ಕಳೆದ ಕೆಲವು ಸಮಯದಿಂದ ಕರ್ನಾಟಕದ ಭಾರತೀಯ ಜನತಾಪಾರ್ಟಿಯು ತೆಗೆದುಕೊಳ್ಳುತ್ತಿರುವ ಕೆಲವು ವಿವೇಚನಾ ರಹಿತ ನಿರ್ಧಾರಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣ ಆಗುತ್ತಲಿದ್ದು ಕೇಂದ್ರದ ನಾಯಕರೂ ಈ ಬಗ್ಗೆ ಚಿಂತಿತರಾಗಿದ್ದಾರೆ ಎಂದು ರಾಜಕೀಯ ಮೊಗಸಾಲೆಯಲ್ಲಿ ಚರ್ಚಿತವಾದ ವಿಷಯವಾಗಿದೆ. ಪಕ್ಷದ ಪ್ರಬಲ ಕಾರ್ಯಕರ್ತ ಸುಳ್ಯದ ಪ್ರವೀಣ ನೆಟ್ಟಿಯಾರ ಅವರ ಬರ್ಬರ ಹತ್ಯೆಯ ನಂತರದ ಬೆಳವಣಿಗೆಗಳಿಂದ ತೀವ್ರ ಮುಜುಗರಕ್ಕೆ ಒಳಗಾದ ಪಕ್ಷವು ಇದರಿಂದ ಹೊರಬರಲು ಚಿಂತನೆ ನಡೆಸುತ್ತಿರುವ ಸಮಯದಲ್ಲಿ ಕಾಂಗ್ರೇಸ್ ನಾಯಕ ಸಿದ್ಧರಾಮರ ಜನ್ಮದಿನಕ್ಕೆ ವ್ಯಕ್ತವಾದ ಜನ ಬೆಂಬಲ ಹಾಗೂ ಮಳೆಯ ಅವಾಂತರದಿಂದ ಆದ ಅನಾಹುತಗಳನ್ನು ನಿಭಾಯಿಸುವ ಸವಾಲಿನ ಸಮಸ್ಯೆಗಳಲ್ಲಿ ಇರುವ ಪಕ್ಷದಲ್ಲಿ
ಕಾರ್ಯಕರ್ತರನ್ನು ಸಮಾಧಾನ ಪಡಿಸುವುದೂ ಮುಖ್ಯವಾದ ಸಂದರ್ಭದಲ್ಲಿಯೇ ಜಿಲ್ಲೆಯ ಮಟ್ಟಿಗೆ ಪಕ್ಷ ತೆಗೆದುಕೊಂಡ ಎರಡು ಅವಸರದ ತೀರ್ಮಾನವು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಹೊನ್ನಾವರದ ಮೀನುಗಾರ ಸಮುದಾಯದ ಪರೇಶ ಮೇಸ್ತಾ ಅವರ ನಿಗೂಢವಾದ ಸಾವು ಹಾಗೂ ಅದೊಂದು ಉದ್ದೇಶ ಪೂರಿತ ಕೊಲೆಯೆಂದೇ ಪರಿಗಣಿಸಿದ ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವಾಗಿ ಪ್ರಯೋಗಿಸಿ ಕರಾವಳಿಯಲ್ಲಿ ಪ್ರಚಂಡ ಬಹುಮತದ ಸ್ಥಾನವನ್ನು ಕಳಿಸಿದ್ದು ಈಗ ಇತಿಹಾಸ . ಆದರೆ ಈ ಕೊಲೆಗೆ ಯಾರನ್ನು ಆರೋಪಿ ಎಂದು ಪಕ್ಷ ಆಪಾದಿಸಿ ಅವರ ಮೇಲೂ ದೂರು ದಾಖಲಿಸಿತ್ತೋ ಅವರನ್ನೇ ಉತ್ತರಕನ್ನಡ ಜಲ್ಲಾ ವಕ್ಘ ಮಂಡಳಿಯ ಉಪಾಧ್ಯಕ್ಷರನ್ನಾಗಿಸಿ ಕಾರ್ಯಕರ್ತರ ತೀವ್ರ ಅಸಮಾಧಾನವನ್ನು ಎದುರಿಸುವಂತಾಗಿ ಹೆಚ್ಚಿನ ಕಾರ್ಯಕರ್ತರು ಪದಾಧಿಕಾರಿಗಳು ರಾಜೀನಾಮೆ ನೀಡಲು ಮುಂದಾದ ಪರಿಣಾಮ ಕೂಡಲೇ ಸರಕಾರ ಆಜಾದ್ ಅಣ್ಣಿಗೇರಿಯ ಹೆಸರನ್ನು ತಡೆಹಿಡಿದು ಆದೇಶ ಹಿಂಪಡೆಯುವುದರ ಮೂಲಕ ಆಕ್ರೋಶವನ್ನು ತಣಿಸಲು ಮುಂದಾಗಿದೆ.
ಇದೇ ರೀತಿ ಇತ್ತೀಚೆಗೆ ಸರಕಾರದ ವಿವಿಧ ಅಕಾಡೆಮಿಗಳಿಗೆ ನೂತನ ಸದಸ್ಯರ ನೇಮಕಾತಿ ಹಾಗೂ ಹಿಂದಿನ ಸದಸ್ಯರ ಬದಲಾವಣೆಯ ಸಂದರ್ಭದಲ್ಲಿ ಕರಾವಳಿಯ ಮಹತ್ವದ ಅಕಾಡೆಮಿಗಳಲ್ಲಿ ಒಂದಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕುಮಟಾದ ಚಿದಾನಂದ ಭಂಡಾರಿ ಅವರನ್ನು ದಿಢೀರನೆ ಬದಲಾಯಿಸಿ ಅವರ ಸ್ಥಾನದಲ್ಲಿ ಮತ್ತೊಬ್ಬರ ನಿಯುಕ್ತಿಯನ್ನು ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.ಹದಿನಾಲ್ಕು ಸದಸ್ಯರಲ್ಲಿ ಕೇವಲ ಇಬ್ಬರನ್ನೇ ಬದಲಾವಣೆ ಮಾಡಿ ಪಕ್ಷಕ್ಕಾಗಲಿ ವಿಚಾರಧಾರೆಗಳಿಗಾಗಲಿ ಸಂಬಂಧವೇ ಇಲ್ಲದವರನ್ನು ಉಳಿಸಿಕೊಂಡ ಕ್ರಮವೂ ಕಾರ್ಯಕರ್ತರಲ್ಲಿ ಬೇಸರವನ್ನು ಉಂಟುಮಾಡಿದೆ.ಅಕಾಡೆಮಿಯ ಅಧಿಕಾರವಧಿ ಮುಕ್ತಾಯದ ಹಂತದಲ್ಲಿ ಇರುವಾ ಇಲಾಖೆ ತೆಗೆದುಕೊಂಡ ಈ ಕ್ರಮವು ಚಿದಾನಂದ ಭಂಡಾರಿ ಅವರು ಸದಸ್ಯರಾಗಿ ಅಕಾಡೆಮಿಯ ಕೆಲವು ನಿಯಮಬಾಹೀರ ಕ್ರಮದ ಬಗ್ಗೆ ಎತ್ತಿರುವ ಆಕ್ಷೇಪ ಹಾಗೂ ಅಧ್ಯಕ್ಷರ ಪ್ರಯಾಣ ಭತ್ಯೆಯ ವಿಚಾರದಲ್ಲಿ ಆದ ನ್ಯೂನ್ಯತೆಗಳನ್ನು ಪ್ರಶ್ನಿಸಿದಕ್ಕೆ ಪ್ರತೀಕಾರವಾಗಿ ಪಕ್ಷವೇ ಅವರ ವಿರುದ್ಧ ಈ ಕ್ರಮ ಎಸಗಿದೆಯೇ ಅಥವಾ ಅಚಾತುರ್ಯದಿಂದ ಹೀಗಾಯಿತೇ ? ಎಂಬ ಪ್ರಶ್ನೆಗಳು ಉದ್ಭವಿಸಿ ಸತ್ಯದ ಪರ ಪ್ರಶ್ನಿಸಿದ ಕಾರ್ಯಕರ್ತರಿಗೆ ಇಂಥ ಶಿಕ್ಷಯೇ ಎಂದು ಕಾರ್ಯಕರ್ತರೇ ಆಡಿಕೊಳ್ಳುವಂತಾಗಿದೆ .ಕೊಂಕಣಿ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುವಾಗ ಇವರು ಕೊಂಕಣಿಯ ಎಲ್ಲ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿಂದುಳಿದ ಮೀನುಗಾರ ಗಾಬೀತ ಸಮುದಾಯ,ಕುಂಬ್ರಿ ಮರಾಠಿ ಸಮುದಾಯದವರಿಗೆ ರಾಜ್ಯಸ್ತರದ ವೇದಿಕೆ ಒದಗಿಸಿ ಮೆಚ್ಚುಗೆಗೆ ಪಾತ್ರರಾದವರು ಹಾಗೂ ಹೆಚ್ಚಿನ ಎಲ್ಲಾ ಸಮುದಾಯದವರೊಂದಿಗೂ ಉತ್ತಮ ಬಾಂಧವ್ಯಹೊಂದಿದ್ದು ಈ ಎಲ್ಲಾ ಸಮುದಾಯದ ಪ್ರಮುಖರುಗಳೂ ಕೊಂಕಣಿ ಅಕಾಡೆಮಿಯ ವಿಷಯದಲ್ಲಿ ಸರಕಾರದ ಕ್ರಮದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಇಂಥ ಕೆಲವು ಉತ್ತರ ಇರದ ಪ್ರಶ್ನೆಗಳನ್ನು ಬಿಜೆಪಿಯೇ ಹುಟ್ಟುಹಾಕಿಕೊಂಡಿದೆ. ಉತ್ತರಕ್ಕಾಗಿ ಉತ್ತರಕನ್ನಡ ಕಾಯುತ್ತಿದೆ.