ನವದೆಹಲಿ : ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂ. ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಬಿಕ್ ಶಾಕ್ ನೀಡಿದೆ. ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ದೇಶಾದ್ಯಂತ 80 ಪೈಸೆ ಏರಿಕೆಯಾಗಿದೆ. ಈ ಮೂಲಕ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೆಡೆ ಕೊರೋನಾ ಕಾರಣದಿಂದ ನಿಧಾನಕ್ಕೆ ಆರ್ಥಿಕ ವ್ಯವಸ್ಥೆ ಮೇಲೇಳುತ್ತಿರುವಂತೆಯೇ ಗ್ರಾಹಕರಿಗೆ ಈ ಏರಿಕೆ ನುಂಗಲಾರದ ತುತ್ತಾಗಿದೆ ಎಂದೇ ಬಣ್ಣಿಸಲಾಗುತ್ತಿದೆ. 14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 949.50 ಪೈಸೆಯಾಗಿದೆ.
ಅಕ್ಟೋಬರ್ 6ರಂದು ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು, ನವೆಂಬರ್ 4ರಂದು ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂಧನ ದರ ಏರಿಕೆಯಾಗಿರಲಿಲ್ಲ. ನಾಲ್ಕೂವರೆ ತಿಂಗಳ ನಂತರ ಇಂಧನ ಬೆಲೆ ಹೆಚ್ಚಳವಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರೆಲ್‌ಗೆ USD 81-82 ರಷ್ಟಿದ್ದು ಈಗ USD 114 ರಷ್ಟಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂಪಾಯಿ ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2003.50 ರೂಪಾಯಿಗಳಾಗಿದೆ.