ಕುಮಟಾ: 3 ಕೋಟಿ ರೂಪಾಯಿ ವೆಚ್ಚದಲ್ಲಿ ಕುಮಟಾದಲ್ಲಿ ವಿವಿಐ ಗೆಸ್ಟ್ ಹೌಸ್ ನಿರ್ಮಾಣ, ಗೋಕರ್ಣ ವಡ್ಡಿ ದೇವನಹಳ್ಳಿ ದುರಸ್ತಿಗೆ ಒಂದೂವರೆ ಕೋಟಿ, ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ರಸ್ತೆ ದುರಸ್ತಿಗೆ 2 ಕೋಟಿ ರೂಪಾಯಿ, ಖಂಡಗಾರ ರಸ್ತೆ ನಿರ್ಮಾಣಕ್ಕೆ ಒಂದೂವರೆ ಕೋಟಿ, ಬಾಸೊಳ್ಳಿ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದೆ ಶಾಸಕ ದಿನಕರ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ಪ್ರದೇಶ ನಮ್ಮದಾಗಿದ್ದು ಹಾಗಾಗಿ ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ತರುವಲ್ಲಿ ಪ್ರಯತ್ನ ವಹಿಸಿದ್ದೇನೆ. ಹೊರ ಜಿಲ್ಲೆ, ರಾಜ್ಯಗಳ ಜನತೆ ಕೂಡ ನಮ್ಮಲ್ಲಿಯ ವ್ಯವಸ್ಥೆ ಕಂಡು ಮೆಚ್ಚುಗೆ ಸೂಚಿಸಬೇಕು. ಆ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನೂ ಸಾಕಷ್ಟು ಕಾಮಗಾರಿಗಳು ಹಂತಹಂತವಾಗಿ ನಡೆಯುವುದಿದೆ ಮೂರೂರು ರಸ್ತೆ ಕಾಮಗಾರಿ ವಿಳಂಬಕ್ಕೆ ನಾನಾ ಕಾರಣಗಳಿದ್ದು ಏನೇ ತೊಡಕುಗಳಿದ್ದರೂ ಶೀಘ್ರ ರಸ್ತೆ ಅಗಲೀಕರಣ ಕಾರ್ಯ ಮುಗಿಯಲಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಬಸವರಾಜ್ ಹೊರಟ್ಟಿ ಅವರು ಮತ್ತೊಮ್ಮೆ ಶಿಕ್ಷಕರ ಪದವೀಧರ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೆ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ಧನ್ಯವಾದ ಹೇಳಲೇಬೇಕಿದೆ. ಜೊತೆಗೆ ಪ್ರಧಾನಿ ಮೋದಿಯವರು ಎಂಟು ವರ್ಷಗಳ ಸಮರ್ಥ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಂಡಲದ ಅಧ್ಯಕ್ಷ ಹೇಮಂತ್ ಕುಮಾರ್ ಗಾಂವಕರ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಜಿ.ಐ.ಹೆಗಡೆ, ವಿನಾಯಕ ನಾಯ್ಕ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೆರಿ, ಹಿರಿಯ ಮುಖಂಡ ವಿನೋದ ಪ್ರಭು, ಜಿ.ಪಂ. ಮಾಜಿ ಸದಸ್ಯ ಗಜಾನನ ಪೈ, ಅಶೋಕ ಪ್ರಭು, ನಗರ ಘಟಕದ ಅಧ್ಯಕ್ಷ ಪ್ರಸಾದ ನಾಯಕ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಸದಸ್ಯರು ಕಾರ್ಯಕರ್ತರು ಇದ್ದರು.