ಕುಮಟಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಮಟಾ ಘಟಕದ ವತಿಯಿಂದ ಜೂ.೨ ರಂದು ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಆ ಪ್ರಯುಕ್ತ ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಸಾರ್ವಜನಿಕರಿಗಾಗಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ,ಅಂದು ಬೆಳಿಗ್ಗೆ ೧೧ ಘಂಟೆಯಿಂದ ನಡೆಯಲಿರುವ ಕಾರ್ಯಾಗಾರವನ್ನು ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜಿ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಉದ್ಘಾಟಿಸಲಿದ್ದು, ಪತ್ರಿಕೆಗೆ ಬರೆಯುವುದು ಹೇಗೆ? ಎಂಬುದರ ಕುರಿತು ಹೊಸ ದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ ವಿನಾಯಕ ಭಟ್ಟ ಮುರೂರು ಉಪಸನ್ಯಾಸ ನೀಡಲಿದ್ದಾರೆ. ಪರಿಸರ ಮತ್ತು ಮಾಧ್ಯಮದ ಕುರಿತು ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಉಪಾಧ್ಯಕ್ಷ ಎಂ.ಜಿ.ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೩ ಘಂಟೆಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಧಾನ ಸಂಪಾದಕ ಮತ್ತು ವಿಸ್ತಾರ ಮೀಡಿಯಾದ ಸಿಇಓ ಹರಿಪ್ರಕಾಶ ಕೊಣೇಮನೆ, ಪರಿಸರ ಬರಹಗಾರ ಶಿವಾನಂದ ಕಳವೆ, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ ವಿನಾಯಕ ಭಟ್ಟ ಮುರೂರು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜಿನ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ, ಕಾ.ನಿ.ಪ ಸಂಘದ ಜಿಲ್ಲಾ ಪ್ರತಿನಿಧಿ ಗಣೇಶ ರಾವ್ ಪಾಲ್ಗೊಳ್ಳಲಿದ್ದಾರೆ.
ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೇ? ಎಂಬ ವಿಷಯದ ಕುರಿತು ಪ್ರಬಂಧ ಸ್ಫರ್ಧೆ ಮತ್ತು ಭಾವಗೀತೆ ಸ್ಫರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯೂ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಲು ಪ್ರವೀಣ ಹೆಗಡೆ ವಿನಂತಿಸಿದ್ದಾರೆ.