ಶ್ರೀಮಂತರಾಗಬೇಕೆಂಬ ಬಯಕೆ ಯಾರಲ್ಲಿ ಇರುವುದಿಲ್ಲ ಹೇಳಿ? ದುಡ್ಡಿನ ಅನಿವಾರ್ಯತೆ ಎದುರಾಗುವ ಸಂದರ್ಭವಾದ ಕರೆಂಟ ಬಿಲ್ ತುಂಬದ ಕಾರಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಪಕ್ಕಡ್ ಹಿಡಿದು ಬರುವ ಲೈನ್ ಮೆನ್ ಕಂಡಾಗ ಕೊಟ್ಟುಕೊಟ್ಟು ಸುಸ್ತಾದ ಕಿರಾಣಿ ಅಂಗಡಿಯ ಮಾಲಕ ಸರ್ ಮೂರು ತಿಂಗಳಾಯ್ತು ಲೆಕ್ಕಾಚಾರ ಚುಕ್ತಾ ಮಾಡ್ವ ಅಲಾ ? ಎಂದಾಗ ಹಾಲಿನವ ಪೇವರ್ ನವ ಬಿಲ್ ಮಂಡಿಸಿದಾಗ ಇನ್ಸೂರನ್ಸ ಕಂತು ತುಂಬುವ ಕಡೆಯ ದಿನ ಸಮೀಪಿಸಿದಾಗ ಲಕ್ಷ್ಮೀ ದೇವಿಯ ಸಾಕ್ಷಾತ್ಕಾರದ ಹಂಬಲವಾಗದೇ ಇದ್ದೀತೇ?
ನಾನಂತೂ ರೇವತಿ ನಕ್ಷತ್ರದ ಮೀನರಾಶಿಯವ,
ಈ ರಾಶಿಯ ಹೆಸರಿಗೆ ತಕ್ಕಂತೆ ರಾಶಿ ರಾಶಿ ಮೀನು ಬಯಸುವವ ಆದರೇನು ಮಾಡುವ ಸರಸ್ವತಿಯ ಆರಾಧನೆಗೆ ಹೆಚ್ಚು ಮಹತ್ವಕೊಡುವ ನಿಲುವಿನವ ಆದ ಕಾರಣ ಲಕ್ಷ್ಮೀ ದೇವಿಗೆ ಸವತಿ ಮಾತ್ಸರ್ಯವೋ ಏನೋ? … ಇಲ್ಲಿಯ ವರೆಗೂ ಅವಳ ಸಂಪೂರ್ಣ ಒಲುಮೆ ನನ್ನ ಪಾಲಿಗೆ ಆಗಲಿಲ್ಲ ಅವಳ ಆಗಮನಕ್ಕಾಗಿ ಮನೆಯ ಮುಂಬಾಗಿಲನ್ನೇ ತೆರೆದಿರುವೆನೇ ಹೊರತು ಹಿಂಬಾಗಿಲನ್ನೋ ಮನೆಯ ಮಾಡನ್ನೋ ತೆರೆದು ಕೊಡುವವನಲ್ಲ ಆ ದಾರಿಯ ಪ್ರವೇಶ ಇಷ್ಟವೂ ಇಲ್ಲ !
ಆದರೂ ಆಗಾಗ ಪತ್ರಿಕೆಯಲ್ಲಿ , ಟಿವಿ ಯೂಟ್ಯೂಬ್ ಮಾಧ್ಯಮದಲ್ಲಿ ಬರುವ ಜ್ಯೋತಿಷ್ಯವನ್ನು ಬಿಡದೇ ಕೇಳುವ,ಓದವ ಹವ್ಯಾಸ ಉಳ್ಳವ ಕೆಲಕಾದ ಹಿಂದೆ ಈ ವರ್ಷ ಅಗಷ್ಟ ,ಸೆಪ್ಟೆಂಬರ್ ಮೀನರಾಶಿಗೆ ಅನಿರೀಕ್ಷಿತ ಶ್ರಿಮಂತಿಕೆ ಬರುತ್ತದೆ ಎಂಬ ಭವಿಷ್ಯವಾಣಿ ಓದಿದ ನಾನು ಅದೇ ನಿರೀಕ್ಷೆಯಲ್ಲಿ ಅಗಷ್ಟ ಕಳೆದೆ.
ಸೆಪ್ಟೆಂಬರ್ ತಿಂಗಳ ಹನ್ನೊಂದನೆಯ ತಾರೀಖಿನಂದು ಶನಿವಾರ ಕೇರಳದ ಕಾಸರಗೋಡಿಗೆ ರೇಲ್ ಮೂಲಕ ಪ್ರಯಾಣ ಮಾಡುವಾಗ ಮಂಗಳೂರು ಕಳೆದಬಳಿಕ ಕೇರಳ ರಾಜ್ಯದ ಪ್ರವೇಶದ ಸಂದರ್ಭದಲ್ಲಿ ರೈಲಿನಲ್ಲಿ ಒಬ್ಬ ಕೇರಳದ ಓಣಂ ಪ್ರಯುಕ್ತ ವಿಶೇಷ ಲಾಟರಿ ಮಾರುತ್ತ ಬಂದ ಎರಡು ಟಿಕೆಟ್ ತೆಗೆದುಕೊಳ್ಳುವ ಬಯಕೆ ಆದರೂ ಜೊತೆಗಿರುವ ಸ್ನೇಹಿತರಿಗೆ ಅಳುಕಿ ಸುಮ್ಮನೇ ಕುಳಿತಿದ್ದೆ.
ಸೆಪ್ಟೆಂಬರ್ ಹನ್ನೊಂದನೇಯ ತಾರೀಖು ರವಿವಾರದಂದು ಕಾಸರಗೋಡಿನ ಕರಂದಕಾಡ್ ನ ಕಾಸಗೋಡುಚಿನ್ನಾ ಅವರ ಮನೆಯಲ್ಲಿ ” ಮುತ್ತು ಉದುರುವ ಸಮಯ ” ಎಂಬ ಶೀರ್ಷಿಕೆಯ ಅಡಿ ರಾಜ್ಯದ ಹೆಸರಾಂತ ಸಾಹಿತಿಗಳ ಕಲಾವಿದರ ಸಂಗಮದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಸಗೋಡು ಚಿನ್ನಣ್ಣ ಅವರ ಜನುಮದಿನವೂ ಅಂದೇ ಆಗಿತ್ತು. ಅವರ ಮನೆಯ ಮೇಲಿನ ಮಹಡಿಯ ಪದ್ಮಗಿರಿಯ ರಂಗಚಿನ್ನಾರಿಯ ರಂಗಮಂಟಪ ಸರ್ವಾಲಂಕೃತವಾಗಿ ರಂಗೇರಿತ್ತು !
ಉತ್ತರಕನ್ನಡದಿಂದ ನನಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿತ್ತು.ಹೆಸರಾಂತ ಸುಗಮ ಸಂಗೀತ ಗಾಯಕರಾದ ಮುದ್ದುಕೃಷ್ಣ ಅವರ ಆತ್ಮಚರಿತ್ರೆಯ ಬಿಡುಗಡೆ,ಬಳಿಕ ಸೇರಿರುವ ಎಲ್ಲರಿಗೂ ತಲಾ ಮೂರು ನಿಮಿಷ ಮಾತಾಡುವ ,ಹಾಡುವ, ಕವನ ವಾಚನ ಮಾಡುವ ಅವಕಾಶದ ಜೊತೆ ಮಧ್ಯದಲ್ಲಿ ಸಂಗೀತಗಾಯನ ಕಾರ್ಯಕ್ರಮದ ಆಯೋಜನೆ ಅತ್ಯಂತ ಅಚ್ಚುಕಟ್ಟಾಗಿತ್ತು. ಎಡನೀರು ಮಠಾಧೀಶರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ವಿಶೇಷವೆಂದರೆ ವೇದಿಕೆಯಲ್ಲಿ ಅತಿಥಿ ಅಧ್ಯಕ್ಷರೆಂಬ ಯಾವ ವ್ಯವಸ್ಥೆಯೂ ಇಲ್ಲದೇ ಹಿರಿಕಿರಿಯರೆಂಬ ಬೇಧ ಇಲ್ಲದೇ ಸಮಾನತೆಯನ್ನು ಸಾರಲಾಗಿತ್ತು.ಇದೇ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ನಾ ದಾಮೋದರ ಶೆಟ್ಟಿ ಅವರ ಅನುವಾದಿತ ಕೃತಿ ” ಅಶ್ವತ್ಥಾಮ ” ಬಿಡುಗಡೆಯ ಕಾರ್ಯಕ್ರಮವೂ ಸಂಯೋಜಿಸಲಾಗಿತ್ತು. ಈ ಪುಸ್ತಕ ಬಿಡುಗಡೆ ಮಾಡಬೇಕಾದವರ ಹೆಸರನ್ನು ಮೊದಲೇ ನಿರ್ಧಾರ ಮಾಡದೇ ಬಂದಿರುವ ಅಭ್ಯಾಗತರಲ್ಲಿ ಒಬ್ಬರು ಪುಸ್ತಕ ಬಿಡುಗಡೆ ಮಾಡಬೇಕು ಅದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಬೇಕೆಂಬ ನಿಲುವನ್ನು ಚಿನ್ನಣ್ಣ ಪ್ರಕಟಿಸಿದ್ದರು.
ಅಂತೆಯೇ ಒಂದು ಬಟ್ಟಲಲ್ಲಿ ಕೆಲವು ಹೆಸರನ್ನು ಬರೆದು ಚೀಟಿಯನ್ನು ಒಬ್ಬ ಬಾಲಕನಮೂಲಕ ಎತ್ತಲಾಯಿತು.ಈ ವೇಳೆ ನಾನು ಹೊರಗಡೆ ಕುಳಿತಿದ್ದೆ ಸಣ್ಣ ನಿದ್ರೆಯ ಮಂಪರೂ ಇತ್ತು ಅಷ್ಟರಲ್ಲಿ ಚಿನ್ನಣ್ಣ ಅವರು ಚೀಟಿ ಓದಿ ಚಿದಾನಂದ ಭಂಡಾರಿ ಪುಸ್ತಕ ಬಿಡುಗಡೆ ಮಾಡತ್ತಾರೆ ಎಂದು ಮೈಕಿನಲ್ಲಿ ಘೋಷಣೆ ಮಾಡಿದರು. ನಿದ್ರೆಯ ಗುಂಗಿನಲ್ಲಿ ನಂಬದೇ ಅಲ್ಲೇ ಇದ್ದ ನನ್ನನ್ನು ಬರುವಂತೆ ಏರಿದ ಧ್ವನಿಯಲ್ಲಿ ಕರೆದರು ಒಳಗೆ ಹೋದಾಗ ನಿಮಗೆ ಲಾಟರಿ ತಾಗಿದೆ ಪುಸ್ತಕ ಲೋಕಾರ್ಪಣೆಮಾಡಿ ಎಂದರು. ನಂತರದ ಸಮಯ ನನ್ನ ಪಾಲಿನ ಬಂಗಾರದ ಘಳಿಗೆ ಆಗಿತ್ತು ನಾಮಾಂಕಿತ ಸಾಹಿತಿ ನಾದಾ ಅವರ ಕೃತಿ ಬಿಡುಗಡೆ ಮಾಡಿದೆ.
ಖ್ಯಾತನಾಮರಾದ ಮುದ್ದುಕೃಷ್ಣ ,ವಿವೇಕ ರೈ, ಸುಬ್ರಾಯ ಚೊಕ್ಕಾಡಿ ,ಎಚ್ ದುಂಡಿರಾಜ , ರವಿಂದ್ರ ಜೋಶಿ ಮುಂತಾದವರ ಸಮಕ್ಷಮ ಲಾಟರಿ ಎಂದರೆ ಹೀಗೂ ಇದೆಯಾ ಎಂದು ಒಮ್ಮೆ ಮುಗಿಲತ್ತನೋಡಿ ಕಣ್ಣಿಗೆ ಕಾಣದ ನಾಟಕಕಾರನ್ನು ಕೇಳಿದೆ!
ನಮಸ್ಕಾರ……
ಕಾಗಾಲ ಚಿದಾನಂದ ಭಂಡಾರಿ.