ಭಾವನೆಗಳು ಹಾಗೂ ನಮ್ಮ ತಿಳುವಳಿಕೆಯ ಮೇಲೆ ಪರಿಣಾಮವಾಗುವಂತೆ ಬುದ್ದಿ ಪೂರ್ವಕವಾಗಿ ಜೋಡಿಸಲಾಗುವ ಅಂಶಗಳ ರೂಪವನ್ನು ಸುಮಾರಾಗಿ ಕಲೆ ಅನ್ನಬಹುದು. ಸಂಗೀತ, ಸಾಹಿತ್ಯ, ಸಿನೆಮಾ, ಫೋಟೋಗ್ರಫಿ, ನೃತ್ಯ, ಶಿಲ್ಪಕಲೆ , ವರ್ಣಚಿತ್ರಕಲೆ ಹೀಗೆ ಇನ್ನೂ ಮನುಷ್ಯನ ಅನೇಕ ಚಟುವಟಿಕೆಗಳನ್ನು, ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಈ ಕಲೆಯು ತನ್ನಲ್ಲಿ ಆವರಿಸಿಕೊಂಡಿರುತ್ತದೆ. ಯಾವ ಕಲೆಯಲ್ಲಿ ಯಾರೂ ಎತ್ತರಕ್ಕೆ ಬೆಳೆಯಬಲ್ಲರು ಎನ್ನುವುದು ಅವರ ಪ್ರತಿಭೆ, ಸತತ ಪರಿಶ್ರಮ ಹಾಗೂ ಪ್ರಯತ್ನದ ಮೇಲೆ ನಿಂತಿರುತ್ತದೆ. ಹೀಗೆ ಒಂದು ವಿಶಿಷ್ಟ ಕಲಾಪ್ರಕಾರವಾದ ಚಾಕ್ ಆರ್ಟ್ನಲ್ಲಿ ಸಾಧನೆಗೈದ ಹೊನ್ನಾವರದ ಅರಣ್ಯಭಾಗದ ಹಳ್ಳಿಯ ಹುಡುಗನ ಪರಿಚಯಿಸುವ ಪ್ರಯತ್ನ ಈ ಲೇಖನ.
ಹೊನ್ನಾವರದಿಂದ ಸುಮಾರು ಮೂವತ್ತೂ ಕಿ.ಮಿ.ದೂರದ ಗೇರುಸೊಪ್ಪದ ಹಳ್ಳಿಯ ಮಂಜುನಾಥ ನಾಯ್ಕ ಹಾಗೂ ಚಂದ್ರಕಲಾ ದಂಪತಿಗಳ ಮಗನಾದ ಪ್ರದೀಪ್ ನಾಯ್ಕ ಈ ಸಾಧನೆಯನ್ನು ಮಾಡಿದ ಹುಡುಗ.
ಹೊನ್ನಾವರದ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ಓದುತ್ತಿರುವ ಸಂದರ್ಭದಲ್ಲಿ ತನ್ನ ಗೆಳೆಯರ ಒತ್ತಾಸೆಯ ಮೆರೆಗೆ ತನ್ನದೇ ಗೆಳೆಯರ ಹಾಗೂ ತನ್ನ ನೆಚ್ಚಿನ ಚಿತ್ರನಟರ ಚಿತ್ರಗಳನ್ನು ಬಿಡಿಸುತ್ತಾ ಇದ್ದ ಪ್ರದೀಪ್ ಗೆಳೆಯರಿಂದ ಕಲಾನಿಧಿ ಪ್ರದೀಪ್ ಎಂತಲೇ ಕರೆಸಿಕೊಂಡವರು.
ಹೀಗೆ ಚಿತ್ರಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆನ್ನುವ ಹಂಬಲ ತಲೆಯಲ್ಲಿ ತುಂಬಿಕೊಂಡ ಪ್ರದೀಪ್ ಬಿ.ಎಡ್. ಶಿಕ್ಷಣಕ್ಕಾಗಿ ಕಾರವಾರದ ಶಿವಾಜಿ ಮಹಾವಿದ್ಯಾಲಯದಲ್ಲಿ ವ್ಯಾಸಾಂಗ್ ಮಾಡುತ್ತಾ ಕಳೆದ ಎರಡು ವರ್ಷಗಳಿಂದ ಚಾಕ್ ಆರ್ಟ್ ಕಲೆಯ ಬಗ್ಗೆ ಗೀಳು ಹಚ್ಚಿಕೊಂಡು ಆ ದಿಸೆಯಲ್ಲಿ ಪ್ರಯತ್ನ ಶೀಲರಾದರು.
ಮೊದಲು ಮೊದಲು ತನ್ನ ಖುಷಿಗಾಗಿ ಚಾಕ್ ಪೀಸ್ ನಲ್ಲಿ ಇಂಗ್ಲಿಷ್ ನ ಅಕ್ಷರಗಳನ್ನು ಕೆತ್ತುವ ಅಭ್ಯಾಸ ಮಾಡುತ್ತಾ ಮಾಡುತ್ತಾ, ನಂತರ ತನ್ನ ಗೆಳೆಯರ ಹೆಸರುಗಳನ್ನು, ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ವೀರರ ಹೆಸರುಗಳನ್ನು ಕೆತ್ತತೊಡಗಿದರು. ಇದರಲ್ಲಿ ಅತ್ಯಂತ ಖುಷಿ ಸಿಕ್ಕಿತು ತನಗೆ ಎನ್ನುತ್ತಾರೆ ಪ್ರದೀಪ್.
ಆದರೆ ಇವೆಲ್ಲದಕ್ಕೂ ಒಂದು ಮೂರ್ತರೂಪ ಸಿಕ್ಕಿದ್ದು ಮಾತ್ರ ಕರೋನ್ ಲಾಕ್ಡೌನ್ ಹಾಗೂ ತೌಕ್ತೆ ಚಂಡಮಾರುತ ಸಮಯದಲ್ಲಿ ಎನದನುತ್ತಾರೆ ಸಾಧಕ ಯುವಕ ಪ್ರದೀಪ್ ನಾಯ್ಕ. ಆ ಸನಯದಲ್ಲಿ ತರಗತಿಯೂ ಇಲ್ಲ ಮನೆಯಲ್ಲಿಯೂ ಆನ್ ಲೈನ್ ಕ್ಲಾಸ್ ಕೂಡ ಇಲ್ಲ. ಈ ಅವದಿಯ ಸದುಪಯೋಗ ಪಡೆದುಕೊಳ್ಳಲು ಯೋಚಿಸಿದ ಪ್ರದೀಪ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಸಾಧಕರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದರು. ತಾನೂ ಈ ಸಾಲಿನಲ್ಲಿ ಸೇರಲೇ ಬೇಕು ಎನ್ನುವ ಛಲದಿಂದ ಚಾಕ್ ಪೀಸ್ ನಲ್ಲಿ ನಮ್ಮ ರಾಷ್ಟ್ರಗೀತೆ ಹಾಗೂ ರವೀಂದ್ರನಾಥ್ ಠಾಗೋರ್ ಅವರ್ ಹೆಸರನ್ನು ಕೆತ್ತುವ ನಿರ್ಣಯ ಮಾಡಿದರು. ಕೇವಲ 18 ತಾಸುಗಳಲ್ಲಿ 18 ಚಾಕ್ ಪೀಸ್ ನಲ್ಲಿ ಭಾರತದ ರಾಷ್ಟ್ರಗೀತೆ ಹಾಗೂ ರಾಷ್ಟ್ರಗೀತೆಯ ರಚನಕಾರ ರವೀಂದ್ರ ನಾಥ ಠಾಗೋರ್ ಅವರ ಹೆಸರನ್ನು ಕೆತ್ತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದರು. ಸಂಪೂರ್ಣವಾಗಿ ಪರಿಶೀಲಿಸಿ ಸಂಸ್ಥೆ ಪ್ರದೀಪ್ ನಾಯ್ಕ ಅವರ ಹೆಸರನ್ನು ದಾಖಲಿಸಿ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಿದೆ.
ಒಬ್ಬ ಗ್ರಾಮೀಣ ಪ್ರತಿಭೆ ತನ್ನ ಸತತ ಪ್ರಯತ್ನದಿಂದ ಪ್ರತಿಭೆಯನ್ನು ತಾನೇ ಬೆಳಗಿಸಿಕೊಂಡಿದೆ. ಈ ಕಲೆಯಷ್ಟೇ ಅಲ್ಲದೇ ಇವರಲ್ಲಿ ಅನೇಕ ಕಲೆಗಳ ಸಮಾಗಮವೂ ಇದೆ
ಎಸ್ ಡಿ ಏಮ್ ಕಾಲೇಜಿನಲ್ಲಿದ್ದಾಗಲೆ ಸಂಗೀತ ವನ್ನು ಗುರುಗಳಾದ *ಡಾ. ಅಶೋಕ ಹುಗ್ಗಣ್ಣನವರ್ ಮತ್ತು ಪಂ . ಗೋಪಾಲಕೃಷ್ಣ ಹೆಗಡೆ ಕಲ್ಭಾಗ್* ಅವರಲ್ಲಿ ಅಭ್ಯಾಸ ಮಾಡಿ ಪ್ರಸ್ತುತ *ಶ್ರೀಮತಿ ಶ್ರೀಲತಾ ಗುರುರಾಜ್* ಅವರಲ್ಲಿ ಅಭ್ಯಾಸ ಮಾಡುತ್ತಿರುವ ಪ್ರದೀಪ್ , ತಬಲಾ ವನ್ನು ಗುರುರಾಜ್ ಹೆಗಡೆ ಆಡುಕಳ ಅವರಲ್ಲಿ ಅಭ್ಯಾಸ ವನ್ನು ಮಾಡುತ್ತಿದ್ದಾರೆ.
ಕಲೆಯಲ್ಲಿ ಸಾಧನೆಯ ಕನಸು ಹೊತ್ತಿರುವ ಈ ಸಾಧಕನಿಗೆ ಕಲಾಪೋಷಕರ ಅರಾಧಕರ ಬೆಂಬಲ ಪ್ರೋತ್ಸಾಹ ಮಾರ್ಗದರ್ಶನ ದೊರೆತಲ್ಲಿ ಇನ್ನಷ್ಟು ಸಾಧನೆಯನ್ನು ಈತನಿಂದ ನಿರೀಕ್ಷೆ ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ.
ಲೇಖನ- ಉಮೇಶ ಮುಂಡಳ್ಳಿ, ಭಟ್ಕಳ