ಲಕ್ನೋ: ದೇಶದಲ್ಲೇ ಅತಿ ಎತ್ತರದ ದೈತ್ಯ ಅವಳಿ ಕಟ್ಟಡ ಕೊನೆಗೂ ನೆಲಸಮಗೊಂಡಿದ್ದು, ಇದೇ ವೇಳೆ ಅಕ್ಕಪಕ್ಕದ ಕಾಂಪ್ಲೆಕ್ಸ್‌ಗಳ ಗೋಡೆ ಹಾಗೂ ಗಾಜಿನ ಕಿಟಕಿಗಳು ಹಾನಿಯಾಗಿದೆ. ನೆರೆಯ ಎಟಿಸ್ ಗ್ರಾಮದಲ್ಲಿ ಗೋಡೆಯೊಂದು ಕುಸಿದಿದೆ. ಕೆಲವು ಗಾಜಿನ ಕಿಟಕಿಗಳು ಒಡೆದಿವೆ. ಆದರೆ 100 ಕೋಟಿ ವಿಮಾ ಯೋಜನೆ ಅಡಿಯಲ್ಲಿ ಕಟ್ಟಡ ನೆಲಸಮ ಕಾರ್ಯ ನಡೆದಿದ್ದು, ಅಕ್ಕಪಕ್ಕದ ಯಾವುದೇ ಕಟ್ಟಡಗಳು ಹಾನಿಗೆ ಒಳಗಾಗಿದ್ದರೆ ಇದೇ ವಿಮೆ ಪಾಲಿಸಿ ಅಡಿಯಲ್ಲಿ ಬರುತ್ತದೆ. ಅದರ ವೆಚ್ಚವನ್ನು ಸೂಪರ್‌ಟೆಕ್ ಗ್ರೂಪ್ ಭರಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಎಸ್.ರಾಜೇಶ್ ತಿಳಿಸಿದ್ದಾರೆ.

ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ಭಾನುವಾರ ತಿಳಿಸಿದ್ದಾರೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2)

ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳನ್ನು ಭಾನುವಾರ ಮಧ್ಯಾಹ್ನ 2.30ಕ್ಕೆ ಸ್ಫೋಟಕಗಳನ್ನು ಬಳಸಿ ನೆಲಕ್ಕುರುಳಿಸಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ 3,700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಗಿದೆ. ಈ ಕಟ್ಟಡವನ್ನು ಕೆಡವಿದ ವೆಚ್ಚವೇ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದೆ.

‘ನಾವು ಭೂಮಿ ಮತ್ತು ನಿರ್ಮಾಣ ವೆಚ್ಚಕ್ಕಾಗಿ ಖರ್ಚು ಮಾಡಿದ ಮೊತ್ತ, ವಿವಿಧ ಅನುಮೋದನೆಗಳಿಗಾಗಿ ಅಧಿಕಾರಿಗಳಿಗೆ ಪಾವತಿಸಿದ ಶುಲ್ಕಗಳು, ವರ್ಷಗಳಿಂದ ಬ್ಯಾಂಕ್‌ಗಳಿಗೆ ಪಾವತಿಸಿದ ಬಡ್ಡಿ ಮತ್ತು ಈ ಎರಡು ಗೋಪುರಗಳಲ್ಲಿನ ಖರೀದಿದಾರರಿಗೆ ಪಾವತಿಸಿದ ಶೇ 12ರ ಬಡ್ಡಿ ಹಾಗೂ ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡರೆ, ನಮ್ಮ ಒಟ್ಟಾರೆ ನಷ್ಟ ಸುಮಾರು 500 ಕೋಟಿ ರೂಪಾಯಿ ಆಗಿದೆ’ ಎಂದು ಅರೋರಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

RELATED ARTICLES  ಕಾರ್ಗಿಲ್ ವಿಜಯ ದಿವಸ.

ಅವಳಿ ಗೋಪುರಗಳು ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿನ ಸೆಕ್ಟರ್ 93 A ನಲ್ಲಿ ಸೂಪರ್‌ಟೆಕ್‌ನ ಎಮರಾಲ್ಡ್ ಕೋರ್ಟ್ ಯೋಜನೆಯ ಭಾಗವಾಗಿತ್ತು. ಎರಡು ಟವರ್‌ಗಳಲ್ಲಿರುವ 900ಕ್ಕೂ ಹೆಚ್ಚು

ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
‘ಈ ಎರಡು ಗೋಪುರಗಳ ಒಟ್ಟು ನಿರ್ಮಾಣ ಪ್ರದೇಶವು ಸುಮಾರು 8 ಲಕ್ಷ ಚದರ ಅಡಿಗಳಷ್ಟಿದೆ. ನಾವು ಈ ಗೋಪುರಗಳನ್ನು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರವು ಅನುಮೋದಿಸಿದ ಕಟ್ಟಡದ ಯೋಜನೆಯ ಪ್ರಕಾರ ನಿರ್ಮಿಸಿದ್ದೇವೆ’ ಎಂದು ಅವರು ಹೇಳಿದರು.