ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ನ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ಕಾರವಾರ ಮೂಲದ ಮನೋಜ್ ಬಾಡ್ಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಕನ್ನಡ ಮೂಲದ ವ್ಯಕ್ತಿ ದೊಡ್ಡ ಹುದ್ದೆ ಅಲಂಕರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮುಂಬೈನಲ್ಲಿ ನಡೆದ ಗೌರವ ವಂದನೆ ಕಾರ್ಯಕ್ರಮದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಮನೋಜ್ ಬಾಡ್ಕರ್ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು. ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಕರ್ನಾಟಕ ಪಶ್ಚಿಮ ಪ್ರದೇಶ ವ್ಯಾಪ್ತಿಯಲ್ಲಿ ಬರಲಿದ್ದು, ಈ ವ್ಯಾಪ್ತಿಗೆ ಈಗ ಮನೋಜ್ ಬಾಡ್ಕರ್ ಅವರು ಮುಖ್ಯಸ್ಥರಾಗಿದ್ದಾರೆ ಎನ್ನಲಾಗಿದೆ.
ಕಾರವಾರ ಮೂಲದ ಸುಸಂಸ್ಕೃತ ಕುಟುಂಬದ
ಹಿನ್ನೆಲೆಯ ಮನೋಜ್ ಅವರು ಕಾರವಾರದ
ಸೇಂಟ್ ಜೋಸೆಫ್ ಹೈಸ್ಕೂಲ್ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ.
ಅವರು 2006ರಿಂದ 2008ರವರೆಗೆ ಕೋಸ್ಟ್
ಗಾರ್ಡ್ ನ ಕರ್ನಾಟಕ ಮತ್ತು ಗೋವಾ ರಾಜ್ಯದ
ಮುಖ್ಯಸ್ಥರಾಗಿದ್ದರು. 2013ರಿಂದ 2018ರವರೆಗೆ ದೆಹಲಿಯ ಕೋಸ್ಟ್ ಗಾರ್ಡ್ ನೇಮಕಾತಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು, 2018ರಲ್ಲಿ ಇನ್ಸೆಕ್ಟರ್ ಜನರಲ್ ಶ್ರೇಣಿಗೆ ಬಡ್ತಿ ಪಡೆದರು. ಅವರ 36 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ನಿಲ್ದಾಣಗಳಿಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ.