ಹೊನ್ನಾವರ : ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಅಪರಿಚಿತ ವ್ಯಕ್ತಿ ಎಗರಿಸಿ ಪರಾರಿಯಾಗಿರುವ ಘಟನೆ ಚಂದಾವರ ಹನುಮಂತ ದೇವಸ್ಥಾನದ ಬಳಿ ನಡೆದಿದ್ದು, ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 24 ಗಂಟೆ ಒಳಗಾಗಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಎಡೆಮುರಿ ಕಟ್ಟಿದ್ದಾರೆ. ಹೊನ್ನಾವರದ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಸರ ಕಳೆದುಕೊಂಡವರು ಎಂದು ತಿಳಿದುಬಂದಿದೆ. ಇವರು ಸಂಬಂಧಿಕರ ಮದುವೆಗೆಂದು ಚಂದಾವರಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿತ್ತು. ಇದೀಗ ಆರೋಪಿತ ಗಣಪತಿ ನಾಗಪ್ಪ ಗೌಡನನ್ನು ಪೋಲೀಸರು ಬಂಧಿಸಿದ್ದಾರೆ.
ಮಹಿಳೆಯೊಬ್ಬಳು ಮದುವೆ ಮುಗಿಸಿ ವಾಪಸ್ಸಾಗಲು ಟೆಂಪೋಗೆ ಕಾಯುತ್ತಿದ್ದ ವೇಳೆ ಏಕಾಏಕಿ ಅಪರಿಚಿತ ನಡೆದು ಬಂದು ಏಕಾಏಕಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ. ಮಾಂಗಲ್ಯ ಮಾತ್ರವಲ್ಲದೆ ಚೈನ್ ಗೂ ಕೈಹಾಕಿದ್ದು, ಆದರೆ ಚೈನ್ ತುಂಡಾಗಿ ನೆಲಕ್ಕೆ ಬಿದ್ದಿದ್ದರಿಂದ ಅದನ್ನು ಎತ್ತಿಕೊಳ್ಳಲು ಹೆದರಿ ಕಳ್ಳ ಸ್ಥಳದಿಂದ ಪರಾರಿಯಾಗಿದ್ದ.
ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶ್ರೀಧರ ಎಸ್. ಆರ್ ಪೊಲೀಸ್ ನಿರೀಕ್ಷಕರು, ಹೊನ್ನಾವರ ಠಾಣೆ ರವರ ನೇತೃತ್ವದಲ್ಲಿನ ಪಿ.ಎಸ್.ಐ ರವರಾದ ಶ್ರೀ ಮಹಾಂತೇಶ ನಾಯಕ, ಶ್ರೀ ಗಣೇಶ ನಾಯ್ಕ, ಶ್ರೀಮತಿ ಸಾವಿತ್ರಿ ನಾಯಕ, ಶ್ರೀ ಎಮ್. ವಿ ಚಂದಾವರ ಹಾಗೂ ಸಿಬ್ಬಂದಿಯವರಾದ ಪ್ರಶಾಂತ ನಾಯ್ಕ, ಮಹಾವೀರ ಸಂತೋಷ ಬಾಳೇರ, ಶ್ರೀಪಾದ ನಾಯ್ಕ, ಕೃಷ್ಣ ಡಿ ಗೌಡ, ರಮಾನಂದ ನಾಯ್ಕ, ಉದಯ ಮಗದೂರ, ಶಿವಾನಂದ ಚಿತ್ತರಗಿ, ಚಂದ್ರಶೇಖರ ನಾಯ್ಕ, ರವರ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.