ಹೊನ್ನಾವರ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ಘಟಕದ ಆಶ್ರಯದಲ್ಲಿ ನಡೆದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಭಾಗವತ ಉಮಾಮಹೇಶ್ವರ ಲಕ್ಷ್ಮಿ ನಾರಾಯಣ ಭಟ್ಟರವರ ಮನೆಯಂಗಳದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಜಿಲ್ಲೆಯ ಸಾಧಕರಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರು ಮೊದಲ ಸ್ಥಾನದಲ್ಲಿದ್ದಾರೆ.ಯಕ್ಷಗಾನ ಸಾಹಿತ್ಯ, ಸಾಹಿತ್ಯ ಪರಿಷತ್ತಿನ ಬಹು ಮುಖ್ಯ ಭಾಗವಾಗಿದೆ ಎಂದು ಹೇಳಿದರು. ಎಲ್ಲಾ ಸಂಪನ್ಮೂಲಗಳಿದ್ದರೂ ಜಿಲ್ಲೆಯ ಯಕ್ಷಗಾನ ಕ್ಷೇತ್ರದಲ್ಲಿ ಕೊರಗು ಮತ್ತು ಕೊರತೆ ಇದೆ. ಎಲ್ಲಾ ಇತಿಮಿತಿಗಳನ್ನು ಮೀರಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತು ಸಾಧಕರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸುವ ಪರಂಪರೆಯನ್ನು ಹುಟ್ಟು ಹಾಕಲಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಅರಿವು ಇದ್ದಾಗ ಮಾತ್ರ ಒಂದು ಕಲೆ ಬೆಳೆಯಲು ಮತ್ತು ಬೆಳಗಿಸಲು ಸಾಧ್ಯ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಪುರಸ್ಕೃತ ಉಮಾಮಹೇಶ್ವರ ಭಾಗ್ವತ ದಂಪತಿಗಳನ್ನು ಸನ್ಮಾನಿಸಿ ಅಕಾಡೆಮಿ ಅಧ್ಯಕ್ಷರಾದ ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷಗಾನದ ಎಲ್ಲಾ ಅಂಗಾಂಗಗಳನ್ನು ಕರಾರುವಕ್ಕಾಗಿ ತಿಳಿದುಕೊಂಡು, ಕಲಾವಿದರಲ್ಲಡಗಿರುವ ಪ್ರತಿಭೆಗೆ ತಕ್ಕ ಭಾಗವತಿಕೆ ಮಾಡಿ ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಉಮೇಶ ಭಾಗವತರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ . ಉತ್ತರ ಕನ್ನಡವು ಬಣ್ಣದ ವೇಷ ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಯಕ್ಷಗಾನ ವಿದ್ವಾಂಸರ ಕೊರತೆ ಇದೆ. ಜಿಲ್ಲೆಯಲ್ಲಿರುವ ಉತ್ತಮ ಕಲಾವಿದರು ಆ ದಿಶೆಯಲ್ಲಿ ಚಿಂತಿಸಬೇಕಾದ ಅಗತ್ಯತೆ ಇದೆ ಎಂದರು. ಇಡೀ ಯಕ್ಷ ಪ್ರಸಂಗವನ್ನು ತಿಳಿದುಕೊಂಡು ಭಾಗವತಿಗೆ ಮಾಡುವುದು ತುಂಬಾ ಕಷ್ಟದ ಕೆಲಸ.ಅಂತಹ ಕಠಿಣ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಭಾಗವತರದ್ದಾಗಿದೆ ಎಂದರು.

RELATED ARTICLES  ಅಹಿಂದಾ ಸರಕಾರದಲ್ಲಿ ಬಸ್ ಪಾಸಿಗೂ ಜಾತಿ ಬಂತು

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಯಕ್ಷಗಾನದಲ್ಲಿ ಅನೇಕ ಪ್ರಯೋಗಗಳನ್ನು ಅಳವಡಿಸಿ, ಅದರ ವಿಸ್ತಾರತೆಗೆ ಶ್ರಮಿಸಿ ಪ್ರತಿಯೊಬ್ಬರಿಗೂ ಕಲೆಯನ್ನು ತಲುಪಿಸುವಲ್ಲಿ ಉಮೇಶ ಭಾಗವತರ ಶ್ರಮ ಸಾರ್ಥಕವಾಗಿದೆ. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿರುವುದು ಅವರ ಅರ್ಹತೆಗೆ ಸಂದ ಗೌರವವಾಗಿದೆ ಎಂದರು.

ಸಾಹಿತಿ ಎಸ್.ಡಿ. ಹೆಗಡೆ ಮಾತನಾಡಿ, ಯಕ್ಷಗಾನ ಆರಾಧನಾ ಮೂಲವಾದ ಕಲೆ. ಯಕ್ಷಗಾನದ ಸರ್ವಾಂಗಗಳನ್ನು ತಿಳಿದವ ಮಾತ್ರ ಭಾಗವತ ರಾಗಲು ಸಾಧ್ಯ. ಅತ್ಯಂತ ಸೂಕ್ಷ್ಮವಾದ ವಿಚಾರಗಳನ್ನು ತಮ್ಮ ಭಾಗವತಿಕೆಯ ಮೂಲಕ ಸಂಶೋಧಕರಿಗೂ ಮಾರ್ಗದರ್ಶನ ಮಾಡಿದ ಅಪರೂಪದ ಕಲಾವಿದ ಉಮಾಮಹೇಶ್ವರ ಭಾಗವತರಾಗಿದ್ದಾರೆ. ತಮ್ಮ ಸಂಶೋಧನಾತ್ಮಕ ವಿಚಾರಗಳ ಮೂಲಕ ಕಾಲಮಿತಿ ಪ್ರಯೋಗ ಮಾಡಿ, ಮದ್ದಳೆಯೊಂದಿಗೆ ಪದ್ಯ ಹೇಳುವ ಅತ್ಯುತ್ತಮ ಗುರುಗಳಾಗಿದ್ದರು ಎಂದರು.

RELATED ARTICLES  ನಾಗರಾಜ ನಾಯಕರ 'ಬೆಳಕಿನತ್ತ ಜನತೆಯ ಚಿತ್ತ'.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ನವಿಲಗೋಣ ಚಿಣ್ಣರ ಯಕ್ಷಗಾನ ಮೇಳದ ರೂವಾರಿ ಉಮೇಶ ಭಾಗವತರು ಸಾವಿರಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಮೂಲಕ ತಾಳವಿಲ್ಲದೆ ಮದ್ದಳೆಯೊಂದಿಗೆ ಹೆಜ್ಜೆ ಕಲಿಸಿದ ಆದರ್ಶ ಗುರುವಾಗಿದ್ದರು. ಅವರಿಗೆ ಸಂದ ಗೌರವ ಯಕ್ಷಲೋಕಕ್ಕೆ ಸಂದ ಗೌರವವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಉಮಾಮಹೇಶ್ವರ ಭಟ್ ಮಾತನಾಡಿ, ಹಿಂದೆ ಯಕ್ಷಗಾನ ಕಲಾವಿದರು ಜನರ ಅವಹೇಳನಕ್ಕೆ ಒಳಗಾಗಬೇಕಾದ ಸಂದರ್ಭದಲ್ಲಿಯೂ, ನನ್ನ ಸತತ ಅಭ್ಯಾಸ ಮತ್ತು ಗುರುಬಲದಿಂದ ಯಕ್ಷಗಾನ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಯಿತು. ನಮ್ಮ ಜಿಲ್ಲೆಯಲ್ಲಿ ಯಕ್ಷಗಾನ ಇನ್ನಷ್ಟು ಬಲಗೊಳ್ಳಲು ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನದ ಅಗತ್ಯತೆ ಇದೆ ಎಂದರು. ನನ್ನನ್ನು ಸನ್ಮಾನಿಸಿ ಗೌರವಿಸಿದ ಸಾಹಿತ್ಯ ಪರಿಷತ್ತು ಅಭಿನಂದನೆಗೆ ಅರ್ಹವಾಗಿದೆ ಎಂದರು.

ಸಭೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಎಚ್. ಎಮ್. ಮಾರುತಿ, ಆರ್. ಕೆ. ಮುಕ್ರಿ, ಸಂಪನ್ಮೂಲ ವ್ಯಕ್ತಿ ಈಶ್ವರ್ ಭಟ್, ಶಿಕ್ಷಕರಾದ ಶಶಿಧರ ದೇವಾಡಿಗ, ವಿನಾಯಕ ಹೆಗಡೆ, ಸುವರ್ಣ ಭಟ್ಟ, ಕುಟುಂಬದವರಾದ ಮಹಾಲಕ್ಷ್ಮಿ ಭಟ್, ಸುಬ್ರಹ್ಮಣ್ಯ ಭಟ್ಟ ಲೀಲಾವತಿ ಭಟ್ಟ, ವಿನೋದಾ ಭಟ್ಟ,ಊರ ಪ್ರಮುಖರಾದ ಶಂಕರ್ ಭಟ್ಟ, ಬಾಲಚಂದ್ರ ಭಾರದ್ವಾಜ್, ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಘಟಕ ಅಧ್ಯಕ್ಷ ಎಸ್. ಎಚ್.ಗೌಡ ಸ್ವಾಗತಿಸಿದರೆ, ಕಾರ್ಯದರ್ಶಿ ಎಚ್. ಎಂ.ಮಾರುತಿ ವಂದಿಸಿದರು.