ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪ್ರತಿವರ್ಷ ಕೊಡಮಾಡುವ ಮೂರು ವರ್ಷಗಳ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರವನ್ನು ಮೂವರು ಸಾಧಕರಿಗೆ ಪ್ರದಾನ ಮಾಡಲಾಯಿತು. ೨೦೨೦-೨೧, ೨೦೨೧-೨೨ ಹಾಗೂ ೨೦೨೨-೨೩ನೇ ಸಾಲಿನ ಪ್ರಶಸ್ತಿಯನ್ನು ಕ್ರಮವಾಗಿ ಖ್ಯಾತ ತಬಲಾ ವಾದಕ ಹೊನ್ನಾವರ ತಾಲೂಕಿನ ದಿವಂಗತ ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ಅವರ ಪರವಾಗಿ ಪತ್ನಿ ಲಲಿತಾ ಹೆಗಡೆ, ಖ್ಯಾತ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಹಾಗೂ ಖ್ಯಾತ ಹಿಂದೂಸ್ಥಾನೀ ಗಾಯಕ ಪಂಡಿತ ಸೋಮನಾಥ ಮರಡೂರ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ ಸೋಮನಾಥ ಮರಡೂರ ಅವರು, ಮೂಲತಃ ಹಾವೇರಿ ಜಿಲ್ಲೆಯವರಾದ ಷಡಕ್ಷರಿ ಗವಾಯಿಗಳು ಸಂಗೀತದ ಮೂಲಕ ಉತ್ತರ ಕನ್ನಡ ಜಿಲ್ಲೆಯವರೇ ಆಗಿಬಿಟ್ಟಿದ್ದರು. ಕಲಾ ತಪಸ್ವಿ ಷಡಕ್ಷರಿಯವರು ನಿಜ ಅರ್ಥದಲ್ಲಿ ಸಂಗೀತದ ಸರಸ್ವತಿಯೇ ಆಗಿದ್ದರು. ಸಂಗೀತ ಕ್ಷೇತ್ರದಲ್ಲಿ ಅವರಂಥ ಸಜ್ಜನ ಹಾಗೂ ಘನ ವಿದ್ವಾಂಸರು ಬಹಳ ಅಪರೂಪ ಎಂದು ಹೇಳಿದರು.


ಸುಸಂಸ್ಕೃತ ಜಿಲ್ಲೆ ಎಂದೇ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಗೀತ ಹಾಗೂ ಇತರ ಕಲೆಗಳಿಗೆ ಅಪಾರ ಪ್ರೋತ್ಸಾಹವಿದೆ, ಸಂಗೀತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಷಡಕ್ಷರಿ ಗವಾಯಿಗಳ ಪುತ್ಥಳಿ ಸ್ಥಾಪನೆ ಮಾಡಬೇಕು. ಸಂಗೀತದ ಮೂಲಕ ಸಾರ್ವಜನಿಕರಿಗಾಗಿ ಬದುಕಿದ್ದ ಷಡಕ್ಷರಿ ಗವಾಯಿ ಅವರಿಗೆ ಆ ಮೂಲಕ ನಾವು ಗೌರವ ನೀಡಬೇಕು ಎಂದು ಅವರು ಹೇಳಿದರು.

RELATED ARTICLES  ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-2

ನಾನು ಹಾಗೂ ಷಡಕ್ಷರಿ ಗವಾಯಿಗಳು ಗುರು ಬಂಧುಗಳು, ನಾವಿಬ್ಬರೂ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿತವರು. ಆ ನಂತರ ಗವಾಯಿಗಳು ಪಂಡಿತ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತಾಭ್ಯಾಸ ಮಾಡಿದವರು. ಅವರಂಥ ಶುದ್ಧ ಮನಸ್ಸಿನವರು ತೀರ ಅಪರೂಪ. ಅತ್ಯುತ್ತಮ ಶಾಸ್ತ್ರೀಯ ಗಾಯಕರು ಹಾಗೂ ಹಾರ್ಮೋನಿಯಂ ವಾದಕರಾಗಿದ್ದ ಅವರನ್ನು ಸಂಗೀತ ಕ್ಷೇತ್ರ ಇನ್ನಷ್ಟು ಗುರುತಿಸುವ ಕೆಲಸ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಗಳಾದ ಸ್ತ್ರೀ ರೋಗ ತಜ್ಞರಾದ ಡಾ.ಅಶ್ವಿನಿ ಶಾನಭಾಗ ಮಾತನಾಡಿ, ಸಂಗೀತ ಕೇವಲ ಗಾಯನವಲ್ಲ, ಅದೊಂದು ವಿಜ್ಞಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾನಸಿಕ ರೋಗಿಗಳಿಗೆ ಸಂಗೀತದ ಚಿಕಿತ್ಸೆ ನೀಡುವಂಥ ಪ್ರಯೋಗ ಆರಂಭವಾಗಿದೆ. ಇದಕ್ಕೆ ಎಷ್ಟೋ ಮಾನಸಿಕ ರೋಗಗಳನ್ನು ನಿವಾರಣೆ ಮಾಡುವ ಅಥವಾ ಅದರ ತೀವ್ರತೆ ಕಡಿಮೆ ಮಾಡುವ ಶಕ್ತಿಯಿದೆ ಎಂಬುದು ಪ್ರಯೋಗದಿಂದ ಗೊತ್ತಾಗುತ್ತಿದೆ. ಅಲ್ಲದೆ, ಒತ್ತಡದ ಜೀವನದಲ್ಲಿ ಮಾನಸಿಕವಾಗಿ ಸಮಾಧಾನ ನೀಡುವ ಶಕ್ತಿ ಸಂಗೀತಕ್ಕಿದೆ. ಇದು ಏಕಾಗ್ರತೆ ಮೇಲಯೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.


ಉದ್ಯಮಿ ಸುವರ್ಣಗದ್ದೆಯ ಮಂಜುನಾಥ ಭಟ್‌ ಹಾಗೂ ವೈದ್ಯರಾದ ಡಾ.ವಿನಾಯಕ ಸುಬ್ರಹ್ಮಣ್ಯಂ ಅವರು ಮಾತನಾಡಿ, ಕೂಜಳ್ಳಿಯಲ್ಲಿ ಷಡಕ್ಷರಿ ಗವಾಯಿಗಳವರನ್ನು ನೆನೆಯುವ ಕಾರ್ಯ ನಡೆಯುತ್ತಿರುವುದು ಸ್ತುತ್ಯಾರ್ಯ ಕೆಲಸ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ರೇಷ್ಠವಾದ ಕಾರ್ಯ ಎಂದು ಹೇಳಿದರು.

RELATED ARTICLES  ನೀನು ಕಳೆದುಕೊಳ್ಳುವುದೇನು?


ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷರಾದ ವಸಂತ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಕೂಜಳ್ಳಿ ಸ್ವರ ಸಂಘಮದ ಅಧ್ಯಕ್ಷರಾದ ಸುಬ್ರಾಯ ಭಟ್‌, ಷಡಕ್ಷರಿ ಗವಾಯಿಗಳ ಶಿಷ್ಯರಾದ ಗೌರೀಶ ಯಾಜಿ ವೇದಿಕೆಯಲ್ಲಿದ್ದರು.
ಭಾನುವಾರ ಬೆಳಿಗ್ಗೆಯಿಂದ ರಾತ್ರಿ ವರೆಗಿನ ಗವಾಯಿಗಳ ಸಂಗೀತ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪಂಡಿತ ಮಿಲಿಂದ್‌ ಚಿತ್ತಾಲ ಅವರು ರಾಗ ಯಮನ್‌ ಹಾಗೂ ಅಭೋಗಿ ಪ್ರಸ್ತುತ ಪಡಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ಸಂಗೀತೋತ್ಸವ ಕಾರ್ಯಕ್ರಮವನ್ನು ಷಡಕ್ಷರಿ ಗವಾಯಿಗಳ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಉದ್ದಿಮೆದಾರರಾದ ಕುಮಟಾದ ವಿ.ಆರ್‌.ನಾಯಕ, ಕೂಜಳ್ಳಿಯ ಎಂ.ಜಿ ಭಟ್‌, ಸುಬ್ರಾಯ ಭಟ್‌ ಉದ್ಘಾಟಿಸಿದರು.


ನಂತರ ಡಾ.ಕೃಷ್ಣಮೂರ್ತಿ ಹೆಗಡೆ ಅವರ ಗಾಯನದಿಂದ ಸಂಗೀತೋತ್ಸವ ಆರಂಭವಾಯಿತು. ಅವರು ರಾಗ ಅಹಿರ್‌ ಭೈರವ್‌ ಹಾಗೂ ಹಿಂದೋಲ ಪ್ರಸ್ತುತ ಪಡಿಸಿದರು. ನಂತರ ಕೃಷ್ಣ ದೇವಾಡಿಗ ಶಹನಾಯ ವಾದನ, ಸುಬ್ರಾಯ ಭಟ್‌ ಕೂಜಳ್ಳಿ ಸಂತೂರ ವಾದನ, ದಿವ್ಯಾ ನಾಯ್ಕ, ಶಾಂತಾರಾಂ ಭಟ್‌ ಹಾಗೂ ಪಂಡಿತ ಸೋಮನಾಥ ಮರಡೂರ ಅವರು ಗಾಯನ ಪ್ರಸ್ತುತ ಪಡಿಸಿದರು. ಸೋಮನಾಥ ಮರಡೂರ ಅವರು ಅಪರೂಪದ ರಾಗ ಹಮೀರ್‌-ಕೇದಾರ ರಾಗವನ್ನು ಪ್ರಸ್ತುತಪಡಿಸಿದರು.