ಪ್ರೀತಿ ಇಲ್ಲದ ಮೇಲೆ ಮೋಡ ಕಟ್ಟೀತು ಹೇಗೆ ?
ಹೂವು ಅರಳೀತು ಹೇಗೆ ? …..

ರಾಷ್ಟಕವಿ ಡಾಕ್ಟರ್ ಜಿ ಎಸ್ ಶಿವರುದ್ರಪ್ಪ ಅವರ ಈ ಕವಿತೆಯು ಬದುಕಿನಲ್ಲಿ ನಂಬಿಕೆ ವಿಶ್ವಾಸ ಮಾನವೀಯ ಮೌಲ್ಯಗಳ ಕಳಕಳಿಯನ್ನು ಹೊಂದಿದ ಕವಿತೆಯಾಗಿದ್ದು ಓದುಗರ ಹೃದಯವನ್ನು ಸೂರೆಗೊಳ್ಳುತ್ತದೆ.

ಪ್ರೀತಿ ಮಮತೆಯಿಂದ ಗೆಲ್ಲಲಾಗದ್ದು ಜಗತ್ತಿನಲ್ಲಿ ಯಾವುದೂ ಇಲ್ಲ.ಆದರೆ ಅಂತಹ ಮನೋಭೂಮಿಕೆಯನ್ನು ಹೊಂದುವುದು ಎಲ್ಲರಿಗೂ ಅಸಾಧ್ಯ.ಕೆಲವೊಮ್ಮೆ ಅಂತರಂಗ ದಲ್ಲಿ ಅಂತಹ ಭಾವಗಳಿದ್ದೂ ಬಹಿರಂಗವಾಗಿ ಪ್ರಕಟಿಸಲಾಗದ ತೊಳಲಾಟದಲ್ಲಿ ನಾವಿದ್ದೇವೆ .ಸರಿ ಇದ್ದುದ್ದನ್ನು ಸರಿ ಎಂದು ಹೇಳಲಾಗದ ಒಳ್ಳೆಯದನ್ನು ಒಳ್ಳೆಯದು ಎಂದು ಮುಕ್ತವಾಗಿ ಪ್ರಶಂಸಿಸಲಾಗದ ಸಿನಿಕ ತನ ನಮ್ಮನ್ನು ದೃತರಾಷ್ಟ್ರರನ್ನಾಗಿಸುತ್ತದೆ.ಇಂಥವುಗಳ ನಡುವೆ ಸಮಾಜದಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ನದರ್ಶನಗಳು ಇವಕ್ಕೆ ಅಪವಾದ ಎಂಬಂತೆ ಇರುತ್ತವೆ.

ಶ್ರೀಮತಿ ಸುಜಾತಾ ಉದಯ ಹೆಗಡೆ ಇವರ ಬಗ್ಗೆ ಕೆಲವು ಉತ್ತಮ ಅಭಿಪ್ರಾಯಗಳನ್ನು ನನ್ನ ಓದುಗರೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತಾದರೂ ಅದನ್ನು ಪ್ರಬಲವಾಗಿ ಬಡಿದೆಬ್ಬಿಸಿದ್ದು ಮೊನ್ನೆ ಶನಿವಾರದಂದು ನಮ್ಮ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನದಂದು.ಆರಂಭ ದಿಂದ ಅಂತ್ಯದವರೆಗೂ ಊಟ ಉಪಹಾರಗಳ ಪರಿವೆಯೇ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಮೊದಲ ಸಾಲಿನಲ್ಲಿ ಕುಳಿತು ಕಣ್ತುಂಬಿಸಿಕೊಂಡು ಚಪ್ಪಾಳೆಯ ಪ್ರೋತ್ಸಾಹ ನೀಡಿದ ಅವರ ತಾಳ್ಮೆಗೆ ನನ್ನದೊಂದು ದೊಡ್ಡ ಸಲಾಮ್.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಕೊಂಕಣ ಶಿಕ್ಷಣ ಸಂಸ್ಥೆಯ ಬಿ ಕೆ ಭಂಡಾರ ಕರ್ ಸರಸ್ವತಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯೆ ವಾಣಿಜ್ಯ ವಿಭಾಗದ ಉಪನ್ಯಾಸಕಿ ಆಗಿರುವ ಸುಜಾತ ಹೆಗಡೆಯವರು ಮಾತೃ ಹೃದಯಿ ವಾತ್ಸಲ್ಯದ ಸಾಕಾರ ಮೂರ್ತಿ ! ಇವರ ಕುರಿತು ಎಷ್ಟು ಹೊಗಳಿದರೂ ಖಂಡಿತ ಅದು ಉತ್ಪ್ರೇಕ್ಷೆ ಎನಿಸದು.ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಪ್ರೀತಿ ಮಮಕಾರಗಳನ್ನು ನೋಡಿದವರಿಗೆ ಅವರ ಭಾವುಕ ವರ್ತನೆ ತುಸು ಜಾಸ್ತಿ ಎನಿಸಿದರೂ ಅದು ಕೃತಕವಲ್ಲ ಅವರ ಅಂತರಂಗದ ಸಹಜ ಸ್ವಾಭಾವಿಕ ಅಭಿವ್ಯಕ್ತಿ ಆಗಿರುವುದರಿಂದ ಎಲ್ಲರೂ ಅವರ ಈ ಸ್ವಭಾವನ್ನು ಒಪ್ಪಿಕೊಂಡಿದ್ದಾರೆ. ಮಗಾ,ಅಪಿ,ಮಗಳೇ…. ಎಂದೇ ವಿದ್ಯಾರ್ಥಿಗಳನ್ನು ಸಂಬೋಧಿಸುವ ಇವರೆದರು ಎಂಥಾ ಉಡಾಳರೂ ಕರಗಿ‌‌ಹೋಗುತ್ತಾರೆ.ಬುದ್ಧನ ಎದುರು ಕರಗಿದ ಅಂಗುಲಿಮಾಲನಂತೆ !

ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳೆಂದರೆ ಪ್ರೌಢರಾಗಿರುತ್ತಾರೆ ಎಂಬ ದೃಷ್ಟಿಯಿಂದ ಬಹುತೇಕ ಎಲ್ಲರೂ ಅವರೊಟ್ಟಿಗೆ ಒಂದು ಅಂತರ ಕಾಯ್ದುಕೊಂಡು ವ್ಯವಹರಿಸವುದು ಸಹಜ ಆದರೆ ಈ ತಾಯಿಯ ಕಣ್ಣಿಗೆ ಅವರುಗಳೂ ಪುಟ್ಟ ಕಂದಮ್ಮರಂತೆ.ವಿದ್ಯಾರ್ಥಿಗಳು ಆಟದ ಮೈದಾನಕ್ಕೆ ಹೋದರೆ ಈ ಉಪಪ್ರಾಚಾರ್ಯೆ ತನ್ನ ಪದವಿಯನ್ನೂ ಲೆಕ್ಕಿಸದೇ ಅವರ ಹಿಂದೇ ತಾನೂ ಹೋಗುತ್ತಾರೆ ಮಕ್ಕಳು ಆಡಿ ಸಂಭ್ರಮಿಸಿದರೆ ತಾವು ಕುಣಿದು ಕುಪ್ಪಳಿಸಿ ಕುಶಿ ಪಡುತ್ತಾರೆ.ಬಿದ್ದು ಗಾಯಮಾಡಿಕೊಂಡರೆ ಇವರ ಕಣ್ಣಿನಿಂದ ಧಾರಾಕಾರಾರ ಕಣ್ಣೀರು ಹರಿಯುತ್ತದೆ.ಅವರ ಶುಶ್ರೂಷೆಯ ದಾದಿಯೂ ಇವರಾಗುತ್ತಾರೆ.

RELATED ARTICLES  ವಿವೇಕಾನಂದರ ಪ್ರತಿಮೆಯನ್ನು ಸಿದ್ಧಪಡಿಸಿ ಶಾಲೆಗೆ ಕೊಡುಗೆ ನೀಡಿದ ಪಾಲಕ.


ಕಾಲೇಜಿನಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಇದ್ದರೂ ಅದು ಪೂರ್ಣಗೊಳ್ಳುವ ತನಕವೂ ಇವರನ್ನು ಸುಧಾರಿಸುವುದು ಕಷ್ಟವಾಗುತ್ತದೆ.ಒಂದು ಸೂಜಿಯಿಂದ ಮೊದಲ್ಗೊಂಡು ಪ್ರತೀ ಸಿದ್ಧತೆಯ ಬಗ್ಗೆ ಹಲವಾರು ಬಾರಿ ಪರಿಶೀಲನೆ ಮಾಡುತ್ತಾರೆ.
ತಾವು ವಾಣಿಜ್ಯ ವಿಭಾಗದವರಾದರೂ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಕಾಳಜಿತೋರುವ ಇವರು ಮಕ್ಕಳ ಗೆಲುವಿನಲ್ಲೇ ತಮ್ಮ ಗೆಲುವನ್ನು ಕಾಣುವ ಉದಾತ್ತ ಮನಸ್ಸಿನವರು.

ಕಾಲೇಜಿನಲ್ಲಿ ಯಾವುದೇ ಸಹಪಠ್ಯ ಚಟುವಟಿಕೆಗಳು ಜರುಗಿದರಲ್ಲಿ ಮುಂಚೂಣಿಯಲ್ಲಿರುವ ಸುಜಾತಾ ಹೆಗಡೆಯವರು ಅದರಲ್ಲಿ ಸಂಪೂರ್ಣ ತಲ್ಲೀನರಾಗಿ ಮೈಮರೆಯುವುದನ್ನು ನೋಡುವುದೇ ಆನಂದ ದಾಯಕ ವೇದಿಕೆಯಲ್ಲಿ ವಿದ್ಯಾರ್ಥಿಗಳು ನರ್ತಿಸಿದರೆ ಎದುರು ಪ್ರೇಕ್ಷಕರ ಸಾಲಿನಲ್ಲಿ ಇವರೂ ಮೈಮರೆತು ಅದ‌ರಲ್ಲಿಯೇ ತಲ್ಲೀನರಾಗಿರುತ್ತಾರೆ.

ನಿಗರ್ವಿ ಸುಜಾತಾ ಹೆಗಡೆಯವರ ಬಗ್ಗೆ ತಿಳಿದಿರುವ ಪ್ರತಿಯೊಬ್ಬರ ಅನಿಸಿಕೆಯೂ ಇದೇ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ನಮಸ್ಕಾರ.

ಕಾಗಾಲ ಚಿದಾನಂದ ಭಂಡಾರಿ.