ಕಾರವಾರ : ದಾಬೋಲಿಮ್ ವಿಮಾನ ನಿಲ್ದಾಣದ ಬಳಿಯ ಫ್ಲೈ ಓವರ್‌ನ ಸುಮಾರು 20 ಅಡಿಗೂ ಹೆಚ್ಚು ಎತ್ತರವಿರುವ ರಸ್ತೆಯ ಕೆಳಭಾಗ ಹಾಗೂ ಕಂಬದ ಮೇಲಿರುವ ಖಾಲಿ ಜಾಗದಲ್ಲಿ ಯುವತಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ಕಾರವಾರ ಮೂಲದ ಯುವತಿಯೋರ್ವಳು ಗೋವಾ ದಾಬೋಲಿಮ್ ವಿಮಾನ ನಿಲ್ದಾಣ ರಸ್ತೆಯ ಫ್ಲೈ ಓವರ್ ನ ಕಂಬದ ಮೇಲೇರಿ ಕುಳಿತಿದ್ದಳು ಎನ್ನಲಾಗಿದೆ. ವಾಹನ ಸವಾರರು ಇದನ್ನು ಗಮನಿಸಿದ್ದಾರೆ. ಇದರಿಂದಾಗಿ ಅಷ್ಟು ಎತ್ತರದ ಕಂಬವನ್ನು ಈಕೆ ಏರಿದ್ದಾದರೂ ಹೇಗೆ ಎಂದು ಅಚ್ಚರಿಗೊಳಗಾದ ವಾಹನ ಸವಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಯುವತಿಯು ಫ್ಲೈ ಓವರ್ ಮೇಲೆ ರಸ್ತೆಯ ಮೇಲಿನಿಂದ ತೆರಳಿ ಅಲ್ಲಿರುವ ಮ್ಯಾನ್ ಹೋಲ್ ಮೂಲಕ ಕೆಳಗಿಳಿದು ಕಂಬದ ಮೇಲೆ ಕುಳಿತಿರಬಹುದು ಎಂದು ಗೋವಾದ ಸ್ಥಳೀಯರು ಹೇಳಿದ್ದು ಓಪನ್ ಆಗಿರುವ ಆ ಮ್ಯಾನ್ ಹೋಲ್ ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದೆ. ಬಳಿಕ ಅಗ್ನಿಶಾಮಕ ವಾಹನದ ಏಣಿಯ ಮೂಲಕ ಅಧಿಕಾರಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಮಾತನಾಡಿದ ಮಹಿಳೆ ತಾನು ಕಾರವಾರದ ಮಾಜಾಳಿಯವಳಾಗಿದ್ದು ಇಲ್ಲಿ ಮನೆಗೆಲಸ ಮಾಡಿಕೊಂಡಿದ್ದೇನೆ. ಯಾರೋ ತನಗೆ ಕೆಲಸ ಕೊಡಿಸುವುದಾಗಿ ಕರೆತಂದು ತನ್ನ ಬಳಿ ಇದ್ದ ಎಲ್ಲ ಹಣ ಹಾಗೂ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.