ನವದೆಹಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ ಇಂದು ಬೆಳಗ್ಗೆ 9:18ರ ವೇಳೆಗೆ ಉಡಾವಣೆಗೊಂಡಿತ್ತು. ಇಒಎಸ್-02 ಉಪಗ್ರಹ ಉಡಾವಣೆ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ. ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿ ಉಡಾವಣೆಗೊಂಡ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ) ತನ್ನ ಉದ್ದೇಶಿತ ಗುರಿಯನ್ನು ತಲುಪಲಿಲ್ಲ ಎನ್ನಲಾಗಿದೆ.
ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯುಲ್(ವಿಟಿಎಂ) ಉಪಗ್ರಹವನ್ನು ತನ್ನ ಕಕ್ಷೆಗೆ ಸೇರಿಸಬೇಕಿತ್ತು. ಆದರೆ ಅದು ಟರ್ಮಿನಲ್ ಹಂತದಲ್ಲಿ ಉರಿದಿರಲಿಲ್ಲ. ವಿಟಿಎಂ 30 ಸೆಕೆಂಡುಗಳ ಕಾಲ ಉರಿಯಬೇಕಿತ್ತು. ಆದರೆ ಅದು ಸರಿಯಾಗಿ ಉರಿಯದೇ ಇದ್ದುದು ವೈಫಲ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಇಸ್ರೋ ಮೊದಲಿಗೆ ಉಪಗ್ರಹ ಉಡಾವಣೆ ಹಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಘೋಷಿಸಿತ್ತು. ಆದರೆ ತಾಂತ್ರಿಕ ದೋಷದ ಸುಳಿವು ಮೊದಲೇ ಸಿಕ್ಕಿದ್ದರಿಂದ ಮಿಷನ್ ಯಶಸ್ವಿಯಾಗಿದೆ ಎಂದು ತಕ್ಷಣವೇ ಘೋಷಿಸಿರಲಿಲ್ಲ.