ಭಾರತದ ಆರ್ಥಿಕತೆ ಸ್ಥಿರತೆ ಕಂಡುಕೊಳ್ಳುವತ್ತ ಸಾಗುತ್ತಿದೆ. ಈ ಬಾರಿ ಬಜೆಟ್ಟಿನಲ್ಲಿ ಹೆಚ್ಚಿನ ಬದಲಾವಣೆ ಏನೂ ಮಾಡಿಲ್ಲ ಎಂಬ ಮಾತಿದೆ. ತೆರಿಗೆಯಲ್ಲಿ ತೀವ್ರತರದ ಬದಲಾವಣೆ ಇಲ್ಲದಿರುವುದು ಸ್ಥಿರತೆಯ ಸೂಚಕ. ಬದಲಾವಣೆ ಇಲ್ಲದಿರುವುದೇ ನಿಜವಾದ ಬದಲಾವಣೆ ಎಂದು ನಿವೃತ್ತ ಜಿಎಸ್’ಟಿ ಕಮಿಷನರ್ ಗೌರಿಬಣಗಿ ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿತವಾಗಿದ್ದ 9 ನೇ ವರ್ಷದ ಕೇಂದ್ರ ಮುಂಗಡ ಪತ್ರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಜಿಎಸ್’ಟಿ ಕಮಿಷನರ್ ಎಸ್.ಎಂ ಹೆಗಡೆ ಗೌರಿಬಣಗಿ, ತೆರಿಗೆಯಲ್ಲಿನ ದಡೀರ್ ಬದಲಾವಣೆ ವ್ಯಾಪಾರ ವ್ಯವಹಾರದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತದೆ. ಸಿಂಗಾಪುರದಲ್ಲಿ ಆರು ತಿಂಗಳ ಮೊದಲೇ ತೆರಿಗೆಯಲ್ಲಿ ಮಾಡುತ್ತಿರುವ ಬದಲಾವಣೆಗಳ ಕುರಿತು ವರ್ತಕರಿಗೆ ತಿಳಿಸಿ; ಅವರಿಂದ ಪ್ರತಿಸ್ಪಂದನೆ ಪಡೆದು, ಆನಂತರ ಬದಲಾವಣೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರ ಮುಂಗಡ ಪತ್ರವನ್ನು ವಿಶ್ಲೇಷಿಸಿದ ಅವರು, ಈ ಬಾರಿ ಮೂಲಭೂತ ಅಭಿವೃದ್ಧಿಗೆ ಬಜೆಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಿರುವುದು ಅಭಿವೃದ್ಧಿ ದ್ಯೋತಕವಾಗಿದ್ದು, ಮೂಲಭೂತ ಸೌಕರ್ಯಗಳು ಬೆಳೆದಂತೆ ವ್ಯಾಪಾರ ವ್ಯವಹಾರಗಳು ಬೆಳೆಯಲು ಸಾಧ್ಯ ಎಂದರು.
ಹಿಂದೆ ರಾಜ್ಯ ಸ್ತರದಲ್ಲಿ ವ್ಯಾಟ್ ತೆರಿಗೆ ಪರಿಚಯಿಸಿದಾಗ, ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ಸುಮಾರು 5 ವರ್ಷಗಳೇ ಬೇಕಾಗಿತ್ತು. ಈಗ ಸಮಗ್ರ ದೇಶಕ್ಕೆ ಜಿಎಸ್’ಟಿ ಪರಿಚಯಿಸಲಾಗಿದ್ದು, ಜಿಎಸ್’ಟಿ ಅನುಷ್ಠಾನದ ಆರಂಭಿಕ ಪ್ರಗತಿ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಎಸ್’ಟಿ ಉಪ ಆಯುಕ್ತೆ ಸಹನ ಬಾಳಕಲ್ ಮಾತನಾಡಿ, ಸಿಎ, ಸಿಎಸ್ ಹಾಗು ಸಿಎಂಎ ವೃತ್ತಿಪರರು ಸಂಘಟಿತರಾಗುತ್ತರಾಗಿ, ಸಾಮೂಹಿಕ ಚರ್ಚೆಗಳನ್ನು ನಡೆಸುತ್ತಿರುವುದು ಉತ್ತಮವಾದ ಬೆಳವಣಿಗೆ. ನೀವೆಲ್ಲರೂ ಸಂಬಂಧಿತ ಸರ್ಕಾರಿ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದರ ಜೊತೆಗೆ, ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ಸೂಚನೆ ನೀಡಿ, ಉದ್ದಿಮೆದಾರರಿಗೆ ಕಾನೂನಿನ ತಿಳುವಳಿಕೆ ನೀಡುವ ಮೂಲಕ ಸಹಕರಿಸಲು ಕೋರಿದರು.
ಸಿಎ ಪ್ರಕಾಶ್ ಹೆಗಡೆ ನೇರತೆರಿಗೆ ಹಾಗೂ ಮುಂಗಡಪತ್ರದಲ್ಲಾದ ಬದಲಾವಣೆಯ ಕುರಿತು ಮಾಹಿತಿ ನೀಡಿ, ಈ ಬಾರಿ ಕ್ರಿಪ್ಟೋ ಕರೆನ್ಸಿ ವ್ಯವಹಾರವನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿದ್ದು, ಕ್ರಿಪ್ಟೋ ಕರೆನ್ಸಿ ವ್ಯವಹಾರದ ಲಾಭದ ಮೇಲೆ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಆದರೆ ತೆರಿಗೆ ತಪ್ಪಿಸಿಕೊಳ್ಳಲು ಚೈನಾ ಮುಂತಾದ ದೇಶಗಳ ಏಜೆಂಟುಗಳ ಮೂಲಕ ವ್ಯವಹಾರ ನಡೆಸುತ್ತಿದ್ದು, ಸರ್ಕಾರದ ಕಣ್ಣುತಪ್ಪಿಸಿ, ಕ್ರಿಪ್ಟೋ ಆದಾಯವನ್ನು ಮರೆಮಾಚುತ್ತಿದ್ದಾರೆ ಎಂಬ ದೂರುಗಳಿವೆ ಎಂದು ತಿಳಿಸಿದರು.
‘ಅಪ್ಡೇಟೆಡ್ ರಿಟರ್ನ್’ ಎಂಬ ಆಯ್ಕೆಯನ್ನು ಪರಿಚಯಿಸಲಾಗಿದ್ದು, ಈಗಾಗಲೇ ಸಲ್ಲಿಕೆಯಾದ ಆದಾಯ ತೆರಿಗೆಯ ಮಾಹಿತಿಗಳನ್ನು ಪರಿಷ್ಕರಿಸಲು, ನಿಬಂಧನೆಗಳಿಗೆ ಒಳಪಟ್ಟು ಹಲವು ಆಯ್ಕೆಗಳನ್ನು ನೀಡಲಾಗಿದೆ ಎಂದರು.
ಸಿಎಸ್ ಸಿರಿ ಭಟ್ ಕಂಪನಿ ಕಾಯ್ದೆಯಲ್ಲಾದ ಬದಲಾವಣೆಗಳು ಹಾಗೂ ಕಂಪನಿ ನೊಂದಾವಣಿ ಮುಂತಾದ ಸಂದರ್ಭದಲ್ಲಿ ಎದುರಾಗುವ ಪ್ರಾಯೋಗಿಕ ಸಮಸ್ಯೆ
ಗಳು ಹಾಗೂ ಪರಿಹಾರೋಪಾಯಗಳ ಕುರಿತು ಬೆಳಕು ಚೆಲ್ಲಿದರು.
ಸಿಎಮ್’ಎ ವಿಶ್ವನಾಥ್ ಭಟ್ ಜಿಎಸ್’ಟಿ ಕ್ಷೇತ್ರದಲ್ಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಿ, ಜಿಎಸ್’ಟಿ ಕ್ರಡಿಟ್ ಮ್ಯಾಚಿಂಗ್, ಜಿಎಸ್’ಟಿ ಆಡಿಟ್ ಸಂದರ್ಭದಲ್ಲಿ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದರು.
ಕಂಪನಿ ಸೆಕರೇಟರಿ ಕೇಂದ್ರೀಯ ಸಮಿತಿಯ ಮಾಜಿ ಸದಸ್ಯರಾದ ಸಿಎ. ಸಿಎಸ್ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಪ್ರತಿಭೆ ನಮ್ಮಲ್ಲಿ ಸಹಜವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಹೆಮ್ಮೆಯನ್ನು ಹಾಗೂ ನಾಡಿಗೆ ಸೇವೆಯನ್ನು ಸಲ್ಲಿಸಬೇಕು ಎಂದರು. ನೂತವಾಗಿ ಸಿಎ, ಸಿಎಸ್, ಸಿಡಬ್ಲುಎ ಉತ್ತೀರ್ಣರಾದವರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಮಹಾಸಭೆಯಿಂದ ಮಾಡಲಾದ ಈ ಸನ್ಮಾನ ನಿಮ್ಮ ಪರಿಶ್ರಮ, ಸಹಜ ಪ್ರತಿಭೆ ಹಾಗೂ ಜನ್ಮಜಾತ ಸಂಸ್ಕಾರಕ್ಕೆ ಸಂದಿರುವುದಾಗಿದೆ ಎಂದರು.
ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ಹವ್ಯಕ ಮಹಾಸಭೆಯು ಎಲ್ಲಾ ವೃತ್ತಿಪರರಿಗೂ ಮುಕ್ತವಾಗಿದ್ದು, ಮಹಾಸಭೆಯನ್ನು ಬಳಸಿಕೊಂಡು ಇಂತಹ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ ಎಂದರು.
ಹವ್ಯಕ ವಾಣಿಜ್ಯ ಬಳಗದ ಸಂಚಾಲಕ ಸಿಎ ಶಿವರಾಮ್ ಭಟ್, ಕಾರ್ಯಕ್ರಮದ ಸಂಚಾಲಕರಾದ ಸಿಎ ಪ್ರಮೋದ್ ಹೆಗಡೆ, ಸಿಎ ಶ್ರೀಪಾದ್ ಎನ್ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು, ಅನೇಕ ಹಿರಿಯ ಸಿಎ, ಸಿಎಸ್ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸಿಎ, ಸಿಎಸ್, ಸಿಎಂಎ ಉತ್ತೀರ್ಣರಾದವರಿಗೆ ಸನ್ಮಾನ :
ಸಿಎ, ಸಿಎಸ್ ಹಾಗೂ ಸಿಎಂಎ ಪರೀಕ್ಷೆಗಳಲ್ಲಿ ಈ ಬಾರಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಮಿತಿಗಳಿಗೆ ಆಯ್ಕೆಯಾದ ವೃತ್ತಿಪರರನ್ನು ಇದೇ ಸಂದರ್ಭದಲ್ಲಿ ಹವ್ಯಕ ಮಹಾಸಭೆಯಿಂದ ಸನ್ಮಾನಿಸಲಾಯಿತು.