ಅಂಕೋಲಾ : ತಾಲೂಕಿನ ಹಿಲ್ಲೂರು ಪಂಚಾಯತ್ ವ್ಯಾಪ್ತಿಯ ನೆವಳಸೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಪಲ್ಟಿಯಾಗಿ ಚಾಲಕ ಮೃತ ಪಟ್ಟ ಘಟನೆ ನಡೆದಿದೆ. ಗುಂಡಬಾಳ ಹತ್ತಿರದ ನೆವಳಸೆಯಿಂದ ಕುಮಟಾ ಕಡೆ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿ ಚಲಾಯಿಸಿ ನೆವಳಸೆ ಶಾಲೆ ಬಳಿ ಇಳಿಜಾರಿನಲ್ಲಿ ವೇಗ ನಿಯಂತ್ರಿಸಲಾಗದೇ ಟಿಪ್ಪರ್ ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ಆತ ಎಡಗೈ ಭುಜ, ಮುಖ ಮತ್ತು ಅಂಗಾಂಗಳಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಕುಮಟಾ ದಿವಗಿ ನಿವಾಸಿ ಶ್ರೀಧರ ಶಿವಪ್ಪ ದೇಶಭಂಡಾರಿ(44) ಮೃತ ದುರ್ದೈವಿ ಚಾಲಕನಾಗಿದ್ದಾನೆ. ಅಪಘಾತದ ಸುದ್ದಿ ತಿಳಿದು ಗೋಕರ್ಣದಿಂದ ಬಂದಿದ್ದ ಖಾಸಗಿ ಅಂಬುಲೆನ್ಸ್ನವರು ಅಪಘಾತದ ಸ್ಥಳದಿಂದ ಮೃತದೇಹವನ್ನು ಅಂಕೋಲಾ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.