ಉಡುಪಿ : ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹಲವು ಕಾಲೇಜು ಗಳಿಗೆ ಬಿಗು ಪೊಲೀಸ್ ಭದ್ರತೆ ಒದಗಿಸಲಾಗಿದೆ. ವಿವಾದದ ಕೇಂದ್ರ ಬಿಂದುವಾಗಿದ್ದ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಉಡುಪಿ ಅಜ್ಜರಕಾಡು ಮಹಿಳಾ ಪದವಿ ಕಾಲೇಜು, ಉಡುಪಿ ಎಂಜಿಎಂ ಕಾಲೇಜು ಹಾಗೂ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಒಮ್ಮತದ ತೀರ್ಪು ನೀಡದೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ಮುಂಬರುವ ತೀರ್ಪು ಸಕಾರಾತ್ಮಕವಾಗಿ ಬರಬಹುದು ಎಂದು ಬಿಜೆಪಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯಲ್ಲಿ ಆದರೆ ಇದು ಅನಂತರ ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಿತು. ಹಿಜಾಬ್ ವಿದ್ಯಾರ್ಥಿನಿಯರು ಬಡ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವುದರ ಮೂಲಕ ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು ಎಂದು ಬಿಜೆಪಿಯವರು ಹೇಳಿದ್ದರು.