ಅಂಕೋಲಾ : ಇದೀಗ ಎಲ್ಲೆಡೆಯಲ್ಲಿಯೂ ಕಾಂತಾರಾ ಸಿನಿಮಾದ ಹವಾ ಜಾಸ್ತಿಯಾಗಿದೆ. ಕಾಂತರಾ ಸಿನಿಮಾದಂತೆಯೇ ದೈವ ಮೈಮೇಲೆ ಬಂದಂತೆ ದೈವ ನರ್ತಕನೊಬ್ಬ ವರ್ತಿಸಿ ವಿವಾಹಿತ ಮಹಿಳೆಯನ್ನು
ಮದುವೆಯಾಗುವುದಾಗಿ ಅಭಯ ನೀಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಬಾರಕೊಡ್ಲು ಗ್ರಾಮದಲ್ಲಿ ನಡೆದಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅನೇಕ ಠೀಕೆ ಟಿಪ್ಪಣಿಗಳೂ ಬರುತ್ತಿದೆ.
ಬೆಳಗಾವಿಯಿಂದ ಅಂಕೋಲಾಕ್ಕೆ ವೈಯಕ್ತಿಕ ಸಮಸ್ಯೆ ಪರಿಹಾರಕ್ಕೆಂದು ಮಹಿಳೆಯೊಬ್ಬರು ಅಂಬಾರಕೊಡ್ಲದ ಕಾಲಭೈರವ ದೇವರ ದರ್ಶನಕ್ಕೆ ಬಂದಿದ್ದರು. ಸನ್ನಿಧಿಯಲ್ಲಿದ್ದ ದೈವನರ್ತಕ ಅಲ್ಲಿಗೆ ಬಂದಿದ್ದ ಮಹಿಳೆಯ ಗಂಡ ಬಿಟ್ಟು ಹೋಗಿರುವ ಮಾಹಿತಿ ತಿಳಿದಿದ್ದ ಎನ್ನಲಾಗಿದ್ದು, ಸಮಸ್ಯೆಗೆ ಪರಿಹಾರವಾಗಿ ಮದುವೆಯಾಗುವ ಭರವಸೆ ನೀಡುವ ಮೂಲಕ ದೈವಪಾತ್ರಿ ಸ್ಥಳದಲ್ಲಿದ್ದವರಿಗೆಲ್ಲ ಅಚ್ಚರಿ ಮೂಡಿಸಿದ್ದಾನೆ.
ದೈವನರ್ತಕನಿಗೂ ಮದುವೆಯಾಗಿ ಹೆಂಡತಿಬಿಟ್ಟು ಹೋಗಿದ್ದಾಳೆ ಎನ್ನಲಾಗಿದ್ದು, ‘ಈ ಬಾಲಕಿಗೆ ಈ ಬಾಲಕ ಮದುವೆಯಾಗುತ್ತಾನೆ’ ಎಂದು ಹೇಳಿಕೊಂಡ ದೈವನರ್ತಕ, ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿ, ಅರ್ಧನಾರೀಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಮಂಜುನಾಥೇಶ್ವರನ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಈಕೆಯ ಕುತ್ತಿಗೆಗೆ ತಾಳಿ ಬೀಳುತ್ತದೆ. ಇದು ಸತ್ಯ ಸತ್ಯ ಸತ್ಯ ಎಂದು ಕಾಂತಾರ ಚಿತ್ರದ ಸ್ಟೈಲ್‌ನಲ್ಲಿ ನುಡಿದಿದ್ದಾನೆ. ವಿವಾಹಿತ ಮಹಿಳೆ ವರಿಸಲು ದೈವದ ಹೆಸರು ಬಳಸಿಕೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಇಲ್ಲಿದೆ.