ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.
ಶ್ರೀಮತಿ ವಿದ್ಯಾ ದೀವಗಿ
ಎಲ್ಲಾ ಬಿದಿರೂ ಕೊಳಲಾಗುವುದಿಲ್ಲ. ಆದ ಕೊಳಲೆಲ್ಲವೂ ನಾದ ಹೊಮ್ಮುವುದಿಲ್ಲ. ತನ್ನನ್ನು ಕಡಿದು, ರಂದ್ರ ಕೊರೆದು, ಕೈಯಲ್ಲಿ ಹಿಡಿದರೂ ಕೊಳಲು ರಾಗವನ್ನೇ ಹೊಮ್ಮಿಸುತ್ತದೆ. ಹಾಗಂತ ಕೊಳಲು ನುಡಿಸುವ ಕೌಶಲ್ಯವಿರುವ ಸೃಜನಶೀಲನ ಕೈಯಲ್ಲಿ ಸಿಕ್ಕಾಗ ಮಾತ್ರ ಅದಕ್ಕೊಂದು ಬೆಲೆ. ಹಾಗಲ್ಲದೇ ಹೋದರೆ ಅದೊಂದು ಆಟಿಕೆಯೇ ಆಗಿಬಿಡುತ್ತದೆ. ಕಾಲಕಸವೂ ಆಗಬಹುದು ಕೆಲವರಿಗೆ. ಕೊಳಲು ಉಸಿರಿನ ಸ್ನೇಹ ಹಲವರ ಕಿವಿಗೆ ತಂಪನ್ನೆರೆಯುತ್ತದೆ. ಇಂಪಿನ ನಿನಾದವಾಗಿ ಜನಮನದಲ್ಲಿ ಉತ್ಸಾಹ ಹೊಮ್ಮಿಸುತ್ತದೆ. ಬಿದಿರಾಗಿ ಬಿದ್ದಿದ್ದ ನಮಗೊಂದು ರೂಪ ಕೊಟ್ಟು, ವಿದ್ಯೆ ಕೊಟ್ಟು, ಕಾಳಜಿ ತೋರಿ ನಮ್ಮಿಂದ ನಾದ ಹೊಮ್ಮಿಸಬಲ್ಲ ಜನರನ್ನು ಭಗವಂತನೇ ನಮ್ಮ ಜೊತೆಗೂಡಿಸುತ್ತಾನೆ. ನನ್ನ ಸಹೋದ್ಯೋಗಿಯಾಗಿ ಬದುಕಿಗೆ ಹರ್ಷ ತುಂಬಿ ಮನೆಮಗನಂತೆ, ಸಹೋದರನಂತೆ ಕಾಳಜಿ ತೋರಿದ ಶ್ರೀಮತಿ ವಿದ್ಯಾ ದೀವಗಿ ಇಂದಿನ ನನ್ನ ಅಕ್ಷರ ಅತಿಥಿ.
ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿ 16 ವರ್ಷಗಳೇ ಸಂದು ಹೋದವು. ನಾವೂ ಪಾಠ ಕಲಿಸಿದೆವು. ಹಲವರು ನಮಗೂ ಪಾಠ ಕಲಿಸಿದರು.? ಪಾಠದಲ್ಲಿ ಎರಡು ವಿಧ. ಹೀಗೆಯೇ ಮಾಡಬೇಕು. ಹೀಗಿದ್ದರೇ ಚೆನ್ನ ಎನ್ನುವ ಪಾಠ. ಹೀಗೆ ಮಾಡಬಾರದು. ಇದು ಸಮಾಜ ಘಾತುಕ. ಹೀಗೆ ಮಾಡಿದರೆ ಉಳಿದವರು ನಮ್ಮನ್ನು ಗೌರವಿಸಲಾರರು ಎನ್ನುವ ಪಾಠ. ನನ್ನ ವೃತ್ತಿ ಜೀವನದಲ್ಲಿ ಸಹೃದಯತೆಯ ಪಾಠ ಹೇಳಿಕೊಟ್ಟ ಶ್ರೀಮತಿ ವಿದ್ಯಾ ದೀವಗಿ ಅವರನ್ನು ನಾನೆಂದಿಗೂ ಮರೆಯುವಂತಿಲ್ಲ.
2005 ರಲ್ಲಿ ನಾನು ಸೇವೆಗೆ ಸೇರುವಾಗ ನನಗೆ ಎರಡು ಮಹತ್ತರ ಜವಾಬ್ದಾರಿಗಳು ಎದುರಾಗಿದ್ದವು. ಒಂದು ತಂದೆಯವರಿಗೆ ಆ ಸಮಯದಲ್ಲಿ Heart Problem ಪ್ರಾರಂಭ ಆಗಿತ್ತು. ಅವರ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಬೇಕಿತ್ತು. ಇನ್ನೊಂದು ಅಕ್ಕ ಸಂಧ್ಯಾಳಿಗೆ ಯೋಗ್ಯ ವರನನ್ನು ಹುಡುಕಿ ಮದುವೆ ಮಾಡಬೇಕಿತ್ತು. ಬೆಳಿಗ್ಗೆ 4.30 ಕ್ಕೆ ಎದ್ದು ಸ್ನಾನ ತಿಂಡಿ ಮುಗಿಸಿ Halting Bus ಹಿಡಿದು ಚಂದಾವರಕ್ಕೆ ಹೋಗಿ ಅಲ್ಲಿ 7.15 ಕ್ಕೆ ಬರುವ ಉಳ್ಳೂರುಮಠ ಬಸ್ ಹಿಡಿದು ಶಾಲೆಗೆ ಹೋಗುತ್ತಿದ್ದೆ. ಅಕಸ್ಮಾತ್ ಬಸ್ ತಪ್ಪಿ ಹೋದರೆ 2-3 ಮೈಲಿ ನಡೆಯಬೇಕು. ಇಷ್ಟಾದರೂ ಒಂದೇ ಒಂದು ದಿನ ಆಯಾಸದ ಅನುಭವವಾದದ್ದಿಲ್ಲ. ಯಾಕೆಂದರೆ ಶಾಲೆಯಲ್ಲಿ ವಿದ್ಯಕ್ಕೋರು, ಚಂದ್ರಕಲಾ ಬಾಯೋರು, ದಾಕ್ಷಾಯಿಣಕ್ಕ, ಉಷಕ್ಕ ಇವರೆಲ್ಲರೂ ತೋರಿದ ಕಾಳಜಿ. ನಾನೊಬ್ಬನೇ ಮಾಸ್ತರನಾದುದರಿಂದ ಅವರಿಗೂ ಒಬ್ಬ ಸಹೋದರ ಸಿಕ್ಕ ಸಂತೋಷ ಆಗಿರಬೇಕೆಂದು ನಾನಾದರೂ ಭಾವಿಸುತ್ತೇನೆ.
ವಿದ್ಯಕ್ಕೋರು ಅತ್ಯಂತ ಸೌಮ್ಯ ಸ್ವಭಾವದ ಸಾತ್ವಿಕ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೋಡಕಣಿ ಅವರ ಮನೆ. ಪತಿ ಕಮಲಾಕರ ಭಂಡಾರಿಯವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸತಿ-ಪತಿಯರಿಬ್ಬರೂ ನನ್ನನ್ನು ಅತ್ಯಂತ ಆತ್ಮೀಯತೆ ಯಿಂದ ಕಂಡಿದ್ದಾರೆ. ಗೌರವಿಸಿದ್ದಾರೆ. ಕಮಲಾಕರ ಭಂಡಾರಿಯವರಂತೂ ನನ್ನನ್ನು ಅವರೂರು ಕೋಡಕಣಿಗೆ ಕರೆಸಿಕೊಂಡು ಮಾತಿನ ಮಂಟಪವನ್ನೇ ಏರ್ಪಡಿಸಿದವರು. ‘ನಮ್ಮ ಸಂದೀಪ ಸರ್’ ಎಂದು ಹೇಳುವ ಅವರ ಬಂಧುತ್ವಕ್ಕೆ ನನಗೀಗಲೂ ಕಣ್ಣು ಒದ್ದೆಯಾಗುತ್ತದೆ. ಹೃದಯ ಭಾರವಾಗುತ್ತದೆ.
ಎಷ್ಟೋ ವೇಳೆ ವಿದ್ಯಕ್ಕೋರು ಮತ್ತು ನಾನು ಕೊಳಗೇರಿಯಿಂದ ನಡೆದು ನಡೆದು ಗರಡಿಬೈಲ್ ತಲುಪುತ್ತಿದ್ದೆವು. ನಮ್ಮ ಅಮ್ಮನ ಹಾಗೆ ದಢೂತಿಯಾಗಿದ್ದ ವಿದ್ಯಕ್ಕೋರು ಬಿಸಿಲಿನಲ್ಲಿ ಬೆವರೊರೆಸಿಕೊಳ್ಳುತ್ತಾ ಅಬ್ಭಾ! ಶಾಲೆ ಬಂತು ಎನ್ನುವಾಗ ನನಗೆ ನನ್ನ ಬಳಿ ಗಾಡಿಯಿಲ್ಲವಲ್ಲ ಎನ್ನುವ ಕೊರಗು ಕಾಡುತ್ತಿತ್ತು. ಒಂದು ವರ್ಷ ಕಳೆದ ಮೇಲೆ ನಾನು TVS Victor ಬೈಕು ಖರೀದಿಸಿದೆ. ಆಗಂತೂ ವಿದ್ಯಕ್ಕೋರನ್ನು ನಡೆಯಲಿಕ್ಕೆ ಬಿಡಲಿಲ್ಲ ಎನ್ನುವ ಸಮಾಧಾನ ನನಗೆ. ಪ್ರತಿದಿನವೂ “ಪಾಪ ಸರ್ ಗೆ ಕಷ್ಟಕೊಟ್ಟ ಹಾಗೆ” ಎನ್ನುತ್ತಿದ್ದರು. ನನಗೆ ಕಷ್ಟವಾದದ್ದಲ್ಲ. ಆದರೆ ಹೊಸಬನಾದ್ದರಿಂದ ಎಲ್ಲಿ ವಿದ್ಯಕ್ಕೋರನ್ನು ಬೀಳಿಸಿ ಬಿಡಬಹುದೇನೋ ಎನ್ನುವ ಭಯ ಕಾಡುತ್ತಿತ್ತು. ಆದರೂ ಧೈರ್ಯ ಮಾಡಿ ಅವರು ದಾರಿಯ ಮೇಲೆ ಸಿಕ್ಕಾಗಲೆಲ್ಲ ಶಾಲೆಯವರೆಗೆ ತಲುಪಿಸುತ್ತಿದ್ದೆ.
ನನ್ನ ಅಕ್ಕನ ಮದುವೆಯ ಸಂದರ್ಭದಲ್ಲಿ ನನ್ನ ಬಳಿ ಕ್ಯಾಮರಾ ಇರಲಿಲ್ಲ. ವಿದ್ಯಕ್ಕೋರು ಆಗಷ್ಟೇ Sony Digital Camera ಖರೀದಿಸಿದ್ದರು. ಹತ್ತು-ಹದಿನೈದು ಸಾವಿರ ಬೆಲೆ ಆಗ ಅದಕ್ಕೆ. ಒಮ್ಮೆ ಅವರು ಅದನ್ನು ನನಗೆ ಕೊಡಬಹುದಾ ಎಂದು ಕೇಳುವ ಮನಸ್ಸು. ಆದರೂ ಬೆಲೆ ಬಾಳುವ ವಸ್ತು ಆದುದರಿಂದ ಕೇಳಬಾರದು ಎಂದು ಇನ್ನೊಂದು ಮನಸ್ಸು ಹೇಳುತ್ತಿತ್ತು. ಆದರೂ ವಿದ್ಯಕ್ಕೋರ ಬಳಿ ಕೇಳಿದೆ. ಅವರು ಮನೆಯವರನ್ನು ಕೇಳಿ ಹೇಳುತ್ತೇನೆ ಎನ್ನಬಹುದು ಎಂದು ನನ್ನ ನಿರೀಕ್ಷೆ. ಆದರೆ ಅವರು ತಕ್ಷಣ ರೂಮಿಗೆ ಹೋದವರೇ ಕಮಲಾಕರ ಭಂಡಾರಿವರ ಹತ್ತಿರ “ಕ್ಯಾಮರಾ ಕೊಟ್ಟು ಬನ್ನಿ ಸರ್ ಗೆ” ಅಂತ ಕಳುಹಿಸಿದ್ದರು. ಸುಮಾರು ಹದಿನೈದು ದಿನಗಳ ಕಾಲ ಅವರ ಕ್ಯಾಮರಾ ನನ್ನ ಬಳಿಯೇ ಇತ್ತು. ಈ ಕಾಲಕ್ಕೆ… ಸಮಯಕ್ಕೆ…. ಅದು ಏನೂ ಅಲ್ಲ ಎಂದೆನಿಸಬಹುದು ಆದರೆ ಆ ಸಮಯದಲ್ಲಿ ಅವರು ಮಾಡಿದ ದೊಡ್ಡ ಉಪಕಾರ ಅದು.
ಕಮಲಾಕರ ಭಂಡಾರಿಯವರು, ವಿದ್ಯಕ್ಕೋರು ನನ್ನ ಮದುವೆಗೆ ಬಂದು ನಾನು ಅತ್ಯಂತ ಇಷ್ಟಪಡುವ ಗಣಪತಿಯ ಪಂಚಲೋಹದ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು. ಸಂದೀಪ ಸರ್ ಬೇರೆಯವರಲ್ಲ ಅವರು ನಮ್ಮ ಕುಟುಂಬದ ಒಬ್ಬ ಸದಸ್ಯರೇ ಎಂಬಂತೆ ವ್ಯವಹರಿಸುವ ಅವರಿಬ್ಬರ ಪ್ರೀತಿಗೆ ನಾನು ಕೈಜೋಡಿಸಿ ನಮಸ್ಕರಿಸಬೇಕು.
ಮಗ, ಮಗಳು ಸಂತೃಪ್ತ ಸಂಸಾರ…ಅವರದ್ದು. ಶಿರಸಿ ತವರುಮನೆ ನಮ್ಮ ವಿದ್ಯಕ್ಕೋರಿಗೆ. ತವರು ಮನೆಯ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವ ಪತಿ ಹೀಗಾಗಿ ಈಗಲೂ ಸೊಂಪಾಗಿಯೇ ಇದ್ದಾರವರು. ? ಆರು ವರ್ಷಗಳ ಕಾಲ ಅವರ ಜೊತೆಗೆ ಕಾರ್ಯ ನಿರ್ವಹಿಸಿದ್ದೇನೆ. ಒಂದೇ ಒಂದು ದಿನವೂ ಮುನಿಸಾದದ್ದಿಲ್ಲ. ವಿದ್ಯಾರ್ಥಿಗಳಿಗೂ ರೇಗದೆ ಪಾಠ ಮಾಡುವ ಅವರ ಸೌಮ್ಯತೆ ಸಹೃದಯತೆ ಮರೆಯಲಾರದ್ದು.
ಎಷ್ಟೋ ಕಾಲ ಸಂದುಹೋಯಿತು. ನಾನವರನ್ನು ಭೇಟಿಯೇ ಆಗಲಿಲ್ಲ. ಹೀಗೊಂದು ಕೃತಜ್ಞತೆಯ ಅಕ್ಷರಾರ್ಪಣೆ ಮಾಡುವ ಮೂಲಕ ಅವರನ್ನು ನೋಡಿದಷ್ಟೇ ಸಂತೋಷ ಹೊಂದಬೇಕೆಂಬ ಮನಸ್ಸಾಯಿತು. ಅವರ ಕೊಂಕಣಿ ನನಗೆ ಪೂರ್ಣ ಅರ್ಥವಾಗದು. ? ಆದರೆ ನನ್ನ ಕನ್ನಡವನ್ನು ಅವರು ಸಂಪೂರ್ಣ ಅರ್ಥಮಾಡಿಕೊಳ್ಳುತ್ತಾರೆ.
ಒಬ್ಬ ಯೋಗ್ಯ ಪ್ರಾಮಾಣಿಕ ಗುರುಮಾತೆಯಾಗಿ ದುಡಿಯುವ, ತನ್ನ ಪಾಡಿಗೆ ತಾನು ಸೇವೆ ಮಾಡುವ…. ವಿದ್ಯಕ್ಕೋರು ವಿದ್ಯಾರ್ಥಿಗಳ ಪಾಲಿಗೆ ಈಗಲೂ ಮನಮೆಚ್ಚುವ ಶಿಕ್ಷಕಿ. ವಿದ್ಯಕ್ಕೋರ ನೆನಪುಗಳು ನನಗಿನ್ನೂ ಜೀವಂತವಾಗಿದೆ ಎನ್ನುವುದಕ್ಕಷ್ಟೇ ಈ ಅಕ್ಷರಗಳು. ನಿಮ್ಮ ಕುರಿತಾಗಿ ಬರೆಯುವುದೆಂದರೆ ನನಗೆ ಸಂಭ್ರಮಿಸುವುದಕ್ಕೆ ಸಿಕ್ಕ ಮತ್ತೊಂದು ಅವಕಾಶ ಎನ್ನುವ ಸ್ವಾರ್ಥ ನನ್ನದು.
ಕೆಲವೊಂದು ಚಿತ್ರಗಳು ನೋಡಿದಷ್ಟು ಹೊತ್ತು ಮಾತ್ರ ನೆನಪಿರುತ್ತದೆ. ಕೆಲವೊಬ್ಬರು ಕೆಲದಿನಗಳವರೆಗೆ ಮಾತ್ರ ಸ್ಮರಣೆಯಲ್ಲಿ ಉಳಿಯುತ್ತಾರೆ. ಆದರೆ ಬದುಕಿಗೆ ನೆರವಾದ, ಕಾಳಜಿ ತೋರಿದ, ನಮಗಾಗಿ ಹೃದಯತುಂಬಿ ನಾಲ್ಕು ಮಾತನಾಡುವ, ಸಮಯ ಬಂದಾಗ ಕಣ್ಣೀರು ಮಿಡಿಯುವ ಜನ ಮಾತ್ರ ಸಾಯುವವರೆಗೂ ನೆನಪಾಗುತ್ತಲೇ ಇರುತ್ತಾರೆ. ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.