ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರಿಗೆ ಪ್ರಮುಖವಾಗಿ ಅಗತ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಕೂಗು ಹಾಗೂ ಇನ್ನೊಂದೆಡೆ ಎದ್ದಿರುವ ಜಿಲ್ಲೆ ಇಬ್ಬಾಗವಾಗುವ ಮಾತು ಇವೆರಡೂ ಚರ್ಚೆಗೆ ಕಾರಣವಾಗಿದೆ. ಸ್ವತಃ ಆರೋಗ್ಯ ಸಚಿವರೇ ಜಿಲ್ಲೆಗೆ ಬಂದು ಸ್ಥಳ ಪರಿಶೀಲನೆ ಮಾಡಿ ಹೋದರು ಇನ್ನೂ ಶಂಕು ಸ್ಥಾಪನೆ ನೆರವೇರಿಲ್ಲ. ಇದರ ನಡುವೆ ಸ್ಪೀಕರ್ ಕಾಗೇರಿಯವರು ಪ್ರತ್ಯೇಕ ಜಿಲ್ಲೆಯ ಬಗ್ಗೆ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶಕ್ಕೆ ಕಾರಣವಾಗಿದೆ.

ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಗಂಭೀರ ಪರಿಸ್ಥಿತಿ ಸಂದರ್ಭದಲ್ಲಿ ನೆರೆ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯವಾಗಿದ್ದು, ದಾರಿ ಮಧ್ಯೆ ಹಲವರು ಮೃತಪಟ್ಟ ಘಟನೆ ನೂರಾರಿದೆ. ಈ ಹಿನ್ನಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲೇ ಬೇಕು ಎನ್ನುವ ಕೂಗು ಕೇಳುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೆಚ್ಚಾಗಿದ್ದು ಸದನದಲ್ಲೂ ಚರ್ಚೆ ನಡೆದ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ್ ಜಿಲ್ಲೆಗೆ ಭೇಟಿ ನೀಡಿ ಕುಮಟಾ ತಾಲೂಕಿನಲ್ಲಿ ಸ್ಥಳ ಪರಿಶೀಲನೆ ಮಾಡಿ ತೆರಳಿದ್ದಾರೆ. ಆದರೆ ಈವರೆಗೆ ಮುಂದುವರೆದು ಯಾವ ಬೆಳವಣಿಗೆಯಾಗಿದೆ ಎನ್ನುವುದು ಮಾತ್ರ ಜಿಲ್ಲೆಯ ಜನತೆಗೆ ತಿಳಿದಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೇವಲ ಘೋಷಣೆಯಾಗಲಿದೆಯೇ ಅನ್ನುವ ಆತಂಕ ಸಹ ಜನರಲ್ಲಿ ಕಾಡುತ್ತಿದೆ.

RELATED ARTICLES  ಪ್ರಾಣಾಯಾಮಗಳ ಬಗ್ಗೆ ಶ್ರೀಧರರು ಹೇಳಿದ ಮಾತುಗಳಿವು

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ನಡುವೆ ಜಿಲ್ಲೆಯನ್ನ ವಿಭಜನೆ ಮಾಡಬೇಕು ಎನ್ನುವ ಕೂಗು ಸಹ ಎದ್ದಿದೆ. ಶಿರಸಿ ಪ್ರತ್ಯೇಕ ಜಿಲ್ಲೆಯನ್ನ ಮಾಡಬೇಕು ಎನ್ನುವ ಕೂಗು ಹಿಂದಿನಿ0ದ ಇದ್ದಿದ್ದು ಕೆಲ ವರ್ಷಗಳಿಂದ ಈ ಹೋರಾಟ ಚುರುಕುಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯನ್ನ ಇಬ್ಬಾಗ ಮಾಡುವುದಕ್ಕೆ ಹಲವರು ಬೆಂಬಲಿದ್ದರೆ, ಅಖಂಡ ಜಿಲ್ಲೆಯೇ ಉಳಿಯಬೇಕು ಎನ್ನುವ ಆಗ್ರಹ ಸಹ ಹಿಂದಿನಿ0ದ ಇದೆ. ಸದ್ಯ ಶಿರಸಿ ಕ್ಷೇತ್ರದ ಶಾಸಕ ಸ್ಪೀಕರ್ ಸಹ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಮೊದಲ ಭಾರಿಗೆ ಧ್ವನಿ ಎತ್ತಿದ್ದಾರೆ. ಚುನಾವಣೆ ಅಸ್ತ್ರವಾಗಿ ಕಾಗೇರಿ ಪ್ರತ್ಯೇಕ ಜಿಲ್ಲೆಯನ್ನ ಇಟ್ಟುಕೊಳ್ತಾರೆ ಎನ್ನುವ ಮಾತು ಇದೀಗ ಶಿರಸಿ ಭಾಗದಲ್ಲಿ ಕೇಳಿ ಬರುತ್ತಿದೆ. ಆದರೆ ಕಾಗೇರಿ ಪ್ರತ್ಯೇಕ ಜಿಲ್ಲೆಯ ಕೂಗು ಎತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕರಾವಳಿ ಭಾಗದಲ್ಲಿ ಕೆಲವರ ವಿರೋಧಕ್ಕೆ ಕಾರಣವಾಗಿದೆ.

RELATED ARTICLES  ಬಲವಂತದ ಜೀವನ

ನಾವು ಕೇಳಿದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ, ಆದರೆ ಇವರು ಮಾಡಲು ಹೊರಟಿರುವುದು ಪ್ರತ್ಯೇಕ ಜಿಲ್ಲೆಯನ್ನ ಎಂದು ಕೆಲವರು ಕಾಗೇರಿ ಹೇಳಿಕೆಯನ್ನ ಇಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನರಿಗೆ ಅಗತ್ಯತೆ ಇರುವುದನ್ನ ಮೊದಲು ಒದಗಿಸಲಿ. ಜಿಲ್ಲೆಯನ್ನ ಒಡೆಯುವುದೊಂದೇ ಅಭಿವೃದ್ದಿಗೆ ಉತ್ತರವಲ್ಲ. ಕರ್ನಾಟಕದ ಪ್ರತಿರೂಪದಂತಿರುವ ಉತ್ತರ ಕನ್ನಡವನ್ನ ಇಬ್ಬಾಗಿಸುವ ಅಗತ್ಯವಿದೆಯೇ ಎನ್ನುವ ಪ್ರಶ್ನೆಯನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ. ಇನ್ನು ಕೆಲವರು ಜಿಲ್ಲೆ ಇಬ್ಭಾಗಿಸುವುದಕ್ಕೆ ವಿರೋಧವಿಲ್ಲ. ಆದರೆ ಅದಕ್ಕಿಂತ ಮೊದಲು ಚುನಾವಣೆ ಮುನ್ನವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿ. ಇಲ್ಲದಿದ್ದರೆ ಈ ಬಾರಿ ಜಿಲ್ಲೆ ವಿಭಜನೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೇವಲ ಚುನಾವಣಾ ಅಸ್ತ್ರವಾಗಲಿದ್ದು, ಎರಡೂ ಈಡೇರುವುದು ಅನುಮಾನ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಈ ಎರಡು ಸಮಸ್ಯೆ ವಿರೋಧ ಪಕ್ಷದವರಿಗೆ ಅಸ್ತ್ರವಾದರೆ ಆಡಳಿತ ಪಕ್ಷದವರಿಗೆ ನುಂಗಲಾರದ ತುತ್ತಾಗಲಿದೆ ಎನ್ನಲಾಗಿದೆ.