ಶಿರಸಿ ವೃತ್ತದ ವ್ಯಾಪ್ತಿಯಲ್ಲಿ ಹೊಸದಾಗಿ ವಿದ್ಯುತ್‌ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಹಾಗೂ 33ಕೆವಿ ರೆಫರನ್ಸ್‌ಗಳನ್ನು ಕಲ್ಪಿಸಿಕೊಡುವ ಕುರಿತು, ಶಕ್ತಿ ಪರಿವರ್ತಕಗಳನ್ನು ವೃದ್ಧಿಸುವ ಕಾಮಗಾರಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಇಂದು ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷರಾದ ಶ್ರಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಸಚಿವರಾದ ಶ್ರೀ ವಿ. ಸುನೀಲ್‌ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರೊಂದಿಗೆ ಸಭೆ ನಡೆಯಿತು.

ದಿನೇ ದಿನೇ ಕಾರವಾರ ನಗರ ಬೆಳೆಯುತ್ತಿರುವುದರಿಂದ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಕಾರವಾರ ನಗರಕ್ಕೆ ಒಂದು ವಿದ್ಯುತ್‌ ಉಪಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ವಿದ್ಯುತ್‌ ವ್ಯತ್ಯಯವನ್ನು ತಪ್ಪಿಸಲು ಚೆಂಡಿಯಾದಲ್ಲಿ ಹೊಸದಾಗಿ ಉಪವಿದ್ಯುತ್‌ ವಿತರಣಾ ಕೇಂದ್ರ ನಿರ್ಮಾಣ ಮಾಡುವುದು ಅವಶ್ಯಕವಾಗಿರುತ್ತದೆ. ಅಲ್ಲದೇ, ಚಿತ್ತಾಕುಲದಲ್ಲಿ ಉಪ ವಿದ್ಯುತ್‌ ಕೇಂದ್ರ ನಿರ್ಮಾಣಕ್ಕೆ ಜಾಗದ ಸಮಸ್ಯೆಯಾಗುತ್ತಿದ್ದು, ಅದನ್ನು ಪರಿಹರಿಸಿ ಸಾರ್ವಜನಿಕರಿಗೆ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳುವ ಕುರಿತು ಇಂಧನ ಸಚಿವರಾದ ಶ್ರೀ ವಿ. ಸುನೀಲ್‌ಕುಮಾರ್ ಅವರೊಂದಿಗೆ ಸಭೆಯಲ್ಲಿ ಚರ್ಚಿಸಿ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.

RELATED ARTICLES  ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ

ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟೆ ಮತ್ತು ಬಳಲೆಯಲ್ಲಿ ಹೆಚ್ಚುವರಿ ವಿದ್ಯುತ್ ಶಾಖಾಧಿಕಾರಿ ಕಚೇರಿಯನ್ನು ಪ್ರಾರಂಭಿಸುವಂತೆ ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು. ಕಾರವಾರ ವಿಭಾಗದಲ್ಲಿ ಕಾರವಾರ ಮತ್ತು ಅಂಕೋಲಾ ತಾಲ್ಲೂಕುಗಳಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ. ಇದನ್ನು ನೀಗಿಸಲು ಗ್ಯಾಂಗ್‌ಮನ್‌, ಲೈನ್‌ಮನ್‌ ಸೇರಿದಂತೆ ಸಿಬ್ಬಂದಿಗಳ ನಿಯೋಜನೆ ಕುರಿತು ಸಚಿವರ ಗಮನಕ್ಕೆ ತರಲಾಯಿತು.

ಕದ್ರಾದ ಕೆಪಿಸಿ ನಿರಾಶ್ರಿತರಿಗೆ 70 ಕುಟುಂಬಗಳಿಗೆ ಶಾಶ್ವತ ಮನೆ ಇಲ್ಲದಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಶಾಸಕರು ಮಾಹಿತಿ ನೀಡಿದ್ದಾರೆ.

ಶಾಸಕ ಸುನೀಲ್ ನಾಯ್ಕ ಮನವಿ.

ಕುಮಟಾ 110 ಕೆವಿ ಗ್ರಿಡ್‌ನಿಂದ ಸಿಂಗಲ್ ಸರ್ಕ್ಯೂಟ್ 110 ಕೆವಿ ಲೈನ್ ಮಾತ್ರ ಹೊನ್ನಾವರಕ್ಕೆ ಬಂದಿದ್ದು ಮಾರ್ಗದಲ್ಲಿ ದೋಷ ಬಂದರೆ ಸಂಪೂರ್ಣ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಯಾಗಿ ಭಟ್ಕಳ ತಾಲೂಕಿನಲ್ಲಿ 110 /33/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು 2019 ರಂದು ಮಂಜೂರಾತಿ ಪಡೆದುಕೊಂಡಿದ್ದು, ಅರಣ್ಯ ಇಲಾಖೆಯ ಅನುಮತಿಯೂ ಕೂಡ ದೊರಕಿರುತ್ತದೆ, ಭಟ್ಕಳ ತಾಲೂಕಿನಲ್ಲಿ ಸ್ಥಾಪಿಸಲ್ಪಡುವ 110 ಕೆವಿ ಉಪ ಕೇಂದ್ರದಿಂದ ಹೊಸದಾಗಿ ಸ್ಥಾಪಿಸಲ್ಪಡುವ 110 ಕೆವಿ ಬೈಂದೂರು ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಲಿಂಕ್ ಲೈನ್ ಸ್ಥಾಪಿಸಿ ಸಾರ್ವಜನಿಕರಿಗೆ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳುವಂತೆ ಮತ್ತು ಹೊನ್ನಾವರ ತಾಲೂಕಿನ ದಿಬ್ಬಣಗಲ್ ನಲ್ಲಿ 33 ಕಿವಿ ಕೇಂದ್ರ ನಿರ್ಮಿಸುವ ಕುರಿತು ಇನ್ನಿತರ ವಿಷಯಗಳ ಬಗ್ಗೆ ಶಾಸಕ‌ ಸುನೀಲ್ ನಾಯ್ಕ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.

RELATED ARTICLES  ಆಧಾರ್ ಜೋಡಣೆಗೆ ಮಾರ್ಚ್ 31, 2018 ರವರೆಗೆ ಗಡುವು ವಿಸ್ತರಣೆ