ಕಾರವಾರ : ಹುಚ್ಚು ಪ್ರೀತಿ ಯಾವೆಲ್ಲ ಸಮಸ್ಯೆಗಳನ್ನು ತಂದಿಡುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುವುದು ಸಹಜವಾದರೂ ಇಲ್ಲೊಂದು ಲವ್ವಿ ಡವ್ವಿ ಪ್ರಕರಣ ಪೊಲೀಸ್ ರ ಟ್ರೇಸಿಂಗ್ ಮೂಲಕ ವರದಿಯಾಗಿದೆ.
ತಮಿಳುನಾಡಿನ ಚೆನ್ನೈ ಮೂಲದ ಜೋಡಿಯೊಂದು ತಮಿಳುನಾಡಿನಿಂದ ನಗರಕ್ಕೆ ಓಡಿ ಬಂದು ಕಳೆದ ಆರು ತಿಂಗಳಿನಿಂದ ಇಲ್ಲಿ ವಾಸವಿದ್ದರು. ಇವರನ್ನು ನಗರ ಠಾಣಾ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪತ್ತೆ ಮಾಡಿದ್ದು, ತಮಿಳುನಾಡು ಪೊಲೀಸರು ಜೋಡಿಯನ್ನು ಚೆನ್ನೈಗೆ ಕರೆದೊಯ್ದಿದ್ದಾರೆ.
ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶನಗರದ ಬೀರ್ ಮೊಹಿದ್ದೀನ್ ಎನ್ನುವ ಯುವಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಗಿದ್ದು, ಕಂಪನಿಯೊಂದರಲ್ಲಿ ಉತ್ತಮ ಸಂಬಳಕ್ಕೆ ದುಡಿಯುತ್ತಿದ್ದ. ಈತನಿಗೆ ಮದುವೆ ಮಾಡಬೇಕನ್ನುವ ಕಾರಣಕ್ಕೆ ಅವರ ಸಂಬಂಧಿ ಅಬ್ದುಲ್ ಖಾದರ್ ಎನ್ನುವವರು ಹುಡುಗಿ ಹುಡುಕಿದ್ದರು. ಹೀಗಾಗಿ ಬೀರ್ ಮೊಹಿದ್ದೀನ್ ಅಬ್ದುಲ್ ಖಾದರ್ ಅವರ ಮನೆಗೆ ಹೋಗಿ ಬರುವುದನ್ನು ಮಾಡುತ್ತಿದ್ದ.
ಈ ಅಬ್ದುಲ್ ಖಾದರ್‌ನ 24 ವರ್ಷದ ಸೊಸೆ ಆಯಿಷಾ ಮತ್ತು ಬೀರ್ ಮೊಹಿದ್ದೀನ್‌ನ ಬಾಲ್ಯ ಸ್ನೇಹಿತರಾಗಿದ್ದು, ಈಕೆಗೆ ಮೊದಲೇ ಬೇರೊಬ್ಬನ ಜೊತೆ ವಿವಾಹವಾಗಿಬಿಟ್ಟಿತ್ತು.ಸದ್ಯ ಈಕೆ ಎರಡು ಮಕ್ಕಳ ತಾಯಿ ಕೂಡ ಆಗಿದ್ದಳು ಎನ್ನಲಾಗಿದೆ.
ಆದರೆ ಅಬ್ದುಲ್ ಖಾದರ್ ಹುಡುಗಿ ಹುಡುಕುತ್ತಿರುವುದರ ನಡುವೆಯೇ ಬೀರ್ ಮೊಹಿದ್ದೀನ್‌ಗೆ ಅವರ ಸೊಸೆ, ಈ ಎರಡು ಮಕ್ಕಳ ತಾಯಿಯ ಮೇಲೆ ಪ್ರೀತಿ ಚಿಗುರಿದೆ. ಆಯಿಷಾಗೆ ಕೂಡ ಈತನ ಮೇಲೆ ಪ್ರೇಮಾಂಕುರವಾಗಿದ್ದರೂ, ಅದನ್ನ ಮನೆಯಲ್ಲಿ ಹೇಳಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿ.
ಕೊನೆಗೆ ಬೀರ್ ಮೊಹಿದ್ದೀನ್- ಆಯಿಷಾ ಇಬ್ಬರೂ ಕಳೆದ ಫೆಬ್ರುವರಿಯಲ್ಲಿ ಮನೆಬಿಟ್ಟು ಓಡಿ ಬಂದಿದ್ದಾರೆ. ತಮಿಳುನಾಡಿನಿಂದ ಬೈಕ್ ಮೇಲೆ ಈ ಜೋಡಿ ಬೆಂಗಳೂರು, ಮಂಗಳೂರು ಮಾರ್ಗವಾಗಿ ಫೆಬ್ರುವರಿ 21ರಂದು ನಗರಕ್ಕೆ ಬಂದಿದ್ದು, ತಾಮ್ರವಾಡದಲ್ಲಿ ಬಾಡಿಗೆ ಮನೆ ಪಡೆದು ಉಳಿದುಕೊಂಡಿದ್ದರು.
ಬಿಇ ಮೆಕ್ಯಾನಿಕಲ್ ಓದಿರುವ ಬೀರ್ ಮೊಹಿದ್ದೀನ್, ನಗರದಲ್ಲಿ ಗೌಂಡಿ ಕೆಲಸ ಮಾಡಿಕೊಂಡು ಆಯಿಷಾಳೊಂದಿಗೆ ಸಂಸಾರ ನಡೆಸುತ್ತಿದ್ದ. ಆದರೆ ವಿವಾಹಿತೆ ಕಣ್ಮರೆ ಹಿನ್ನಲೆ ಆಯಿಷಾಳ ಪತಿಯ ಮನೆಕಡೆಯವರು ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಹುಡುಕಾಟ ಆರಂಭಿಸಿದ ತಮಿಳುನಾಡು ಪೊಲೀಸರು ಇದೀಗ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಯಿಷಾಳ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.ಕಳೆದ ಎರಡು ತಿಂಗಳ ಹಿಂದೆ ಆಕೆ ನಗರದಲ್ಲಿ ಇರುವುದನ್ನು ಪತ್ತೆ ಮಾಡಿದ್ದರು. ಈ ವೇಳೆ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದರಾದರೂ ಅವರು ಇದ್ದ ನಿಖರವಾದ ಜಾಗ ತಿಳಿಯದೇ ವಾಪಸ್ಸಾಗಿದ್ದರು.ನಂತರ ನಗರ ಠಾಣೆ ಪೊಲೀಸರ ಸಹಕಾರ ಪಡೆದು,ಜೋಡಿಯನ್ನ ಪತ್ತೆಹಚ್ಚಿ ಶನಿವಾರ ನಗರದಿಂದ ಅವರನ್ನು ತಮಿಳುನಾಡು ಪೊಲೀಸರು ಕರೆದೊಯ್ದಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.