Home Special News ಬಂಗಾರದ ಪದಕ ಪಡೆದ ಡಾ. ಪೃಥ್ವಿ.

ಬಂಗಾರದ ಪದಕ ಪಡೆದ ಡಾ. ಪೃಥ್ವಿ.

ಸಿದ್ದಾಪುರ : ಇಲ್ಲಿಯ ಇಂದಿರಾ ನಗರದ ನಿವಾಸಿ ಡಾ.ಪೃಥ್ವಿ ಭಟ್ಟ ಕರ್ನಾಟಕದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯುರ್ವೇದ ಎಂ.ಡಿ.ಯ ಕಾಯಚಿಕಿತ್ಸಾ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದು ಬಂಗಾರದ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಜರುಗಿದ 26 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರು, ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಲ್ಲೋಟ್ ಡಾ.ಪೃಥ್ವಿ ಭಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನವದೆಹಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್‌. ಗಂಗಾಧರ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ, ಕುಲಪತಿ ಡಾ.ಎಂ. ಕೆ.ರಮೇಶ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಡಾ.ಪೃಥ್ವಿ ಭಟ್ಟ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಹಾಗೂ ಶ್ರೀಮತಿ ಲತಾ ಭಟ್ಟ ದಂಪತಿಯ ಪುತ್ರಿಯಾಗಿದ್ದು ಡಾ.ಶಂಕರಪ್ರಸಾದ ಕೆ. ಅವರ ಪತ್ನಿಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿನಿಯು ಈ ಹಿಂದೆ ಬಿಎಎಂಎಸ್‌ನ ತೃತೀಯ ವರ್ಷದಲ್ಲಿಯೂ ಸಹ ಅತ್ಯಧಿಕ ಅಂಕ ಪಡೆದು ಬಂಗಾರದ ಪದಕ ಪಡೆದಿದಳು.