ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಉಪನ್ಯಾಸಕಿ ಜ್ಯೋತಿ ರಾಯ್ಕರ್ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಕಳೆದ 7 ವರ್ಷಗಳಿಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಎಂ.ಎ, ಪಿ.ಎಚ್.ಡಿ ವಿದ್ಯಾರ್ಹತೆ ಹೊಂದಿದ್ದು, ಈ ಬಾರಿ ಅತಿಥಿ ಉಪನ್ಯಾಸಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರ ಜ್ಯೇಷ್ಠತಾ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲೇ ನನ್ನ ಹೆಸರಿದ್ದರೂ ಕಡೆಗಣಿಸಿ ಮತ್ತೊಬ್ಬರನ್ನು ನೇಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸಮಾಜಶಾಸ್ತ್ರ ವಿಷಯಕ್ಕೆ ನೇಮಕವಾಗಿರುವ ಅತಿಥಿ ಉಪನ್ಯಾಸಕಿ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ. ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದರೂ ಅವರನ್ನು ನೇಮಿಸಿಕೊಂಡಿರುವುದೇಕೆ? ಜ್ಯೇಷ್ಠತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಅನಗತ್ಯ ಕಾರಣಗಳನ್ನು ಹೇಳಿ ನನ್ನನ್ನು ಕಡೆಗಣಿಸಲಾಗಿದೆ. ಪ್ರಾಂಶುಪಾಲರು ವೈಯಕ್ತಿಕ ದ್ವೇಷ ಸಾಧನೆಗೆ ಮುಂದಾಗಿದ್ದಾರೆಂದು ದೂರಿದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲೆ ಡಾ.ದಾಕ್ಷಾಯಿಣಿ ಹೆಗಡೆ, ಪಿ.ಎಚ್.ಡಿ ಆಗಿರುವುದರಿಂದ ಜ್ಯೋತಿ ಅವರ ಹೆಸರು ಪಟ್ಟಿಯಲ್ಲಿ ಪ್ರಥಮ ಸ್ಥಾನ ಬಂದಿರುವುದು ಹೌದು. ಆದರೆ ಪಿ.ಎಚ್.ಡಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅವರು ಪೂರೈಸಿರುವ ದಾಖಲೆಗಳು ನಿಯಮಾನುಸಾರವಾಗಿ ಇರದ ಕಾರಣ ಅವರನ್ನು ಬಿಟ್ಟು ದೀಪಿಕಾ ನಾಯ್ಕ ಅವರನ್ನು ಅತಿಥಿ ಉಪನ್ಯಾಸಕಿಯಾಗಿ ನೇಮಿಸಿಕೊಳ್ಳಲಾಗಿದೆ. ಜ್ಯೇಷ್ಠತಾ ಪಟ್ಟಿಯಲ್ಲಿ ಹೆಸರಿದ್ದರೂ ಅವರ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿದ್ದರೆ ಮಾತ್ರ ನೇಮಿಸಿಕೊಳ್ಳುವಂತೆ ಇಲಾಖೆಯ ಆದೇಶವಿದೆ. ಅದರಂತೆ ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ, ದ್ವೇಷಕ್ಕೆ ಅವಕಾಶವಿಲ್ಲ, ಅದನ್ನು ಮಾಡಿಯೂ ಇಲ್ಲ.

RELATED ARTICLES  ಗೋಸಂರಕ್ಷಣೆಗೆ ವೈಜ್ಞಾನಿಕ ಪರಿಭಾಷೆ ಅಗತ್ಯ: ರಾಘವೇಶ್ವರ ಶ್ರೀ

 
ದೀಪಿಕಾ ನಾಯ್ಕ ಅವರು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದುಕೊಂಡೇ ಬಿ.ಎಡ್ ಓದುತ್ತಿರುವ ವಿಷಯ ತಿಳಿದಿರಲಿಲ್ಲ. ಅತಿಥಿ ಉಪನ್ಯಾಸಕರು ಎರಡು ಸರ್ಕಾರಿ ಸಂಸ್ಥೆಗಳಿಂದ ಏಕಕಾಲದಲ್ಲಿ ಸಂಬಳ ಪಡೆಯಬಾರದು, ಕಾಲೇಜಿನಲ್ಲಿ ವಾರಕ್ಕೆ 8 ತಾಸು ಪಾಠ ಮಾಡಬೇಕೆಂಬ ನಿಯಮವಿದೆ. ಉಳಿದ ಸಮಯದಲ್ಲಿ ಅವರು ವ್ಯಾಸಂಗ ಮಾಡಬಾರದೆಂದೇನೂ ಇಲ್ಲ. ಆದರೂ ವಿಷಯ ತಿಳಿದ ತಕ್ಷಣ ದೀಪಿಕಾ ಅವರಿಗೆ ಮೆಮೊ ನೀಡಲಾಗಿದ್ದು, ಈ ಕಾಲೇಜಿನಲ್ಲಿ ಪಾಠ ಮಾಡುವ ಮೂರು ದಿನಗಳಲ್ಲಿ ವ್ಯಾಸಂಗಕ್ಕೆಂದು ಕಾಲೇಜಿಗೆ ತೆರಳುತ್ತಿಲ್ಲ. ಉಳಿದ ಸಮಯವನ್ನು ಮಾತ್ರ ವ್ಯಾಸಂಗಕ್ಕೆ ಮೀಸಲಿಟ್ಟಿರುವುದಾಗಿ ಉತ್ತರಿಸಿದ್ದಾರೆ. ಈಗಲೂ ಜ್ಯೋತಿ ಅವರು ನೀಡಿದ ದಾಖಲಾತಿಗಳನ್ನು ಪರಿಶೀಲಿಸಿ, ಮೇಲಾಧಿಕಾರಿಗಳು ಅವು ಸಮರ್ಪಕವಾಗಿದೆ ಎಂದರೆ ಅವರನ್ನು ನೇಮಿಸಿಕೊಳ್ಳುವಲ್ಲಿ ಯಾವ ಅಭ್ಯಂತರವೂ ಇಲ್ಲ. ನೇಮಕಾತಿಯಲ್ಲಿ ಯಾವುದೇ ಅನ್ಯಾಯ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ ಎಂದರು.

RELATED ARTICLES  ಫೆ.23ರಿಂದ 25ರ ವರೆಗೆ ಕೃಷಿ ಯಂತ್ರ ಮೇಳ : ಸಂಪೂರ್ಣ ಮಾಹಿತಿ ನೀಡಿದ ಕ್ಯಾಂಪ್ಕೋ ಅಧ್ಯಕ್ಷರು.

 
ಕಾಲೇಜಿನಲ್ಲಿ ಧಿಢೀರ್ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪಿ.ಎಸ್.ಐಗಳಾದ ಶ್ರೀಧರ.ಎಸ್.ಆರ್, ನವೀನ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.