ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ 10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ಭಾಗವಾಗಿ ನಿಗದಿ ಪಡಿಸಿದ ಗುರಿಗಳನ್ನು ಪೂರೈಸಲು ಟವರ್ ಮಾರಾಟ ಮಾಡುವ ಪ್ರಕ್ರಿಯೆಯನ್ನು ಬಿಎಸ್‌ಎನ್‌ಎಲ್ ಆರಂಭಿಸಿದೆ ಎಂದು ವರದಿಯಾಗಿದೆ.
ಟವರ್ ಮಾರಾಟದಿಂದ 4 ಸಾವಿರ ಕೋಟಿ ರೂ. ಆದಾಯವನ್ನು ಬಿಎಸ್‌ಎನ್‌ಎಲ್ ನಿರೀಕ್ಷಿಸುತ್ತಿದೆ. ಮಾರಾಟ ನಿರ್ವಹಣೆಗೆ ಹಣಕಾಸು ಸಲಹೆ ಪಡೆಯಲು ಹಣಕಾಸು, ವ್ಯಾಪಾರ, ತೆರಿಗೆ ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಜಾಗತಿಕ ಕೆಪಿಎಂಜಿ ಕಂಪನಿ ಜೊತೆ ಬಿಎಸ್‌ಎನ್‌ಎಲ್ ಈಗ ಮಾತುಕತೆ ನಡೆಸುತ್ತಿದೆ.
ಮುಂಬೈ ಮತ್ತು ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಬಿಎಸ್‌ಎನ್‌ಎಲ್ 68 ಸಾವಿರ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಥರ್ಡ್ ಪಾರ್ಟಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಹ-ಸ್ಥಳ ವ್ಯವಸ್ಥೆಯನ್ನು ಹೊಂದಿರುವ ಟವರ್‌ಗಳನ್ನು ಮಾತ್ರ ಮಾರಾಟ ಮಾಡಲು ಬಿಎಸ್‌ಎನ್‌ಎಲ್ ಮುಂದಾಗಿದೆ.
ಈ ವಿಚಾರದ ಬಗ್ಗೆ ಬಿಎಸ್‌ಎನ್‌ಎಲ್ ಮತ್ತು ಕೆಪಿಎಂಜಿಯನ್ನು ಸಂರ್ಪಕಿಸಲಾಗಿದ್ದು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಬಿಎಸ್‌ಎನ್‌ಎಲ್‌ನ ಟವರ್ ಪೋರ್ಟ್‌ಫೋಲಿಯೊ ದೇಶದಲ್ಲೇ ಅತ್ಯುತ್ತಮವಾದದ್ದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದರ ಸುಮಾರು ಶೇ.70 ಟವರ್‌ಗಳು ಫೈಬರ್ ಆಗಿದ್ದು 4G ಮತ್ತು 5G ಸೇವೆಗಳ ನಿಯೋಜನೆಗೆ ಸಿದ್ಧವಾಗಿವೆ.