ಕಾರವಾರ : ನಾವಿಂದು ನಕಲಿ ಯುಗದಲ್ಲಿ ಬದುಕುತ್ತಿದ್ದೇವೆಯೋ ಏನೋ ಎನ್ನುವ ಮಟ್ಟಿಗೆ ಎಲ್ಲ ಪ್ರಕ್ರಿಯೆಯು ನಕಲಿಯಾಗಿದೆ. ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದನ್ನು ತಿಳಿಯಲಾರದ ಪರಿಸ್ಥಿತಿ ಹಲವರದು. ತಿನ್ನುವ ಅಕ್ಕಿಯಿಂದ ಹಿಡಿದು ಬಳಸುವ ಎಲ್ಲಾ ವಸ್ತುಗಳು ನಕಲಿ ಸ್ವರೂಪ ಪಡೆದುಕೊಳ್ಳುತ್ತಿದೆ.
ನಕಲಿ ರೇಷನ್ ಕಾರ್ಡ್ ಗಳ ತಯಾರಿ ಜನನ-ಮರಣ ಪ್ರಮಾಣ ಪತ್ರಗಳು ನಕಲಿ ಮಾರ್ಕ್ಸ್ ಕಾರ್ಡ್ ಗಳ ಹಾವಳಿ ಇವುಗಳ ಬಗ್ಗೆ ಎಲ್ಲೋ ದೂರದ ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ನಡೆದಿರುವಂತೆ ನಾವು ಕೇಳಿದ್ದೇವೆ. ಆದರೆ ಅಂತಹುದೇ ಕಾರ್ಯ ನಮ್ಮ ಸನಿಹದಲ್ಲಿಯೂ ನಡೆದಿತ್ತು ಎಂದರೆ ನೀವು ನಂಬಲೇ ಬೇಕು.
ಹೌದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಕಳೆದ ಹಲವು ತಿಂಗಳುಗಳಿಂದ ನಕಲಿ ರೇಷನ್ ಕಾರ್ಡ್ ಹಾಗೂ ಮರಣ ಮತ್ತು ಜನನ ಪ್ರಮಾಣಪತ್ರವನ್ನು ಮಾಡುತ್ತಿದ್ದ ಆರೋಪಿಯ ಅಂಗಡಿಯ ಮೇಲೆ ಶಿರಸಿ ನಗರಠಾಣೆ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿರುವ ಘಟನೆ ಇಂದು ನಡೆದಿದೆ.
ಶಿರಸಿ ನಗರದ ಮುಸ್ಲಿಂಗಲ್ಲಿಯ ನಿವಾಸಿ ಸಯ್ಯದ್ ಮುಜಾಮಿಲ್ ಮನ್ಸೂರ್ ಎಂಬಾತನೇ ಬಂಧಿತ ಆರೋಪಿ ಆಗಿದ್ದು ಈತ ಕಳೆದ ಹಲವು ತಿಂಗಳುಗಳಿಂದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಮಾಡಿಕೊಡುವುದರ ಮೂಲಕ ವಂಚಿಸುತಿದ್ದ.
ಈ ಕುರಿತು ಶಿರಸಿ ನಗರಸಭೆಯ ಪೌರಾಯುಕ್ತ ಕೇಶವ ಎಂ. ಚೌಗುಲೆ ಎಂಬುವವರು ಶಿರಸಿ ನಗರಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ನಕಲಿ ಮಾಡುತಿದ್ದ ಪರಿಕರ ಸಮೇತ ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. ಇದರ ಹಿಂದೆ ಇನ್ನೂ ಯಾರೆಲ್ಲ ಇದ್ದಾರೆ ಎನ್ನುವ ಕುರಿತು ಪೊಲೀಸ್ ತನಿಖೆಯಿಂದ ಪೂರ್ಣ ಮಾಹಿತಿ ತಿಳಿದುಬರಬೇಕಿದೆ.