾನು ಎಲ್ಲಿಗಾದರೂ ಹೋಗಿ ಬರೋಣವೆಂದರೆ ಅಣ್ಣ ಅಥವಾ ತಮ್ಮ ಇಬ್ಬರಲ್ಲಿ ಒಬ್ಬರು ನನ್ನ ಜೊತೆಗೆ ಹಾಜರ್. ಸರ್ ಹೋಗಿ ಬರುವ ನಾ ಬರತೆ ಅಂದಿದ್ದಾರೆಯೇ ವಿನಹ ಒಂದು ಕ್ಷಣಕ್ಕೂ ನೋಡತೆ ಸರ್…. ಅದೊಂದು ಕೆಲಸ ಇದೆ. ಇದೊಂದು ಕೆಲಸ ಇದೆ. ಅಂದವರಲ್ಲ. ನಾನು ಎಲ್ಲೇ ಕಾಣಲಿ ಮಾತನಾಡಿಸದೇ ಹೋದ ದಾಖಲೆಯೇ ಇಲ್ಲ.

ಶ್ರೀಧರ ಕಲಿಸಿದ ಗುರುಗಳಿಗೆಲ್ಲಾ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದವ. ಸಮಯಪ್ರಜ್ಞೆ, ಸಮಯಪಾಲನೆ, ಸ್ಪಷ್ಟ ಓದು, ಶಿಸ್ತಿನ ನಿರ್ವಹಣೆ, ವಿನಯಶೀಲ ನಡೆ, ಥಟ್ಟನೆ ಉತ್ತರಿಸುವ ಜಾಣ್ಮೆ ಈ ಎಲ್ಲಾ ಗುಣಗಳಿಂದ ಆತ ಅನನ್ಯವಾಗಿ ಗುರುತಿಸಿಕೊಳ್ಳುವವನು. ಹಟಮಾರಿತನ, ದುರ್ಜನರ ಸಹವಾಸ, ಅಲ್ಲಿ ಇಲ್ಲಿ ಅಂಗಡಿ ಬಾಗಿಲಲ್ಲಿ ಅನವಶ್ಯಕ ನಿಲ್ಲುವುದು ಈ ಥರದ ಯಾವುದೇ ಗುಣಗಳಿಲ್ಲ ಆತನಿಗೆ.

RELATED ARTICLES  ಭ್ರಮಾತ್ಮಕ ಸುಖದ ಬಲೆಯಿಂದ ಬಿಡುಗಡೆ ವಿವೇಕದಿಂದ ಮಾತ್ರ!(‘ಶ್ರೀಧರಾಮೃತ ವಚನಮಾಲೆ’).

ಶ್ರೀಧರ ನನ್ನ ಜೊತೆಗೆ ಮಂಚಿಕೇರಿಯ ಶಿಬಿರದಲ್ಲಿ ಕೂಡ ಭಾಗವಹಿಸಿದ್ದ. ತಾನೂ ಕಲಿತು ತನ್ನ ಸುತ್ತಲಿರುವವರಿಗೂ ಅತ್ಯಂತ ಸರಳವಾಗಿ ಸೌಜನ್ಯಯುತವಾಗಿ ಹೇಳಿಕೊಡುತ್ತಿದ್ದ ಶ್ರೀಧರ ನಾನು ಬರೆದ ನಾಟಕಗಳನ್ನೂ ಬಹಳ ಚೆನ್ನಾಗಿ ಅಭಿನಯಿಸುವವನು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಗುರುವಾದವನಿಗೆ ಎಲ್ಲಾ ವಿದ್ಯಾರ್ಥಿಗಳೂ ಮಕ್ಕಳೇ. ಕಲಿಸಿದ ಸಾವಿರ ಸಾವಿರ ವಿದ್ಯಾರ್ಥಿಗಳಲ್ಲಿ ಅತಿ‌ಹೆಚ್ಚು ಕಾಲ ನೆನಪಿರುವವರೆಂದರೆ ಬುದ್ಧಿವಂತ ವಿದ್ಯಾರ್ಥಿಗಳು, ವಿದೇಯ ವಿದ್ಯಾರ್ಥಿಗಳು, ಮತ್ತು ಅತಿ ಹೆಚ್ಚು ಕಿಲಾಡಿ ಇದ್ದವರು.

ಶ್ರೀರಾಮನ ಹಾಗೂ ಶ್ರೀಧರನ ಶೃದ್ಧೆಯೇ ಅವರನ್ನು ಬದುಕಲ್ಲಿ ಗೆಲ್ಲಿಸಲಿ. ಅಣ್ಣ ತಮ್ಮರಿಬ್ಬರೂ ಖುಷಿಖುಷಿಯಿಂದ ಯಾವುದೇ ವೈಷಮ್ಯ ಬಾರದಂತೆ ಜೀವನ ಸಾಗಿಸಲಿ. ಇಬ್ಬರೂ ಮಕ್ಕಳೂ ಕೀರ್ತಿವಂತರಾಗಿ ಹೆತ್ತ ತಾಯಿಗೆ ಅತಿ ಹೆಚ್ಚಿನ ಸಂತೋಷ ತಂದು ಕೊಡಲಿ. ಸಮಾಜಕ್ಕೆ ನೆರವಾಗಿ ಬೆಳಕಾಗಿ ಮಕ್ಕಳಿಬ್ಬರೂ ಬೆಳೆಯಲೆಂಬ ಸದಾಶಯ ನನ್ನದು. ಶ್ರೀರಾಮ ಶ್ರೀಧರರಿಬ್ಬರೂ ನನ್ನ ಮೇಲಿಟ್ಟ ಅಭಿಮಾನಕ್ಕೆ, ಪ್ರೀತಿಗೆ, ನಾನೂ ಅದನ್ನೇ ಕೊಡಬಲ್ಲೆ.

ನಾನು ಈ ಹಿಂದೆಯೇ ಬರೆದ ಹಾಗೆ ವಿದ್ಯಾರ್ಥಿಗಳ‌ ಜೀವನಕ್ಕೆ ಗುರುಗಳೇ ಬಣ್ಣ ತುಂಬುವವರಾದರೂ ವಿದ್ಯಾಕಾಂಕ್ಷಿಗಳಾದ ವಿದ್ಯಾರ್ಥಿಗಳೇ ಅಲ್ಲವಾದರೆ ಗುರುವಾದನಿಗೂ ಕಷ್ಟ. ಅಷ್ಟಲ್ಲದೇ ವಿದ್ಯಾರ್ಥಿಗಳು ನಮಸ್ಕರಿಸಿದಾಗ, ಹೃದಯದುಂಬಿ ಮಾತನಾಡುವಾಗ ಗುರುವಿಗಾಗುವ ಸಂತೋಷ ಅದು ಅವರ್ಣನೀಯ.

ಕೊರೋನಾದ ಈ ಕಾಲಘಟ್ಟದಲ್ಲಿ ಪರೀಕ್ಷೆಯೇ ಇಲ್ಲದೇ ಮಕ್ಕಳು ಪಾಸಾಗಿರಬಹುದು. ಆದರೆ ಜೀವನ ಪರೀಕ್ಷೆಯನ್ನೆದುರಿಸದೇ ಪಾಸು ಮಾಡುವುದಿಲ್ಲ. ಶ್ರೀರಾಮ, ಶ್ರೀಧರನಂತಹ ವಿದ್ಯಾರ್ಥಿಗಳನೇಕರು ಜೀವನದ ಪರೀಕ್ಷೆಯನ್ನು ಎದುರಿಸಿ Rank ವಿಜೇತರಾಗಲಿ. ತ್ರೇತಾಯುಗದಲ್ಲಿ ರಾಮನನ್ನೇ ಅನುಗಾಲ ಪೂಜಿಸಿದ ಮುಖ್ಯಪ್ರಾಣ. ವರ್ತಮಾನಕ್ಕೆ ಬೆಳ್ಳಿಮಕ್ಕಿಯಲ್ಲಿ‌ ಮುಖ್ಯಪ್ರಾಣನನ್ನೇ ನಿತ್ಯ ಪೂಜಿಸುವ ಶ್ರೀರಾಮ, ನನ್ನ ಸದ್ಗುರು ಶ್ರೀಧರನ ಹೆಸರಿನಿಂದಲೇ ಕರೆಯಲ್ಪಡುವ ‌ವಿದ್ಯಾರ್ಥಿ ಶ್ರೀಧರ ಇಬ್ಬರಿಗೂ ಒಳ್ಳೆಯದಾಗಲಿ.

ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.