ಕಾರವಾರ: ಕೊರೋನಾ ಇಡೀ ದೇಶ ಮಾತ್ರವಲ್ಲ, ಜಗತ್ತನ್ನೇ ತಲ್ಲಣಗೊಳಸಿದ್ದ ಮಹಾಮಾರಿ. ಸದ್ಯ ಕೊರೋನಾ ನಾಲ್ಕನೇ ಅಲೆಯ ಭಯ ದೇಶದಲ್ಲಿ ಕಾಡ ತೊಡಗಿದೆ. ಚೀನಾದಲ್ಲಿ ಕೊರೋನಾ ಅರ್ಭಟ ಹೆಚ್ಚಾಗುತ್ತಿರುವುದು ದೇಶದಲ್ಲಿ ಮತ್ತೆ ಆತಂಕವನ್ನ ಮಾಡಿದೆ. ಸದ್ಯ ರಾಜ್ಯದಲ್ಲಿ ಕೊರೋನಾ ಅಲರ್ಟ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡದಲ್ಲಿ ಕೊರೋನಾ ಎದುರಿಸಲು ಆರೋಗ್ಯ ಇಲಾಖೆ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ.


ಈಗಾಗಲೇ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭಿಕ ಹಂತದಲ್ಲಿ 12 ಬೆಡ್‌ಗಳ ಪ್ರತ್ಯೇಕ ಕೊಠಡಿ ಸಿದ್ಧ ಮಾಡಿದ್ದು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಕೊಠಡಿಯನ್ನ ಸಜ್ಜುಗೊಳಿಸಲಾಗಿದೆ. ಜಿಲ್ಲಾಸ್ಪತ್ರೆಯ ಹಿಂಬದಿಯಿರುವ ಮೆಡಿಕಲ್ ಕಾಲೇಜಿನಲ್ಲೂ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿದ್ದು, 450 ಬೆಡ್‌ಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 300ಕ್ಕೂ ಮಿಕ್ಕಿ ಆಕ್ಸಿಜನ್ ಬೆಡ್‌ಗಳಿವೆ. ಈ ಪೈಕಿ ಶೇ 50ರಷ್ಟು ಹಾಸಿಗೆಗಳನ್ನ ಕೊರೋನಾ ಸೋಂಕಿತರಿಗಾಗಿಯೇ ಮೀಸಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೋಂಕಿತರು ಕಾಣಿಸಿಕೊಂಡಲ್ಲಿ ಮೆಡಿಕಲ್ ಕಾಲೇಜಿನ ಬೆಡ್‌ಗಳಿಗೆ ಶಿಫ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಒಂದು ಬಾರಿಗೆ 100 ಐಸಿಯು ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ತಿಳಿಸಿದ್ದಾರೆ.

RELATED ARTICLES  ದಿನದ ದೀವಿಗೆ


ಈಗಾಗಲೇ ಕೊರೋನಾ ಮುಂಜಾಗೃತ ಕ್ರಮವಾಗಿ ಜ್ವರದ ಲಕ್ಷಣಗಳಿರುವವರಿಗೆ ಕೊರೊನಾ ಟೆಸ್ಟ್ ನಡೆಸಲು ಪ್ರಾರಂಭಿಸಿದ್ದು, ದಿನವೊಂದಕ್ಕೆ ಪ್ರಸ್ತುತ 100 ಪರೀಕ್ಷೆ ನಡೆಸಲಾಗುತ್ತಿದ್ದರೂ, ಕಳೆದ 15 ದಿನಗಳಲ್ಲಿ ಯಾವುದೇ ಪಾಸಿಟಿವ್ ಬಂದಿಲ್ಲ. ಐಎಲ್‌ಐ, ಎಸ್‌ಎಆರ್‌ಐ ಲಕ್ಷಣ ಇರುವವರಿಗೂ ಆರ್‌ಟಿಪಿಸಿಆರ್ ಟೆಸ್ಟನ್ನ ಮಾಡಲಾಗುತ್ತಿದೆ. ಆಕ್ಸಿಜನ್ ಸಮಸ್ಯೆ ಆಗದಂತೆ ಈ ಹಿಂದೆಯೇ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪೂರೈಕೆಗೆ 6ಕೆಎಲ್ ಆಕ್ಸಿಜನ್ ಟ್ಯಾಂಕ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ


ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ, ವೈದ್ಯ ಸಭೆಯನ್ನ ನಡೆಸಿ ಸಿದ್ದರಾಗಿರಲು ಸೂಚನೆ ನೀಡಿದ್ದು, ಕೇವಲ ಜಿಲ್ಲಾಸ್ಪತ್ರೆ ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕು ಆಸ್ಪತ್ರೆಗಳಲ್ಲೂ ಕೊರೋನಾ ನಿರ್ವಹಣೆಗೆ ಸನ್ನದ್ಧವಾಗಿದೆ. ಒಟ್ಟಿನಲ್ಲಿ ಕೊರೋನಾ 4ನೇ ಅಲೆಯ ಆತಂಕ ಒಂದೆಡೆ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಕೊರೋನಾ ಎದುರಿಸಲು ಸನ್ನದ್ಧರಾಗುತ್ತಿದೆ.